ನವದೆಹಲಿ: ಚೀನಾ ದೇಶದಿಂದ ಭಾರತದಲ್ಲಿ ಹೂಡಿಕೆಗಳಿಗೆ ವೇಗವಾದ ಅನುಮೋದನೆ ನೀಡಲು ಸರ್ಕಾರವು ಏಳು ಪ್ರಮುಖ ಕ್ಷೇತ್ರಗಳು/ಉತ್ಪಾದನಾ ಚಟುವಟಿಕೆಗಳನ್ನು ಗುರುತಿಸಿದೆ ಎಂದು ಹಿರಿಯ ಅಧಿಕಾರಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್(The New Indian Express) ಪ್ರತಿನಿಧಿಗೆ ತಿಳಿಸಿದ್ದಾರೆ.
ಈ ಕ್ಷೇತ್ರಗಳಲ್ಲಿ ಬಂಡವಾಳ ಸರಕುಗಳು, ಎಲೆಕ್ಟ್ರಾನಿಕ್ ಬಂಡವಾಳ ಸರಕುಗಳು, ಎಲೆಕ್ಟ್ರಾನಿಕ್ ಘಟಕಗಳು, ಪಾಲಿಸಿಲಿಕಾನ್ ಮತ್ತು ಇಂಗೋಟ್ ವೇಫರ್, ಅಡ್ವಾನ್ಸ್ಡ್ ಬ್ಯಾಟರಿ ಘಟಕಗಳು, ಅಪರೂಪದ ಭೂಮಿಯ ಶಾಶ್ವತ ಆಯಸ್ಕಾಂತಗಳು ಮತ್ತು ಅಪರೂಪದ ಭೂಮಿಯ ಸಂಸ್ಕರಣೆಗಳು ಸೇರಿವೆ.
ಕ್ಯಾಪಿಟಲ್ ಗೂಡ್ಸ್ ಅಥವಾ ಬಂಡವಾಳ ಸರಕುಗಳು ಎಂದರೆ ಉತ್ಪಾದನೆಗೆ ಅಗತ್ಯವಾದ ಯಂತ್ರೋಪಕರಣಗಳು, ಭಾರಿ ಉಪಕರಣಗಳು ಅಥವಾ ಅವುಗಳ ಭಾಗಗಳಾಗಿವೆ. ಎಲೆಕ್ಟ್ರಾನಿಕ್ ಕ್ಯಾಪಿಟಲ್ ಗೂಡ್ಸ್ ಎಂದರೆ ಲಿಥಿಯಂ-ಐಯಾನ್ ಬ್ಯಾಟರಿ, ಮೊಬೈಲ್ ಫೋನ್‌ಗಳ ಉತ್ಪಾದನೆಗೆ ಬಳಸುವ ಯಂತ್ರೋಪಕರಣಗಳಾಗಿವೆ.
ಎಲೆಕ್ಟ್ರಾನಿಕ್ ಘಟಕಗಳಲ್ಲಿ ಡಿಸ್ಪ್ಲೇ ಮೋಡ್ಯೂಲ್, ಕ್ಯಾಮೆರಾ ಮೋಡ್ಯೂಲ್, ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್, ಮೊಬೈಲ್ ಫೋನ್‌ಗಳ ಎನ್‌ಕ್ಲೋಶರ್ ಇತ್ಯಾದಿ ಒಳಗೊಂಡಿವೆ. ಪಾಲಿಸಿಲಿಕಾನ್ ಎಂದರೆ ಸಿಲಿಕಾನ್ ವೇಫರ್ ತಯಾರಿಸಲು ಬಳಸುವ ಪ್ರಮುಖ ಮೂಲ ವಸ್ತು. ಇದನ್ನು ಕರಗಿಸಿ ಇಂಗಾಟ್ ರೂಪದಲ್ಲಿ ತಯಾರಿಸಲಾಗುತ್ತದೆ, ಇದು ಸ್ಫಟಿಕಾಕಾರದ ಸಿಲಿಕಾನ್‌ನ ಘನ ದಂಡ ಅಥವಾ ಬ್ಲಾಕ್ ಆಕಾರದಲ್ಲಿರುತ್ತದೆ.
ಈ ಪಟ್ಟಿಗೆ ಇನ್ನಷ್ಟು ವಲಯಗಳನ್ನು ಸೇರಿಸುವ ಸಾಧ್ಯತೆಯಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ದಾಖಲೆಗಳನ್ನು ಪರಿಶೀಲಿಸಿದಾಗ ತಿಳಿದುಬಂದಿದೆ.
ತಿದ್ದುಪಡಿಗೊಂಡ ಪ್ರೆಸ್ ನೋಟ್ 3 (PN3) ಚಟುವಟಿಕೆಯಡಿ, ಭಾರತದೊಂದಿಗೆ ಭೂಸೀಮೆಯನ್ನು ಹಂಚಿಕೊಂಡಿರುವ ದೇಶಗಳಿಂದ (LBCs) ನಿರ್ದಿಷ್ಟ ಉತ್ಪಾದನಾ ಕ್ಷೇತ್ರಗಳಲ್ಲಿ ಬರುವ ಹೂಡಿಕೆ ಪ್ರಸ್ತಾವನೆಗಳಿಗೆ 60 ದಿನಗಳಲ್ಲಿ ಅನುಮೋದನೆ ನೀಡಲು ಸಚಿವ ಸಂಪುಟ ವ್ಯವಸ್ಥೆಯನ್ನು ಪರಿಚಯಿಸಿದೆ. ಇವುಗಳನ್ನು LBC ಹೂಡಿಕೆಗಳೆಂದು ಕರೆಯಲಾಗುತ್ತದೆ. ಪ್ರಮುಖ ಕ್ಷೇತ್ರಗಳಿಗೆ ಹೂಡಿಕೆ ಹರಿವು ಹೆಚ್ಚಿಸಲು ಈ ವರ್ಷ ಮಾರ್ಚ್ ತಿಂಗಳಲ್ಲಿ ಸರ್ಕಾರವು ಚೀನಾ ಸೇರಿದಂತೆ ನೆರೆಯ ದೇಶಗಳಿಂದ ಬರುವ ಹೂಡಿಕೆಗಳ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಿತ್ತು.
ಈ ನಿರ್ಬಂಧಗಳನ್ನು 2020ರಲ್ಲಿ ಭಾರತ-ಚೀನಾ ನಡುವಿನ ಉದ್ವಿಗ್ನತೆ ತಾರಕಕ್ಕೇರಿದ್ದಾಗ ಜಾರಿಗೊಳಿಸಲಾಗಿತ್ತು.
600 ಪ್ರಸ್ತಾವನೆಗಳು ಅನುಮೋದನೆಗೆ ಬಾಕಿ
ಏಪ್ರಿಲ್ 2020ರಲ್ಲಿ ಎಫ್‌ಡಿಐ ಮೇಲಿನ ನಿಯಂತ್ರಣಗಳನ್ನು ಹೇರಿದ ನಂತರ, ಚೀನಾದಿಂದ ಹೂಡಿಕೆಗಳು ಕಡಿಮೆಯಾಗಿದ್ದವು. DPIIT ಪ್ರಕಾರ, ಚೀನಾದಿಂದ ಸುಮಾರು 600 ಹೂಡಿಕೆ ಪ್ರಸ್ತಾವನೆಗಳು ಇನ್ನೂ ಅನುಮೋದನೆಗಾಗಿ ಬಾಕಿ ಇವೆ. ತಿದ್ದುಪಡಿಗೊಂಡ PN3 ಈ ಬಾಕಿ ಪ್ರಸ್ತಾವನೆಗಳನ್ನು ತೆರವುಗೊಳಿಸಿ, ಭಾರತಕ್ಕೆ ಹೂಡಿಕೆ ಹರಿವು ಹೆಚ್ಚಿಸುವ ನಿರೀಕ್ಷೆಯಿದೆ.
ಎಚ್ಚರಿಕೆಯಿಂದ ಹೂಡಿಕೆಗಳಿಗೆ ಅನುಮೋದನೆ
ಚೀನಾ ಸೇರಿದಂತೆ ಎಲ್ಲಾ ದೇಶಗಳಿಂದ ಹೂಡಿಕೆಗಳಿಗೆ ಭಾರತ ಮುಕ್ತವಾಗಿದ್ದರೂ, ಎಚ್ಚರಿಕೆಯಿಂದ ಮುಂದುವರಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನಾವು ಸಂಪೂರ್ಣ ಎಚ್ಚರಿಕೆಯಿಂದಿದ್ದೇವೆ. ಭದ್ರತೆ ಮತ್ತು ಸುರಕ್ಷತೆ ಅತ್ಯಂತ ಪ್ರಮುಖ. ಸರ್ಕಾರವು ಹೂಡಿಕೆಗಳನ್ನು ಸುಗಮಗೊಳಿಸಲು ಸಿದ್ಧವಾಗಿದೆ, ಆದರೆ ಸಮಗ್ರ ಪರಿಶೀಲನೆಯೊಂದಿಗೆ ಮಾತ್ರ ಎಂದು ಅಧಿಕಾರಿಗಳು ತಿಳಿಸಿದ್ದಾರೆ.