ಸೇಜಲ್ ಪವಾರ್-ಪ್ರಣಿತ್ ಮೋರೆ ಮತ್ತು ಕೆಇಎಂ ಆಸ್ಪತ್ರೆ 
ದೇಶ

370 ರೂ ಬಿರಿಯಾನಿ ವಿವಾದ: 'ಆಕೆ ಇನ್ನೂ ವೈದ್ಯೆಯೇ ಅಲ್ಲ..'; Sejal Pawarಗೆ ಮತ್ತೊಂದು ಸಂಕಷ್ಟ; KEM ಆಸ್ಪತ್ರೆಯಿಂದ ತನಿಖೆಗೆ ಆದೇಶ!

ಸೇಜಲ್ ಪವಾರ್ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದು ಆಕೆ ಇನ್ನೂ ವೈದ್ಯೆಯಲ್ಲ. ವೈದ್ಯಕೀಯ ಶಿಕ್ಷಣಕ್ಕಾಗಿ ದಾನವಾಗಿ ನೀಡಲಾಗುವ ಶವಗಳನ್ನು ಅತ್ಯಂತ ಗೌರವದಿಂದ ಕಾಣಲಾಗುತ್ತದೆ.

ಮುಂಬೈ: ಕಮಿಡಿಯನ್ ಪ್ರಣೀತ್ ಮೋರೆ ಅವರ ಕಾರ್ಯಕ್ರಮದ 370 ರೂ ಬಿರಿಯಾನಿ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಈ ಪ್ರಕರಣದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಸೇಜಲ್ ಪವಾರ್ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಕೆ ವೈದ್ಯೆಯೇ ಅಲ್ಲ ಎಂದು ಮುಂಬೈನ KEM ಆಡಳಿತಮಂಡಳಿ ಹೇಳಿಕೆ ನೀಡಿದೆ.

ಹೌದು.. ಮುಂಬೈನ KEM Hospital ನಲ್ಲಿ ಎಂ.ಬಿ.ಬಿ.ಎಸ್. ವಿದ್ಯಾರ್ಥಿನಿಯಾಗಿರುವ ಸೇಜಲ್ ಪವಾರ್ (Sejal Pawar) ಕಮಿಡಿಯನ್ ಪ್ರಣೀತ್ ಮೋರೆ (Pranit More) ಕಾರ್ಯಕ್ರಮದಲ್ಲಿ ಪುರುಷ ಶವಗಳ (ಕ್ಯಾಡೇವರ್‌ಗಳ) ಜನನಾಂಗಗಳ ಗಾತ್ರವನ್ನು ಹೋಲಿಕೆ ಮಾಡುವ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಲಿಖಿತ ಕ್ಷಮಾಪಣೆ ಸಲ್ಲಿಸಿದ್ದರೂ, ಆಸ್ಪತ್ರೆ ಆಡಳಿತವು ಈ ವಿಷಯದ ಕುರಿತು ತನಿಖೆಗೆ ಆದೇಶಿಸಿದೆ.

ಆಸ್ಪತ್ರೆಯ ಮೂಲಗಳ ಪ್ರಕಾರ, ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನೀಡಲಾದ ಈ ಹೇಳಿಕೆಗಳಿಂದ ಹಿರಿಯ ವೈದ್ಯರು ಅಸಮಾಧಾನಗೊಂಡಿದ್ದಾರೆ. ಸೇಜಲ್ ಪವಾರ್ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದು ಆಕೆ ಇನ್ನೂ ವೈದ್ಯೆಯಲ್ಲ. ವೈದ್ಯಕೀಯ ಶಿಕ್ಷಣಕ್ಕಾಗಿ ದಾನವಾಗಿ ನೀಡಲಾಗುವ ಶವಗಳನ್ನು ಅತ್ಯಂತ ಗೌರವದಿಂದ ಕಾಣಲಾಗುತ್ತದೆ. ಆದ್ದರಿಂದ ಈ ರೀತಿಯ ಹೇಳಿಕೆಗಳು ವೈದ್ಯಕೀಯ ವಲಯದಲ್ಲಿ ನೋವು ಮತ್ತು ಅಸಮಾಧಾನಕ್ಕೆ ಕಾರಣವಾಗಿವೆ ಎಂದು ಅವರು ತಿಳಿಸಿದ್ದಾರೆ.

ತನಿಖೆಗೆ ಸಮಿತಿ ರಚನೆ

ವಿವಾದದ ಹಿನ್ನೆಲೆಯಲ್ಲಿ ಕೆಇಎಂ ಆಸ್ಪತ್ರೆಯು ತನಿಖಾ ಸಮಿತಿಯನ್ನು ರಚಿಸಿದ್ದು, ಒಂದು ಅಥವಾ ಎರಡು ದಿನಗಳಲ್ಲಿ ವರದಿ ಸಲ್ಲಿಸುವ ನಿರೀಕ್ಷೆಯಿದೆ. ಬಳಿಕ ಆಸ್ಪತ್ರೆಯ ಡೀನ್ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಡೀನ್, “ಒಬ್ಬ ವಿದ್ಯಾರ್ಥಿನಿ ಕಾಮಿಡಿ ಕಾರ್ಯಕ್ರಮದ ವೇಳೆ ಅಸಂವೇದನಾಶೀಲ ಹೇಳಿಕೆಗಳನ್ನು ನೀಡಿರುವ ಮಾಹಿತಿ ನಮಗೆ ಲಭ್ಯವಾಗಿದೆ. ಒಂದು ಗಂಟೆಯ ಕಾರ್ಯಕ್ರಮದ 4-5 ನಿಮಿಷಗಳ ವಿಡಿಯೊ ಭಾಗ ಮಾತ್ರ ವೈರಲ್ ಆಗಿದೆ. ಆ ಹೇಳಿಕೆಗಳನ್ನು ಸಂದರ್ಭದಿಂದ ಹೊರತೆಗೆದು ಹರಡಲಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಇದಕ್ಕಾಗಿ ಇಬ್ಬರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ” ಎಂದು ತಿಳಿಸಿದ್ದಾರೆ.

ಈ ಸಮಿತಿಯಲ್ಲಿ ಜೀವ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆಯೂ ಆಗಿರುವ ವಿದ್ಯಾರ್ಥಿ ವಸತಿ ನಿಲಯದ ವಾರ್ಡನ್ ಡಾ. ಅನಿತಾ ಚಾಲಕ್ ಹಾಗೂ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮತ್ತು ಆಸ್ಪತ್ರೆಯ ಸಾಮಾಜಿಕ ಜಾಲತಾಣ ಚಟುವಟಿಕೆಗಳನ್ನು ನಿರ್ವಹಿಸುವ ಡಾ. ಶ್ರದ್ಧಾ ಮೋರೆ ಸದಸ್ಯರಾಗಿದ್ದಾರೆ.

ಆಸ್ಪತ್ರೆ ಅಧಿಕಾರಿಗಳು ಕಾರ್ಯಕ್ರಮದ ಪೂರ್ಣ ಒಂದು ಗಂಟೆಯ ದೃಶ್ಯಾವಳಿಯನ್ನು ಪರಿಶೀಲಿಸಿದ್ದು, ಅದರಲ್ಲಿ ಕೇವಲ ಎರಡು ನಿಮಿಷಗಳ ವಿಡಿಯೊ ತುಣುಕು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ಸಾಮಾಜಿಕ ಜಾಲತಾಣ ಮಾರ್ಗಸೂಚಿಗಳ ಬೆಳಕಿನಲ್ಲಿ ಈ ವಿಷಯವನ್ನು ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯಕ್ಕೆ ಸೇಜಲ್ ಅಮಾನತು ಇಲ್ಲ

ಪ್ರಣಿತ್ ಮೋರೆ ಅವರ ಕಾರ್ಯಕ್ರಮದಲ್ಲಿ ಪ್ರೇಕ್ಷಕರೊಂದಿಗೆ ಸಂವಾದ ನಡೆಸುವ ವೇಳೆ ಸೇಜಲ್ ಪವಾರ್ ಪುರುಷ ಶವಗಳ ಜನನಾಂಗಗಳ ಗಾತ್ರದ ಕುರಿತು ಹೋಲಿಕೆ ಮಾಡಿದರೆಂದು ಆರೋಪಿಸಲಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

ತನಿಖೆ ನಡೆಯುತ್ತಿರುವ ಅವಧಿಯಲ್ಲಿ ಸೇಜಲ್ ಪವಾರ್ ಅವರನ್ನು ಅಮಾನತುಗೊಳಿಸಲಾಗಿಲ್ಲ. ಆದರೆ ಈ ಪ್ರಕರಣದಲ್ಲಿ ಆಸ್ಪತ್ರೆ ಅತಿಯಾದ ಕಠಿಣ ಕ್ರಮ ಕೈಗೊಳ್ಳುವ ಉದ್ದೇಶ ಹೊಂದಿಲ್ಲದಿದ್ದರೂ, ಬಲವಾದ ಸಂದೇಶ ರವಾನಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಹಿರಿಯ ವೈದ್ಯರನ್ನು ವಿಶೇಷವಾಗಿ ಅಸಮಾಧಾನಗೊಳಿಸಿದ್ದು, ಕ್ಯಾಡೇವರ್‌(ದಾನ ಕೊಟ್ಟ ಶವಗಳು)ಗಳ ಕುರಿತು ಅವಮಾನಕಾರಿಯಾಗಿ ಉಲ್ಲೇಖ ಮಾಡಿರುವುದಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ವ್ಯಕ್ತಿಗಳು ತಮ್ಮ ದೇಹವನ್ನು ದಾನ ಮಾಡುತ್ತಾರೆ. ಮಾನವ ದೇಹಶಾಸ್ತ್ರದ ಅಧ್ಯಯನವು ವೈದ್ಯಕೀಯ ಶಿಕ್ಷಣದ ಮೂಲಭೂತ ಅಡಿಪಾಯವಾಗಿದ್ದು, ಅದನ್ನು ಹಾಸ್ಯಕ್ಕಾಗಿ ಬಳಸುವುದು ಗಂಭೀರ ವಿಷಯ ಎಂದು ಅವರು ಹೇಳಿದ್ದಾರೆ.

ಆಸ್ಪತ್ರೆಯ ರೆಸಿಡೆಂಟ್ ವೈದ್ಯರೂ ಸೇಜಲ್ ಪವಾಲ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದು, ವೈದ್ಯರು ಯಾವಾಗಲೂ ಕ್ಯಾಡೇವರ್‌ಗಳಿಗೆ ಗೌರವ ತೋರಬೇಕು ಎಂಬ ಪ್ರಮಾಣ ವಚನಕ್ಕೆ ಬದ್ಧರಾಗಿದ್ದಾರೆ ಎಂದು ಹೇಳಿದ್ದಾರೆ. ಅವರು ಈ ಹೇಳಿಕೆಗಳನ್ನು ಖಂಡನೀಯ ಎಂದು ಬಣ್ಣಿಸಿದ್ದಾರೆ.

ರೆಸಿಡೆಂಟ್ ವೈದ್ಯರ ಸಂಘ ವಿರೋಧ

ಇನ್ನು ಮಹಾರಾಷ್ಟ್ರ ರೆಸಿಡೆಂಟ್ ವೈದ್ಯರ ಸಂಘ (Maharashtra Association of Resident Doctors) (MARD) ಕೂಡ ಪ್ರಕಟಣೆ ಹೊರಡಿಸಿ, ವೈದ್ಯಕೀಯ ಶಿಕ್ಷಣಕ್ಕೆ ಅಮೂಲ್ಯ ಕೊಡುಗೆ ನೀಡುವ ದೇಹದಾನಿಗಳಿಗೆ ಗೌರವ ತೋರುವುದು ಹಾಗೂ ವೃತ್ತಿಪರ ನೈತಿಕ ಮೌಲ್ಯಗಳನ್ನು ಪಾಲಿಸುವುದು ತನ್ನ ಬದ್ಧತೆಯಾಗಿದೆ ಎಂದು ತಿಳಿಸಿದೆ.

“ವಿದ್ಯಾರ್ಥಿನಿ ನೀಡಿರುವ ಹೇಳಿಕೆಗಳು ಅಸಮಂಜಸವಾಗಿದ್ದು, ವೈದ್ಯಕೀಯ ವೃತ್ತಿಯ ಮೌಲ್ಯಗಳನ್ನು ಪ್ರತಿಬಿಂಬಿಸುವುದಿಲ್ಲ. ಅವುಗಳಿಂದ ಅನೇಕರಿಗೆ ನೋವು ಮತ್ತು ಕಳವಳ ಉಂಟಾಗಿದೆ,” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆದಾಗ್ಯೂ, ಸೇಜಲ್ ಪವಾರ್ ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿರುವುದನ್ನು MARD ಗಮನಿಸಿದೆ. ಆ ಹೇಳಿಕೆಗಳನ್ನು ಸಮರ್ಥಿಸದಿದ್ದರೂ, ವಿದ್ಯಾರ್ಥಿನಿಯ ವಿರುದ್ಧ ನಡೆದ ವೈಯುಕ್ತಿಕ ನಿಂದನೆ, ಆನ್‌ಲೈನ್ ಕಿರುಕುಳ ಮತ್ತು ಗುರಿಯಾಗಿಸಿ ನಡೆಸಿದ ದಾಳಿಗಳು ಸಮಂಜಸವಲ್ಲ ಎಂದು ಸಂಘಟನೆ ಹೇಳಿದೆ.

ಈ ಘಟನೆಯ ಕುರಿತ ಸಾರ್ವಜನಿಕ ಚರ್ಚೆ ಘಟನೆಗೆ ಮಾತ್ರ ಸೀಮಿತವಾಗಿರಬೇಕು; ವಿದ್ಯಾರ್ಥಿನಿಯ ಮೀಸಲಾತಿ ಕೋಟಾ ಪ್ರವೇಶದಂತಹ ಸಂಬಂಧವಿಲ್ಲದ ವಿಷಯಗಳಿಗೆ ವಿಸ್ತರಿಸಬಾರದು ಎಂದು MARD ಒತ್ತಾಯಿಸಿದೆ. ಹೊಣೆಗಾರಿಕೆ, ಆತ್ಮಾವಲೋಕನ ಮತ್ತು ಪಾಠ ಕಲಿಯುವ ಪ್ರಕ್ರಿಯೆಗೆ ವೈದ್ಯಕೀಯ ಸಮುದಾಯ ಬೆಂಬಲ ನೀಡುತ್ತದೆ, ಆದರೆ ಚರ್ಚೆಗಳು ಗೌರವಯುತ ಮತ್ತು ಮಾನವೀಯವಾಗಿರಬೇಕು ಎಂದು ತಿಳಿಸಿದೆ.

ಸೈಬರ್ ಠಾಣೆಯಲ್ಲೂ ದೂರು

ಇದೇ ವೇಳೆ, Maharashtra Cyber ಇಲಾಖೆ ವೈರಲ್ ಆದ ಕಾಮಿಡಿ ವಿಡಿಯೊಗಳ ಸಂಬಂಧ ಪ್ರಕರಣ ದಾಖಲಿಸಿದೆ. ಕಾಮಿಡಿಯನ್‌ಗಳಾದ ಪ್ರಣಿತ್ ಮೋರೆ, ಹಿಮಾಂಶು ಜಾಂಗ್ರಾ, ಸೇಜಲ್ ಪವಾರ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

Maharashtra Cyber ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಭಾರತೀಯ ನ್ಯಾಯ ಸಂಹಿತೆ (BNS) 2023ರ ಸೆಕ್ಷನ್ 75(1)(iv), 75(3), 294 ಮತ್ತು 353(2) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 67ರ ಅಡಿಯಲ್ಲಿ ಮುಂಬೈನ ನೋಡಲ್ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನ್‌ಲೈನ್ ವೇದಿಕೆಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಅಶ್ಲೀಲ ಹಾಗೂ ಆಕ್ಷೇಪಾರ್ಹ ವಿಷಯಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಈ ಪ್ರಕರಣ ದಾಖಲಿಸಲಾಗಿದ್ದು, ಸಂಬಂಧಪಟ್ಟವರಿಗೆ ಸಮನ್ಸ್‌ಗಳನ್ನು ಕೂಡ ಜಾರಿಗೊಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೋಲ್ಕತಾ ಸರ್ಕಾರಿ ಕಟ್ಟಡದಲ್ಲಿ ಅಗ್ನಿ ದುರಂತ: ಚುನಾವಣೆಯಲ್ಲಿ ಬಳಸಲಾಗಿದ್ದ 4,000 ಇವಿಎಂ ಭಸ್ಮ; ಅವಘಡದ ಸುತ್ತ ಅನುಮಾನದ ಹುತ್ತ!

ಇರಾನ್ ಸಂಘರ್ಷ: ಯೋಜನೆಗಳನ್ನು ನೆತನ್ಯಾಹು ಅವರಿಂದ ಮುಚ್ಚಿಟ್ಟ ಟ್ರಂಪ್; ಇಸ್ರೇಲ್ ಪ್ರಧಾನಿ ಬೆನ್ನಿಗೆ ಅಮೆರಿಕ ಅಧ್ಯಕ್ಷರ ಚೂರಿ?

ಬಾಲಿವುಡ್​ನಲ್ಲಿ 'ಪಾಕ್ ಮೇಲಿನ ಪ್ರೀತಿ' ಇನ್ನೂ ಕಮ್ಮಿಯಾಗಿಲ್ಲ: ರಣವೀರ್​ ಸಿಂಗ್ ನಿಷೇಧಕ್ಕೆ ಕಂಗನಾ ಗರಂ!​

ಬ್ಯಾಂಕಾಕ್ ನಿಂದ ಮುಂಬೈ ಗೆ 11.82 ಕೋಟಿ ಮೌಲ್ಯದ ಗಾಂಜಾ ಸಾಗಣೆ: ಮಾಜಿ ಮಿಸೆಸ್ ಕೇರಳ ಬಂಧನ!

'ವಿಧವೆ ತಾಯಿ, ತಂಗಿ ಶಿಕ್ಷಣ, ಸಾಲ ಬಾಧೆ': 13ನೇ ಮಹಡಿಯಿಂದ ಜಿಗಿದು 22 ವರ್ಷದ ಡೆಲಿವರಿ ಸಿಬ್ಬಂದಿ ಸಾವು, ಬಿರುಗಾಳಿ ಎಬ್ಬಿಸಿದ ಒಂದು ಕರೆ

SCROLL FOR NEXT