ಭಾರತದ ಖ್ಯಾತ ರಾಪರ್, ಸಂಗೀತಗಾರ ಬಾದ್ ಶಾ ವಿವಾದಕ್ಕೆ ಸಿಲುಕಿದ್ದಾರೆ. ಹರಿಯಾಣ್ವಿ ಭಾಷೆಯಲ್ಲಿ ಇತ್ತೀಚಿಗೆ ಬಿಡುಗಡೆಯಾದ ಅವರ ‘ಟಟೀರಿ’ (Tateeree) ಹಾಡಿನಲ್ಲಿ ಮಹಿಳೆಯರನ್ನು ಅವಹೇಳನ ಮಾಡುವ ಮತ್ತು ಅಶ್ಲೀಲ ಸಾಹಿತ್ಯ ಮತ್ತು ದೃಶ್ಯಗಳನ್ನು ಬಳಸಲಾಗಿದೆ ಎಂಬ ಎಂಬ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಬಳಿಕ ಬಾದ್ ಶಾ ದೇಶ ಬಿಟ್ಟು ಹೋಗದಂತೆ ಅವರ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಲು ಪೊಲೀಸರು ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ.
ಪಂಚಕುಲ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ತಕ್ಷಣವೇ ಪೊಲೀಸರ ಮುಂದೆ ಹಾಜರಾಗುವಂತೆ ಬಾದ್‌ಶಾ ಅವರಿಗೆ ಸೂಚಿಸಿದ್ದಾರೆ. ಆತನ ಬಂಧನಕ್ಕಾಗಿ ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಹರಿಯಾಣ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆರೋಪಿಯು ದೇಶ ತೊರೆಯಲು ಯತ್ನಿಸಿರುವ ಸಾಧ್ಯತೆಯನ್ನು ಪರಿಗಣಿಸಿ, ಅವರ ವಿರುದ್ಧ ಲುಕ್ ಔಟ್ ನೋಟಿಸ್ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.
ಇತ್ತೀಚೆಗೆ ಬಿಡುಗಡೆಯಾದ ಬಾದ್‌ಶಾ ಅವರ ಸಂಗೀತ ವೀಡಿಯೊದಲ್ಲಿ ಆಕ್ಷೇಪಾರ್ಹ ಸಾಹಿತ್ಯ ಮತ್ತು ದೃಶ್ಯಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ಪಂಚಕುಲ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಶುಕ್ರವಾರ ಕಾನೂನಿನ ವಿವಿಧ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಮಹಿಳೆಯರ ಅಸಭ್ಯವಾಗಿ ತೋರಿಸುವ ನಿಷೇಧ ಕಾಯ್ದೆ 1986 ರ ಸೆಕ್ಷನ್ 3 ಮತ್ತು 4 ಮತ್ತು BNS ಸೆಕ್ಷನ್ 296 (ಅಶ್ಲೀಲ ಕೃತ್ಯಗಳು ಮತ್ತು ಹಾಡುಗಳು) ಅಡಿಯಲ್ಲಿ ರಾಪರ್ ವಿರುದ್ಧ ಪ್ರಕರಣ ದಾಖಲಾಗಿದೆ.