ನವದೆಹಲಿಯಲ್ಲಿ ನಡೆದ ಇಂಡಿಯಾ ಬ್ಲಾಕ್ ಸಭೆಯ ನಂತರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಸಂಸದರಾದ ಕೆ.ಸಿ. ವೇಣುಗೋಪಾಲ್ ಮತ್ತು ಜೈರಾಮ್ ರಮೇಶ್. 
ದೇಶ

ಮೋದಿ ಸರ್ಕಾರದ ವಿರುದ್ಧ ಮಹಾಸಮರಕ್ಕೆ INDIA ಮೈತ್ರಿಕೂಟ ಸಜ್ಜು: ಭಿನ್ನಾಭಿಪ್ರಾಯಗಳ ನಡುವೆಯೂ ಬಲ ತುಂಬುವ ಯತ್ನ; 'ಒಗ್ಗಟ್ಟೇ ನಮ್ಮ ಶಕ್ತಿ' ಎಂದ ಮಲ್ಲಿಕಾರ್ಜುನ ಖರ್ಗೆ!

ಸುಮಾರು 23 ಪ್ರತಿಪಕ್ಷಗಳ ನಾಯಕರು ಭಾಗವಹಿಸಿದ್ದ ಈ ಸಭೆಯಲ್ಲಿ ಮೈತ್ರಿಕೂಟದ ಭವಿಷ್ಯದ ಕಾರ್ಯತಂತ್ರದ ಕುರಿತು ಚರ್ಚೆ ನಡೆಯಿತು.

ನವದೆಹಲಿ: ಭಿನ್ನಾಭಿಪ್ರಾಯಗಳ ನಡುವೆಯೇ ನಡೆದ ಇಂಡಿಯಾ (INDIA) ಮೈತ್ರಿಕೂಟದ ಮಹತ್ವದ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಪಕ್ಷಗಳ ಒಗ್ಗಟ್ಟನ್ನು ಮತ್ತಷ್ಟು ಬಲಪಡಿಸುವಂತೆ ಕರೆ ನೀಡಿದ್ದಾರೆ.

ದೇಶ ಎದುರಿಸುತ್ತಿರುವ ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ವಿದೇಶಾಂಗ ನೀತಿ ಸಂಬಂಧಿತ ಸವಾಲುಗಳನ್ನು ಎದುರಿಸಲು ಒಗ್ಗಟ್ಟಿನ ಹೋರಾಟ ಅಗತ್ಯ ಎಂದು ಅವರು ಹೇಳಿದರು.

ಸುಮಾರು 23 ಪ್ರತಿಪಕ್ಷಗಳ ನಾಯಕರು ಭಾಗವಹಿಸಿದ್ದ ಈ ಸಭೆಯಲ್ಲಿ ಮೈತ್ರಿಕೂಟದ ಭವಿಷ್ಯದ ಕಾರ್ಯತಂತ್ರದ ಕುರಿತು ಚರ್ಚೆ ನಡೆಯಿತು. ಆದರೆ, ಪ್ರಮುಖ ಮಿತ್ರಪಕ್ಷಗಳಾದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಹಾಗೂ ಆಮ್ ಆದ್ಮಿ ಪಕ್ಷ (ಎಎಪಿ) ಸಭೆಗೆ ಗೈರಾಗಿರುವುದು ಮೈತ್ರಿಕೂಟದಲ್ಲಿರುವ ಭಿನ್ನಾಭಿಪ್ರಾಯಗಳು ಬಹಿರಂಗೊಳ್ಳುವಂತೆ ಮಾಡಿದೆ.

ಸಭೆಯ ಆರಂಭದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಮೂರು ವರ್ಷಗಳ ಹಿಂದೆ ರಚನೆಯಾದ ಇಂಡಿಯಾ ಮೈತ್ರಿಕೂಟವು ಸಂಸತ್ತಿನಲ್ಲಿ ತನ್ನ ಶಕ್ತಿಯನ್ನು ಪ್ರದರ್ಶಿಸಿದೆ ಎಂದು ಹೇಳಿದರು.

ಇದೇ ವೇಳೆ ಏಪ್ರಿಲ್ 17ರಂದು ಲೋಕಸಭೆಯಲ್ಲಿ ನಡೆದ ಪ್ರತಿಪಕ್ಷಗಳ ಒಗ್ಗಟ್ಟಿನ ಹೋರಾಟವನ್ನು ಉಲ್ಲೇಖಿಸಿದ ಅವರು, ಸರ್ಕಾರದ ಕ್ಷೇತ್ರ ಪುನರ್‌ವಿಂಗಡಣೆ (Delimitation) ಮಸೂದೆ ವಿರುದ್ಧ ಪ್ರತಿಪಕ್ಷಗಳು ಒಗ್ಗಟ್ಟಾಗಿ ನಿಂತಿದ್ದವು ಎಂದು ನೆನಪಿಸಿದರು.

ಆ ಒಗ್ಗಟ್ಟಿನ ಮನೋಭಾವವನ್ನು ಇನ್ನಷ್ಟು ಬಲಪಡಿಸಿ ಮುಂದಕ್ಕೆ ಸಾಗಬೇಕಾಗಿದೆ. ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ಎದುರಿಸಲು ಬಲಿಷ್ಠ ಪ್ರತಿಪಕ್ಷ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಬಳಿಕ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಟೀಕಿಸಿದ ಅವರು, ಲಕ್ಷಾಂತರ ಜನರು ಮತದಾನದ ಹಕ್ಕಿನಿಂದ ವಂಚಿತರಾಗುವ ಅಪಾಯ ಎದುರಿಸುತ್ತಿದ್ದಾರೆ. ಜೊತೆಗೆ ಸಂವಿಧಾನದ ಮೇಲೆ ನಿರಂತರ ದಾಳಿ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ರಾಜಕೀಯ ವಿರೋಧಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಹಾಗೂ ಬಿಜೆಪಿ ಆಡಳಿತವಿಲ್ಲದ ರಾಜ್ಯಗಳ ವಿರುದ್ಧ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಆರ್ಥಿಕ ಪರಿಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ಅಗತ್ಯ ವಸ್ತುಗಳ ಬೆಲೆ ಏರಿಕೆ ಮುಂದುವರಿದಿದ್ದು, ದೇಶದ ಆರ್ಥಿಕ ವಾತಾವರಣ ಆತಂಕಕಾರಿಯಾಗಿದೆ. ಯುವಕರಿಗೆ ಅಗತ್ಯ ಉದ್ಯೋಗ ಸೃಷ್ಟಿಯಾಗುವಷ್ಟು ಹೂಡಿಕೆಗಳು ಬರುತ್ತಿಲ್ಲ ಹಾಗೂ ಹಲವು ಕ್ಷೇತ್ರಗಳಲ್ಲಿ ಖಾಸಗಿ ಏಕಸ್ವಾಮ್ಯ ಹೆಚ್ಚುತ್ತಿದೆ ಎಂದು ಆರೋಪಿಸಿದರು.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (MSME) ಗಂಭೀರ ಸಂಕಷ್ಟ ಎದುರಿಸುತ್ತಿವೆ. ನೀಟ್ (NEET) ಹಾಗೂ ಸಿಬಿಎಸ್‌ಇ (CBSE) ಪರೀಕ್ಷೆಗಳ ನಿರ್ವಹಣೆಯಲ್ಲಿ ಆಗಾಗ್ಗೆ ಉಂಟಾಗುತ್ತಿರುವ ಸಮಸ್ಯೆಗಳು ಕೋಟ್ಯಾಂತರ ವಿದ್ಯಾರ್ಥಿಗಳ ಕನಸುಗಳಿಗೆ ಧಕ್ಕೆ ತಂದಿವೆ ಎಂದು ಟೀಕಿಸಿದರು.

ಸಮಾಜದ ದುರ್ಬಲ ವರ್ಗಗಳ ಮೇಲಿನ ದೌರ್ಜನ್ಯಗಳು, ವಿಶೇಷವಾಗಿ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮುಂದುವರಿದಿವೆ ಎಂದು ಆರೋಪಿಸಿದ ಖರ್ಗೆ, ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನೂ ಟೀಕಿಸಿದರು.

ಭಾರತವು ಜಾಗತಿಕ ಮಟ್ಟದಲ್ಲಿ ಪರಂಪರೆಯಿಂದ ಅನುಸರಿಸುತ್ತಿದ್ದ ಕೆಲವು ಮೂಲಭೂತ ಮೌಲ್ಯಗಳು ಮತ್ತು ನೀತಿಗಳಿಂದ ದೂರ ಸರಿದಿದೆ ಎಂದು ಹೇಳಿದರು.

ಸಭೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಸೇರಿದಂತೆ ಹಲವು ಪ್ರತಿಪಕ್ಷ ನಾಯಕರು ಭಾಗವಹಿಸಿದ್ದರು.

ಸಭೆಯ ಅಂತ್ಯದಲ್ಲಿ ಎಲ್ಲಾ ಮಿತ್ರಪಕ್ಷಗಳ ನಾಯಕರ ಅಭಿಪ್ರಾಯಗಳನ್ನು ಆಲಿಸಿದ ಬಳಿಕ ಮುಂದಿನ ರಾಜಕೀಯ ಕಾರ್ಯತಂತ್ರದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಖರ್ಗೆ ತಿಳಿಸಿದರು. ಸಭೆಯ ಬಳಿಕ ಇಂಡಿಯಾ ಮೈತ್ರಿಕೂಟದ ನಾಯಕರು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಚಿವ ಸಂಪುಟ ವಿಸ್ತರಣೆ: CM ಡಿ.ಕೆ. ಶಿವಕುಮಾರ್-ಕಾಂಗ್ರೆಸ್ ನಾಯಕರು ನಾಳೆ ಸಂಜೆ ದೆಹಲಿಗೆ; ಹೈಕಮಾಂಡ್ ಮಹತ್ವದ ಮಾತುಕತೆ

ಯಾರ ಒತ್ತಡಕ್ಕೂ ಮಣಿದು ಬರ ಘೋಷಿಸುವುದಿಲ್ಲ, ಮಾತುಕತೆಯಲ್ಲೇ ಮೇಕದಾಟು ವಿವಾದಕ್ಕೆ ಪರಿಹಾರ ಹುಡುಕುತ್ತೇನೆ: ಸಿಎಂ ಡಿಕೆ.ಶಿವಕುಮಾರ್

ಅಸಮರ್ಥ-ಭ್ರಷ್ಟ ಸರ್ಕಾರ ಕಿತ್ತೊಗೆಯುವವರೆಗೆ ವಿರಮಿಸದಿರಿ, ಹೋರಾಟ ಮುಂದುವರೆಸಿ: ವಿದ್ಯಾರ್ಥಿ-ಯುವಜನರಿಗೆ ಸಿದ್ದರಾಮಯ್ಯ ಕರೆ

ಕಾಂಗ್ರೆಸ್ ರಾಜಕೀಯ ಆಟಕ್ಕೆ ಬ್ರೇಕ್ ಹಾಕಲು ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ವಿಜಯೇಂದ್ರ

ಅಗ್ನಿಶಾಮಕ, ತುರ್ತು ಸೇವೆಗಳ ಆಧುನೀಕರಣಕ್ಕೆ ಸಮಗ್ರ ಯೋಜನೆ ರೂಪಿಸಿ: ಅಧಿಕಾರಿಗಳಿಗೆ ಪ್ರಿಯಾಂಕ್ ಖರ್ಗೆ ಸೂಚನೆ