ಚೆನ್ನೈ: ತಮಿಳುನಾಡು ಸಿಎಂ ಆಗಿ ನಟ ವಿಜಯ್ ಪ್ರಮಾಣ ವಚನ ಸ್ವೀಕಾರ ಮಾಡಿದ್ದು ಆ ಮೂಲಕ ತಮಿಳು ರಾಜಕೀಯದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಿದೆ.
ಹೌದು.. ತಮಿಳುನಾಡು ವಿಧಾನಸಭಾ ಚುನಾವಣಾ ಇತಿಹಾಸದಲ್ಲಿ ಇದುವರೆಗೂ ಕಾಣದಂತಹ ಮಹತ್ತರ ಬದಲಾವಣೆಯೊಂದು ಸಂಭವಿಸಿದ್ದು, ತಮಿಳುನಾಡು ರಾಜಕೀಯ ಅಖಾಡದಲ್ಲಿ ಇದುವರೆಗೂ ಯಾರೂ ಮಾಡದ ಸಾಧನೆಯನ್ನ ನಟ ದಳಪತಿ ವಿಜಯ್ ಮಾಡಿ ತೋರಿಸಿದ್ದಾರೆ. ಆ ಮೂಲಕ ಏಳು ದಶಕಗಳ ವಿಶೇಷ ದಾಖಲೆಯನ್ನು ವಿಜಯ್ ಮುರಿದಿದ್ದಾರೆ.
ನಟ ವಿಜಯ್ 74 ವರ್ಷಗಳ ಕಾಲದ ಏಕಪಕ್ಷೀಯ ಆಡಳಿತದ ಸಂಪ್ರದಾಯವನ್ನ ಮುರಿದು, ರಾಜ್ಯದಲ್ಲಿ ಹೊಸ ರಾಜಕೀಯ ಇತಿಹಾಸಕ್ಕೆ ಮುನ್ನುಡಿ ಬರೆದಿದ್ದಾರೆ. 1952 ರಿಂದ ಅಂದರೆ ಕಳೆದ 74 ವರ್ಷಗಳಿಂದ ತಮಿಳುನಾಡಿನಲ್ಲಿ ಎಂದಿಗೂ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿರಲಿಲ್ಲ. ತಮಿಳುನಾಡಿನ ಪ್ರಮುಖ ರಾಜಕೀಯ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳಲ್ಲಿ ಒಂದು ಪಕ್ಷ ಚುನಾವಣೆಯಲ್ಲಿ ಗೆದ್ದು ಆಡಳಿತ ಚುಕ್ಕಾಣಿ ಹಿಡಿಯುತ್ತಿತ್ತು.
ಆದರೆ ಈ ಬಾರಿ ಈ ಎಲ್ಲ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತೆ ನಟ ವಿಜಯ್ ಸರ್ಕಾರ ರಚನೆ ಮಾಡಿದ್ದಾರೆ. ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಈ ದಶಕಗಳ ಇತಿಹಾಸವನ್ನೇ ಬದಲಿಸಿದ್ದು, ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರ ಹಂಚಿಕೆಯ ಮೈತ್ರಿ ಸರ್ಕಾರಕ್ಕೆ ನಾಂದಿ ಹಾಡಿದೆ.
ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ 74 ವರ್ಷಗಳಿಂದ ಎರಡು ದ್ರಾವಿಡ ಪಕ್ಷಗಳದ್ದೇ ಪಾರುಪತ್ಯ ಇತ್ತು. ಮೈತ್ರಿ ಮಾಡಿಕೊಂಡರೂ ಅಧಿಕಾರವನ್ನ ಮಾತ್ರ ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ. ಆದರೆ ಈ ಬಾರಿ ವಿಜಯ್ ಅವರ ಪಕ್ಷ 108 ಸ್ಥಾನ ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಹುಮತಕ್ಕೆ ಇತರ ಪಕ್ಷಗಳ ಬೆಂಬಲ ಅಗತ್ಯತೆ ಇದ್ದಿದರಿಂದ ಕಾಂಗ್ರೆಸ್ ಮತ್ತು ಎಡಪಕ್ಷಗಳನ್ನ ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ವಿಜಯ್ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಹಿಂದೆ 2006ರಲ್ಲಿ ಡಿಎಂಕೆ ಅಲ್ಪಸಂಖ್ಯಾತ ಸರ್ಕಾರ ನಡೆಸಿದ್ದರೂ ಅದು ಹೊರಗಿನ ಬೆಂಬಲವಾಗಿತ್ತು. ಆದರೆ ಈಗ ವಿಜಯ್ ನೇತೃತ್ವದಲ್ಲಿ ಸೃಷ್ಟಿಯಾಗಿರೋದು ನಿಜವಾದ ಸಮ್ಮಿಶ್ರ ಸರ್ಕಾರ. ಕಾಂಗ್ರೆಸ್ ಮತ್ತು ಸಿಪಿಐ(ಎಂ) ಪಕ್ಷದ ಶಾಸಕರು ಸಚಿವ ಸಂಪುಟದಲ್ಲಿ (Cabinet) ಸ್ಥಾನ ಪಡೆಯುತ್ತಿರುವುದು ತಮಿಳುನಾಡು ರಾಜಕೀಯದ ಮಟ್ಟಿಗೆ ಇದುವರೆಗೂ ನಡೆಯದ ಅಚ್ಚರಿಯ ವಿದ್ಯಮಾನವಾಗಿದೆ.
ದ್ರಾವಿಡ ಭದ್ರಕೋಟೆಯನ್ನೇ ಅಲುಗಾಡಿಸಿದ ನಟ ವಿಜಯ್
ಇನ್ನು ನಟ ವಿಜಯ್ ಈ ಐತಿಹಾಸಿಕ ಜಯದ ಮೂಲಕ ಸ್ವಾತಂತ್ರ್ಯಾನಂತರದ ತಮಿಳುನಾಡು ರಾಜಕೀಯದಲ್ಲಿ "ಒಂದೇ ಬಹುಮತ - ಒಂದೇ ಪಕ್ಷ" ಎಂಬ ಅಲಿಖಿತ ನಿಯಮವನ್ನೂ ಮುರಿದಿದ್ದಾರೆ. ಈ ಸಂಪ್ರದಾಯವನ್ನು ನಟ ವಿಜಯ್ ಅವರ ರಾಜಕೀಯ ಎಂಟ್ರಿ ಮುರಿದು ಹಾಕಿದೆ. ಮಾತ್ರವಲ್ಲದೇ ದ್ರಾವಿಡ ಕೋಟೆಗಳನ್ನ ನಡುಗಿಸಿದೆ. 74 ವರ್ಷಗಳ ಕಾಲ ಯಾವ ನಾಯಕನಿಗೂ ಸಾಧ್ಯವಾಗದ 'ಅಧಿಕಾರ ಹಂಚಿಕೆ'ಯ ಈ ಹೊಸ ಪ್ರಯೋಗವನ್ನ ದಳಪತಿ ಯಶಸ್ವಿಯಾಗಿ ಮಾಡಿ ತೋರಿಸಿದ್ದಾರೆ.