ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಗುರುವಾರ ನಡೆಯಲಿರುವ ನೀತಿ ಆಯೋಗದ (NITI Aayog) ವಾರ್ಷಿಕ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಭೆಯಲ್ಲಿ ರಾಜ್ಯಗಳ ಆರ್ಥಿಕತೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಚರ್ಚೆಯಾಗುವ ನಿರೀಕ್ಷೆಯಿದ್ದು, ಅವುಗಳನ್ನು ಕೇಂದ್ರ ಸರ್ಕಾರದ “ವಿಕಸಿತ ಭಾರತ” ದೃಷ್ಟಿಕೋನದೊಂದಿಗೆ ಹೊಂದಾಣಿಕೆ ಮಾಡುವ ಬಗ್ಗೆ ಗಮನ ಹರಿಸಲಾಗುತ್ತದೆ.
ಯೋಜನಾ ಆಯೋಗದ ಸ್ಥಾನವನ್ನು ಭರಿಸಿ 2015ರಲ್ಲಿ ಸ್ಥಾಪನೆಯಾದ ನೀತಿ ಆಯೋಗದ ಉನ್ನತ ನಿರ್ಧಾರ ಕೈಗೊಳ್ಳುವ ಮಂಡಳಿಯ ಇದು 11ನೇ ಸಭೆ ಆಗಿದೆ.
ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಲೆಫ್ಟಿನೆಂಟ್ ಗವರ್ನರ್‌ಗಳು ಭಾಗವಹಿಸುವ ಸಾಧ್ಯತೆಯಿದೆ.
ನಾನು ನಾಳೆ ನಡೆಯುವ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸುತ್ತಿದ್ದೇನೆ. ಕರ್ನಾಟಕದ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳನ್ನು ಅಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಿನ್ನೆ ಬುಧವಾರ ದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಭಾರತದತ್ತ ವಿಶ್ವದ ಗಮನ ಬೆಂಗಳೂರಿನ ಮೂಲಕ ಹರಿಯುತ್ತಿರುವ ಹಿನ್ನೆಲೆಯಲ್ಲಿ, ನೀತಿ ಆಯೋಗದ ಸಭೆಯಲ್ಲಿ ಕರ್ನಾಟಕದ ಸಮಸ್ಯೆಗಳು ಮತ್ತು ಅಗತ್ಯಗಳನ್ನು ಪ್ರಸ್ತಾಪಿಸಿ, ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಕೇಂದ್ರ ಸಹಾಯವನ್ನು ಕೋರುತ್ತೇನೆ ಎಂದು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್, ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ಸೇರಿದಂತೆ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಈಗಾಗಲೇ ದೆಹಲಿಗೆ ಆಗಮಿಸಿದ್ದಾರೆ.
ಈ ಆಡಳಿತ ಮಂಡಳಿ ಸಭೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ಲೆಫ್ಟಿನೆಂಟ್ ಗವರ್ನರ್‌ಗಳು ಸಮಗ್ರ ಮಾನವ ಅಭಿವೃದ್ಧಿ ಚೌಕಟ್ಟಿನ (Inclusive Human Development Framework) ಕುರಿತು ಚರ್ಚಿಸಲಿದ್ದಾರೆ. ಈ ಚೌಕಟ್ಟು ನಾಲ್ಕು ಪ್ರಮುಖ ಸ್ತಂಭಗಳನ್ನು ಆಧರಿಸಿದೆ— ಮೂಲಭೂತ ಮಾನವ ಸಂಪನ್ಮೂಲ ಮತ್ತು ಭವಿಷ್ಯಕ್ಕೆ ಸಿದ್ಧ ಕೌಶಲ್ಯಗಳು; ಉತ್ಪಾದಕ ಉದ್ಯೋಗ, ಉದ್ಯಮಶೀಲತೆ ಮತ್ತು ವಿಕೇಂದ್ರೀಕೃತ ಬೆಳವಣಿಗೆ; ಆರೋಗ್ಯ, ಪೌಷ್ಟಿಕತೆ ಮತ್ತು ಕಲ್ಯಾಣ; ಹಾಗೂ ಎಲ್ಲರಿಗೂ ಸಮಾನತೆ ಮತ್ತು ಗೌರವ ಎಂದು ನೀತಿ ಆಯೋಗ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ದೇಶಾದ್ಯಂತ ಉದ್ಯಮಶೀಲತೆಯನ್ನು ಉತ್ತೇಜಿಸುವುದು, ಕೌಶಲ್ಯಾಭಿವೃದ್ಧಿಯನ್ನು ವೃದ್ಧಿಸುವುದು ಹಾಗೂ ಸುಸ್ಥಿರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕ್ರಮಗಳ ಕುರಿತೂ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಅಧಿಕೃತ ಪ್ರಕಟಣೆಯ ಪ್ರಕಾರ, ಆಡಳಿತ ಮಂಡಳಿಯ ಚರ್ಚೆಗಳು ಆಡಳಿತ ವ್ಯವಸ್ಥೆ, ಡಿಜಿಟಲ್ ಪಬ್ಲಿಕ್ ಇನ್‌ಫ್ರಾಸ್ಟ್ರಕ್ಚರ್ (DPI), ಸಮನ್ವಯ, ಪಾಲುದಾರಿಕೆಗಳು ಮತ್ತು ದತ್ತಾಂಶ ಆಧಾರಿತ ವ್ಯವಸ್ಥೆಗಳಂತಹ ಪ್ರಮುಖ ಸಕ್ರಿಯಗೊಳಿಸುವ ಅಂಶಗಳನ್ನು ಬಳಸಿಕೊಂಡು ಅನುಷ್ಠಾನ ಮಾರ್ಗಸೂಚಿಯನ್ನು ರೂಪಿಸುವುದರ ಮೇಲೂ ಕೇಂದ್ರೀಕರಿಸಲಿವೆ.
ಜೊತೆಗೆ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿಯ ಫಲಿತಾಂಶಗಳನ್ನು ಮೇಲ್ವಿಚಾರಣೆ ಮಾಡಲು ರಚನಾತ್ಮಕ ವ್ಯವಸ್ಥೆ ರೂಪಿಸಿ, ಜವಾಬ್ದಾರಿತನ ಹಾಗೂ ಅಳೆಯಬಹುದಾದ ಪರಿಣಾಮವನ್ನು ಖಚಿತಪಡಿಸುವುದಕ್ಕೂ ಒತ್ತು ನೀಡಲಾಗುತ್ತದೆ.
ಸಮಗ್ರ ಮಾನವ ಅಭಿವೃದ್ಧಿಗೆ ಸಂಬಂಧಿಸಿದ ರಾಷ್ಟ್ರೀಯ ದೃಷ್ಟಿಕೋನದೊಂದಿಗೆ ರಾಜ್ಯಗಳ ದೃಷ್ಟಿಕೋನಗಳನ್ನು ಹೊಂದಾಣಿಕೆ ಮಾಡುವುದರ ಮೇಲೆ ವಿಶೇಷ ಒತ್ತು ನೀಡಲಾಗುವುದು. ಇದು ಸಮಾನ ಮತ್ತು ಸುಸ್ಥಿರ ಬೆಳವಣಿಗೆಯತ್ತ ಏಕೀಕೃತ ಹಾಗೂ ಸಹಕಾರಾತ್ಮಕ ಚಿಂತನೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ನೀತಿ ಆಯೋಗ ತಿಳಿಸಿದೆ.