ಕೇತನ್ ಅಗರ್ವಾಲ್ ಕೊಲೆ ಆರೋಪಿಗಳಾದ ಸಿಯಾ ಮತ್ತು ಚೇತನ್ 
ದೇಶ

ಕಾಫಿ ಕುಡಿಯುತ್ತಾ ಭಾವಿ ಪತಿಯ ಕೊಲೆಗೆ ಸ್ಕೆಚ್ ಹಾಕಿದ್ದ ಸಿಯಾ: ಪುಣೆ ಪೊಲೀಸರ ತನಿಖೆ ವೇಳೆ ಬೆಚ್ಚಿಬೀಳಿಸುವ ಸಂಗತಿಗಳು ಬಯಲು! CCTV Video ವೈರಲ್

ಪುಣೆಯಲ್ಲಿ ಜೂನ್ 17ರಂದು ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಇಬ್ಬರೂ ಕಾಫಿ ಡೇಟ್‌ ಗೆ ಹೋಗಿದ್ದರು. ಅಂದೇ ಸಿಯಾ ಅವರ 25 ವರ್ಷದ ಉದ್ಯಮಿ ಹಾಗೂ ಭಾವಿ ಪತಿ ಕೇತನ ಅಗರವಾಲ್ ಹತ್ಯೆಗೆ ಸಂಚು ರೂಪಿಸಲಾಗಿತ್ತು.

ಪುಣೆ: ಕೇತನ್ ಅಗರ್ವಾಲ್ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಆರೋಪಿ ಸಿಯಾ ತನ್ನ ಪ್ರಿಯಕರನ ಜೊತೆಗಿನ ಕಾಫಿ ಡೇಟ್ ನಲ್ಲೇ ಭಾವಿ ಪತಿಯ ಕೊಲೆಗೆ ಸಂಚು ರೂಪಿಸಿದ್ದಳು ಎಂಬ ಆಘಾತಕಾರಿ ಮಾಹಿತಿ ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಹೌದು.. ಪುಣೆಯಲ್ಲಿ ಜೂನ್ 17ರಂದು ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಇಬ್ಬರೂ ಕಾಫಿ ಡೇಟ್‌ ಗೆ ಹೋಗಿದ್ದರು. ಅಂದೇ ಸಿಯಾ ಅವರ 25 ವರ್ಷದ ಉದ್ಯಮಿ ಹಾಗೂ ಭಾವಿ ಪತಿ ಕೇತನ ಅಗರವಾಲ್ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಚು, ಜೂನ್ 18ರಂದು ಪುಣೆಯ ಲೋಹಗಢ ಕೋಟೆಯ ಕಂದಕಕ್ಕೆ ಕೇತನರನ್ನು ತಳ್ಳುವ ಘಟನೆಗೆ ಒಂದು ದಿನ ಮುಂಚಿತವಾಗಿ ನಡೆದಿತ್ತು ಎನ್ನಲಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಕಾಫಿ ಅಂಗಡಿಯಲ್ಲಿ ಕುಳಿತಿದ್ದ ವೇಳೆ ಸಿಯಾ ಮತ್ತು ಚೇತನ್ ಹತ್ಯೆಯ ಯೋಜನೆಯನ್ನು ರೂಪಿಸಿದ್ದರು. ಸಿಯಾ, ಲೋಹಗಢ ಕೋಟೆಯ ಕುರಿತು ಮಾಹಿತಿ ಸಂಗ್ರಹಿಸಿ, ಯೂಟ್ಯೂಬ್ ವಿಡಿಯೊಗಳ ಮೂಲಕ ಸ್ಥಳದ ವಿವರಗಳನ್ನು ಚೇತನನೊಂದಿಗೆ ಚರ್ಚಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಸಿಸಿಟಿವಿ ವಿಡಿಯೋ ವೈರಲ್

ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಇಬ್ಬರೂ ಮಧ್ಯಾಹ್ನ ಸುಮಾರು 4.35ಕ್ಕೆ ಕಾಫಿ ಅಂಗಡಿಗೆ ಪ್ರವೇಶಿಸಿ, ಸಂಜೆ 5.30ರ ಸುಮಾರಿಗೆ ಅಲ್ಲಿಂದ ಹೊರಟಿದ್ದಾರೆ. ಕೇತನ ಅಗರವಾಲ್ ಅವರು ತಮ್ಮ ಕುಟುಂಬದ ರಿಯಲ್ ಎಸ್ಟೇಟ್ ಸಂಸ್ಥೆ 'ಸಕ್ಸಸ್ ಗ್ರೂಪ್'ನ ನಿರ್ದೇಶಕ ಹಾಗೂ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ (CMO) ಆಗಿದ್ದರು. ಜೂನ್ 18ರಂದು ತಮ್ಮ ಭಾವಿ ಸಂಗಾತಿ ಸಿಯಾ ಗೋಯಲ್ ಜೊತೆ ಲೋಹಗಢ ಕೋಟೆಗೆ ಟ್ರೆಕ್ಕಿಂಗ್‌ಗೆ ತೆರಳಿದ್ದ ವೇಳೆ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದರು.

ಈ ವರ್ಷದ ಆರಂಭದಲ್ಲಿ ಕೇತನ ಮತ್ತು ಸಿಯಾ ನಿಶ್ಚಿತಾರ್ಥ ಮಾಡಿಕೊಂಡಿದ್ದು, ನವೆಂಬರ್‌ನಲ್ಲಿ ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿ ವಿವಾಹ ನಡೆಯಬೇಕಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಳಿಕ ಸಿಯಾ, ಬಲವಾದ ಗಾಳಿಯ ನಡುವೆ ಕೋಟೆಯ ಅಂಚಿನಲ್ಲಿ ಫೋಟೋ ತೆಗೆಯುತ್ತಿದ್ದಾಗ ಕೇತನ್ ಅಗರ್ವಾಲ್ ಕಾಲು ಜಾರಿ ಬಿದ್ದಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಳು. ಇದನ್ನು ಆಧರಿಸಿ ಆರಂಭದಲ್ಲಿ ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಲಾಗಿತ್ತು. ಸುಮಾರು ಮೂರು ಗಂಟೆಗಳ ಕಾರ್ಯಾಚರಣೆಯ ಬಳಿಕ ರಕ್ಷಣಾ ಸಿಬ್ಬಂದಿ ಮೃತದೇಹವನ್ನು ಹೊರತೆಗೆದಿದ್ದರು.

ಕೊಲೆ ಬಯಲಾಗಿದ್ದೇ ರೋಚಕ

ಆದರೆ, ಪ್ರಕರಣ ತಕ್ಷಣವೇ ಕೊಲೆ ತನಿಖೆಯಾಗಿ ಬದಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ, ಡಿಜಿಟಲ್ ಸಾಕ್ಷ್ಯಗಳು ಮತ್ತು ತನಿಖೆಯಲ್ಲಿ ಪತ್ತೆಯಾದ ಹಲವು ವೈರುಧ್ಯಗಳು, ಸಾವನ್ನು ಅಪಘಾತದಿಂದ ಕೊಲೆ ಶಂಕೆಯತ್ತ ಕೊಂಡೊಯ್ದವು ಎಂದು ಅವರು ಹೇಳಿದ್ದಾರೆ.

ಆರಂಭದಲ್ಲಿ ಕೇತನ್ ಕುಟುಂಬವು ಯಾವುದೇ ಅನುಮಾನ ವ್ಯಕ್ತಪಡಿಸದಿದ್ದರೂ, ಪೊಲೀಸರು ಸಿಸಿಟಿವಿ ದೃಶ್ಯಗಳು, ಡಿಜಿಟಲ್ ದಾಖಲೆಗಳು ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಪರಿಶೀಲಿಸುತ್ತಲೇ ಇದ್ದರು. ಸಿಯಾ ನೀಡಿದ ಹೇಳಿಕೆಯಲ್ಲಿ ವೈರುಧ್ಯಗಳು ಕಂಡುಬಂದ ಬಳಿಕ ಪ್ರಕರಣದಲ್ಲಿ ಮಹತ್ವದ ತಿರುವು ದೊರೆಯಿತು. ಮೊದಲಿಗೆ ಫೋಟೋ ತೆಗೆಯುವಾಗ ಕೇತನ ಜಾರಿ ಬಿದ್ದಿದ್ದಾರೆ ಎಂದಿದ್ದ ಸಿಯಾ, ನಂತರ ವಿಚಾರಣೆ ವೇಳೆ ಕೋಟೆ ಏರಿ ವಿಶ್ರಾಂತಿ ಪಡೆಯುತ್ತಿದ್ದಾಗ ಕೇತನ್ ನೀರು ಕೇಳಿ, ಬಾಟಲಿಯನ್ನು ನೀಡುವಾಗ ಕಾಲು ಜಾರಿ ಬಿದ್ದಿದ್ದಾರೆ ಎಂದು ಮತ್ತೊಂದು ಹೇಳಿಕೆ ನೀಡಿದ್ದಳು. ಈ ಪರಸ್ಪರ ವಿರುದ್ಧ ಹೇಳಿಕೆಗಳು ತನಿಖಾಧಿಕಾರಿಗಳನ್ನು ಘಟನೆಗಳ ಸರಮಾಲೆಯನ್ನು ಮತ್ತಷ್ಟು ಆಳವಾಗಿ ಪರಿಶೀಲಿಸಲು ಪ್ರೇರೇಪಿಸಿವೆ.

ಇನ್ನೊಂದು ಅನುಮಾನಾಸ್ಪದ ಅಂಶವೆಂದರೆ, ಸಿಯಾ ಫೋಟೋ ತೆಗೆಯುತ್ತಿದ್ದೆವು ಎಂದು ಹೇಳಿದ್ದರೂ, ಕೇತನ್ ಮೊಬೈಲ್‌ನಲ್ಲಿ ಲೋಹಗಢ ಕೋಟೆಯಲ್ಲಿ ತೆಗೆದ ಯಾವುದೇ ಚಿತ್ರಗಳು ಪತ್ತೆಯಾಗಿರಲಿಲ್ಲ. ಅಲ್ಲದೆ, ಕೇತನ್ ಬಿದ್ದ ಸ್ಥಳ ಟ್ರೆಕ್ಕರ್‌ಗಳು ಸಾಮಾನ್ಯವಾಗಿ ವಿಶ್ರಾಂತಿ ಪಡೆಯುವ ಪ್ರದೇಶವಾಗಿರಲಿಲ್ಲ ಎಂಬುದು ಸಹ ಅನುಮಾನವನ್ನು ಹೆಚ್ಚಿಸಿತು.

33 ಡಿಗ್ರಿ ಬಿಸಿಲಿನಲ್ಲಿ ಹುಡಿ ಧರಿಸಿದ್ದ ಸಿಯಾ ಪ್ರಿಯಕರ

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ವೇಳೆ, ಕೇತನ ಮತ್ತು ಸಿಯಾ ಸಮೀಪದಲ್ಲೇ ಹುಡ್ ಧರಿಸಿದ್ದ ವ್ಯಕ್ತಿಯೊಬ್ಬರು ಸಾಗುತ್ತಿರುವುದು ಕಂಡುಬಂತು. ಪೊಲೀಸರು ಹೇಳುವಂತೆ, ಸಿಯಾ ಪದೇಪದೇ ಹಿಂದಿರುಗಿ ಆ ವ್ಯಕ್ತಿಯನ್ನು ನೋಡುತ್ತಿದ್ದಳು ಮತ್ತು ಒಂದು ಸಂದರ್ಭದಲ್ಲಿ ಕೈ ಸಂಜ್ಞೆ ಮಾಡಿದ್ದಳು. ಅದಕ್ಕೆ ಆ ವ್ಯಕ್ತಿ ಪ್ರತಿಕ್ರಿಯಿಸಿರುವುದು ದೃಶ್ಯಗಳಲ್ಲಿ ದಾಖಲಾಗಿತ್ತು. ಮೊಬೈಲ್ ಲೊಕೇಶನ್ ಡೇಟಾ, ಕರೆ ವಿವರಗಳ ದಾಖಲೆಗಳು ಹಾಗೂ ಪ್ರಯಾಣದ ಮಾಹಿತಿಗಳನ್ನು ವಿಶ್ಲೇಷಿಸಿದ ಬಳಿಕ, ಆ ವ್ಯಕ್ತಿಯನ್ನು ಚೇತನ್ ಚೌಧರಿ ಎಂದು ಪೊಲೀಸರು ಗುರುತಿಸಿದರು.

ತನಿಖೆಯಲ್ಲಿ ಚೇತನ್, ಕೇತನ್ ಮತ್ತು ಸಿಯಾ ಆಗಮಿಸುವುದಕ್ಕೂ ಮುನ್ನ ಲೋಹಗಢ ಕೋಟೆಗೆ ತಲುಪಿದ್ದ ಹಾಗೂ ಕೇವಲ 48 ನಿಮಿಷಗಳ ಕಾಲ ಅಲ್ಲಿದ್ದು ನಂತರ ತೆರಳಿದ್ದ ಎಂಬುದು ಬಹಿರಂಗವಾಯಿತು. ಮನರಂಜನೆಗಾಗಿ ಅಲ್ಲ, ನಿರ್ದಿಷ್ಟ ಉದ್ದೇಶಕ್ಕಾಗಿ ಆತ ಅಲ್ಲಿಗೆ ತೆರಳಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಸ್ಥಳೀಯ ಅಪರಾಧ ವಿಭಾಗದ ಪೊಲೀಸರು ಪ್ರಿಯಕರ ಚೇತನ್ ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಪ್ರಕರಣಕ್ಕೆ ಮತ್ತಷ್ಟು ವೇಗ ದೊರೆಯಿತು. ವಿಚಾರಣೆಯಲ್ಲಿ ದೊರೆತ ಮಾಹಿತಿಗಳು, ಸಿಸಿಟಿವಿ ದೃಶ್ಯಾವಳಿ, ಮೊಬೈಲ್ ಲೊಕೇಶನ್ ಡೇಟಾ, ಕರೆ ವಿವರಗಳು ಮತ್ತು ಇತರೆ ಡಿಜಿಟಲ್ ಸಾಕ್ಷ್ಯಗಳೊಂದಿಗೆ ಹೊಂದಿಕೆಯಾಗಿದ್ದು, ಇದು ಪೂರ್ವಯೋಜಿತ ಸಂಚು ಎಂಬ ಪೊಲೀಸರ ಅನುಮಾನವನ್ನು ಬಲಪಡಿಸಿದೆ.

ತಪ್ಪೊಪ್ಪಿಕೊಂಡ ಆರೋಪಿಗಳು

ಆರೋಪಿಗಳು ವಿಚಾರಣೆ ವೇಳೆ ತಮ್ಮ ಪಾತ್ರವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದರೂ, ಕೇವಲ ಒಪ್ಪಿಗೆಯ ಹೇಳಿಕೆಯನ್ನು ಅವಲಂಬಿಸದೇ, ಸಿಸಿಟಿವಿ ದೃಶ್ಯಗಳು, ವಿಧಿವಿಜ್ಞಾನ ವರದಿಗಳು, ಡಿಜಿಟಲ್ ದಾಖಲೆಗಳು ಹಾಗೂ ಇತರೆ ತಾಂತ್ರಿಕ ಸಾಕ್ಷ್ಯಗಳ ಮೂಲಕ ಅವುಗಳನ್ನು ದೃಢೀಕರಿಸಿದ ಬಳಿಕವೇ ಬಂಧನ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಬಂಧನದಲ್ಲಿದ್ದು, ಕೇತನ ಅಗರವಾಲ್ ಸಾವಿಗೆ ಕಾರಣವಾದ ನಿಖರ ಘಟನೆಗಳ ಸರಮಾಲೆಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಡಿಕೆಶಿ ಜೊತೆ ಯಾವುದೇ ವ್ಯವಹಾರಿಕ, ಆತ್ಮೀಯತೆಯಿಲ್ಲ, ಅಪಪ್ರಚಾರ ಮಾಡುವವರಿಗೆ ದೇವರೇ ಬುದ್ಧಿ ಕೊಡಲಿ: ಧರ್ಮಸ್ಥಳದಲ್ಲಿ ವಿಜಯೇಂದ್ರ ಸ್ಪಷ್ಟನೆ

ಮತ್ತೆ ಕಬ್ಬನ್‌ ಪಾರ್ಕ್‌ ಮೆಟ್ರೋ ನಿಲ್ದಾಣದಲ್ಲಿ ರೈಲು ಕೈಕೊಟ್ಟಿದ್ದೇಕೆ? ಅಸಲಿ ಕಾರಣ ಬಿಚ್ಚಿಟ್ಟ BMRCL

ರಾಮ ಮಂದಿರ ದೇಣಿಗೆ ಲೂಟಿ ಪ್ರಕರಣ: SIT ತನಿಖೆ ವಿರುದ್ಧ ಅಯೋಧ್ಯೆ ಅರ್ಚಕರು ಆಕ್ರೋಶ; ಸಿಎಂ ಯೋಗಿಗೆ ಹೇಳಿದ್ದೇನು?

ಕೆ ಆರ್ ಪುರ ತ್ರಿವಳಿ ಕೊ*ಲೆ ಪ್ರಕರಣ: ಕೊನೆಗೂ ಪ್ರಿಯಕರ ಕೆನ್ನೆತ್ ಬಂಧನ, ಆರೋಪಿ ಶ್ವೇತಾಗೆ 7 ದಿನ ಪೊಲೀಸ್ ಕಸ್ಟಡಿ

ರಾಜ್ಯದ ಬಹುತೇಕ ಎಲ್ಲಾ ಅಬಕಾರಿ ಅಧಿಕಾರಿಗಳು ಸಂಬಂಧಿಕರ ಹೆಸರಿನಲ್ಲಿ ಬಾರ್ ಲೈಸೆನ್ಸ್ ಹೊಂದಿದ್ದಾರೆ: ED