ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ನಿವೃತ್ತ ಐಪಿಎಸ್ ಅಧಿಕಾರಿಯಾಗಿರುವ ರಾಜ್ಯಪಾಲ ಆರ್ ಎನ್ ರವಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರನ್ನು "ಬಿಜೆಪಿ ಕೇಡರ್" ಎಂದು ಕರೆದಿದ್ದಾರೆ. ಆದರೆ ಇದು ಕಠಿಣ ಅಖಾಡ ಎಂದು ಹೇಳುವ ಮೂಲಕ ಮುಂಬರುವ ದಿನಗಳಲ್ಲಿ ರಾಜ್ಯ ಸರ್ಕಾರ ಮತ್ತು ಲೋಕಭವನದ ನಡುವಿನ ಘರ್ಷಣೆ ಹೆಚ್ಚಿಸುವ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಪೂರ್ಣಗೊಂಡ ನಂತರ ಅಂತಿಮ ಪಟ್ಟಿಯಿಂದ ಸುಮಾರು 64 ಲಕ್ಷ ಮತದಾರರನ್ನು ಡಿಲೀಟ್ ಮಾಡಿದ್ದನ್ನು ವಿರೋಧಿಸಿ ಶುಕ್ರವಾರದಿಂದ ಟಿಎಂಸಿ ಧರಣಿ ನಡೆಸುತ್ತಿದ್ದು, ಎರಡನೇ ದಿನವಾದ ಇಂದು, ಸಿಎಂ ಪಕ್ಷದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು.
ಪಶ್ಚಿಮ ಬಂಗಾಳ ರಾಜ್ಯಪಾಲ ಸಿ ವಿ ಆನಂದ ಬೋಸ್ ಅವರ ಹಠಾತ್ ರಾಜೀನಾಮೆಗೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಸೃಷ್ಟಿಸಿದೆ ಒತ್ತಡ ಕಾರಣ ಎಂದು ಮಮತಾ ಆರೋಪಿಸಿದರು.
ಧರಣಿ ಸ್ಥಳದಲ್ಲಿ ತಮ್ಮ ಪಕ್ಷದ ತೃಣಮೂಲ ಕಾಂಗ್ರೆಸ್ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಮಮತಾ, ಏಪ್ರಿಲ್‌ನಲ್ಲಿ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಲೋಕಭವನವನ್ನು ರಾಜಕೀಯ ನೆಲೆಯಾಗಿ ಪರಿವರ್ತಿಸಲು ಕೇಂದ್ರ ಪ್ರಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
"ಸಿ ವಿ ಆನಂದ ಬೋಸ್ ಅವರನ್ನು ಹೇಗೆ ತೆಗೆದುಹಾಕಲಾಯಿತು ಎಂದು ನಿಮಗೆ ತಿಳಿದಿದೆಯೇ? ನನಗೆ ಎಲ್ಲವೂ ತಿಳಿದಿದೆ. ಅವರಿಗೆ ಬೆದರಿಕೆ ಹಾಕಲಾಯಿತು. ಅವರು ಲೋಕ ಭವನದಿಂದ ಹಣ ವಿತರಿಸಲು ಬಯಸುತ್ತಾರೆ. ಲೋಕ ಭವನವನ್ನು ಬಿಜೆಪಿ ಪಕ್ಷದ ಕಚೇರಿಯನ್ನಾಗಿ ಪರಿವರ್ತಿಸಬೇಕೆಂದು ಅವರು ಬಯಸುತ್ತಾರೆ. ಆದರೆ ದೆಹಲಿಯ ಅಂತಹ ಹುಚ್ಚಾಟಿಕೆಗಳಿಗೆ ಎಲ್ಲರೂ ಒಪ್ಪುವುದಿಲ್ಲ" ಎಂದು ಮಮತಾ ಆರೋಪಿಸಿದರು.
ಹೊಸ ರಾಜ್ಯಪಾಲ ರವಿ ಅವರು, ಈ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಹೇಗೆ ತೊಂದರೆ ಕೊಟ್ಟಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಅವರೂ ಬಿಜೆಪಿ ಕಾರ್ಯಕರ್ತರಾಗಿದ್ದಾರೆ" ಎಂದರು.
ರವಿ ಅವರು 1976ರ ಬಿಹಾರ ಕೇಡರ್‌ನ ನಿವೃತ್ತ ಐಪಿಎಸ್ ಅಧಿಕಾರಿಯಾಗಿದ್ದು, ತಮ್ಮ ವೃತ್ತಿಜೀವನದಲ್ಲಿ ಕೇಂದ್ರ ಗುಪ್ತಚರ ಬ್ಯೂರೋ(ಐಬಿ) ಮತ್ತು ಕೇಂದ್ರ ತನಿಖಾ ದಳ(ಸಿಬಿಐ) ಯಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ.