ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳದಲ್ಲಿರುವ ಅಧಿಕಾರಿಗಳು 
ದೇಶ

ಕೋಲ್ಕತ್ತಾದಲ್ಲಿ ಭೀಕರ ದುರಂತ: ನಿರ್ಮಾಣ ಹಂತದ ಗೋದಾಮು ಕುಸಿದು 5 ಕಾರ್ಮಿಕರ ಸಾವು, 20 ಮಂದಿ ರಕ್ಷಣೆ; TMC ಅವಧಿಯ ಯೋಜನೆಗಳಿಗೆ CM ಸುವೇಂದು ಬ್ರೇಕ್..!

ತಾರಾತಲಾದ ಟ್ರಾನ್ಸ್‌ಪೋರ್ಟ್ ಡಿಪೋ ರಸ್ತೆಯಲ್ಲಿರುವ ಬ್ರೇಸ್ ಬ್ರಿಡ್ಜ್ ರೈಲು ನಿಲ್ದಾಣದ ಸಮೀಪದ ಮೂರು ಅಂತಸ್ತಿನ ನಿರ್ಮಾಣ ಹಂತದ ಗೋದಾಮಿನಲ್ಲಿ ಮಧ್ಯಾಹ್ನ ಸುಮಾರು 1.30ರ ವೇಳೆಗೆ ಈ ದುರ್ಘಟನೆ ನಡೆದಿದೆ.

ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದ ತಾರಾತಲಾ ಪ್ರದೇಶದಲ್ಲಿ ಬುಧವಾರ ಸಂಭವಿಸಿದ ಭೀಕರ ಕಟ್ಟಡ ದುರಂತದಲ್ಲಿ ಕನಿಷ್ಠ ಐದು ಕಾರ್ಮಿಕರು ಸಾವನ್ನಪ್ಪಿದ್ದು, 20 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ಘಟನೆ ರಾಜ್ಯದ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಸುರಕ್ಷತಾ ಮಾನದಂಡಗಳ ಕುರಿತು ಮತ್ತೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

ತಾರಾತಲಾದ ಟ್ರಾನ್ಸ್‌ಪೋರ್ಟ್ ಡಿಪೋ ರಸ್ತೆಯಲ್ಲಿರುವ ಬ್ರೇಸ್ ಬ್ರಿಡ್ಜ್ ರೈಲು ನಿಲ್ದಾಣದ ಸಮೀಪದ ಮೂರು ಅಂತಸ್ತಿನ ನಿರ್ಮಾಣ ಹಂತದ ಗೋದಾಮಿನಲ್ಲಿ ಮಧ್ಯಾಹ್ನ ಸುಮಾರು 1.30ರ ವೇಳೆಗೆ ಈ ದುರ್ಘಟನೆ ನಡೆದಿದೆ.

ಮೇಲ್ಛಾವಣಿಯ ಕಾಂಕ್ರೀಟ್ ಹಾಕುವ (ಕಾಸ್ಟಿಂಗ್) ಕೆಲಸ ನಡೆಯುತ್ತಿದ್ದ ವೇಳೆ ಕಟ್ಟಡದ ಒಂದು ಭಾಗ ಏಕಾಏಕಿ ಕುಸಿದು ಬಿದ್ದಿದ್ದು, ಕೆಲವೇ ಕ್ಷಣಗಳಲ್ಲಿ ಸಂಪೂರ್ಣ ರಚನೆ ನೆಲಸಮವಾಗಿದೆ. ಘಟನೆಯ ವೇಳೆ ಸುಮಾರು 30ರಿಂದ 40 ಕಾರ್ಮಿಕರು ಕಟ್ಟಡದೊಳಗೆ ಕೆಲಸ ಮಾಡುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಅವಶೇಷಗಳಡಿ ಸಿಲುಕಿದ ಕಾರ್ಮಿಕರಿಗಾಗಿ ಮುಂದುವರೆದ ಕಾರ್ಯಾಚರಣೆ

ಕಟ್ಟಡ ಕುಸಿದ ತಕ್ಷಣ ಸ್ಥಳೀಯರು ಮತ್ತು ಸಹೋದ್ಯೋಗಿಗಳು ರಕ್ಷಣಾ ಕಾರ್ಯ ಆರಂಭಿಸಿದರೂ, ಅವಶೇಷಗಳ ಪ್ರಮಾಣ ಹೆಚ್ಚಿದ್ದರಿಂದ ಅಗ್ನಿಶಾಮಕ ದಳ, ಕೋಲ್ಕತ್ತಾ ಪೊಲೀಸ್, ರಾಜ್ಯ ವಿಪತ್ತು ನಿರ್ವಹಣಾ ಪಡೆ ಹಾಗೂ ಭಾರತೀಯ ಸೇನೆಯ ಈಸ್ಟರ್ನ್ ಕಮಾಂಡ್ ತಂಡಗಳನ್ನು ಸ್ಥಳಕ್ಕೆ ಕರೆಸಲಾಯಿತು.

ಭಾರೀ ಕಬ್ಬಿಣದ ರಾಡ್ ಗಳು, ಕಾಂಕ್ರೀಟ್ ಬ್ಲಾಕ್‌ಗಳು ಮತ್ತು ಉಕ್ಕಿನ ರಚನೆಗಳು ಕುಸಿದು ಬಿದ್ದಿದ್ದರಿಂದ ರಕ್ಷಣಾ ಕಾರ್ಯಾಚರಣೆ ಸವಾಲಿನದ್ದಾಗಿತ್ತು. ಕ್ರೇನ್‌ಗಳು, ಬುಲ್ಡೋಜರ್‌ಗಳು, ಗ್ಯಾಸ್ ಕಟರ್‌ಗಳು ಹಾಗೂ ವಿಶೇಷ ಕತ್ತರಿಸುವ ಯಂತ್ರಗಳನ್ನು ಬಳಸಿ ಅವಶೇಷಗಳನ್ನು ತೆರವುಗೊಳಿಸಲಾಯಿತು. ಸಿಲುಕಿರುವವರ ಕೂಗಾಟದ ಆಧಾರದ ಮೇಲೆ ರಕ್ಷಣಾ ಸಿಬ್ಬಂದಿ ಸ್ಥಳ ಗುರುತಿಸಿ ತಲುಪಲು ಪ್ರಯತ್ನಿಸಿದರು.

ರಕ್ಷಣಾ ತಂಡದ ಸದಸ್ಯರೊಬ್ಬರು ಮಾತನಾಡಿ, “ಅವಶೇಷಗಳಡಿ ಸಿಲುಕಿರುವವರಿಂದ ಸಹಾಯಕ್ಕಾಗಿ ಕೂಗಾಟಗಳು ಕೇಳಿಬರುತ್ತಿವೆ. ನಾವು ಅವರಿಗೆ ಧೈರ್ಯ ತುಂಬುತ್ತಿದ್ದು, ಶೀಘ್ರದಲ್ಲೇ ಹೊರತೆಗೆಯಲಾಗುತ್ತದೆ ಎಂದು ತಿಳಿಸಿದ್ದಾರೆ.

ಮೂವರ ಸ್ಥಿತಿ ಗಂಭೀರ

ಅವಶೇಷಗಳಿಂದ ರಕ್ಷಿಸಲ್ಪಟ್ಟ 20 ಮಂದಿಯನ್ನು ರಾಜ್ಯ ಸರ್ಕಾರದ ಎಸ್‌ಎಸ್‌ಕೆಎಂ ಆಸ್ಪತ್ರೆಯ ಟ್ರಾಮಾ ಕೇರ್ ಕೇಂದ್ರಕ್ಕೆ ದಾಖಲಿಸಲಾಗಿದೆ. ವೈದ್ಯರ ಪ್ರಕಾರ, ಮೂವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಉಳಿದವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ಮೊದಲಿಗೆ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರೂ, ನಂತರ ಗಾಯಾಳುಗಳಲ್ಲಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮೃತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ಸಿಎಂ ಸುವೇಂದು ಅಧಿಕಾರಿ ಸ್ಥಳಕ್ಕೆ ಭೇಟಿ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಅವರು ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾನು ಸ್ಥಳದಲ್ಲಿ ಕಂಡ ದೃಶ್ಯಗಳಿಂದ ಈ ದುರಂತಕ್ಕೆ ಮಳೆ ಅಥವಾ ಮಣ್ಣಿನ ದುರ್ಬಲತೆ ಕಾರಣವಲ್ಲ ಎಂಬುದು ಸ್ಪಷ್ಟವಾಗಿದೆ. ಕಟ್ಟಡದ ವಿನ್ಯಾಸದಲ್ಲಿನ ಗಂಭೀರ ದೋಷವೇ ಇದಕ್ಕೆ ಕಾರಣವಾಗಿದೆ. ಕಾಂಕ್ರೀಟ್‌ನ ಭಾರವನ್ನು ಕಬ್ಬಿಣದ ಬೀಮ್‌ಗಳು ತಡೆದುಕೊಳ್ಳಲು ವಿಫಲವಾದ ಕಾರಣ ಸಂಪೂರ್ಣ ರಚನೆ ಕುಸಿದಿದೆ” ಎಂದು ಹೇಳಿದರು.

ಟಿಎಂಸಿ ಆಡಳಿತದಲ್ಲಿ ಅನುಮೋದನೆ ಪಡೆದ ಕಾಮಗಾರಿಗಳಿಗೆ ತಾತ್ಕಾಲಿಕ ತಡೆ

ಈ ಘಟನೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಕೋಲ್ಕತ್ತಾ ಮಹಾನಗರ ಪಾಲಿಕೆ (KMC) ವ್ಯಾಪ್ತಿಯಲ್ಲಿ ಹಿಂದಿನ ಟಿಎಂಸಿ ಆಡಳಿತ ಅವಧಿಯಲ್ಲಿ ಅನುಮೋದನೆ ಪಡೆದಿರುವ ಎಲ್ಲ ನಿರ್ಮಾಣ ಹಂತದ ಯೋಜನೆಗಳ ಕಾಮಗಾರಿಗಳನ್ನು ಜುಲೈ 31ರವರೆಗೆ ಸ್ಥಗಿತಗೊಳಿಸಿದ್ದಾರೆ.

ವಿಶೇಷವಾಗಿ ವಾಣಿಜ್ಯ ಕಟ್ಟಡಗಳು, ಜಲಮೂಲಗಳನ್ನು ಮುಚ್ಚಿ ನಿರ್ಮಿಸಲಾಗುತ್ತಿರುವ ಯೋಜನೆಗಳು ಹಾಗೂ ದೊಡ್ಡ ನಿರ್ಮಾಣ ಕಾಮಗಾರಿಗಳ ಸುರಕ್ಷತಾ ಪರಿಶೀಲನೆ ನಡೆಸುವಂತೆ ಆದೇಶಿಸಿದ್ದಾರೆ.

“ಎಲ್ಲಾ ಅನುಮಾನಾಸ್ಪದ ಯೋಜನೆಗಳನ್ನು ಮರುಪರಿಶೀಲನೆಗೆ ಒಳಪಡಿಸಲಾಗುತ್ತದೆ. ಸುರಕ್ಷತಾ ಮಾನದಂಡಗಳನ್ನು ಪೂರೈಸಿದ ಯೋಜನೆಗಳಿಗೆ ಮಾತ್ರ ಆಗಸ್ಟ್ 1ರಿಂದ ಕಾಮಗಾರಿ ಮುಂದುವರಿಸಲು ಅವಕಾಶ ನೀಡಲಾಗುತ್ತದೆ” ಎಂದು ತಿಳಿಸಿದ್ದಾರೆ.

ತನಿಖಾ ತಂಡ ರಚನೆ

ಈ ದುರಂತದ ನಿಖರ ಕಾರಣ ಪತ್ತೆಹಚ್ಚಲು ಮತ್ತು ಇತರ ನಿರ್ಮಾಣ ಯೋಜನೆಗಳ ಸುರಕ್ಷತೆಯನ್ನು ಪರಿಶೀಲಿಸಲು ಬಹು-ಏಜೆನ್ಸಿ ತಂಡವನ್ನು ರಚಿಸಲಾಗಿದೆ.

ಈ ತಂಡದಲ್ಲಿ ಸಾರ್ವಜನಿಕ ಕಾಮಗಾರಿಗಳ ಇಲಾಖೆ (PWD), ಅಗ್ನಿಶಾಮಕ ದಳ, ನಾಗರಿಕ ರಕ್ಷಣಾ ಪಡೆ, ಕೋಲ್ಕತ್ತಾ ಪೊಲೀಸ್ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಇರಲಿದ್ದಾರೆ. ಮುಖ್ಯ ಕಾರ್ಯದರ್ಶಿಯ ಮಾರ್ಗದರ್ಶನದಲ್ಲಿ ತಂಡವು ಕಟ್ಟಡ ವಿನ್ಯಾಸ, ಅನುಮೋದನಾ ದಾಖಲೆಗಳು, ಸ್ಥಳ ಪರಿಶೀಲನೆ ಹಾಗೂ ತಾಂತ್ರಿಕ ಅಂಶಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲಿದೆ.

ಮುಂದಿನ ಹಂತದಲ್ಲಿ ಇದೇ ರೀತಿಯ ಪರಿಶೀಲನೆಯನ್ನು ಹೌರಾ ಹಾಗೂ ಬಿಧಾನನಗರ ಮಹಾನಗರ ಪ್ರದೇಶಗಳಲ್ಲೂ ವಿಸ್ತರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಮೂವರ ಬಂಧನ

ಪ್ರಾಥಮಿಕ ತನಿಖೆಯಲ್ಲಿ ನಿರ್ಮಾಣ ಕಾಮಗಾರಿಯಲ್ಲಿ ಗಂಭೀರ ನಿರ್ಲಕ್ಷ್ಯ ಕಂಡುಬಂದಿರುವ ಶಂಕೆ ವ್ಯಕ್ತವಾಗಿದ್ದು, ಯೋಜನಾ ಮೇಲ್ವಿಚಾರಕ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಮಾತನಾಡಿ, “ಗೋದಾಮಿನ ನಿರ್ಮಾಣದಲ್ಲಿ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿರುವ ಸಾಧ್ಯತೆ ಇದೆ. ಕಾಂಕ್ರೀಟ್ ಹಾಕುವ ವೇಳೆಯೇ ಮೇಲ್ಛಾವಣಿ ಕುಸಿದಿರುವುದು ಗಂಭೀರ ತಾಂತ್ರಿಕ ದೋಷವನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.

ಒಂದು ವರ್ಷದಿಂದ ನಡೆಯುತ್ತಿದ್ದ ನಿರ್ಮಾಣ ಕಾಮಗಾರಿ

ಸ್ಥಳೀಯರ ಪ್ರಕಾರ, ಈ ಗೋದಾಮಿನ ನಿರ್ಮಾಣ ಕಾರ್ಯ ಸುಮಾರು ಒಂದು ವರ್ಷದಿಂದ ನಡೆಯುತ್ತಿತ್ತು. ನೆಲಮಹಡಿಯಲ್ಲಿ ಕೆಲಸಗಳು ಮುಂದುವರಿದಿದ್ದರೆ, ಮೊದಲ ಮತ್ತು ಎರಡನೇ ಮಹಡಿಯ ಆರ್‌ಸಿಸಿ ರಚನೆ ಈಗಾಗಲೇ ಪೂರ್ಣಗೊಂಡಿತ್ತು. ಆದರೆ, ಮೇಲ್ಛಾವಣಿ ಕಾಮಗಾರಿ ನಡೆಯುತ್ತಿದ್ದ ವೇಳೆ ಸಂಪೂರ್ಣ ಕಟ್ಟಡವೇ ಕುಸಿದು ಬಿದ್ದಿದೆ.

ಘಟನೆಯ ನಂತರ ಸ್ಥಳದಲ್ಲಿ ಭಾರೀ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕಾರ್ಮಿಕರ ಕುಟುಂಬ ಸದಸ್ಯರು ಹಾಗೂ ಸ್ಥಳೀಯರು ಆಸ್ಪತ್ರೆ ಮತ್ತು ದುರಂತ ಸ್ಥಳದ ಬಳಿ ಜಮಾಯಿಸಿದ್ದಾರೆ.

ಪರಿಹಾರ ಘೋಷಣೆಗೆ ಸಿದ್ಧತೆ

ಈ ನುವೆ ಮೃತರ ಕುಟುಂಬಗಳಿಗೆ ಪರಿಹಾರ ಹಾಗೂ ಕಟ್ಟಡ ನಿರ್ಮಾಣ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿ ಗುರುವಾರ ವಿಧಾನಸಭೆಯಲ್ಲಿ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ. ಇದೇ ವೇಳೆ ದುರಂತಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಸರ್ಕಾರ ಭರವಸೆ ನೀಡಿದೆ.

ತುರ್ತು ಸಹಾಯವಾಣಿ ಆರಂಭ

ದುರಂತಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ನೆರವಿಗಾಗಿ ರಾಜ್ಯ ಸರ್ಕಾರ ವಿಶೇಷ ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದೆ. ತುರ್ತು ಸಹಾಯವಾಣಿ ಸಂಖ್ಯೆಗಳು ಇಂತಿವೆ. 1070, 8697981070, 033-22143526/22535185

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಂಚಿ ಪರೀಕ್ಷೆ ವಿವಾದ: ಬ್ಯಾರಿಕೇಡ್ ಮುರಿದು ವಿಧಾನಸೌಧದತ್ತ ನುಗ್ಗಿದ ವಿದ್ಯಾರ್ಥಿಗಳು! ಜಲಫಿರಂಗಿ ಬಳಸಿದ ಪೊಲೀಸರು, Video

TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

ಬಿಡದಿ ಯೋಜನೆಗೆ ಭೂಸ್ವಾಧೀನ ವಿರೋಧಿಸಿ ಜೆಡಿಎಸ್ ಪಾದಯಾತ್ರೆ: ಮಾಜಿ ಪ್ರಧಾನಿ HD ದೇವೇಗೌಡ ಭಾಗಿ

Maharashtra: ಶಾಲಾ ಹಾಸ್ಟೆಲ್‌ನಲ್ಲಿ ಭೀಕರ ದುರಂತ: ಮಲಗಿದ್ದ 6 ಬಾಲಕಿಯರಿಗೆ ಹಾವು ಕಡಿತ, ಮೂವರ ಸಾವು!