ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ದಿನಾಂಕ ಪ್ರಕಟವಾದ ಮರುದಿನವೇ ಭಾರತೀಯ ಜನತಾ ಪಕ್ಷ ಸೋಮವಾರ 144 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕ್ಷೇತ್ರವಾದ ಕೋಲ್ಕತ್ತಾದ ಭಬಾನಿಪುರದಿಂದ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಅವರನ್ನು ಕಣಕ್ಕಿಳಿಸಿದೆ.
2021ರಲ್ಲಿ ಪುರ್ಬಾ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ್ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಅವರನ್ನು 1,956 ಮತಗಳಿಂದ ಸೋಲಿಸಿ ಭರ್ಜರಿ ಗೆಲುವು ಸಾಧಿಸಿದ್ದ ಸುವೇಂದು ಅಧಿಕಾರಿ ಅವರನ್ನು ಈಗ ಮತ್ತೆ ದೀದಿ ವಿರುದ್ಧ ಕಣಕ್ಕಿಳಿಸಲಾಗಿದೆ.
ನಂದಿಗ್ರಾಮದಲ್ಲಿ ಸೋಲು ಅನುಭವಿಸಿದ್ದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ನಂತರ ಉಪಚುನಾವಣೆಯಲ್ಲಿ ಭಬಾನಿಪುರದಿಂದ ಗೆಲುವು ಸಾಧಿಸಿದ್ದರು.
ಪಟ್ಟಿಯ ಪ್ರಕಾರ, ದಿಲೀಪ್ ಘೋಷ್ ಅವರನ್ನು ಖರಗ್‌ಪುರ ಸದರ್‌ನಿಂದ, ಬಿಮನ್ ಮಹ್ತೊ ಅವರನ್ನು ಸಲ್ಬೋನಿಯಿಂದ ಕಣಕ್ಕಿಳಿಸಲಾಗಿದೆ. ಸ್ವಪನ್ ದಾಸ್‌ಗುಪ್ತ ಅವರನ್ನು ದಕ್ಷಿಣ ಕೋಲ್ಕತ್ತಾದ ರಾಸ್‌ಬೆಹಾರಿ ಸ್ಥಾನದಿಂದ ಕಣಕ್ಕಿಳಿಸಲಾಗಿದೆ. ಪುರ್ಬಾ ಮೇದಿನಿಪುರ ಜಿಲ್ಲೆಯ ಕಾಂತಿ ಉತ್ತರದಿಂದ ಸುಮಿತಾ ಸಿನ್ಹಾ, ಹೂಗ್ಲಿ ಜಿಲ್ಲೆಯ ಪುರ್ಸುರಾದಿಂದ ಬಿಮನ್ ಘೋಷ್ ಮತ್ತು ದಕ್ಷಿಣ 24 ಪರಗಣ ಜಿಲ್ಲೆಯ ಕುಲ್ತಾಲಿಯಿಂದ ಮಾಧವಿ ಮಹಲ್ದರ್ ಅವರು ಸ್ಪರ್ಧಿಸಲಿದ್ದಾರೆ.
ಪಟ್ಟಿಯ ಪ್ರಕಾರ ಅನಿಮಾ ದತ್ತ ಅವರನ್ನು ನಾಡಿಯಾ ಜಿಲ್ಲೆಯ ಪಲಾಶಿಪಾರದಿಂದ ಕಣಕ್ಕಿಳಿಸಲಾಗಿದೆ. ಆದರೆ ಲಕ್ಷಿಕಾಂತ್ ಸಾಹು ಅವರನ್ನು ಜಾರ್ಗ್ರಾಮ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಹೆಸರಿಸಲಾಗಿದೆ.
ಪಶ್ಚಿಮ ಬಂಗಾಳದ 294 ಸ್ಥಾನಗಳಿಗೆ ಏಪ್ರಿಲ್ 23 ಮತ್ತು ಏಪ್ರಿಲ್ 29 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ.