ಜಾಗತಿಕ ಅಸ್ಥಿರತೆ ನಡುವೆಯೂ ಇಂಧನ ದರ ಸ್ಥಿರ: ಬೆಲೆ ಏರಿಕೆ ಹೊರೆ ಹೊತ್ತ ತೈಲ ಕಂಪನಿಗಳು, ಗ್ರಾಹಕರಿಗೆ ರಿಲೀಫ್..!

ಸಾರ್ವಜನಿಕರ ಮೇಲೆ ಬೆಲೆ ಏರಿಕೆಯ ಹೊರೆ ಬೀಳದಂತೆ ತಡೆಯುವ ಉದ್ದೇಶದಿಂದ ಸರ್ಕಾರಿ ತೈಲ ಕಂಪನಿಗಳು ಈ ಕ್ರಮ ಕೈಗೊಂಡಿದ್ದು, ಹೆಚ್ಚಿದ ಜಾಗತಿಕ ವೆಚ್ಚವನ್ನು ತಾವೇ ಭರಿಸುತ್ತಿವೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ತಿಳಿಸಿದೆ.
Representative image
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಇಂಧನದ ಬೆಲೆಗಳು ಏರಿಕೆಯಾಗುತ್ತಿರುವ ನಡುವೆಯೂ ಭಾರತದಲ್ಲಿ ಪೆಟ್ರೋಲ್, ಡೀಸೆಲ್, ವಿಮಾನ ಇಂಧನ (ATF) ಹಾಗೂ ಗೃಹ ಬಳಕೆಯ LPG ದರಗಳನ್ನು ಯಾವುದೇ ಬದಲಾವಣೆ ಇಲ್ಲದೆ ಸ್ಥಿರವಾಗಿಯೇ ಉಳಿಸಲಾಗಿದೆ.

ಸಾರ್ವಜನಿಕರ ಮೇಲೆ ಬೆಲೆ ಏರಿಕೆಯ ಹೊರೆ ಬೀಳದಂತೆ ತಡೆಯುವ ಉದ್ದೇಶದಿಂದ ಸರ್ಕಾರಿ ತೈಲ ಕಂಪನಿಗಳು ಈ ಕ್ರಮ ಕೈಗೊಂಡಿದ್ದು, ಹೆಚ್ಚಿದ ಜಾಗತಿಕ ವೆಚ್ಚವನ್ನು ತಾವೇ ಭರಿಸುತ್ತಿವೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ತಿಳಿಸಿದೆ.

ಸಾಮಾನ್ಯ ಜನರು ಬಳಸುವ ಪ್ರಮುಖ ಇಂಧನಗಳ ದರಗಳಲ್ಲಿ ಬದಲಾವಣೆ ಮಾಡದಿರುವುದು ಗ್ರಾಹಕರಿಗೆ ತಾತ್ಕಾಲಿಕ ನೆಮ್ಮದಿಯನ್ನು ನೀಡಿದೆ.

ದೇಶದಲ್ಲಿ ಒಟ್ಟು ಬಳಕೆಯ ಸುಮಾರು 90 ಶೇಕಡಾ ಭಾಗ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯಿಂದ ಬರುತ್ತದೆ. ಈ ಎರಡರ ದರವನ್ನು ಸ್ಥಿರವಾಗಿಟ್ಟಿರುವುದರಿಂದ ಸಾರಿಗೆ ಕ್ಷೇತ್ರ, ಸಣ್ಣ ಉದ್ಯಮಗಳು ಹಾಗೂ ದೈನಂದಿನ ಬದುಕಿನ ವೆಚ್ಚದ ಮೇಲೆ ಪರಿಣಾಮ ಕಡಿಮೆಯಾಗಿದೆ.

ಸುಮಾರು 33 ಕೋಟಿ ಗ್ರಾಹಕರು ಬಳಸುವ 14.2 ಕೆ.ಜಿ ಗೃಹ ಬಳಕೆಯ LPG ಸಿಲಿಂಡರ್ ದರವೂ ಬದಲಾಗಿಲ್ಲ. ಇದೇ ರೀತಿ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಮೂಲಕ ವಿತರಿಸಲ್ಪಡುವ ಕೆರೋಸಿನ್ (ಸೀಮೆಎಣ್ಣೆ)ದರವೂ ಸ್ಥಿರವಾಗಿದ್ದು, ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಇದು ಮಹತ್ವದ ನೆರವಾಗಿದೆ.

Representative image
ಮಧ್ಯಪ್ರಾಚ್ಯ ಸಂಘರ್ಷ ಎಫೆಕ್ಟ್: ಇಂಧನ ಪೂರೈಕೆ ವ್ಯತ್ಯಯದಿಂದ ಹಣದುಬ್ಬರ ಏರಿಕೆ ಭೀತಿ; ಭಾರತದ ಆರ್ಥಿಕತೆಗೆ ಹೊಡೆತ..?

ವಿಮಾನ ಇಂಧನದ ದರಗಳನ್ನು ಸಾಮಾನ್ಯವಾಗಿ ಪ್ರತಿ ತಿಂಗಳ ಮೊದಲ ದಿನ ಪರಿಷ್ಕರಿಸಲಾಗುತ್ತದೆ. ಆದರೆ, ಈ ಬಾರಿ ದೇಶೀಯ ವಿಮಾನಗಳಿಗೆ ಎಟಿಎಫ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇದರಿಂದ ವಿಮಾನಯಾನ ಕಂಪನಿಗಳಿಗೆ ಕೆಲಮಟ್ಟಿನ ಸಹಾಯವಾಗಲಿದೆ. ಆದರೆ, ಅಂತಾರಾಷ್ಟ್ರೀಯ ವಿಮಾನಗಳಿಗೆ ಬಳಸುವ ಎಟಿಎಫ್ ದರವನ್ನು ಹೆಚ್ಚಿಸಲಾಗಿದ್ದು, ಇದು ಜಾಗತಿಕ ಮಾರುಕಟ್ಟೆಯ ಒತ್ತಡವನ್ನು ಪ್ರತಿಬಿಂಬಿಸುತ್ತಿದೆ.

ಕೈಗಾರಿಕಾ ಬಳಕೆಯ ಇಂಧನಗಳಲ್ಲಿ ಮಾತ್ರ ಬೆಲೆ ಬದಲಾವಣೆ ಮಾಡಲಾಗಿದ್ದು, ಬೃಹತ್ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳು ಹಾಗೂ ಅಂತರರಾಷ್ಟ್ರೀಯ ವಿಮಾನಯಾನ ಕಾರ್ಯಾಚರಣೆಗಳಿಗೆ ಬಳಸಲಾಗುವ ಬೃಹತ್ ಡೀಸೆಲ್ ಮತ್ತು ಎಟಿಎಫ್ ಉತ್ಪನ್ನಗಳ ದರ ಏರಿಕೆಯಾಗಿದೆ.

ಒಟ್ಟಾರೆ ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಸುಮಾರು 80 ಶೇಕಡಾ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಸುಮಾರು 16 ಶೇಕಡಾ ಉತ್ಪನ್ನಗಳು, ಮುಖ್ಯವಾಗಿ ಕೈಗಾರಿಕಾ ಬಳಕೆಯ ಉತ್ಪನ್ನಗಳ ದರ ಏರಿಕೆಯನ್ನು ಕಂಡಿವೆ.

ಇನ್ನೂ ಸುಮಾರು 4 ಶೇಕಡಾ ಉತ್ಪನ್ನಗಳಲ್ಲಿ ದರ ಇಳಿಕೆಯಾಗಿದ್ದು, ತೈಲ ಕಂಪನಿಗಳು ಜಾಗತಿಕ ಬೆಲೆಗಳೊಂದಿಗೆ ಹೊಂದಾಣಿಕೆ ಸಾಧಿಸುತ್ತಾ, ದೇಶೀಯ ಗ್ರಾಹಕರನ್ನು ರಕ್ಷಿಸುವ ಸಮತೋಲನದ ನೀತಿಯನ್ನು ಅನುಸರಿಸುತ್ತಿವೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.

ಈ ಕ್ರಮವು ತಾತ್ಕಾಲಿಕವಾಗಿ ಗ್ರಾಹಕರಿಗೆ ಅನುಕೂಲಕರವಾಗಿದ್ದು, ಬೆಲೆ ಏರಿಕೆ ನಿಯಂತ್ರಣಕ್ಕೂ ಸಹಕಾರಿಯಾಗಿದೆ. ಆದರೆ, ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಮುಂದುವರಿದರೆ, ತೈಲ ಕಂಪನಿಗಳ ಮೇಲೆ ಆರ್ಥಿಕ ಒತ್ತಡ ಹೆಚ್ಚುವ ಸಾಧ್ಯತೆಯೂ ಇದೆ. ಮುಂದಿನ ದಿನಗಳಲ್ಲಿ ಜಾಗತಿಕ ತೈಲ ಬೆಲೆಗಳ ಚಲನವಲನವೇ ದೇಶೀಯ ದರ ನಿರ್ಧಾರದಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com