ನಟಿ ಮತ್ತು ಮಾಡೆಲ್ ತ್ವಿಶಾ ಶರ್ಮಾರ ಎರಡನೇ ಮರಣೋತ್ತರ ಪರೀಕ್ಷೆಗೆ ಮಧ್ಯಪ್ರದೇಶ ಹೈಕೋರ್ಟ್ ಅನುಮತಿ ನೀಡಿದೆ. ನೋಯ್ಡಾ ನಿವಾಸಿ ತ್ವಿಶಾ ಮೃತದೇಹ ಕಳೆದ ವಾರ ಪತ್ತೆಯಾಗಿತ್ತು. ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದು ಮೃತಳ ಕುಟುಂಬ ಆರೋಪಿಸಿದೆ. ತ್ವಿಶಾ ಅವರ ತಂದೆ ನವನಿಧಿ ಶರ್ಮಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು ನ್ಯಾಯಾಲಯ ಅರ್ಜಿಯನ್ನು ಪುರಸ್ಕರಿಸಿದ್ದು ದೆಹಲಿಯ ಏಮ್ಸ್‌ನ ವೈದ್ಯರ ತಂಡಕ್ಕೆ ಮರಣೋತ್ತರ ಪರೀಕ್ಷೆಗೆ ನಡೆಸಲು ಸೂಚಿಸಿದೆ.
ಎರಡು ದಿನಗಳ ಹಿಂದೆ, ಕೆಳ ನ್ಯಾಯಾಲಯವು ಎರಡನೇ ಮರಣೋತ್ತರ ಪರೀಕ್ಷೆಗೆ ಮನವಿ ತಿರಸ್ಕರಿಸಿತ್ತು. ಮೇ 12ರಂದು ಭೋಪಾಲ್‌ನ ಕಟಾರಾ ಹಿಲ್ಸ್ ಪ್ರದೇಶದಲ್ಲಿರುವ ಅವರ ಅತ್ತೆಯ ಮನೆಯಲ್ಲಿ ತ್ವಿಶಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. 33 ವರ್ಷದ ಮಾಡೆಲ್ ಮತ್ತು ನಟಿಯ ಕುಟುಂಬವು ಗಂಡನ ಮನೆಯವರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಮತ್ತೊಂದೆಡೆ ತ್ವಿಶಾ ಮಾದಕ ವ್ಯಸನಿಯಾಗಿದ್ದಳು ಎಂದು ಆಕೆಯ ಅತ್ತೆ ಹೇಳಿಕೊಂಡಿದ್ದಾರೆ. ತ್ವಿಶಾ ಅವರ ಮರಣೋತ್ತರ ಪರೀಕ್ಷೆಯನ್ನು ಭೋಪಾಲ್‌ನ ಏಮ್ಸ್‌ನಲ್ಲಿ ನಡೆಸಲಾಗಿದ್ದರೂ, ಕಾರ್ಯವಿಧಾನದಲ್ಲಿನ ನ್ಯೂನತೆಗಳನ್ನು ಉಲ್ಲೇಖಿಸಿ ಕುಟುಂಬವು ಎರಡನೇ ಮರಣೋತ್ತರ ಪರೀಕ್ಷೆಗೆ ಒತ್ತಾಯಿಸಿತ್ತು.
ಮತ್ತೊಂದೆಡೆ, ತ್ವಿಶಾ ಶರ್ಮಾ ಸಾವಿನ ನಂತರ ತಲೆಮರೆಸಿಕೊಂಡಿರುವ ಪತಿ ಸಮರ್ಥ್ ಸಿಂಗ್ ಶುಕ್ರವಾರ ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹಿಂತೆಗೆದುಕೊಂಡಿದ್ದಾರೆ. ಸಮರ್ಥ್ ಸಿಂಗ್ ಮೇಲೆ ವರದಕ್ಷಿಣೆಗಾಗಿ ತ್ವಿಶಾಗೆ ಕಿರುಕುಳ ನೀಡಿದ ಆರೋಪ ಹೊರಿಸಲಾಗಿದೆ. ನ್ಯಾಯಮೂರ್ತಿ ಅವನೀಂದ್ರ ಸಿಂಗ್ ಅವರನ್ನು ಒಳಗೊಂಡ ಹೈಕೋರ್ಟ್‌ನ ಏಕ ಪೀಠದಿಂದ ಸಮರ್ಥ್ ಸಿಂಗ್ ತಮ್ಮ ಅರ್ಜಿಯನ್ನು ಹಿಂತೆಗೆದುಕೊಂಡಿದ್ದಾರೆ ಎಂದು ಸಮರ್ಥ್ ಸಿಂಗ್ ಅವರ ವಕೀಲ ಜೈದೀಪ್ ಕೌರವ್ ಹೇಳಿದ್ದಾರೆ. ಹಿಂಪಡೆಯುವಿಕೆಯೊಂದಿಗೆ, ಸಿಂಗ್ ಈಗ ಶರಣಾಗುವುದನ್ನು ಬಿಟ್ಟು ಬೇರೆ ದಾರಿಯಿಲ್ಲ.