ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದ ಕೊರತೆ ಉಂಟಾಗಿದ್ದು, ಫಲಿತಾಂಶ ಪ್ರಕಟವಾಗಿ ನಾಲ್ಕು ದಿನಗಳ ಬಳಿಕವೂ ಸರ್ಕಾರ ರಚನೆ ಕಗ್ಗಂಟಾಗಿ ಉಳಿದಿದೆ. ಹೊಸದಾಗಿ ಉದಯಿಸಿದ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷವು 108 ಸ್ಥಾನಗಳೊಂದಿಗೆ ಸರ್ಕಾರ ರಚಿಸಲು ಅಗತ್ಯವಿರುವ 118 ಶಾಸಕರ ಸಂಖ್ಯೆಗೆ ಇನ್ನೂ ಎರಡು ಸ್ಥಾನಗಳಷ್ಟು ಕೊರತೆಯಲ್ಲಿದೆ. ಇದರೊಂದಿಗೆ ಪಕ್ಷದ ಮುಖ್ಯಸ್ಥ ಸಿ ಜೋಸೆಫ್ ವಿಜಯ್ ಅವರ ಮುಖ್ಯಮಂತ್ರಿ ಹಾದಿ ಇನ್ನೂ ಅನಿಶ್ಚಿತವಾಗಿಯೇ ಉಳಿದಿದೆ.
ನಿನ್ನೆ ಶುಕ್ರವಾರ ಮೂರನೇ ದಿನವೂ ವಿಜಯ್ ರಾಜ್ಯಪಾಲ ರಾಜೇಂದ್ರ ಅರ್ಲೆಕರ್ ಅವರನ್ನು ಭೇಟಿ ಮಾಡಿ, ನೂತನ ವಿಧಾನಸಭೆಯಲ್ಲಿ ಅತಿ ದೊಡ್ಡ ಪಕ್ಷದ ನಾಯಕನಾಗಿ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ವಿಜಯ್ ಎರಡು ಕ್ಷೇತ್ರಗಳಿಂದ ಗೆದ್ದಿರುವುದರಿಂದ, ಒಂದಕ್ಕೆ ರಾಜೀನಾಮೆ ನೀಡಿದ ಬಳಿಕ ಟಿವಿಕೆಯ ಬಲ 108ರಿಂದ 107ಕ್ಕೆ ಇಳಿಯಲಿದೆ. ಚುನಾವಣೋತ್ತರ ಮೈತ್ರಿಯಲ್ಲಿ ಕಾಂಗ್ರೆಸ್‌ನ ಐದು ಶಾಸಕರ ಬೆಂಬಲದಿಂದ ಈ ಸಂಖ್ಯೆ 112ಕ್ಕೆ ಏರಿಕೆಯಾಗಿದೆ.
ಶುಕ್ರವಾರ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಹಾಗೂ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ತಲಾ ಇಬ್ಬರು ಶಾಸಕರ ಹೊರಗಿನ ಬೆಂಬಲ ಘೋಷಿಸಿತು. ಇದರಿಂದ ಟಿವಿಕೆಯ ಸಂಖ್ಯೆ 116ಕ್ಕೆ ತಲುಪಿದರೂ, ಬಹುಮತಕ್ಕೆ ಇನ್ನೂ ಎರಡು ಸ್ಥಾನಗಳ ಕೊರತೆ ಉಳಿಯಿತು. ಈ ನಡುವೆ ಡಿಎಂಕೆ ಮೈತ್ರಿಯ ಅಂಗಪಕ್ಷಗಳಾದ ವಿಡುತಲೈ ಚಿರುತೈಗಲ್ ಕಚ್ಚಿ(VCK) ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಬೆಂಬಲದ ಪ್ರಶ್ನೆ ರಾಜಕೀಯ ಚರ್ಚೆಗೆ ಕಾರಣವಾಯಿತು.
ಲೋಕ ಭವನ ಮೂಲಗಳ ಪ್ರಕಾರ, ರಾಜ್ಯಪಾಲರೊಂದಿಗೆ ನಡೆದ ಸಭೆಯಲ್ಲಿ ವಿಜಯ್, ಈ ಎರಡು ಪಕ್ಷಗಳೂ ಬೆಂಬಲ ನೀಡುವುದಾಗಿ ಭರವಸೆ ನೀಡಿವೆ ಮತ್ತು ಶೀಘ್ರದಲ್ಲೇ ಪತ್ರಗಳನ್ನು ಕಳುಹಿಸಲಿವೆ ಎಂದು ತಿಳಿಸಿದ್ದಾರೆ. ರಾಜ್ಯಪಾಲರು ಆ ಪತ್ರಗಳಿಗಾಗಿ ಕಾಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ನಿನ್ನೆ ಸಂಜೆ ವೇಳೆಗೆ ಐಯುಎಂಎಲ್ ತಾವು ಡಿಎಂಕೆ ಮೈತ್ರಿಯೊಂದಿಗೇ ಉಳಿಯುವುದಾಗಿ ಸ್ಪಷ್ಟಪಡಿಸಿ, ಟಿವಿಕೆಗೆ ಬೆಂಬಲ ನೀಡುವುದಿಲ್ಲ ಎಂದು ಘೋಷಿಸಿತು. ಟಿವಿಕೆಗೆ ಬೆಂಬಲ ನೀಡುವ ಸಾಧ್ಯತೆಯಲ್ಲಿದ್ದ ವಿಸಿಕೆ ಕೂಡ ನಿನ್ನೆ ರಾತ್ರಿ ತನಕ ಯಾವುದೇ ಅಧಿಕೃತ ಬೆಂಬಲ ಪತ್ರ ಸಲ್ಲಿಸಲಿಲ್ಲ.
ವಿಸಿಕೆ ಹಿರಿಯ ನಾಯಕರು ನಿನ್ನೆ ರಾತ್ರಿ ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಅವರನ್ನು ಭೇಟಿ ಮಾಡಿದರು. ಆದರೂ ವಿಸಿಕೆ ಇಂದು ಟಿವಿಕೆಗೆ ಹೊರಗಿನ ಬೆಂಬಲ ಘೋಷಿಸಬಹುದು ಎಂದು ಮೂಲಗಳು ತಿಳಿಸಿವೆ.
ರಾಜ್ಯಪಾಲರೊಂದಿಗೆ ನಡೆದ 15 ನಿಮಿಷಗಳ ಸಭೆಯಲ್ಲಿ ವಿಜಯ್ ಎಡಪಕ್ಷಗಳ ಬೆಂಬಲ ಪತ್ರಗಳನ್ನು ತೋರಿಸಿ, ವಿಸಿಕೆ ಮತ್ತು ಐಯುಎಂಎಲ್ ಕೂಡ ಬೆಂಬಲಿಸುವುದಾಗಿ ಭರವಸೆ ನೀಡಿವೆ ಎಂದು ವಿವರಿಸಿದರು. ನಂತರ ಟಿವಿಕೆಯನ್ನು ಸರ್ಕಾರ ರಚಿಸಲು ಆಹ್ವಾನಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ಟಿವಿಕೆ ಹಿರಿಯ ನಾಯಕರು ಎನ್ ಆನಂದ್, ಕೆ ಎ ಸೆಂಗೊಟ್ಟೈಯನ್ ಹಾಗೂ ಆಧವ್ ಅರ್ಜುನಾ ವಿಜಯ್ ಜೊತೆಗಿದ್ದರು. ಕುತೂಹಲಕಾರಿ ಅಂಶವೆಂದರೆ ವಿಜಯ್ ಅಭಿನಯದ ‘ಜನನಾಯಗನ್’ ಚಿತ್ರದ ನಿರ್ಮಾಪಕ ವೆಂಕಟ್ ನಾರಾಯಣನ್ ಕೂಡ ಈ ನಿಯೋಗದೊಂದಿಗೆ ತೆರಳಿದ್ದರು.
ಲೋಕ ಭವನದಿಂದ ಇನ್ನೂ ಸ್ಪಷ್ಟ ಪ್ರತಿಕ್ರಿಯೆ ಬಾರದ ಹಿನ್ನೆಲೆ, ಮೇ 9ರಂದು ನಡೆಯಬೇಕಿದ್ದ ಪ್ರಮಾಣವಚನ ಸಮಾರಂಭವನ್ನು ಟಿವಿಕೆ ಮುಂದೂಡಿದೆ. ರಾಜ್ಯಪಾಲರು ಮೇ 10ರವರೆಗೆ ಕಾಲಾವಕಾಶ ನೀಡಿರುವುದಾಗಿ ತಿಳಿದುಬಂದಿದೆ.
ಇಲ್ಲಿಯವರೆಗೆ ಕಾಂಗ್ರೆಸ್ ಮಾತ್ರ ಟಿವಿಕೆಯ ಅಧಿಕಾರ ಹಂಚಿಕೆ ಪ್ರಸ್ತಾವವನ್ನು ಒಪ್ಪಿಕೊಂಡಿದ್ದು, ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಎಸ್ ರಾಜೇಶ್ ಕುಮಾರ್ ಅವರು ವಿಜಯ್ ಸಚಿವ ಸಂಪುಟದಲ್ಲಿ ಸಚಿವರಾಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ರಾಜಕೀಯ ನಾಟಕೀಯತೆಗೆ ಮತ್ತಷ್ಟು ತಿರುವು ನೀಡುವಂತೆ, ತಾನು ಟಿವಿಕೆ ಸದಸ್ಯನೆಂದು ಹೇಳಿಕೊಂಡ ವಕೀಲರೊಬ್ಬರು ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ಅತಿ ದೊಡ್ಡ ಪಕ್ಷವನ್ನು ಸರ್ಕಾರ ರಚಿಸಲು ಆಹ್ವಾನಿಸುವಂತೆ ರಾಜ್ಯಪಾಲರಿಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದಾರೆ.