ತವರಿಗೆ ಮರಳಿದ ಅಬ್ದುಲ್ ರಹೀಮ್ 
ದೇಶ

ಸೌದಿಯಲ್ಲಿ ಗಲ್ಲು ಶಿಕ್ಷೆ: 20 ವರ್ಷಗಳ ಬಳಿಕ ಕೊನೆಗೂ ತಾಯಿಯ ಮಡಿಲು ಸೇರಿದ ಕೇರಳ ವ್ಯಕ್ತಿ; 28 ದಿನಗಳಲ್ಲೇ ಬದುಕು ಬದಲಾಗಿದ್ದು ಹೇಗೆ?

ಸೌದಿ ಅರೇಬಿಯಾದ ಜೈಲಿನಲ್ಲಿ ಕಳೆದುಹೋದ 20 ವರ್ಷಗಳ ಕರಾಳ ದಿನಗಳು ಹಾಗೂ ಮರಣದಂಡನೆಯ ಭೀತಿಯಿಂದ ಪಾರಾದ ಅಬ್ದುಲ್ ರಹೀಮ್, ಗುರುವಾರ ಬೆಳಗ್ಗೆ ಕೊನೆಗೂ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ.

ಕೊಚ್ಚಿ: ಅಪ್ರಾಪ್ತನ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸೌದಿ ಅರೇಬಿಯಾದಲ್ಲಿ ಗಲ್ಲು ಶಿಕ್ಷೆ ಆರೋಪಿಯಾಗಿದ್ದ ಕೇರಳ ಮೂಲದ ವ್ಯಕ್ತಿಯೋರ್ವ ಬರೊಬ್ಬರಿ 20 ವರ್ಷಗಳ ಬಳಿಕ ಬಕ್ರೀದ್ ಹಬ್ಬದ ದಿನವೇ ಬಿಡುಗಡೆ ಭಾಗ್ಯ ಕಂಡಿದ್ದಾರೆ.

ಹೌದು.. ಕೇರಳದ ಕೋಝಿಕೋಡ್ ಸಮೀಪದ ಫಿರೋಕ್‌ ನ ಮಚಿಲಕತ್ ಕುಟುಂಬಕ್ಕೆ ಈ ಬಾರಿಯ ಬಕ್ರೀದ್ ಹಬ್ಬವು ಕೇವಲ ಹಬ್ಬವಾಗಿರಲಿಲ್ಲ, ಅದು ಎರಡು ದಶಕಗಳ ಸುದೀರ್ಘ ಕಣ್ಣೀರು, ಕಾಯುವಿಕೆ ಮತ್ತು ಪ್ರಾರ್ಥನೆಗಳಿಗೆ ಸಿಕ್ಕ ದೈವಿಕ ಉಡುಗೊರೆಯಾಗಿತ್ತು.

ಸೌದಿ ಅರೇಬಿಯಾದ ಜೈಲಿನಲ್ಲಿ ಕಳೆದುಹೋದ 20 ವರ್ಷಗಳ ಕರಾಳ ದಿನಗಳು ಹಾಗೂ ಮರಣದಂಡನೆಯ ಭೀತಿಯಿಂದ ಪಾರಾದ ಅಬ್ದುಲ್ ರಹೀಮ್, ಗುರುವಾರ ಬೆಳಗ್ಗೆ ಕೊನೆಗೂ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ. ಆ ಮೂಲಕ ಕೂದಲೆಳೆ ಅಂತರದಲ್ಲಿ ಸಾವಿನದವಡೆಯಿಂದ ಪಾರಾಗಿ ಬಂದಿದ್ದಾರೆ.

ಗುರುವಾರ ಬೆಳಗ್ಗೆ ಕೋಝಿಕೋಡ್ ವಿಮಾನ ನಿಲ್ದಾಣದಿಂದ ರಹೀಮ್ ಹೊರಬರುತ್ತಿದ್ದಂತೆ, ಅವರ ಇಡೀ ಗ್ರಾಮವೇ ಅಲ್ಲಿ ಜಮಾಯಿಸಿತ್ತು. ಹಿರಿಯರಿಗೆ ಮರೆತುಹೋಗಿದ್ದ ಆತ ಮತ್ತೆ ನೆನಪಾಗಿದ್ದರೆ, ಯುವಕರಿಗೆ ಆತ ಇಡೀ ಕೇರಳದ ಒಗ್ಗಟ್ಟಿನ ಸಂಕೇತವಾಗಿ ಕಂಡಿದ್ದ. ಮನೆಗೆ ತಲುಪಿದ ರಹೀಮ್, "ನನಗೆ ಮರುಜನ್ಮ ನೀಡಿದ ಜಗತ್ತಿನಾದ್ಯಂತದ ಎಲ್ಲಾ ಮಲಯಾಳಿಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ" ಎಂದು ಕಣ್ಣೀರಿಟ್ಟಿದ್ದಾರೆ.

ಏನಿದು ಪ್ರಕರಣ?

ಕೇರಳದಲ್ಲಿ ಆಟೋ ಮತ್ತು ಸ್ಕೂಲ್ ಬಸ್ ಚಾಲಕನಾಗಿದ್ದ ರಹೀಮ್, ಉತ್ತಮ ಭವಿಷ್ಯದ ಕನಸು ಹೊತ್ತು ನವೆಂಬರ್ 28, 2006 ರಂದು ಸೌದಿ ಅರೇಬಿಯಾದ ರಿಯಾದ್‌ಗೆ ಚಾಲಕನ ಕೆಲಸಕ್ಕಾಗಿ ತೆರಳಿದ್ದರು. ಕೆಲಸಕ್ಕೆ ಸೇರಿದ ಕೇವಲ 28 ದಿನಗಳಲ್ಲಿ (ಡಿಸೆಂಬರ್ 24, 2006) ದುರಂತವೊಂದು ಸಂಭವಿಸಿತು.

ರಹೀಮ್ ತನ್ನ ಮಾಲೀಕನ 17 ವರ್ಷದ ಪಾರ್ಶ್ವವಾಯು ಪೀಡಿತ ಮಗನನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದರು. ಆ ಬಾಲಕ ಉಸಿರಾಟದ ಯಂತ್ರದ (Breathing Apparatus) ಸಹಾಯದಿಂದ ಬದುಕುತ್ತಿದ್ದ. ಆಕಸ್ಮಿಕವಾಗಿ ಕಾರಿನಲ್ಲಿ ಆ ಯಂತ್ರವು ಕಳಚಿಕೊಂಡ ಪರಿಣಾಮ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿದ್ದ. ಈ ಘಟನೆಗೆ ರಹೀಮ್ ಅವರನ್ನೇ ಹೊಣೆಗಾಗಿಸಿ ಸೌದಿ ಪೊಲೀಸರು ಬಂಧಿಸಿದ್ದರು.

ಮರಣದಂಡನೆ

2011ರಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ್ದ ಸೌದಿ ನ್ಯಾಯಾಲಯವು ರಹೀಮ್‌ ಆರೋಪಿ ಎಂದು ಮರಣದಂಡನೆ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ರಹೀಮ್ ಕುಟುಂಬಸ್ಥರು ಮೇಲ್ಮನವಿ ಸಲ್ಲಿಸಿದರೂ ಅಲ್ಲಿಯೂ ಅದೇ ಶಿಕ್ಷೆ ಕಾಯಂ ಆಯಿತು. ಇತ್ತ ಕೇರಳದಲ್ಲಿರುವ ಅವರ ಕುಟುಂಬ ಪ್ರತಿಕ್ಷಣವೂ ಮಗನ ಗಲ್ಲು ಶಿಕ್ಷೆಯ ಭೀತಿಯಲ್ಲೇ ಬದುಕುತ್ತಿತ್ತು.

34 ಕೋಟಿ ಪರಿಹಾರ, 2024ರಲ್ಲಿ ಒಪ್ಪಂದ

ಆದರೆ, ಏಪ್ರಿಲ್ 2024ರಲ್ಲಿ ಒಂದು ದೊಡ್ಡ ಪವಾಡ ನಡೆಯಿತು. ಮೃತ ಬಾಲಕನ ಕುಟುಂಬಸ್ಥರು 34 ಕೋಟಿ ತಾಯ್ತನದ ಪರಿಹಾರ ಧನ (Blood Money) ನೀಡಿದರೆ ರಹೀಮ್‌ನನ್ನು ಕ್ಷಮಿಸಲು ಒಪ್ಪಿಕೊಂಡರು.

ಒಂದಾದ ಮಲಯಾಳಿಗಳು, 'ಕ್ರೌಡ್ ಫಂಡಿಂಗ್' ಆಪರೇಷನ್!

ಸಂಧಾನವೇನೋ ಆಯಿತು. ಆದರೆ ಸೌದಿ ಕುಟುಂಬ ಕೇಳಿದ್ದ 34 ಕೋಟಿ ಹಣ ಹೊಂದಿಸುವುದು ರಹೀಂ ಕುಟುಂಬಕ್ಕೆ ಅಸಾಧ್ಯ ಗುರಿಯೇ ಆಗಿತ್ತು. ಆದರೆ ರಹೀಮ್ ಪ್ರಾಣ ಉಳಿಸಲು ಜಗತ್ತಿನಾದ್ಯಂತ ಇರುವ ಮಲಯಾಳಿಗಳು ಒಂದಾದರು.

ಸಾಮಾನ್ಯ ಕೂಲಿ ಕಾರ್ಮಿಕರು, ಅನಿವಾಸಿ ಭಾರತೀಯರು, ಸಾಮಾಜಿಕ ಸಂಸ್ಥೆಗಳು ಮತ್ತು ರಾಜಕಾರಣಿಗಳು ಕೈಜೋಡಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಹನಿ ಹನಿ ಕೂಡಿ ಹಳ್ಳ ಎಂಬಂತೆ ದಾಖಲೆಯ ಅವಧಿಯಲ್ಲಿ 34 ಕೋಟಿ ಹಣವನ್ನು ಸಂಗ್ರಹಿಸಿ ಸೌದಿ ಕೋರ್ಟ್‌ಗೆ ತಲುಪಿಸಿದರು. ಕೇರಳದ ಇತಿಹಾಸದಲ್ಲೇ ಇದೊಂದು ಅತಿ ದೊಡ್ಡ ಸಾರ್ವಜನಿಕ ಧನಸಹಾಯ (ಕ್ರೌಡ್ ಫಂಡಿಂಗ್) ಅಭಿಯಾನವಾಗಿ ದಾಖಲಾಯಿತು.

ಹಣ ಪಾವತಿಯಾದ ನಂತರ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸಲಾಯಿತು. ಆದರೆ ಸೌದಿ ಕಾನೂನಿನ ಪ್ರಕಾರ ರಹೀಮ್ 20 ವರ್ಷಗಳ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಬೇಕಾಗಿತ್ತು. ಅರೇಬಿಕ್ ಕ್ಯಾಲೆಂಡರ್ ಪ್ರಕಾರ ಈ ಶಿಕ್ಷೆಯ ಅವಧಿಯು ಮೇ 20, 2026 ಕ್ಕೆ ಕೊನೆಗೊಂಡಿತು. 20 ವರ್ಷಗಳ ಸುದೀರ್ಘ ಕಾಯುವಿಕೆಗೆ ಕೊನೆಗೂ ಸುಖಾಂತ್ಯ ಸಿಕ್ಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

'ಅಭಿವೃದ್ಧಿಶೀಲ ರಾಷ್ಟ್ರಗಳ ಕೈಕಟ್ಟಬೇಡಿ, ಡಂಪಿಂಗ್ ವಿರುದ್ಧ ಸಾಕ್ಷ್ಯಾಧಾರಿತ ಕ್ರಮ ಕೈಗೊಳ್ಳಿ': G20 ಸಭೆಯಲ್ಲಿ ಭಾರತ ಕೆಂಡ

ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಅಪಾಯಕ್ಕೆ ಸಿಲುಕಿದ ಪ್ರಯಾಣಿಕ, ಕ್ಷಣಮಾತ್ರದಲ್ಲಿ ಎಚ್ಚೆತ್ತ RPF ಕಾನ್‌ಸ್ಟೆಬಲ್, ರಕ್ಷಣೆ-Video

ಏಷ್ಯನ್ ಗೇಮ್ಸ್ 2026 ಫೈನಲ್: ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಭರ್ಜರಿ ಅರ್ಧ ಶತಕ, ಪಾಕ್ ಗೆಲ್ಲಲು 212 ರನ್ ಗಳ ಗುರಿ ನೀಡಿದ ಭಾರತ!

'ಅವನು ಆಡಿದ್ರೂ, ಆಡದಿದ್ದರೂ ಏನೂ ವ್ಯತ್ಯಾಸವಾಗಲ್ಲ’: ಭಾರತದ ಯುವ ಆಟಗಾರನ ಕುರಿತು ಕಡ್ಡಿ ಮುರಿದಂತೆ ಹೇಳಿದ Ajinkya Rahane!