ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ವ್ಯಕ್ತಪಡಿಸಿರುವ "ಮೆಚ್ಚುಗೆ" ಕುರಿತು ಕಾಂಗ್ರೆಸ್ ಶನಿವಾರ ವ್ಯಂಗ್ಯವಾಡಿದ್ದು, ಅವರ ಮೆಚ್ಚುಗೆ ಎಷ್ಟರ ಮಟ್ಟಿಗೆ ಗಾಢವಾಗಿದೆ ಎಂದರೆ, ಪ್ರಧಾನಿ ಹೇಳದೇ ಇದ್ದ ಮಾತುಗಳನ್ನೂ ಅವರು ಕೇಳಬಲ್ಲವರಂತೆ ಕಾಣುತ್ತಿದ್ದಾರೆ ಎಂದು ಟೀಕಿಸಿದೆ.
ಪ್ರಧಾನಿ ಮೋದಿ ಸಾರ್ವಜನಿಕ ಹಾಗೂ ಖಾಸಗಿ ಸಭೆಗಳಲ್ಲಿ ಅಮೆರಿಕ ಅಧ್ಯಕ್ಷರ ಮುಂದೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು ಎಂಬ ಶಶಿ ತರೂರ್ ಅವರ ಹೇಳಿಕೆ ಇದೀಗ ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿ ವಿವಾದಕ್ಕೆ ಕಾರಣವಾಗಿದೆ.
"ಯುದ್ಧಕಾಲದಲ್ಲಿ ವಾಣಿಜ್ಯ ಹಡಗುಗಳಲ್ಲಿ ಕಾರ್ಯನಿರ್ವಹಿಸುವ ನಾಗರಿಕ ನಾವಿಕರು ಯುದ್ಧದ ಗುರಿಯಾಗಬಾರದು ಎಂಬ ಸಂದೇಶವನ್ನು ಜಗತ್ತಿಗೆ ತಲುಪಿಸುವುದು ಮುಖ್ಯ. ಅವರು ಸೈನಿಕರಲ್ಲ. ಇದೇ ಸಂದೇಶವನ್ನು ಪ್ರಧಾನಿ ಮೋದಿ ನೀಡಿದರು" ಎಂದು ತರೂರ್ ಹೇಳಿರುವುದಾಗಿ ವರದಿಯಾಗಿದೆ.
ಸ್ವಪಕ್ಷದಿಂದಲೇ ಶಶಿತರೂರ್ ಹೇಳಿಕೆಗೆ ಪರೋಕ್ಷ ವಿರೋಧ ವ್ಯಕ್ತವಾಗುತ್ತಿದ್ದು, ಈ ಕುರಿತು ಪ್ರಶ್ನಿಸಿದಾಗ, ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, ತಾವು ತರೂರ್ ಅವರ ಹೇಳಿಕೆಯನ್ನು ನೋಡಿಲ್ಲ ಎಂದು ಹೇಳಿದರೂ, ಭಾರತ-ಅಮೆರಿಕ ಸಂಯುಕ್ತ ಪ್ರಕಟಣೆಯಲ್ಲಿ ಅಮೆರಿಕದ ದಾಳಿಯಿಂದ ಒಮನ್ ಕೊಲ್ಲಿಯಲ್ಲಿ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ ವಿಷಯ, 'ಆಪರೇಷನ್ ಸಿಂಧೂರ್' ನಿಲ್ಲಿಸಿದ್ದಾಗಿ ಡೊನಾಲ್ಡ್ ಟ್ರಂಪ್ ಮಾಡುತ್ತಿರುವ ಪುನರಾವರ್ತಿತ ಹೇಳಿಕೆಗಳಿಗೆ ಪ್ರಧಾನಿ ಮೋದಿ ಸವಾಲು ಹಾಕಿದ ವಿಷಯ ಹಾಗೂ ಇರಾನ್‌ನ ಯುದ್ಧನೌಕೆ ಐಆರ್‌ಐಎಸ್ ಡೇನಾ ಮೇಲಿನ ದಾಳಿಯ ಉಲ್ಲೇಖ ಕಾಣಲಿಲ್ಲ ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ಹೇಳದೇ ಇದ್ದ ಮಾತನ್ನೂ ತರೂರ್ ಕೇಳಬಲ್ಲರು
ನಂತರ ಖೇರಾ ಅವರು ತಮ್ಮ ಪತ್ರಿಕಾಗೋಷ್ಠಿಯ ವಿಡಿಯೊ ತುಣುಕನ್ನು ಹಂಚಿಕೊಂಡು ಎಕ್ಸ್‌ನಲ್ಲಿ, "ನನ್ನ ಹಿರಿಯ ಸಹೋದ್ಯೋಗಿ ಡಾ. ಶಶಿ ತರೂರ್ ಅವರ ಪ್ರಧಾನಿ ಮೋದಿ ಮೇಲಿನ ಮೆಚ್ಚುಗೆ ಭೌತಿಕ ಜಗತ್ತಿನ ಮಿತಿಗಳನ್ನು ಮೀರಿ ಹೋಗಿರುವಂತೆ ಕಾಣುತ್ತದೆ. ಮೋದಿ ಹೇಳದೇ ಇದ್ದ ಮಾತುಗಳನ್ನೂ ಅವರು ಈಗ ಕೇಳಬಲ್ಲವರಂತೆ ತೋರುತ್ತದೆ" ಎಂದು ವ್ಯಂಗ್ಯವಾಡಿದರು.
ಖೇರಾ ಅವರ ಪ್ರಕಾರ, ಜಿ-7 ಶೃಂಗಸಭೆಯ ಸಂದರ್ಭದಲ್ಲಿ ಮೋದಿ ಮತ್ತು ಟ್ರಂಪ್ ನಡುವಿನ ಸಭೆಯ ಕುರಿತು ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ಅಧಿಕೃತ ಮಾಹಿತಿಯಲ್ಲಿ, ಒಮನ್ ಕೊಲ್ಲಿಯಲ್ಲಿ ಮೂವರು ಭಾರತೀಯ ನಾವಿಕರ "ನಿರ್ದಯ ಹತ್ಯೆ" ಕುರಿತು ಯಾವುದೇ ಉಲ್ಲೇಖವಿಲ್ಲ. "ಆಪರೇಷನ್ ಸಿಂಧೂರ್ ನಂತರ ಮೋದಿ-ಟ್ರಂಪ್ ನಡುವಿನ ಮೊದಲ ಸಭೆಯಾಗಿದ್ದರೂ, ಭಾರತದ ಮೇಲೆ ವ್ಯಾಪಾರ ನಿರ್ಬಂಧದ ಬೆದರಿಕೆ ಹಾಕಿ ತಾನೇ ಕದನ ವಿರಾಮಕ್ಕೆ ಕಾರಣನಾಗಿದ್ದೇನೆ ಎಂದು ಟ್ರಂಪ್ 120ಕ್ಕೂ ಹೆಚ್ಚು ಬಾರಿ ಪುನರಾವರ್ತಿಸಿರುವ ಹೇಳಿಕೆಗೆ ಮೋದಿ ಸವಾಲು ಹಾಕಿದ ಯಾವುದೇ ಸೂಚನೆ ಇಲ್ಲ" ಎಂದು ಹೇಳಿದರು.
ಇದಲ್ಲದೆ, ಭಾರತದ ತಂತ್ರಾತ್ಮಕ ಪ್ರಭಾವ ವಲಯದಲ್ಲಿರುವ ಮತ್ತು ಮಿಲಾನ್-2026 ನೌಕಾ ಅಭ್ಯಾಸದಲ್ಲಿ ಭಾರತದ ಅತಿಥಿಯಾಗಿದ್ದ ಇರಾನ್‌ನ ಐಆರ್‌ಐಎಸ್ ಡೇನಾ ಯುದ್ಧನೌಕೆಯ ಮೇಲಿನ ದಾಳಿಯ ಉಲ್ಲೇಖವೂ ಇಲ್ಲ ಎಂದು ಅವರು ಹೇಳಿದರು.
"ಆದರೂ ತರೂರ್ ಅವರು ಎಲ್ಲಿಯೂ ದಾಖಲಾಗದ ಬಲಿಷ್ಠ ಪ್ರತಿಪಾದನೆಗಳು, ದೃಢ ಪ್ರತಿಕ್ರಿಯೆಗಳು ಮತ್ತು ರಾಜಿ ಮಾಡಿಕೊಳ್ಳದ ರಾಜತಾಂತ್ರಿಕ ನಿಲುವುಗಳನ್ನು ಕೇಳಿರುವಂತೆ ಕಾಣುತ್ತದೆ. ಬಹುಶಃ ನಮ್ಮಂತಹ ಸಾಮಾನ್ಯ ಜನರ ಇಂದ್ರಿಯಗಳಿಗೆ ಅದರ ಮಿತಿಗಳಿರಬಹುದು. 'ಮಹಾಮಾನವ ಮೋದಿ' ಭಕ್ತರಿಗೆ ಅವರು ಎಷ್ಟು ಕಡಿಮೆ ಮಾತನಾಡುತ್ತಾರೋ, ಅಷ್ಟೇ ಹೆಚ್ಚು ಕೇಳಿಸುತ್ತದೆ" ಎಂದು ಖೇರಾ ತೀವ್ರ ಟೀಕೆ ಮಾಡಿದರು.