ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾದ ತರಾತಲಾ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ನಿರ್ಮಾಣ ಹಂತದ ಮೂರು ಅಂತಸ್ತಿನ ಗೋದಾಮು ಕುಸಿದು ಬಿದ್ದಿದ್ದು, ಅವಶೇಷಗಳಡಿಯಲ್ಲಿ ಸಿಲುಕಿ ಹಲವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಲ್ಕತ್ತಾ ಪೊಲೀಸ್ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, 18 ಜನರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಮತ್ತು ಇನ್ನೂ 18 ಜನ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಕೋಲ್ಕತ್ತಾ ಪೊಲೀಸರು, ಅಗ್ನಿಶಾಮಕ ದಳ, ವಿಪತ್ತು ನಿರ್ವಹಣಾ ಪಡೆ ಹಾಗೂ ನಾಗರಿಕ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.
"ತರಾತಲಾ ಪ್ರದೇಶದ ಬ್ರೇಸ್ ಸೇತುವೆ ಬಳಿಯ ಸಾರಿಗೆ ಡಿಪೋ ರಸ್ತೆಯಲ್ಲಿರುವ ಗೋದಾಮಿನ ಛಾವಣಿ ಇಂದು ಮಧ್ಯಾಹ್ನ ಕುಸಿದು ಬಿದ್ದಿದೆ. ನಮ್ಮ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ. ಘಟನೆಯ ಸಮಯದಲ್ಲಿ ಕೆಲವರು ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರು. ಹಲವಾರು ಜನ ಅವಶೇಷಗಳ ಅಡಿಯಲ್ಲಿ ಸಿಲುಕಿರಬಹುದು" ಎಂದು ಅಧಿಕಾರಿ ಹೇಳಿದ್ದಾರೆ.
ನಿರ್ಮಾಣ ಕಾರ್ಯದ ಸಮಯದಲ್ಲಿ ಕಬ್ಬಿಣದ ಕಂಬಗಳು ಮತ್ತು ಕಾಂಕ್ರೀಟ್‌ನ ದೊಡ್ಡ ಭಾಗಗಳು ಕುಸಿದು ಬಿದ್ದಿದ್ದು, ಈ ವೇಳೆ ಹಲವಾರು ಕಾರ್ಮಿಕರು ಸ್ಥಳದಲ್ಲಿದ್ದರು ಎಂದು ಅವರು ತಿಳಿಸಿದ್ದಾರೆ.
"ಮೊದಲ ಮತ್ತು ಎರಡನೇ ಮಹಡಿಗಳಿಗೆ ಆರ್‌ಸಿಸಿ ರಚನೆ ಪೂರ್ಣಗೊಂಡಾಗ ನೆಲ ಮಹಡಿಯಲ್ಲಿ ನಿರ್ಮಾಣ ಚಟುವಟಿಕೆಗಳು ನಡೆಯುತ್ತಿದ್ದವು. ಇಡೀ ರಚನೆ ಕುಸಿದಿದೆ" ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಕೆಲಸದ ಸಮಯದಲ್ಲಿ ಛಾವಣಿ ಕುಸಿದಿದೆ ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಮತ್ತು ಗೋದಾಮಿನ ನಿರ್ಮಾಣದಲ್ಲಿ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಲಾಗಿದೆ ಎಂದು ಆರೋಪಿಸಿದ್ದಾರೆ.
ಸೇನಾ ಸಿಬ್ಬಂದಿ ಕೂಡ ಕಾರ್ಯಾಚರಣೆಯಲ್ಲಿ ಸಹಾಯ ಮಾಡುತ್ತಿದ್ದು, ಭಾರೀ ಕಬ್ಬಿಣದ ಕಂಬಗಳು ಹಾಗೂ ಕಟ್ಟಡದ ವಸ್ತುಗಳನ್ನು ಕ್ರೇನ್‌ಗಳ ಸಹಾಯದಿಂದ ತೆರವುಗೊಳಿಸಲಾಗುತ್ತಿದೆ.
ಒಳಗೆ ಸಿಲುಕಿರುವ ಕಾರ್ಮಿಕರನ್ನು ತಲುಪಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಅವಘಡ ಸಂಭವಿಸಿದ ವೇಳೆ ಸ್ಥಳದಲ್ಲಿ ಒಟ್ಟು ಎಷ್ಟು ಕಾರ್ಮಿಕರು ಇದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೇಲ್ಛಾವಣಿ ಕುಸಿತಕ್ಕೆ ನಿಖರ ಕಾರಣವೂ ತಿಳಿದುಬಂದಿಲ್ಲ.