ಮನೆಗೆ ನುಗ್ಗಿದ ಕಳ್ಳರ ಗ್ಯಾಂಗ್ (ಎಐ ರಚಿತ ಚಿತ್ರ) 
ದೇಶ

ಉತ್ತರ ಪ್ರದೇಶ: ಮನೆಗೆ ನುಗ್ಗಿದ ಕಳ್ಳರು, ಗಂಡನ ಹಣೆಗೆ ಗನ್ ಇಟ್ಟು ಪತ್ನಿಗೆ ಚುಂಬನ!

ಪತಿ ವಿರೋಧ ವ್ಯಕ್ತಪಡಿಸಿದಾಗ ಆತನನ್ನು ಕೋಣೆಯೊಳಗೆ ಒತ್ತೆಯಾಳಾಗಿ ಹಿಡಿದುಕೊಂಡು, “ಚಿನ್ನಾಭರಣ, ಹಣ ಎಲ್ಲಿಟ್ಟಿದ್ದೀರಿ? ಬೇಗ ಹೇಳು, ಇಲ್ಲದಿದ್ದರೆ ಗುಂಡಿಕ್ಕಿ ಕೊಲ್ಲುತ್ತೇವೆ” ಎಂದು ಬೆದರಿಕೆ ಹಾಕಿದ್ದಾರೆ.

ಬರೇಲಿ: ಉತ್ತರ ಪ್ರದೇಶದ ಬರೇಲಿಯಲ್ಲಿ ಕಾರ್ಖಾನೆ ಕಾರ್ಮಿಕನೊಬ್ಬನ ಮನೆಯಲ್ಲಿ ಭಾನುವಾರ ತಡರಾತ್ರಿ ನಾಲ್ವರು ಕಳ್ಳರು ನುಗ್ಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.

ಮಹಿಳೆ ಎಚ್ಚರಗೊಂಡು ಕಿರುಚಿದಾಗ, ಆರೋಪಿಗಳು ಆಕೆಯ ಮೂರು ವರ್ಷದ ಮಗಳನ್ನು ಹಾಸಿಗೆಯ ಮೇಲೆ ಎಸೆದು, ಪತಿಯನ್ನು ಬಂದೂಕು ತೋರಿಸಿ ಒತ್ತೆಯಾಳಾಗಿ ಹಿಡಿದು ಬೆದರಿಕೆ ಹಾಕಿದ್ದಾರೆ. ಈ ಘಟನೆ ಕ್ಯಾಂಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸಂತ್ರಸ್ಥ ಮಹಿಳೆ ನಾಲ್ವರು ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ 30 ವರ್ಷದ ಕಾರ್ಮಿಕ ಹೊಲಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿ ಹಾಗೂ ಮೂರು ವರ್ಷದ ಮಗಳೊಂದಿಗೆ ಗ್ರಾಮದಲ್ಲಿ ವಾಸಿಸುತ್ತಿದ್ದ. ಭಾನುವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದು ಕುಟುಂಬದೊಂದಿಗೆ ಊಟ ಮಾಡಿ ಮಲಗಿದ್ದನು.

ಪತ್ನಿ ಮತ್ತು ಮಗಳು ಒಂದು ಕೋಣೆಯಲ್ಲಿ ಮಲಗಿದ್ದರೆ, ಆತ ಮತ್ತೊಂದು ಕೋಣೆಯಲ್ಲಿ ಮಲಗಿದ್ದನು. ಆದರೆ ಮಲಗುವ ವೇಳೆ ಮನೆಯ ಮುಖ್ಯ ಬಾಗಿಲು ಮುಚ್ಚುವುದನ್ನು ಮರೆತಿದ್ದ ಕಾರಣ, ರಾತ್ರಿ ಸುಮಾರು 3 ಗಂಟೆಗೆ ನಾಲ್ಕು ಜನರ ಕಳ್ಳರ ಗ್ಯಾಂಗ್ ಮನೆಯೊಳಗೆ ನುಗ್ಗಿದೆ.

ಪತಿ ಹಣೆಗೆ ಗನ್, ಮಲಗಿದ್ದ ಮಹಿಳೆಗೆ ಮುತ್ತು

ಈ ವೇಳೆ ಕಳ್ಳರಲ್ಲೊಬ್ಬ ತನ್ನ ಮಗಳೊಂದಿಗೆ ಮಲಗಿದ್ದ ಮಹಿಳೆಯ ಬಳಿಗೆ ಹೋಗಿ ಆಕೆಯ ಮುಖಕ್ಕೆ ಮುತ್ತಿಟ್ಟಿದ್ದಾನೆ. ಇದರಿಂದ ಮಹಿಳೆ ಎಚ್ಚರಗೊಂಡು ಜೋರಾಗಿ ಕಿರುಚಲು ಆರಂಭಿಸಿದ್ದಾಳೆ. ಶಬ್ದ ಕೇಳಿ ಪತಿ ಸ್ಥಳಕ್ಕೆ ಬಂದಾಗ, ಆರೋಪಿಗಳು ಆತನತ್ತ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದಾರೆ. ಮಗು ಅಳಲು ಆರಂಭಿಸಿದಾಗ, ಆರೋಪಿಗಳಲ್ಲೊಬ್ಬನು ಮಗುವನ್ನು ತಾಯಿಯ ಮಡಿಲಿನಿಂದ ಕಸಿದುಕೊಂಡು ಹಾಸಿಗೆಯ ಮೇಲೆ ಎಸೆದಿದ್ದಾನೆ.

ಇದೇ ವೇಳೆ, ಮಹಿಳೆಯ ಕುತ್ತಿಗೆಗೆ ಟವೆಲ್ ಸುತ್ತಿ ಬಿಗಿಗೊಳಿಸಲು ಯತ್ನಿಸಿದ್ದಾರೆ. ಪತಿ ವಿರೋಧ ವ್ಯಕ್ತಪಡಿಸಿದಾಗ ಆತನನ್ನು ಕೋಣೆಯೊಳಗೆ ಒತ್ತೆಯಾಳಾಗಿ ಹಿಡಿದುಕೊಂಡು, “ಚಿನ್ನಾಭರಣ, ಹಣ ಎಲ್ಲಿಟ್ಟಿದ್ದೀರಿ? ಬೇಗ ಹೇಳು, ಇಲ್ಲದಿದ್ದರೆ ಗುಂಡಿಕ್ಕಿ ಕೊಲ್ಲುತ್ತೇವೆ” ಎಂದು ಬೆದರಿಕೆ ಹಾಕಿದ್ದಾರೆ.

ಮಗಳನ್ನು ಎತ್ತಿಕೊಂಡು ಓಡಿದ ಮಹಿಳೆ; ಪೊಲೀಸರ ಕಂಡು ಕಳ್ಳರೂ ಪರಾರಿ

ಈ ವೇಳೆ ಮಹಿಳೆ ತನ್ನ ಮಗಳನ್ನು ಎತ್ತಿಕೊಂಡು ಮನೆಯಿಂದ ಹೊರಗೆ ಓಡಿ ಹೋಗಿ ಸಹಾಯಕ್ಕಾಗಿ ಕಿರುಚಲು ಆರಂಭಿಸಿದ್ದಾಳೆ. ಆರೋಪಿಗಳಲ್ಲೊಬ್ಬನು ಆಕೆಯತ್ತ ಕೋಲನ್ನು ಎಸೆದಿದ್ದರೂ, ಮಹಿಳೆ ಬೀದಿಗೆ ಓಡಿ ಹೋಗಿ ಕೂಗಿಕೊಂಡಿದ್ದಾಳೆ. ಅದೇ ಸಮಯದಲ್ಲಿ ರಸ್ತೆಯಲ್ಲಿ ಪೊಲೀಸ್ ವಾಹನ ಬರುತ್ತಿರುವುದನ್ನು ಕಂಡ ಮಹಿಳೆ ಜೋರಾಗಿ ಕೂಗಿದ್ದಾಳೆ. ಮಹಿಳೆಯ ಸ್ಥಿತಿಯನ್ನು ಗಮನಿಸಿದ ಪೊಲೀಸರು ವಾಹನ ನಿಲ್ಲಿಸಿ ವಿಚಾರಿಸಿದಾಗ, ಆಕೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಇತ್ತ ಪೊಲೀಸರನ್ನು ಕಂಡ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಸಿಸಿಟಿವಿ ಪರಿಶೀಲನೆ

ಕ್ಯಾಂಟ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಕೇಶ್ ಕುಮಾರ್ ಮಾತನಾಡಿ, “ಸಂತ್ರಸ್ಥರ ದೂರಿನ ಆಧಾರದ ಮೇಲೆ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮನೆಯ ಸುತ್ತಮುತ್ತ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ತನಿಖೆಯಲ್ಲಿ ಹೊರಬರುವ ಮಾಹಿತಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

ಮನೆ ಸಮೀಪ ಮಾದಕ ವಸ್ತು ಸೇವಿಸುವವರ ಸುಳಿವು

ಸಿಟಿ ಫಸ್ಟ್ ವಲಯಾಧಿಕಾರಿ (ಸಿಒ) ಆಶುತೋಷ್ ಶಿವಂ ಮಾತನಾಡಿ, ಪೀಡಿತ ಕುಟುಂಬಕ್ಕೆ ಯಾರೊಂದಿಗೂ ವೈಮನಸ್ಸಿಲ್ಲ ಎಂದು ತಿಳಿಸಿದ್ದು, ಮನೆಯ ಸಮೀಪದ ಮರದ ಕೆಳಗೆ ಕೆಲವರು ಆಗಾಗ್ಗೆ ಸೇರಿ ಮಾದಕ ವಸ್ತು ಸೇವಿಸುತ್ತಾರೆ ಎಂಬ ಮಾಹಿತಿಯನ್ನು ಕುಟುಂಬ ನೀಡಿದೆ.

ಈ ಸುಳಿವಿನ ಆಧಾರದಲ್ಲಿಯೂ ತನಿಖೆ ನಡೆಸಲಾಗುತ್ತಿದ್ದು, ಸುತ್ತಮುತ್ತಲಿನ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದುವರೆಗೆ ಸುಮಾರು 10 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಲಾಗಿದ್ದು, ಇನ್ನಷ್ಟು ದೃಶ್ಯಾವಳಿಗಳನ್ನು ಪರಿಶೀಲಿಸುವ ಕಾರ್ಯ ಮುಂದುವರಿದಿದೆ ಎಂದು ಹೇಳಿದ್ದಾರೆ. ಅಂತೆಯೇ ಆರೋಪಿಗಳನ್ನು ಶೀಘ್ರದಲ್ಲೇ ಪತ್ತೆಹಚ್ಚುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಬ್ಬನ್‌ ಪಾರ್ಕ್‌ ನಿಲ್ದಾಣದಲ್ಲಿ ಕೆಟ್ಟುನಿಂತ ಮೆಟ್ರೋ ರೈಲು; ಇಂದಿರಾನಗರ -ಮಾಗಡಿ ರೋಡ್ ನಡುವೆ ಸಂಚಾರ ಸ್ಥಗಿತ!

ಇರಾನ್ ಅತ್ಯುನ್ನತ ಮಟ್ಟದ ಅಣು ಪರಿಶೀಲನೆಗೆ ಒಪ್ಪಿದೆ: ಡೊನಾಲ್ಡ್ ಟ್ರಂಪ್

ಮೈಸೂರಿನಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ: ಉಲ್ಲಾಸ್‌ ಗೌಡನ ಬಂಧನ; ಆರೋಪಿ ಆಸ್ತಿ ಮುಟ್ಟುಗೋಲಿಗೆ ಆಗ್ರಹ

ಲಖನೌ ಅಗ್ನಿ ದುರಂತ: ಸಾವಿನಲ್ಲೂ ಒಂದಾದ ಜೋಡಿ, ನವೆಂಬರ್‌ನಲ್ಲಿ ಮದುವೆಯಾಗಬೇಕಿದ್ದ ಅನಿಮೇಷನ್ ಕಲಾವಿದರ ಕನಸು 'ಸುಟ್ಟು' ಭಸ್ಮ

ಹಿಟ್ ಮ್ಯಾನ್ ರೋಹಿತ್ ಶರ್ಮಾ ಮುಡಿಗೆ ಪ್ರತಿಷ್ಠಿತ 'ಪದ್ಮಶ್ರೀ' ಪ್ರಶಸ್ತಿ! Video