ಚೆನ್ನೈ: ತಮಿಳುನಾಡು ಚುನಾವಣೆಯಲ್ಲಿ 59 ಸ್ಥಾನಗಳನ್ನು ಪಡೆದಿರುವ ಡಿಎಂಕೆ ತನ್ನ ಪ್ರಮುಖ ರಾಜಕೀಯ ಎದುರಾಳಿ ಎಐಎಡಿಎಂಕೆ (47 ಸ್ಥಾನಗಳು)ಗೆ ಬೆಂಬಲ ನೀಡಿ ಸರ್ಕಾರ ರಚಿಸಬಹುದು ಎಂಬ ವರದಿಗಳ ನಡುವೆ, ಪಕ್ಷವು ನಿನ್ನೆ ಗುರುವಾರ ನಡೆದ ನಾಯಕರ ಹಾಗೂ ಹೊಸದಾಗಿ ಆಯ್ಕೆಯಾದ ಶಾಸಕರ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಎಂ ಕೆ ಸ್ಟಾಲಿನ್ ಅವರಿಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡುವ ನಿರ್ಣಯವನ್ನು ಅಂಗೀಕರಿಸಿದೆ. ಸಾರ್ವಜನಿಕವಾಗಿ ಇದನ್ನು ನಿರಾಕರಿಸಿದರೂ, ಮೈತ್ರಿಗೆ ಇನ್ನೂ ಬಾಗಿಲು ತೆರೆದೇ ಇದೆ ಎಂಬ ಸೂಚನೆ ಇದರಿಂದ ದೊರಕಿದೆ.
ಅಣ್ಣಾ ಅರಿವಾಲಯದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ನಾಯಕರ ಪ್ರಕಾರ, ಪಕ್ಷದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡೇ ನಿರ್ಧಾರ ಕೈಗೊಳ್ಳುವುದಾಗಿ ಸ್ಟಾಲಿನ್ ಹೇಳಿದ್ದಾರೆ. ಇದೇ ವೇಳೆ, ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಕನಿಮೊಳಿ ಸಭೆಗೆ ಗೈರಾಗಿರುವುದು ಗಮನ ಸೆಳೆಯಿತು. ಡಿಎಂಕೆ-ಎಐಎಡಿಎಂಕೆ ಮೈತ್ರಿ ಕುರಿತ ಚರ್ಚೆಗಳಿಂದ ಅಸಮಾಧಾನಗೊಂಡಿದ್ದ ಕಾರಣ ಅವರು ಸಭೆಗೆ ಹಾಜರಾಗಿಲ್ಲ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಅಥೂರು ಕ್ಷೇತ್ರದಿಂದ ಗೆದ್ದ ಹಿರಿಯ ನಾಯಕ ಡಿಂಡಿಗಲ್ ಐ ಪೆರಿಯಸಾಮಿ ಹೊರತುಪಡಿಸಿ ಇತರ ಉಪ ಪ್ರಧಾನ ಕಾರ್ಯದರ್ಶಿಗಳನ್ನು ವೇದಿಕೆಯಲ್ಲಿ ಕುಳ್ಳಿರಿಸದೇ ಪಕ್ಷ ನಿನ್ನೆ ಎಚ್ಚರಿಕೆ ವಹಿಸಿತ್ತು. ಇನ್ನೊಂದೆಡೆ, ಮೇ 10ರವರೆಗೆ ಚೆನ್ನೈಯಲ್ಲೇ ಉಳಿಯುವಂತೆ ಡಿಎಂಕೆ ಶಾಸಕರಿಗೆ ಸೂಚಿಸಲಾಗಿದೆ. ಹಿರಿಯ ಡಿಎಂಕೆ ನಾಯಕರೊಬ್ಬರು, ಆದರ್ಶ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡುವ ಆಸೆ ನನಗಿದೆ. ಆದರೆ, ಪಕ್ಷದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು ಎಂದು ಸ್ಟಾಲಿನ್ ಹೇಳಿದ್ದಾರೆ ಎಂದರು.
ಹಿರಿಯ ನಾಯಕರ ಜೊತೆ ಸಮಾಲೋಚನೆ ನಡೆಸಿದ ಬಳಿಕ ಕೆಲವು ತೀರ್ಮಾನಗಳನ್ನು ಕೈಗೊಳ್ಳಬೇಕಾಗಬಹುದು. ಯಾವ ನಿರ್ಧಾರವಾದರೂ, ಶಾಸಕರು ಅದನ್ನು ಪಾಲಿಸಬೇಕು ಎಂದು ಮೂಲಗಳು ಸ್ಟಾಲಿನ್ ಹೇಳಿದ್ದಾಗಿ ಉಲ್ಲೇಖಿಸಿವೆ.
ಡಿಎಂಕೆಯ ಉನ್ನತ ಮೂಲವೊಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (The New Indian Express) ಪತ್ರಿಕೆಗೆ ತಿಳಿಸಿದಂತೆ, ಆರು ತಿಂಗಳೊಳಗೆ ಮತ್ತೊಮ್ಮೆ ಚುನಾವಣೆ ಎದುರಿಸಲು ಪಕ್ಷ ಸಿದ್ಧವಿಲ್ಲ. ಆದ್ದರಿಂದ ರಾಜ್ಯದಲ್ಲಿ ಸ್ಥಿರ ಸರ್ಕಾರ ರಚನೆಗೆ ಅನುಕೂಲವಾಗುವ ನಿಲುವು ತೆಗೆದುಕೊಳ್ಳುವ ಸಾಧ್ಯತೆ ಇದೆ.
ಟಿವಿಕೆ ಸರ್ಕಾರ ರಚಿಸುವುದನ್ನು ಡಿಎಂಕೆ ತಡೆಯುವುದಿಲ್ಲ. ಆದರೆ ಅವರಿಗೆ ಬೇಕಾದ ಬಹುಮತ ಸಿಗದಿದ್ದರೆ, ನಾವು ಸರ್ಕಾರ ರಚನೆಗೆ ಹಕ್ಕು ಮಂಡಿಸುವುದಿಲ್ಲ. ಆದರೆ ಸ್ಥಿರ ಸರ್ಕಾರಕ್ಕಾಗಿ ಎಐಎಡಿಎಂಕೆಗೆ ಹೊರಗಿನಿಂದ ಬೆಂಬಲ ನೀಡಬಹುದು ಎಂದು ಮೂಲಗಳು ತಿಳಿಸಿವೆ.
ಈ ರೀತಿಯ ಬೆಳವಣಿಗೆ ಎಡಪಕ್ಷಗಳು ಹಾಗೂ ವಿಸಿಕೆ ಪಕ್ಷದ ನಿರ್ಧಾರಗಳ ಮೇಲೂ ಅವಲಂಬಿತವಾಗಿರುತ್ತದೆ. ಈ ಪಕ್ಷಗಳಿಗೆ ಹೊಸ ವಿಧಾನಸಭೆಯಲ್ಲಿ ತಲಾ ಎರಡು ಸ್ಥಾನಗಳಿವೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೇ ವಿಧಾನಸಭೆಯಲ್ಲಿ ತೂಗುಯ್ಯಾಲೆ ಸ್ಥಿತಿ ನಿರ್ಮಾಣವಾಗಿದೆ. ಇದು ಗಂಭೀರ ಹಾಗೂ ಸಂಕೀರ್ಣ ಪರಿಸ್ಥಿತಿ.
ತಮಿಳುನಾಡು ಮತ್ತೊಮ್ಮೆ ಚುನಾವಣೆ ಎದುರಿಸುವ ಸ್ಥಿತಿಯಲ್ಲಿ ಇಲ್ಲ. ಆದ್ದರಿಂದ ರಾಜ್ಯದಲ್ಲಿ ಸ್ಥಿರ ಸರ್ಕಾರ ರಚನೆಯೇ ನಮ್ಮ ಪ್ರಮುಖ ಉದ್ದೇಶ. ಜೊತೆಗೆ, ದ್ರಾವಿಡ ಚಳವಳಿಯ ತತ್ವಗಳಿಗೆ ವಿರುದ್ಧವಾದ ಸಮುದಾಯಾಧಾರಿತ ಶಕ್ತಿಗಳಿಗೆ ಯಾವುದೇ ಅವಕಾಶ ನೀಡಬಾರದು ಎಂಬ ವಿಚಾರವನ್ನೂ ನಾವು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.
ರಾಜ್ಯಾದ್ಯಂತ ದ್ರಾವಿಡ ಚಿಂತಕರು ಮತ್ತು ನಾಯಕರು ಎಐಎಡಿಎಂಕೆಗೆ ಬೆಂಬಲ ನೀಡುವ ಯೋಚನೆಗೆ ವಿರೋಧ ವ್ಯಕ್ತಪಡಿಸಿ ಡಿಎಂಕೆ ನಾಯಕರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.
ಸ್ಟಾಲಿನ್ ಇಂತಹ ಮೈತ್ರಿಗೆ ವಿರೋಧಿಯಾಗಿದ್ದಾರೆ ಎನ್ನಲಾಗುತ್ತಿದ್ದರೂ, ಎರಡನೇ ಹಂತದ ಕೆಲವು ನಾಯಕರು ಮೈತ್ರಿಗೆ ಒತ್ತಾಯಿಸುತ್ತಿದ್ದಾರೆ. ಉತ್ತರ ತಮಿಳುನಾಡಿನ ಮಾಜಿ ಡಿಎಂಕೆ ಸಚಿವರೊಬ್ಬರು ಎಐಎಡಿಎಂಕೆ ಜೊತೆ ಗುಪ್ತ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ಅಂಗೀಕರಿಸಿದ ನಿರ್ಣಯವು ರಾಜಕೀಯ ಮತ್ತು ಆಡಳಿತಾತ್ಮಕ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ತುರ್ತು ನಿರ್ಧಾರಗಳನ್ನು ಕೈಗೊಳ್ಳುವ ಸಂಪೂರ್ಣ ಅಧಿಕಾರವನ್ನು ಪಕ್ಷದ ಅಧ್ಯಕ್ಷರಾಗಿ ಸ್ಟಾಲಿನ್ ಅವರಿಗೆ ನೀಡಿದೆ.
ಮ್ಯಾಜಿಕ್ ನಂಬರ್ ಬೆನ್ನತ್ತಿದ ದಳಪತಿ ವಿಜಯ್
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷ 107 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸರ್ಕಾರ ರಚಿಸಲು 118 ಶಾಸಕರ ಬೆಂಬಲ ಬೇಕಾಗಿದ್ದು, ವಿಜಯ್ ಪ್ರಸ್ತುತ 112 ಶಾಸಕರ (ಟಿವಿಕೆ 107 + ಕಾಂಗ್ರೆಸ್ 5) ಬೆಂಬಲ ಹೊಂದಿದ್ದಾರೆ. ಬಾಕಿ ಇರುವ 6 ಶಾಸಕರ ಬೆಂಬಲಕ್ಕಾಗಿ ತೀವ್ರ ಕಸರತ್ತು ನಡೆಯುತ್ತಿದೆ. ಇದರ ನಡುವೆ ಎಐಎಡಿಎಂಕೆಯ 28 ಶಾಸಕರನ್ನು ಪುದುಚೇರಿ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದ್ದು, ವಿಜಯ್‌ಗೆ ಬೆಂಬಲ ನೀಡುವ ಬಗ್ಗೆ ಪಳನಿಸ್ವಾಮಿ ಮೇಲೆ ಒತ್ತಡ ಹೆಚ್ಚಿದೆ.