ಕೋಟಾ: ಬಿಹಾರದ 18 ವರ್ಷದ ಜೆಇಇ ಆಕಾಂಕ್ಷಿಯೊಬ್ಬರು ಭಾನುವಾರ ಕೋಟಾ-ಝಲಾವರ್ ಫ್ಲೈಓವರ್ ನಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 12 ನೇ ತರಗತಿಯ ವಿದ್ಯಾರ್ಥಿನಿ ಜೈಶ್ರೀ ಆತ್ಮಹತ್ಯೆಗೆ ಶರಣಾದ ದುರ್ದೈವಿಯಾಗಿದ್ದಾರೆ.
ಈಕೆ ಇದೇ ವರ್ಷದ ಜನವರಿಯಿಂದ ಕೋಟಾದ ಕೋಚಿಂಗ್ ಇನ್ಸ್ಟಿಟ್ಯೂಟ್ ನಲ್ಲಿ JEE ಪ್ರವೇಶ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು ಎನ್ನಲಾಗಿದೆ. ವಿಜ್ಞಾನ್ ನಗರದ ಪಿಜಿಯಲ್ಲಿ ವಾಸಿಸುತ್ತಿದ್ದ ಇವರು, ಶನಿವಾರ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಪ್ರಕರಣವೆಂದು ತೋರುತ್ತದೆ. ಆಕೆಯ ಪೋಷಕರೊಂದಿಗೆ ಮಾತನಾಡಿದ ನಂತರ ಸಾವಿಗೆ ನಿಖರವಾದ ಮಾಹಿತಿ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಚಿಂಗ್ ಹಬ್ ಕೋಟಾದಲ್ಲಿ ಹೀಗೆ ಆತ್ಮಹತ್ಯೆ ಮಾಡಿಕೊಂಡ ಏಳನೇ ಜೆಇಇ ವಿದ್ಯಾರ್ಥಿನಿಯಾಗಿದ್ದಾರೆ. ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಫ್ಲೈ ಓವರ್ ನಿಂದ ಹಾರಿದ ವಿದ್ಯಾರ್ಥಿನಿಯನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ ಎಂದು ವಿಜ್ಞಾನ್ ನಗರ ಪೊಲೀಸ್ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಮುಖೇಶ್ ಮೀನಾ ಭಾನುವಾರ ತಿಳಿಸಿದ್ದಾರೆ.
ಬಿಹಾರದ ಅರಾರಿಯಾ ಜಿಲ್ಲೆಯ ರಾಣಿಗಂಜ್‌ನಲ್ಲಿರುವ ಆಕೆಯ ಪೋಷಕರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.