ವಾರಣಾಸಿ: ವಾರಣಾಸಿಯ ಕಾಶಿ ರೈಲು ನಿಲ್ದಾಣದ ಮುಖ್ಯ ಪ್ರವೇಶದ್ವಾರದ ಸಮೀಪದಲ್ಲಿರುವ ಗಂಜ್ ಶಹೀದಾ ಮಸೀದಿ (Ganj Shaheeda mosque)ಯನ್ನು ತೆರವುಗೊಳಿಸುವಂತೆ ರೈಲ್ವೇ ಇಲಾಖೆ ನೋಟಿಸ್ ಜಾರಿ ಮಾಡಿದೆ.
ಜೂನ್ 20ರೊಳಗೆ ಖಾಲಿ ಮಸೀದಿ ಖಾಲಿ ಮಾಡಬೇಕೆಂದು ರೈಲ್ವೆ ಇಲಾಖೆ ಕಾನೂನುಬದ್ಧ ನೋಟಿಸ್ ಅಂಟಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಕಾಶಿ ರೈಲು ನಿಲ್ದಾಣದ ಪುನರ್‌ಅಭಿವೃದ್ಧಿ ಯೋಜನೆಯಡಿ ನಿಲ್ದಾಣ ವಿಸ್ತರಣೆ ಮತ್ತು ಪ್ರಸ್ತಾವಿತ ನಿರ್ಮಾಣ ಕಾಮಗಾರಿಗಳಿಗಾಗಿ ರೈಲ್ವೆ ಭೂಮಿಯ ಮೇಲಿನ ಅತಿಕ್ರಮಣಗಳನ್ನು ತೆರವುಗೊಳಿಸುವ ಪ್ರಕ್ರಿಯೆಯ ಭಾಗವಾಗಿ ಈ ನೋಟಿಸ್ ನೀಡಲಾಗಿದೆ ಎಂದು ನಿಲ್ದಾಣ ಅಧೀಕ್ಷಕ ಅರ್ಪಿತ್ ಗುಪ್ತಾ ತಿಳಿಸಿದ್ದಾರೆ.
ರೈಲ್ವೆ ಅಧಿಕಾರಿಗಳು ಹಾಗೂ ಜಿಲ್ಲಾ ಆಡಳಿತವು ಈ ಹಿಂದೆ ಕಾಶಿ ರೈಲು ನಿಲ್ದಾಣದ ಸುತ್ತಮುತ್ತ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿದ್ದು, ರೈಲ್ವೆ ಭೂಮಿಯಲ್ಲಿರುವ ವಿವಿಧ ಕಟ್ಟಡಗಳನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು.
"ಕಾಶಿ ರೈಲು ನಿಲ್ದಾಣದ ವಿಸ್ತರಣೆ ಹಾಗೂ ಪ್ರಸ್ತಾವಿತ ಅಭಿವೃದ್ಧಿ ಕಾಮಗಾರಿಗಳಿಗೆ ರೈಲ್ವೆ ಭೂಮಿಯನ್ನು ಅತಿಕ್ರಮಣಮುಕ್ತಗೊಳಿಸುವ ಅಗತ್ಯವಿದೆ. ಅದರಂತೆ ವಿವಿಧ ಸ್ಥಳಗಳನ್ನು ಗುರುತಿಸಲಾಗಿದ್ದು, ಕಾನೂನು ಪ್ರಕ್ರಿಯೆಯ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ" ಎಂದು ಅವರು ತಿಳಿಸಿದ್ದಾರೆ.
ಈ ಕ್ರಮವು ಜೂನ್ 3ರಂದು ನಡೆದ ಇದೇ ರೀತಿಯ ಕಾರ್ಯಾಚರಣೆಯ ನಂತರ ಬಂದಿದ್ದು ಆಗ ಭೂ ಮಾಲೀಕತ್ವದ ವಿವಾದಕ್ಕೆ ಸಂಬಂಧಿಸಿದ ನ್ಯಾಯಾಲಯದ ಆದೇಶದ ಮೇರೆಗೆ, ಭಾರಿ ಭದ್ರತೆಯ ನಡುವೆ ರೈಲು ನಿಲ್ದಾಣ ಆವರಣದಲ್ಲಿದ್ದ ಅಜಗೈಬ್ ಶಹೀದ್ ಮಜರ್ ಹಾಗೂ ಒಂದು ಮಸೀದಿಯನ್ನು ನೆಲಸಮಗೊಳಿಸಲಾಗಿತ್ತು.
ಅಧಿಕಾರಿಗಳ ಪ್ರಕಾರ, ಕಾಶಿ ಮಾಡೆಲ್ ರೈಲು ನಿಲ್ದಾಣ ಯೋಜನೆಗಾಗಿ ನಡೆಸಿದ ಸಮೀಕ್ಷೆಯಲ್ಲಿ ಈ ಕಟ್ಟಡಗಳು ರೈಲ್ವೆ ಭೂಮಿಯ ಮೇಲೆ ಇರುವುದಾಗಿ ಪತ್ತೆಯಾಗಿತ್ತು. ಬಳಿಕ ಸ್ಥಳವನ್ನು ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿತ್ತು.
ವಿಷಯ ನ್ಯಾಯಾಲಯದ ಮೆಟ್ಟಿಲೇರಿದ ನಂತರ, ತೀರ್ಪಿನ ಆಧಾರದ ಮೇಲೆ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು ಎಂದು ಅವರು ತಿಳಿಸಿದ್ದಾರೆ.
ರೈಲ್ವೆ ಆಡಳಿತವು ಈ ಕ್ರಮವು ನಿಲ್ದಾಣ ಪುನರ್‌ಅಭಿವೃದ್ಧಿ ಯೋಜನೆ ಮತ್ತು ಅತಿಕ್ರಮಣ ತೆರವು ಕಾರ್ಯಾಚರಣೆಯ ಭಾಗವಾಗಿದ್ದು, ಎಲ್ಲಾ ಕ್ರಮಗಳನ್ನು ಕಾನೂನುಬದ್ಧವಾಗಿ ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.