ಶಿಮ್ಲಾ: ಹಿಮಾಚಲ ಪ್ರದೇಶದ ಕಿನ್ನೌರ್`ನಲ್ಲಿ ಕಬ್ಬಿಣದ ಸೇತುವೆಯೊಂದು ದಿಢೀರ್ ಕುಸಿದು ಅಲ್ಲಿ ಸಂಚರಿಸುತ್ತಿದ್ದ ಟ್ರಕ್ ಪ್ರಪಾತಕ್ಕೆ ಬಿದ್ದಿದ್ದು, ಟ್ರಕ್ ಚಾಲಕ ಪವಾಡ ಸದೃಶ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಮಂಗಳವಾರ ಬೈಲಿ ಸೇತುವೆ ಕುಸಿದ ಪರಿಣಾಮ, ಅದನ್ನು ದಾಟುತ್ತಿದ್ದ ಲಾರಿಯೊಂದು ಸಟ್ಲೆಜ್ ನದಿಗೆ ಬಿದ್ದಿದೆ. ಆದರೆ ಚಾಲಕ ಮಾತ್ರ ಪವಾಡ ಸದೃಶನಾಗಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ರಾಷ್ಟ್ರೀಯ ಹೆದ್ದಾರಿ-5ರ (ಹಳೆಯ ಹಿಂದೂಸ್ತಾನ್-ಟಿಬೆಟ್ ರಸ್ತೆ) ಉರ್ನಿ ಧಾಂಕ್ ಸಮೀಪದ ರೆಕಾಂಗ್ ಪಿಯೊ ಮತ್ತು ತಾಪ್ರಿ ನಡುವಿನ ಪ್ರದೇಶದಲ್ಲಿ ನಡೆದಿದೆ. ಲಾರಿ ಕಬ್ಬಿಣದ ಸೇತುವೆ ದಾಟುತ್ತಿದ್ದ ವೇಳೆ, ಇನ್ನೊಂದು ತುದಿಯನ್ನು ತಲುಪುವ ಹಂತದಲ್ಲಿ ಸೇತುವೆ ಏಕಾಏಕಿ ಕುಸಿದು ಬಿದ್ದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಲಾರಿಯು ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚು ಭಾರವನ್ನು ಹೊತ್ತೊಯ್ಯುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೇತುವೆ ಕುಸಿದು ಲಾರಿ ನದಿಗೆ ಉರುಳಿದ ದೃಶ್ಯಗಳನ್ನು ಒಳಗೊಂಡ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಅಂದಹಾಗೆ ಈ ರಸ್ತೆ ಲಾಹೌಲ್-ಸ್ಪಿಟಿ ಪ್ರದೇಶವನ್ನು ಕಿನ್ನೌರ್ ಜಿಲ್ಲೆಯೊಂದಿಗೆ ಸಂಪರ್ಕಿಸುತ್ತದೆ. ಕಬ್ಬಿಣದ ಸೇತುವೆ ಕುಸಿತದ ಹೊರತಾಗಿಯೂ ಇಲ್ಲಿ ಪರ್ಯಾಯ ರಸ್ತೆ ಮಾರ್ಗ ಲಭ್ಯವಿರುವುದರಿಂದ ವಾಹನ ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.