ಕೋಲ್ಕತಾ: ತಮಿಳುನಾಡು ವಿಧಾನಸಭೆ ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್ ಪಕ್ಷ ತನ್ನ ದೀರ್ಘಕಾಲದ ಮೈತ್ರಿ ಪಾಲುದಾರ ಡಿಎಂಕೆಯನ್ನು ಬದಿಗೊತ್ತಿ ನಟ ವಿಜಯ್ ರ ಟಿವಿಕೆ ಪಕ್ಷಕ್ಕೆ ಬೆಂಬಲ ಘೋಷಿಸಿರುವುದನ್ನು INDI ಮೈತ್ರಿಕೂಟದ ನಾಯಕ ಅಖಿಲೇಶ್ ಯಾದವ್ ಟೀಕಿಸಿದ್ದಾರೆ.
ನಟ ವಿಜಯ್ ರ ಟಿವಿಕೆ ಪಕ್ಷ ತಮಿಳುನಾಡಿನಲ್ಲಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆಯಾದರೂ ಮ್ಯಾಜಿಕ್ ನಂಬರ್ 118 ಸ್ಥಾನಗಳನ್ನು ಹೊಂದಿಸಲು ಪರದಾಡುತ್ತಿದೆ.
ಅಗತ್ಯ ಸಂಖ್ಯಾಬಲವನ್ನು ಪಡೆಯಲು ನಟ ವಿಜಯ್ ನೇತೃತ್ವದ ಈ ಪಕ್ಷವು ಸೋತ ಆಡಳಿತ ಪಕ್ಷವಾದ DMKಯ ಮಿತ್ರಪಕ್ಷಗಳಾಗಿದ್ದ ಹಲವು ಸಣ್ಣ ಪಕ್ಷಗಳನ್ನು ಸಂಪರ್ಕಿಸಿದೆ. ಈ ನಡುವೆ ಡಿಎಂಕೆ ಮಿತ್ರ ಪಕ್ಷ ಕಾಂಗ್ರೆಸ್ ನಟ ವಿಜಯ್ ಗೆ ಬೆಂಬಲ ಘೋಷಣೆ ಮಾಡುವ ಮೂಲಕ ಶಾಕ್ ನೀಡಿತ್ತು. ಈ ವಿಚಾರವನ್ನು ಸ್ವತಃ ಡಿಎಂಕೆ ನಾಯಕರು ಬಹಿರಂಗವಾಗಿಯೇ ಟೀಕಿಸಿದ್ದರು.
ತಮಿಳುನಾಡಿನಲ್ಲಿ ಹೊಸ ರಾಜಕೀಯ ಮೈತ್ರಿಗಳು ರೂಪುಗೊಳ್ಳುತ್ತಿರುವ ವೇಳೆ, ಚೆನ್ನೈ ಆಚೆಯೂ ಕಾಂಗ್ರೆಸ್ ತನ್ನ ದೀರ್ಘಕಾಲದ ಮಿತ್ರ DMKಯನ್ನು ಕೈಬಿಟ್ಟಿದೆ ಎಂಬ ಟೀಕೆ ಎದುರಿಸುತ್ತಿದೆ. ಬೇರಾರೂ ಅಲ್ಲ ಸ್ವತಃ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಈ ಟೀಕೆ ಮಾಡಿ ಇದೀಗ ಸುದ್ದಿಗೆ ಗ್ರಾಸವಾಗಿದ್ದಾರೆ.
ಅಖಿಲೇಶ್ ಯಾದವ್ ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತಮಿಳುನಾಡು ಮಾಜಿ ಸಿಎಂ ಎಂಕೆ ಸ್ಟಾಲಿನ್ ಜೊತೆ ತೆಗೆಸಿಕೊಂಡ ಚಿತ್ರಗಳನ್ನು ಹಂಚಿಕೊಂಡು ಕಾಂಗ್ರೆಸ್ ವಿರುದ್ಧ ಪರೋಕ್ಷ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. ಇತ್ತೀಚೆಗೆ ತಮ್ಮ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡ ನಾಯಕರಾದ ಅವರ ಬಗ್ಗೆ ಉಲ್ಲೇಖಿಸಿ, “ಕಷ್ಟದ ಸಮಯದಲ್ಲಿ ಒಬ್ಬರನ್ನೊಬ್ಬರು ಬಿಟ್ಟುಹೋಗುವವರು ನಾವಲ್ಲ” ಎಂದು ಹೇಳಿದ್ದಾರೆ.
ಅಂದಹಾಗೆ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವೂ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್‌ನ ಪರಮಾಪ್ತ ಮೈತ್ರಿ ಪಾಲುದಾರ ಪಕ್ಷವಾಗಿದೆ. ವಿರೋಧ ಪಕ್ಷಗಳ ಮೈತ್ರಿಯ ಭಾಗವಾಗಿ ಅವರು ಮಮತಾ ಬ್ಯಾನರ್ಜಿ, ಸ್ಟಾಲಿನ್ ಸೇರಿದಂತೆ ಪ್ರಮುಖ ವಿರೋಧ ಪಕ್ಷದ ನಾಯಕರೊಂದಿಗೆ ಸ್ನೇಹಪೂರ್ಣ ಸಂಬಂಧ ಹೊಂದಿದ್ದಾರೆ.
ಮಮತಾ ಬ್ಯಾನರ್ಜಿ ಸೋತ ಬೆನ್ನಲ್ಲೇ ನಿನ್ನೆ ಅವರು ಅವರ ನಿವಾಸಕ್ಕೆ ಭೇಟಿ ನೀಡಿದ್ದ ಅಖಿಲೇಶ್ ಯಾದವ್ ಅವರೊಂದಿಗೆ ಸಾಕಷ್ಟು ಹೊತ್ತು ಚರ್ಚೆ ನಡೆಸಿದರು. ಅಲ್ಲದೆ ತೃಣಮೂಲ ಕಾಂಗ್ರೆಸ್ ಪಕ್ಷ ಮಾಡಿದ್ದ ಚುನಾವಣಾ ಅಕ್ರಮ ಆರೋಪಕ್ಕೂ ಅವರು ಬೆಂಬಲ ವ್ಯಕ್ತಪಡಿಸಿದ್ದರು.
ಅವರ ಇತ್ತೀಚಿನ ಪೋಸ್ಟ್ ಕಾಂಗ್ರೆಸ್ ವಿರುದ್ಧದ ಪರೋಕ್ಷ ಟೀಕೆಯಂತೆ ಕಾಣುತ್ತಿದೆ. ಎರಡು ದಿನಗಳ ಹಿಂದೆ ಕಾಂಗ್ರೆಸ್ DMKಯನ್ನು ತೊರೆದು ತನ್ನ ಐದು ಶಾಸಕರ ಷರತ್ತುಬದ್ಧ ಬೆಂಬಲವನ್ನು TVKಗೆ ಘೋಷಿಸಿತ್ತು. ಈ ಬೆಂಬಲದೊಂದಿಗೆ ವಿಜಯ್ ಪಕ್ಷದ ಬಲ ಈಗ 113 ಸ್ಥಾನಗಳಿಗೆ ಏರಿದೆ. ಸ್ವತಂತ್ರವಾಗಿ ಸ್ಪರ್ಧಿಸಿದ್ದ TVK 208 ಸ್ಥಾನಗಳನ್ನು ಗೆದ್ದಿತ್ತು. ವಿಜಯ್ ಎರಡು ಕ್ಷೇತ್ರಗಳಿಂದ ಜಯಗಳಿಸಿದ್ದರು.
234 ಸದಸ್ಯರ ವಿಧಾನಸಭೆಯಲ್ಲಿ DMK ಕೇವಲ 59 ಸ್ಥಾನಗಳಿಗೆ ಕುಸಿದರೆ, AIADMK ಕೇವಲ 47 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು.
ಟಿವಿಕೆ ಸರ್ಕಾರದ ಭವಿಷ್ಯ ಇಂದು ನಿರ್ಧಾರ
118ರ ಬಹುಮತ ಗಡಿ ತಲುಪಲು ಇನ್ನೂ ಕೊರತೆಯಿರುವ ಕಾರಣ, ಕಾಂಗ್ರೆಸ್ ಬೆಂಬಲ ಇದ್ದರೂ TVK ಇದೀಗ VCK (2), CPI (2) ಮತ್ತು CPI-M (2) ಪಕ್ಷಗಳನ್ನೂ ಸಂಪರ್ಕಿಸಿದೆ. DMK ಮೈತ್ರಿಯ ಭಾಗವಾಗಿದ್ದ ಈ ಪಕ್ಷಗಳು ಇಂದು ತಮ್ಮ ನಿಲುವು ಸ್ಪಷ್ಟಪಡಿಸಲಿವೆ ಎನ್ನಲಾಗಿದೆ.