ಮತದಾರರ ಪಟ್ಟಿ ಪರಿಷ್ಕರಣೆ 
ದೇಶ

SIR Stage 3: ಕರ್ನಾಟಕ ಸೇರಿ 16 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಮೇ 30 ರಿಂದ- ಚುನಾವಣಾ ಆಯೋಗ

ಜ್ಞಾನೇಶ್ ಕುಮಾರ್ (Gyanesh Kumar) ಅವರು ಗುರುವಾರ ಕರ್ನಾಟಕ ಸೇರಿದಂತೆ 16 ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹಂತ-3 ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಘೋಷಿಸಿದರು.

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಈ ಹಿಂದೆ ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರಿ ಸದ್ದು ಮಾಡಿದ್ದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR)ಯ ಮೂರನೇ ಹಂತ ಆರಂಭಿಸುವುದಾಗಿ ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ (Gyanesh Kumar) ಅವರು ಗುರುವಾರ ಕರ್ನಾಟಕ ಸೇರಿದಂತೆ 16 ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹಂತ-3 ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ಘೋಷಿಸಿದರು.

ಈ ಅಭಿಯಾನದಲ್ಲಿ ಮತದಾರರು ಉತ್ಸಾಹದಿಂದ ಭಾಗವಹಿಸಿ ತಮ್ಮ ಎಣಿಕೆ ಫಾರ್ಮ್‌ಗಳನ್ನು ಭರ್ತಿ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಈ ಪರಿಷ್ಕರಣೆಯ ಉದ್ದೇಶ ಅರ್ಹ ಮತದಾರರ ಹೆಸರುಗಳು ಮಾತ್ರ ಮತದಾರರ ಪಟ್ಟಿಯಲ್ಲಿ ಉಳಿಯುವಂತೆ ಮಾಡುವುದು ಮತ್ತು ಅನರ್ಹ ಹೆಸರುಗಳನ್ನು ತೆಗೆದುಹಾಕುವುದು ಎಂದು ಅವರು ತಿಳಿಸಿದ್ದಾರೆ.

ಭಾರತೀಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ ಅಧಿಕೃತ ಪ್ರಕಟಣೆಯ ಪ್ರಕಾರ, ಹಂತ-3 ಅಭಿಯಾನವು ಹಂತ ಹಂತವಾಗಿ ಸುಮಾರು 36 ಕೋಟಿ ಮತದಾರರನ್ನು ಒಳಗೊಂಡಿರಲಿದೆ. ಪ್ರಸ್ತುತ ನಡೆಯುತ್ತಿರುವ ಜನಗಣತಿಯ ಮನೆ ಪಟ್ಟಿ ಪ್ರಕ್ರಿಯೆಯೊಂದಿಗೆ ಇದನ್ನು ಸಂಯೋಜಿಸಲಾಗಿದ್ದು, ಕ್ಷೇತ್ರ ಸಿಬ್ಬಂದಿಯ ಬಳಕೆಯನ್ನು ಪರಿಣಾಮಕಾರಿಯಾಗಿ ಮಾಡುವ ಉದ್ದೇಶ ಹೊಂದಿದೆ ಎನ್ನಲಾಗಿದೆ.

ಆಯೋಗದ ಪ್ರಕಾರ, ಹಿಮಾಚಲ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರ, ಕೇಂದ್ರಾಡಳಿತ ಪ್ರದೇಶ ಲಡಾಕ್ ಅನ್ನು ಹೊರತುಪಡಿಸಿ ದೇಶದ ಬಹುತೇಕ ಭಾಗಗಳಲ್ಲಿ ಈ ಹಂತದ ಪರಿಷ್ಕರಣೆ ನಡೆಯಲಿದೆ. ಹಿಮ ಪ್ರದೇಶಗಳಲ್ಲಿ ಹವಾಮಾನ ಪರಿಸ್ಥಿತಿ ಹಾಗೂ ನಡೆಯುತ್ತಿರುವ ಜನಗಣತಿ ಕಾರ್ಯಾಚರಣೆಗಳ ಹಿನ್ನೆಲೆಯಲ್ಲಿ ಆ ಪ್ರದೇಶಗಳ ವೇಳಾಪಟ್ಟಿಯನ್ನು ನಂತರ ಪ್ರಕಟಿಸಲಾಗುವುದು ಎಂದು ಆಯೋಗ ತಿಳಿಸಿದೆ.

ಈ ಅಭಿಯಾನ ನಡೆಯಲಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಜಧಾನಿ ದೆಹಲಿ, ಒಡಿಶಾ, ಮಿಜೋರಾಂ, ಸಿಕ್ಕಿಂ, ಉತ್ತರಾಖಂಡ, ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಹರ್ಯಾಣ, ಚಂಡೀಗಢ, ತೆಲಂಗಾಣ, ಪಂಜಾಬ್, ಕರ್ನಾಟಕ, ಮೇಘಾಲಯ, ಮಹಾರಾಷ್ಟ್ರ, ಜಾರ್ಖಂಡ್, ನಾಗಾಲ್ಯಾಂಡ್, ತ್ರಿಪುರಾ ಹಾಗೂ ದಾದ್ರಾ ಮತ್ತು ನಗರ್ ಹವೇಲಿ, ಡಿಯು ಡಾಮುನ್ ಸೇರಿವೆ ಎನ್ನಲಾಗಿದೆ.

ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಈ ಹಂತದಲ್ಲಿ 3.94 ಲಕ್ಷಕ್ಕಿಂತ ಹೆಚ್ಚು ಬೂತ್ ಮಟ್ಟದ ಅಧಿಕಾರಿಗಳು (BLOs) ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಇದಕ್ಕೂ ಮೊದಲು ನಡೆದ ಮೊದಲ ಎರಡು ಹಂತಗಳಲ್ಲಿ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 59 ಕೋಟಿಗೂ ಹೆಚ್ಚು ಮತದಾರರನ್ನು ಒಳಗೊಂಡ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿತ್ತು. ಅದರಲ್ಲಿ 6.3 ಲಕ್ಷಕ್ಕೂ ಹೆಚ್ಚು BLOಗಳು ಹಾಗೂ 9.2 ಲಕ್ಷ BLAs ಸಹಕರಿಸಿದ್ದರು ಎಂದು ಆಯೋಗ ತಿಳಿಸಿದೆ.

ಈ ಪರಿಷ್ಕರಣೆ ಪ್ರಕ್ರಿಯೆಯನ್ನು ಹಲವು ಹಂತಗಳಲ್ಲಿ ರೂಪಿಸಲಾಗಿದ್ದು, ತರಬೇತಿ, ಎಣಿಕೆ, ಕರಡು ಪಟ್ಟಿ ಪ್ರಕಟಣೆ, ಆಕ್ಷೇಪಣೆ ಮತ್ತು ದೂರುಗಳ ಪರಿಶೀಲನೆ, ಅಂತಿಮ ಮತದಾರರ ಪಟ್ಟಿ ಪ್ರಕಟಣೆ ಮುಂತಾದ ಹಂತಗಳನ್ನು ಒಳಗೊಂಡಿದೆ.

ಇದಕ್ಕೂ ಮುನ್ನ ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪುದುಚೇರಿ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಛತ್ತೀಸ್‌ಗಢ, ಗೋವಾ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಲಕ್ಷದ್ವೀಪಗಳುಗಳಲ್ಲಿ ಈ ವಿಶೇಷ ತೀವ್ರ ಪರಿಷ್ಕರಣೆ ಪೂರ್ಣಗೊಂಡಿದೆ. ಇದಲ್ಲದೆ ಅಸ್ಸಾಂನಲ್ಲಿ ಪ್ರತ್ಯೇಕ “ವಿಶೇಷ ಪರಿಷ್ಕರಣೆ” ಪ್ರಕ್ರಿಯೆಯನ್ನೂ ನಡೆಸಲಾಗಿದೆ ಎಂದು ಆಯೋಗ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸರ್ಕಾರಿ ನೌಕರರಿಗೆ ವಾರಕ್ಕೆ 2 ದಿನ ವರ್ಕ್ ಫ್ರಮ್ ಹೋಮ್; 6 ತಿಂಗಳು ಹೊಸ ವಾಹನ ಖರೀದಿ ಮಾಡುವಂತಿಲ್ಲ!

ಉತ್ತರ ಪ್ರದೇಶದಲ್ಲಿ ಭಾರಿ ಗಾಳಿ ಸಹಿತ ಮಳೆ; ಬರೊಬ್ಬರಿ 50 ಅಡಿ ಎತ್ತರಕ್ಕೆ ಎಸೆಯಲ್ಪಟ್ಟ ವ್ಯಕ್ತಿ, ಕೈಕಾಲು ಮುರಿತ Video Viral

11 ಕೋಟಿ ಸಂಪಾದನೆ, 60 ಕೋಟಿ ಖರ್ಚು: Rahul Gandhi ವಿದೇಶ ಪ್ರವಾಸಗಳಿಗೆ ಹಣ ಕೊಡ್ತೀರೋದು ಯಾರು?: BJP ಪ್ರಶ್ನೆ

ಹೊಸ ಕಾರು ಖರೀದಿಸುತ್ತಿದ್ದೀರಾ..? ಈ 12 ಅಂಶಗಳ ತಪ್ಪದೇ ನೆನಪಿನಲ್ಲಿಟ್ಟುಕೊಳ್ಳಿ!

ಕೇರಳ ಸಸ್ಪೆನ್ಸ್ ಗೆ ಕೊನೆಗೂ ಬಿತ್ತು ತೆರೆ: ನೂತನ ಮುಖ್ಯಮಂತ್ರಿಯಾಗಿ VD Satheesan ಆಯ್ಕೆ

SCROLL FOR NEXT