ಕೇತನ್ ಮತ್ತು ಸಿಯಾ ಅವರೊಂದಿಗೆ ಪ್ರಿಯಕರ ಚೇತನ್ 
ದೇಶ

Ketan Agarwal Murder: 33 ಡಿಗ್ರಿ ಬಿಸಿಲಲ್ಲಿ Hoodie ಯಾಕೆ ಹಾಕಿದ್ದ..? 2004 ಕರೆ, 238 ಗಂಟೆಗಳ ಸಂಭಾಷಣೆ.. ಭಾವಿ ಪತಿ ಹತ್ಯೆಗೆ ಭಾರಿ ಸಂಚು!

ದೃಶ್ಯಾವಳಿ ದಾಖಲಾಗಿದ್ದ ವೇಳೆಗೆ ತಾಪಮಾನ ಸುಮಾರು 33 ಡಿಗ್ರಿ ಸೆಲ್ಸಿಯಸ್ ಇತ್ತು. ಇಂತಹ ಬಿಸಿಲಿನಲ್ಲೂ ಟ್ರೆಕ್ಕಿಂಗ್ ವೇಳೆ ಹುಡಿ ಧರಿಸಿದ್ದೇಕೆ ಎಂಬ ಅನುಮಾನ ಪೊಲೀಸರನ್ನು ಪ್ರಕರಣವನ್ನು ಆಳವಾಗಿ ತನಿಖೆ ನಡೆಸಲು ಪ್ರೇರೇಪಿಸಿತು.

ನವದೆಹಲಿ: ಪುಣೆ ಕೋಟೆಯಲ್ಲಿ ಉದ್ಯಮಿ ಪುತ್ರನ ಕೊಲೆ ಪ್ರಕರಣ ಕೆದಕಿದಷ್ಟೂ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಭಾವಿ ಪತ್ನಿಯ ಪ್ರಿಯಕರ ಧರಿಸಿದ್ದ ಹುಡಿಯಿಂದಲೇ ಕೊಲೆ ಸಂಚು ಬಟಾ ಬಯಲಾಗಿದೆ.

ಹೌದು.. ಕಳೆದ ವಾರ ಪುಣೆ ಸಮೀಪದ ಲೋಹಗಢ ಕೋಟೆಯಲ್ಲಿ ನಡೆದ ಕೇತನ್ ಅಗರ್ವಾಲ್ ಸಾವನ್ನು ಆರಂಭದಲ್ಲಿ ದುರ್ಘಟನಾತ್ಮಕ ಟ್ರೆಕ್ಕಿಂಗ್ ಅಪಘಾತವೆಂದು ಭಾವಿಸಲಾಗಿತ್ತು. ಆದರೆ ಮಹಾರಾಷ್ಟ್ರದ ಬಿಸಿಲಿನ ವಾತಾವರಣದಲ್ಲೂ ಟ್ರೆಕ್ಕಿಂಗ್ ವೇಳೆ ಹುಡಿ ಧರಿಸಿದ್ದ ವ್ಯಕ್ತಿಯೊಬ್ಬನ ಸಿಸಿಟಿವಿ ದೃಶ್ಯ ಪತ್ತೆಯಾಗುತ್ತಿದ್ದಂತೆ ಪ್ರಕರಣವು ಕೊಲೆ ತನಿಖೆಯಾಗಿ ಮಾರ್ಪಟ್ಟಿತು.

ಪೊಲೀಸರ ಪ್ರಕಾರ, ಸಿಸಿಟಿವಿ ದೃಶ್ಯಗಳಲ್ಲಿ ಕೇತನ್ ಅಗರವಾಲ್ ಮತ್ತು ಅವರ ಭಾವಿ ಪತ್ನಿ ಸಿಯಾ ಗೋಯಲ್ ಕೋಟೆಯೊಳಗೆ ಒಟ್ಟಿಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಅವರ ಹಿಂದೆ ಸುಮಾರು 20 ರಿಂದ 30 ಅಡಿ ಅಂತರದಲ್ಲಿ ಮತ್ತೊಬ್ಬ ವ್ಯಕ್ತಿ ನಡೆದುಕೊಂಡು ಅವರನ್ನು ಹಿಂಬಾಲಿಸುತ್ತಿರುವುದು ಕಂಡುಬಂದಿದೆ. ಈತನನ್ನು ಬಳಿಕ ಸಿಯಾ ಗೋಯಲ್ ರ ಪ್ರಿಯಕರ ಚೇತನ್ ಚೌಧರಿ ಎಂದು ಗುರುತಿಸಲಾಗಿದೆ.

33 ಡಿಗ್ರಿಯಲ್ಲಿ ಹುಡಿ ಧರಿಸಿದ್ದೇಕೆ?

ಶಂಕಿತ ವ್ಯಕ್ತಿ ಶಾರ್ಟ್ಸ್ ಮತ್ತು ಮುಖ ಮುಚ್ಚುವಂತೆ ಹುಡಿ ಧರಿಸಿದ್ದಲ್ಲದೆ, ಅದರ ಮೇಲೆಯೇ ಹೆಡ್‌ಸೆಟ್ ಧರಿಸಿದ್ದನು. ಮತ್ತೊಂದು ಸಿಸಿಟಿವಿ ದೃಶ್ಯದಲ್ಲಿ ಸಿಯಾ ಹಿಂದಿರುಗಿ ಹುಡಿ ಧರಿಸಿದ್ದ ವ್ಯಕ್ತಿಯತ್ತ ನೋಡುತ್ತಿದ್ದಂತೆ ಆತ ತಕ್ಷಣವೇ ಕುಳಿತುಕೊಳ್ಳುತ್ತಿರುವುದು ಕಂಡುಬಂದಿದೆ. ಪೊಲೀಸರ ಪ್ರಕಾರ, ದೃಶ್ಯಾವಳಿ ದಾಖಲಾಗಿದ್ದ ವೇಳೆಗೆ ತಾಪಮಾನ ಸುಮಾರು 33 ಡಿಗ್ರಿ ಸೆಲ್ಸಿಯಸ್ ಇತ್ತು. ಇಂತಹ ಬಿಸಿಲಿನಲ್ಲೂ ಟ್ರೆಕ್ಕಿಂಗ್ ವೇಳೆ ಹುಡಿ ಧರಿಸಿದ್ದೇಕೆ ಎಂಬ ಅನುಮಾನ ಪೊಲೀಸರನ್ನು ಪ್ರಕರಣವನ್ನು ಆಳವಾಗಿ ತನಿಖೆ ನಡೆಸಲು ಪ್ರೇರೇಪಿಸಿತು.

"ತಾಂತ್ರಿಕ ವಿಶ್ಲೇಷಣೆಯಿಂದ ಸಿಯಾ ಮತ್ತು ಚೇತನ್ ನಡುವಿನ ನಿಕಟ ಸಂಬಂಧ ಹಾಗೂ ಪೂರ್ವನಿಯೋಜಿತ ಸಂಚಿನ ಸುಳಿವು ದೊರೆಯಿತು. ಬಳಿಕ ಚೇತನ್‌ಗೆ ಸಂಬಂಧಿಸಿದ ಛಾಯಾಚಿತ್ರಗಳು ಮತ್ತು ಸಾಮಾಜಿಕ ಜಾಲತಾಣ ಖಾತೆಗಳನ್ನು ಪರಿಶೀಲಿಸಲಾಯಿತು. ಅವುಗಳನ್ನು ಕೋಟೆಯ ಸಿಸಿಟಿವಿ ದೃಶ್ಯಗಳಲ್ಲಿದ್ದ ಹುಡಿ ಧರಿಸಿದ ವ್ಯಕ್ತಿಯೊಂದಿಗೆ ಹೋಲಿಕೆ ಮಾಡಿದಾಗ ತನಿಖೆಯ ಕೇಂದ್ರಬಿಂದು ಚೇತನ್ ಕಡೆಗೆ ತಿರುಗಿತು," ಎಂದು ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಭಾವಿ ಪತಿ ಸಾವು, ಅನುಮಾನ ಮೂಡಿಸಿದ ಸಿಯಾ ನಡೆ

ಇದಲ್ಲದೆ, ನಿಶ್ಚಿತಾರ್ಥದ ಯುವಕ ಸಾವನ್ನಪ್ಪಿದ ಬಳಿಕವೂ ಸಿಯಾ ಯಾವುದೇ ದುಃಖ ವ್ಯಕ್ತಪಡಿಸದೇ ಸಹಜವಾಗಿ ವರ್ತಿಸುತ್ತಿದ್ದದ್ದು ಪೊಲೀಸರಲ್ಲಿ ಅನುಮಾನ ಮೂಡಿಸಿತು. ತನಿಖೆಯ ವೇಳೆ ಕೇತನ ಅವರ ಚಿಕ್ಕಪ್ಪ, ಸಿಯಾ ಮದುವೆ ಬಗ್ಗೆ ಹಿಂಜರಿಕೆ ವ್ಯಕ್ತಪಡಿಸಿದ್ದಳು ಹಾಗೂ ಮದುವೆಯನ್ನು ಒಂದು ವರ್ಷ ಮುಂದೂಡಬಹುದೇ ಎಂದು ಕೇಳಿದ್ದಳು ಎಂದು ಮಾಹಿತಿ ನೀಡಿದರು.

ಕೇತನ್​ ಅಂತ್ಯಕ್ರಿಯೆ ನಂತರ ನಾಲ್ಕು ದಿನಗಳ ಬಳಿಕ ಸಿಯಾ ಗೋಯಲ್ ಕೇತನ್ ಕುಟುಂಬವನ್ನು ಭೇಟಿ ಮಾಡಿದ್ದಳು. ಅಲ್ಲಿ ಕೇತನ್ ಸಹೋದರಿ ಸಿಯಾ ಅವರನ್ನು ಆ ದಿನದ ಘಟನೆಗಳ ಬಗ್ಗೆ ಪ್ರಶ್ನಿಸಿದಾಗ, ಸಿಯಾ ನೀಡಿದ ಉತ್ತರಗಳಲ್ಲಿ ಅನೇಕ ವಿರೋಧಾಭಾಸಗಳು ಕಂಡುಬಂದಿವೆ. ಇದರಿಂದ ಸಹೋದರಿಗೆ ಅನುಮಾನ ಬಂದಿದೆ ಮತ್ತು ಕುಟುಂಬ ಪೊಲೀಸರಿಗೆ ಮಾಹಿತಿ ನೀಡಿದೆ. ಇದರ ನಂತರ ಪೊಲೀಸರು ತನಿಖೆ ಆರಂಭಿಸಿದ್ದು, ಕೊಲೆಯ ಸಂಚು ಬಯಲಾಗಿದೆ.

2004 ಕರೆ, 238 ಗಂಟೆಗಳ ಸಂಭಾಷಣೆ

ಸಿಯಾ ಮತ್ತು ಆಕೆಯ ಪ್ರಿಯಕರ ಚೇತನ್ ಆರು ತಿಂಗಳ ಅವಧಿಯಲ್ಲಿ ಸಾಕಷ್ಟು ಬಾರಿ ಸಂಭಾಷಣೆ ನಡೆಸಿದ್ದು ಬಯಲಾಗಿದ್ದು, ಕೊಲೆ ಸಂಚಿಗೆ ಮಹತ್ವದ ಸುಳಿವು ನೀಡಿದೆ. ಕಳೆದ ಏಳು ತಿಂಗಳಲ್ಲಿ ಸಿಯಾ ಮತ್ತು ಚೇತನ್ ಸುಮಾರು 2,004 ಬಾರಿ ದೂರವಾಣಿ ಮೂಲಕ ಸಂಪರ್ಕಿಸಿಕೊಂಡಿದ್ದು, ಒಟ್ಟು 238 ಗಂಟೆಗಳ ಕಾಲ ಮಾತುಕತೆ ನಡೆಸಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಅಪಾರ ಸಂಖ್ಯೆಯ ಫೋನ್ ಸಂಭಾಷಣೆಗಳು ಪೊಲೀಸರ ಗಮನ ಸೆಳೆದಿದ್ದು, ಇದು ಸಾಮಾನ್ಯ ಪ್ರೇಮಿಗಳ ಸಂಭಾಷಣೆಯಂತೆ ಕಾಣುತ್ತಿರಲಿಲ್ಲ. ಇದು ಯೋಜಿತ ಪಿತೂರಿಯ ಸುಳಿವು ಎಂದು ಪೊಲೀಸರು ಭಾವಿಸಿದ್ದಾರೆ.

ಇಂಟರ್ನೆಟ್ ಸ್ಥಗಿತ, ಬೇರೆ ಮೊಬೈಲ್ ತಂದಿದ್ದ ಪ್ರಿಯಕರ

ಘಟನೆ ನಡೆದ ದಿನದಂದು ಪ್ರಿಯಕರ ಚೇತನ್ ಮೊಬೈಲ್‌ನ ಇಂಟರ್ನೆಟ್ ಸಂಪೂರ್ಣವಾಗಿ ಆಫ್ ಆಗಿತ್ತು. ಬೆಳಿಗ್ಗೆ 7 ಗಂಟೆಯಿಂದ ಸಂಜೆ 5:40ರವರೆಗೆ ಇಂಟರ್ನೆಟ್ ಬಳಸಿರಲಿಲ್ಲ. ತನಿಖೆಯಲ್ಲಿ ತಿಳಿದುಬಂದಂತೆ, ಚೇತನ್ ತನ್ನ ಫೋನ್ ಅನ್ನು ಅಂಗಡಿಯಲ್ಲೇ ಬಿಟ್ಟು, ಅಂಗಡಿ ಉದ್ಯೋಗಿಯ ಫೋನ್ ಬಳಸಿ ಲೋಹಗಢ ಕೋಟೆಗೆ ಹೋಗಿದ್ದನು ಎನ್ನಲಾಗಿದೆ. ಪೊಲೀಸರ ಟ್ರ್ಯಾಕಿಂಗ್ ತಪ್ಪಿಸುವ ಉದ್ದೇಶದಿಂದ ಇದನ್ನು ಮಾಡಿದ್ದ ಎಂದು ಅನುಮಾನಿಸಲಾಗಿದ್ದು, ಡಿಜಿಟಲ್ ಹೆಜ್ಜೆಗುರುತುಗಳು ಅವನ ಪ್ಲಾನ್​ ರಿವೀಲ್​ ಮಾಡಿದೆ.

ಕೊಲೆ ಪ್ರಕರಣದ ಹಿನ್ನೆಲೆ

ಮಹಾರಾಷ್ಟ್ರದ ಖ್ಯಾತ ಉದ್ಯಮಿಯ ಪುತ್ರನಾದ ಕೇತನ ಅಗರವಾಲ್ ಮತ್ತು ಸಿಯಾ ಗೋಯಲ್ ಅವರು ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಖಾಸಗಿ ವಿಮಾನಗಳು ಮತ್ತು ಅರಮನೆಗಳ ಸಾನ್ನಿಧ್ಯದಲ್ಲಿ ಅದ್ದೂರಿ ವಿವಾಹವನ್ನು ನವೆಂಬರ್‌ನಲ್ಲಿ ನಡೆಸಲು ಯೋಜಿಸಲಾಗಿತ್ತು. ಆದರೆ ಜೂನ್ 18ರಂದು ಪುಣೆ ಸಮೀಪದ ಲೋಹಗಢ ಕೋಟೆಯಲ್ಲಿ ಸಿಯಾ ಹಾಗೂ ಆಕೆಯ ಪ್ರಿಯಕರ ಚೇತನ್ ಸೇರಿ ಕೇತನ ಅವರನ್ನು ಕಣಿವೆಗೆ ತಳ್ಳಿದ ಪರಿಣಾಮ ಅವರು ಮೃತಪಟ್ಟಿದ್ದಾರೆ ಎಂದು ತನಿಖೆ ಬಹಿರಂಗಪಡಿಸಿದೆ.

22 ವರ್ಷದ ಚೇತನ್ ಬಬುಲಾಲ್ ಚೌಧರಿ ಎಂಬಾತನೊಂದಿಗೆ ಸಿಯಾ ಕಳೆದ ವರ್ಷ ವ್ಯವಹಾರಿಕ ಸಭೆಯೊಂದರಲ್ಲಿ ಪರಿಚಯವಾಗಿದ್ದಳು. ಸಿಯಾ ಬೇಕರಿ ವ್ಯವಹಾರ ನಡೆಸುತ್ತಿದ್ದರೆ, ಚೇತನ್ ಡ್ರೈ ಫ್ರೂಟ್ಸ್ ವ್ಯಾಪಾರ ಮಾಡುತ್ತಿದ್ದನು. ಇವರಿಬ್ಬರ ಸಂಬಂಧ 2025ರ ನವೆಂಬರ್‌ನಲ್ಲಿ ಆರಂಭವಾಗಿತ್ತು. ಅದೇ ವೇಳೆಗೆ ಸಿಯಾ ಮತ್ತು ಕೇತನ ಅವರ ಕುಟುಂಬಗಳು ಮದುವೆ ಸಿದ್ಧತೆಯಲ್ಲಿ ತೊಡಗಿದ್ದವು.

ಪೊಲೀಸರ ಪ್ರಕಾರ, ಸಿಯಾ ಮತ್ತು ಕೇತನ ನಡುವಿನ ಸಂಬಂಧದಿಂದ ಚೇತನ್ ಅಸಮಾಧಾನಗೊಂಡಿದ್ದನು. ಕೇತನ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದಾರೆ ಎಂದು ಭಾವಿಸಿ ಇಬ್ಬರೂ ಸೇರಿ ಕೊಲೆ ಸಂಚು ರೂಪಿಸಿದ್ದರು. ಸಿಯಾ, ಸಾಮಾನ್ಯ ಪ್ರವಾಸದ ನೆಪದಲ್ಲಿ ಕೇತನ ಅವರನ್ನು ಲೋಹಗಢ ಕೋಟೆಗೆ ಕರೆದುಕೊಂಡು ಹೋಗಿದ್ದಳು. ಬಳಿಕ ಚೇತನ್ ಸ್ಥಳಕ್ಕೆ ಆಗಮಿಸಿದ್ದಾನೆ. ಇಬ್ಬರೂ ಸೇರಿ ಕೇತನ ಅವರನ್ನು ಹಿಂಬದಿಯಿಂದ ತಳ್ಳಿದ ಪರಿಣಾಮ ಅವರು ಆಳವಾದ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲ ಕೊಲೆ ಯತ್ನ ವಿಫಲ

ಕೊಲೆ ನಡೆಯುವುದಕ್ಕೂ ಕೆಲ ದಿನಗಳ ಮುನ್ನ ಕೇತನ್ ಮತ್ತು ಸಿಯಾ ವಿವಾಹಪೂರ್ವ ಫೋಟೋಶೂಟ್‌ಗಾಗಿ ಬಾಲಿಗೆ ತೆರಳಲು ಯೋಜಿಸಿದ್ದರು. ಆದರೆ ಮುಂಬೈ ವಿಮಾನ ನಿಲ್ದಾಣಕ್ಕೆ ತಲುಪಿದಾಗ ಕೇತನ ತಮ್ಮ ಪಾಸ್‌ಪೋರ್ಟ್ ಕಾಣೆಯಾಗಿರುವುದನ್ನು ಗಮನಿಸಿದ ಕಾರಣ ಆ ಪ್ರವಾಸ ರದ್ದುಗೊಂಡಿತ್ತು. ಕೇತನ್ ಅವರ ತಂದೆಯ ಆರೋಪದ ಪ್ರಕಾರ, ಪ್ರವಾಸವನ್ನು ವಿಫಲಗೊಳಿಸಲು ಸಿಯಾ ಉದ್ದೇಶಪೂರ್ವಕವಾಗಿ ಪಾಸ್‌ಪೋರ್ಟ್ ಅಡಗಿಸಿಟ್ಟಿದ್ದಳು ಎನ್ನಲಾಗಿದೆ.

ಇದಾದ ಬಳಿಕ ಜೂನ್ 14ರಂದು ಲೋಹಗಢ ಕೋಟೆಗೆ ತೆರಳಿದ್ದ ವೇಳೆ ಸಿಯಾ ಮೊದಲ ಬಾರಿಗೆ ಕೇತನ ಅವರನ್ನು ಕೊಲ್ಲಲು ಯತ್ನಿಸಿದ್ದಳು. ಪೊಲೀಸರ ಪ್ರಕಾರ, ಆಕೆ ಕೇತನ್ ಅವರನ್ನು ತಳ್ಳಿದರೂ ಕೇತನ್ ಬಂಡೆಯ ಅಂಚಿನಲ್ಲಿದ್ದ ಪೊದೆಯನ್ನು ಹಿಡಿದುಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು. ತನ್ನ ಕೃತ್ಯವನ್ನು ಮರೆಮಾಚಲು ಸಿಯಾ ಹಾವು ಕಂಡಂತೆ ನಾಟಕವಾಡಿ ಕಿರುಚಿ, ಬಳಿಕ ಕೇತನ್ ಅವರನ್ನು ಅಪ್ಪಿಕೊಂಡು ಪರಿಸ್ಥಿತಿಯನ್ನು ಸಹಜಗೊಳಿಸಿದ್ದಳು.

ಕೊನೆಗೆ ಜೂನ್ 18ರಂದು ಸಿಯಾ ಮತ್ತು ಚೇತನ್ ಸೇರಿ ಕೇತನ ಅವರನ್ನು ಹತ್ಯೆ ಮಾಡಿದರು. ತನಿಖಾ ದಾಖಲೆಗಳ ಪ್ರಕಾರ, ಹಿಂದಿನ ಯೋಜನೆಗಳು ವಿಫಲವಾದರೆ ಅನುಷ್ಠಾನಗೊಳಿಸಲು "ಪ್ಲಾನ್ ಸಿ"ಯನ್ನೂ ಇಬ್ಬರೂ ಸಿದ್ಧಪಡಿಸಿಕೊಂಡಿದ್ದರು.

7 ದಿನಗಳ ಪೊಲೀಸ್ ಕಸ್ಟಡಿ

ಪ್ರಸ್ತುತ ಇಬ್ಬರೂ ಆರೋಪಿಗಳನ್ನು ಜೂನ್ 29ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಆದರೆ ಚೇತನ್ ಚೌಧರಿ ಪರ ವಕೀಲ ರಾಮ್ ಶಹಾನೆ ಪೊಲೀಸರ ಹೇಳಿಕೆಗಳನ್ನು ಪ್ರಶ್ನಿಸಿದ್ದಾರೆ. ಎಫ್‌ಐಆರ್‌ನಲ್ಲಿ ಚೇತನ್ ವಿರುದ್ಧ ನೇರ ಆರೋಪಗಳಿಲ್ಲ ಎಂದು ಅವರು ವಾದಿಸಿದ್ದಾರೆ. ಕೇವಲ ಸಿಯಾ ಅವರ ಸ್ನೇಹಿತ ಎಂಬ ಕಾರಣಕ್ಕೆ ಅವನನ್ನು ಸಹ-ಆರೋಪಿ ಮಾಡಲಾಗಿದೆ ಎಂದು ವಕೀಲರು ವಾದಿಸುತ್ತಿದ್ದಾರೆ. ಘಟನೆಯ ಸಮಯದಲ್ಲಿ ಚೇತನ್ ಆ ಪ್ರದೇಶದಲ್ಲಿದ್ದ ಎಂದು ಸಾಬೀತುಪಡಿಸುವಂತಹ ಸಿಸಿಟಿವಿ ದೃಶ್ಯಗಳು ಅಥವಾ ಇತರೆ ನಿರ್ದಿಷ್ಟ ಪುರಾವೆಗಳನ್ನು ಇನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ ಎಂದು ವಾದಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

‘ಕಾಶ್ಮೀರ ಎಂದಿಗೂ ಭಾರತದ್ದೇ, ಭಾರತದ್ದಾಗಿಯೇ ಉಳಿಯಲಿದೆ’; ವಿಶ್ವಸಂಸ್ಥೆಯಲ್ಲಿ ಪಾಕ್‌ಗೆ ಭಾರತ ತಿರುಗೇಟು..!

Trump ಯುದ್ಧ ನೀತಿಗೆ ಅಮೆರಿಕಾ ಸೆನೆಟ್ ಬ್ರೇಕ್: ಕಾಂಗ್ರೆಸ್ ಅನುಮತಿ ಇಲ್ಲದೆ ಸೇನಾ ಕಾರ್ಯಾಚರಣೆ ಬೇಡ; ಮಹತ್ವದ ನಿರ್ಣಯಕ್ಕೆ ಅನುಮೋದನೆ..!

'ಅಪ್ಪಾ, ನನ್ನನ್ನು ಕಾಪಾಡಿ': ದೆಹಲಿಯಲ್ಲಿ 10 ವರ್ಷದ ಬಾಲಕಿ ಅಪಹರಣ, ಅತ್ಯಾಚಾರ-ಕೊಲೆ, ಪುಟ್ಟ ಮಗುವಿನ ಕೊನೆಯ ಮಾತುಗಳು ವೈರಲ್!

'ಭಾರತೀಯರು ಅದನ್ನು ಮಾಡುವುದಿಲ್ಲ': ಉಕ್ರೇನ್ ಶಾಂತಿಪಾಲನಾ ಯೋಜನೆ ಕುರಿತು ಜೆಡಿ ವ್ಯಾನ್ಸ್ ಪ್ರಸ್ತಾಪಕ್ಕೆ ನಕ್ಕಿದ್ದ ಟ್ರಂಪ್, ಹೇಳಿದ್ದೇನು?

US-Iran ಶಾಂತಿ ಒಪ್ಪಂದ ಎಫೆಕ್ಟ್: Hormuzನಲ್ಲಿ ಹಡಗು ಸಂಚಾರ ಚೇತರಿಕೆ, ಜಲಸಂಧಿ ದಾಟಿದ ಭಾರತದ 11 ಹಡಗುಗಳು..!