ಲಖನೌ: ಸೋಮವಾರ ಉತ್ತರ ಪ್ರದೇಶದ ಲಖನೌ ನಗರದ ವಾಣಿಜ್ಯ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 15 ಮಂದಿ ಮೃತಪಟ್ಟಿದ್ದು, ಇದೇ ದುರಂತವು ನವೆಂಬರ್‌ನಲ್ಲಿ ಮದುವೆಯಾಗಲು ಸಿದ್ಧತೆ ನಡೆಸಿದ್ದ ಯುವ ಜೋಡಿಯ ಕನಸುಗಳನ್ನೂ ಛಿದ್ರ ಮಾಡಿದೆ.
ಹೌದು.. ಈ ಭೀಕರ ಅಗ್ನಿ ಅವಘಡದಲ್ಲಿ ಸಾವಿಗೀಡಾದವರ ಪೈಕಿ 30 ವರ್ಷದ ಅನಾಮಿಕಾ ಸಾಮಂತ್ ಮತ್ತು 27 ವರ್ಷದ ನೀಲೇಶ್ ಕುಮಾರ್ ಇಬ್ಬರೂ ಕೂಡ ಇದ್ದು ಇವರು ಅನಿಮೇಷನ್ ಕಲಾವಿದರಾಗಿದ್ದರು. ಈ ವರ್ಷದ ನವೆಂಬರ್‌ನಲ್ಲಿ ಅವರ ವಿವಾಹ ನಿಗದಿಯಾಗಿತ್ತು. ಆದರೆ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ.
ಮೂಲಗಳ ಪ್ರಕಾರ ಬೆಂಕಿಗಾಹುತಿಯಾದ ಕಟ್ಟಡದ ಎರಡನೇ ಮಹಡಿಯಲ್ಲಿದ್ದ ತಮ್ಮ ಕಂಪನಿಯ ಕಚೇರಿಯಲ್ಲಿ ಸಿಲುಕಿಕೊಂಡಿದ್ದ ಈ ಜೋಡಿ ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಇಬ್ಬರೂ 3ಡಿ ಆರ್ಟ್ ನಿರ್ಮಾಣ ಹಾಗೂ ಗೇಮ್ ಅಭಿವೃದ್ಧಿಯಲ್ಲಿ ಪರಿಣತಿ ಹೊಂದಿರುವ ಹೆಡ್ ಹಾಪರ್ ಸ್ಟುಡಿಯೋಸ್ ಸಂಸ್ಥೆಯಲ್ಲಿ ಅನಿಮೇಷನ್ ಕಲಾವಿದರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮೂರು ವರ್ಷಗಳ ಹಿಂದೆ ಕೆಲಸದ ಸ್ಥಳದಲ್ಲಿಯೇ ಅನಾಮಿಕಾ ಮತ್ತು ನೀಲೇಶ್ ಪರಿಚಯವಾಗಿದ್ದರು. ಆರಂಭದಲ್ಲಿ ವೃತ್ತಿಪರ ಸ್ನೇಹವಾಗಿದ್ದ ಸಂಬಂಧ ಕ್ರಮೇಣ ಆತ್ಮೀಯತೆಯಾಗಿ ಬೆಳೆಯಿತು. ಬಳಿಕ ಅದು ಪ್ರೀತಿಗೆ ತಿರುಗಿ, ವಿವಾಹಕ್ಕೆ ಕಾರಣವಾಯಿತು. ಉಭಯ ಕುಟುಂಬಗಳ ಒಪ್ಪಿಗೆಯೊಂದಿಗೆ ಇತ್ತೀಚೆಗಷ್ಟೇ ಅವರ ನಿಶ್ಚಿತಾರ್ಥವೂ ನೆರವೇರಿತ್ತು.
ನೀಲೇಶ್ ಕುಮಾರ್ ಅವರ ಕುಟುಂಬದ ಸದಸ್ಯರ ಪ್ರಕಾರ, ಕಳೆದ ವಾರ ಅನಾಮಿಕಾ ಅವರ ಪೋಷಕರು ಲಖನೌಗೆ ಬಂದು ಮದುವೆಯ ಸಿದ್ಧತೆಗಳ ಕುರಿತು ಅಂತಿಮ ಮಾತುಕತೆ ನಡೆಸಿದ್ದರು. “ಆ ಭೇಟಿಯ ಸಂದರ್ಭದಲ್ಲಿ ಎರಡೂ ಕುಟುಂಬಗಳು ಮದುವೆಗೆ ಒಪ್ಪಿಗೆ ಸೂಚಿಸಿದ್ದವು. ವಿವಾಹದ ಎಲ್ಲಾ ಸಿದ್ಧತೆಗಳು ಬಹುತೇಕ ಅಂತಿಮಗೊಂಡಿದ್ದವು,” ಎಂದು ನೀಲೇಶ್ ಅವರ ಹಿರಿಯ ಸಹೋದರ ಹಾಗೂ ಆರ್ಕಿಟೆಕ್ಚರಲ್ ವಿಜುವಲೈಸರ್ ಆಗಿರುವ ಅಭಿಷೇಕ್ ಕುಮಾರ್ ತಿಳಿಸಿದ್ದಾರೆ.
ಮುಂದಿನ ವಾರ ವಧುವಿನ ಕುಟುಂಬವನ್ನು ಭೇಟಿ ಮಾಡಲು ಕೊಲ್ಕತ್ತಾಕ್ಕೆ ತೆರಳುವ ಯೋಜನೆಯನ್ನೂ ಕುಟುಂಬ ರೂಪಿಸಿತ್ತು ಎಂದು ಅವರು ಹೇಳಿದ್ದಾರೆ. ನೀಲೇಶ್, ಉತ್ತರ ಪ್ರದೇಶ ವಿದ್ಯುತ್ ಇಲಾಖೆಯ ನಿವೃತ್ತ ನೌಕರ ಶತ್ರುಘ್ನ ಲಾಲ್ ಮತ್ತು ಸಂತೋಷ್ ಕುಮಾರಿ ದಂಪತಿಯ ನಾಲ್ಕು ಮಕ್ಕಳಲ್ಲಿ ಮೂರನೆಯವರಾಗಿದ್ದರು.
ಸೋಮವಾರ ನಡೆದ ಘಟನೆಗಳನ್ನು ಸ್ಮರಿಸಿಕೊಂಡ ಕುಟುಂಬದ ಸದಸ್ಯರು, ಅಲಿಗಂಜ್ ಪ್ರದೇಶದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಸುದ್ದಿಗಳನ್ನು ನೋಡುತ್ತಿದ್ದರೆ, ಆ ದುರಂತ ತಮ್ಮ ಮನೆಯನ್ನೇ ತಟ್ಟಿದೆ ಎಂದು ಆರಂಭದಲ್ಲಿ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಸಂಜೆ ವೇಳೆಗೆ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ (ಕೆಜಿಎಂಯು) ಶವಾಗಾರದಿಂದ ಬಂದ ದೂರವಾಣಿ ಕರೆ ಮೂಲಕ ನೀಲೇಶ್ ಮೃತಪಟ್ಟಿರುವ ವಿಷಯ ತಿಳಿದು ಕುಟುಂಬ ಬೆಚ್ಚಿಬಿದ್ದಿದೆ.
ಕುಟುಂಬದವರ ಪ್ರಕಾರ, ನೀಲೇಶ್ ಅವರ ಮೃತದೇಹ ಯಾವುದೇ ಸುಟ್ಟ ಗಾಯಗಳಿಲ್ಲದೆ ಗುರುತಿಸಬಹುದಾದ ಸ್ಥಿತಿಯಲ್ಲಿತ್ತು. ಇದರಿಂದ ಅವರು ಬೆಂಕಿಯಿಂದಲ್ಲ, ಹೊಗೆ ಉಸಿರಾಟದಿಂದ ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಇನ್ನೊಂದೆಡೆ, ದುಃಖದಲ್ಲಿ ಮುಳುಗಿದ್ದ ಅನಾಮಿಕಾ ಅವರ ಕುಟುಂಬ ಲಖನೌಗೆ ಆಗಮಿಸಲು ಸಾಧ್ಯವಾಗಲಿಲ್ಲ. ಜಿಲ್ಲಾಡಳಿತ ಮತ್ತು ಪೊಲೀಸರ ಸಹಾಯದಿಂದ ಅವರ ಮೃತದೇಹವನ್ನು ಕೊಲ್ಕತ್ತಾಕ್ಕೆ ಕಳುಹಿಸಲಾಯಿತು. ಅನಾಮಿಕಾ ತಮ್ಮ ಕುಟುಂಬದ ಇಬ್ಬರು ಮಕ್ಕಳಲ್ಲಿ ಹಿರಿಯರಾಗಿದ್ದು, ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ತಂದೆ ವಿಶ್ವನಾಥ ಸಾಮಂತಾ ಮತ್ತು ತಾಯಿ ಸುಲೇಖಾ ಸಾಮಂತ್ ಅವರನ್ನು ಅಗಲಿದ್ದಾರೆ.