ಹೆಸರಿಗೆ ಸಾಮೂಹಿಕ ವಿವಾಹ, ಆದ್ರೆ 42 ವರರಿಗೆ ಮದುಮಗಳೇ ಇಲ್ಲ; ಮದುವೆ ಹೆಸರಲ್ಲಿ ಬೃಹತ್ ದೋಖಾ, ಹಗರಣ ಬಟಾಬಯಲು!

ರಾಜ್ಯ ಸರ್ಕಾರದ ಬೆಂಬಲಿತ ಸಾಮೂಹಿಕ ವಿವಾಹ ಯೋಜನೆಯಡಿ ಆಯೋಜಿಸಲಾದ ಕಾರ್ಯಕ್ರಮವೊಂದು ಇದೀಗ ತೀವ್ರ ತನಿಖೆಗೆ ಒಳಪಟ್ಟಿದ್ದು, ತನಿಖಾಧಿಕಾರಿಗಳು ಬೆಚ್ಚಿಬೀಳಿಸುವಂತಹ ಅಂಶವೊಂದನ್ನು ಪತ್ತೆಹಚ್ಚಿದ್ದಾರೆ.
mass wedding scam in Madhya Pradesh
ಸಾಮೂಹಿಕ ವಿವಾಹದಲ್ಲಿ ಮದುಮಗಳೇ ಇಲ್ಲ (AI ಚಿತ್ರ)
Updated on

ಭೋಪಾಲ್: ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವಾಗಬೇಕಿದ್ದ ಸಾಮೂಹಿಕ ವಿವಾಹ ಯೋಜನೆ ಇದೀಗ ಮಧ್ಯಪ್ರದೇಶದ ಅತ್ಯಂತ ಅವಮಾನಕರ ಹಗರಣಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

ಹೌದು... ಬಡವರಿಗಾಗಿ ರೂಪಿಸಲಾದ ಕಲ್ಯಾಣ ಯೋಜನೆಯೊಂದು ಅಧಿಕಾರಿಗಳ ಕುಮ್ಮಕ್ಕಿನಿಂದಾಗಿ ಹೇಗೆ ಮಹಾ ಹಗರಣವಾಗಿ ಮಾರ್ಪಟ್ಟಿದೆ ಎಂಬುದಕ್ಕೆ ಮಧ್ಯ ಪ್ರದೇಶದ ಈ ಘಟನೆ ಸ್ಪಷ್ಟ ನಿದರ್ಶನವಾಗಿದೆ. ರಾಜ್ಯ ಸರ್ಕಾರದ ಬೆಂಬಲಿತ ಸಾಮೂಹಿಕ ವಿವಾಹ ಯೋಜನೆಯಡಿ ಆಯೋಜಿಸಲಾದ ಕಾರ್ಯಕ್ರಮವೊಂದು ಇದೀಗ ತೀವ್ರ ತನಿಖೆಗೆ ಒಳಪಟ್ಟಿದ್ದು, ತನಿಖಾಧಿಕಾರಿಗಳು ಬೆಚ್ಚಿಬೀಳಿಸುವಂತಹ ಅಂಶವೊಂದನ್ನು ಪತ್ತೆಹಚ್ಚಿದ್ದಾರೆ.

ಈ ವಿವಾದವು ರಾಜ್ಯ ಸರ್ಕಾರದ ಸಾಮೂಹಿಕ ವಿವಾಹ ಸಹಾಯ ಯೋಜನೆಗೆ ಸಂಬಂಧಿಸಿದ್ದಾಗಿದ್ದು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿತ್ತು. ಆದರೆ ಇದೇ ಕಲ್ಯಾಣ ಯೋಜನೆ ಇದೀಗ ಮಹಾ ಹಗರಣವಾಗಿ ಮಾರ್ಪಟ್ಟಿದೆ.

mass wedding scam in Madhya Pradesh
ಸಾಮೂಹಿಕ ವಿವಾಹ ಹೆಸರಲ್ಲಿ ಯುವತಿಯರ ಮಾರಾಟ, ಪರಾರಿಯಾಗಿದ್ದ ಸಂತ್ರಸ್ತೆಯಿಂದಲೇ 'ಖತರ್ನಾಕ್ NGO' ಖೆಡ್ಡಾಕ್ಕೆ!

ಏನಿದು ಯೋಜನೆ ಮತ್ತು ಹಗರಣ?

ಮಧ್ಯ ಪ್ರದೇಶ ಸರ್ಕಾರ ಬಡವರಿಗಾಗಿ ತನ್ನ ಕಲ್ಯಾಣ ಯೋಜನೆಯಲ್ಲಿ ಸಾಮೂಹಿಕ ಕಲ್ಯಾಣ ಯೋಜನೆ ರೂಪಿಸಿತ್ತು. ಈ ಯೋಜನೆಯಡಿ ವಿವಾಹವಾದ ದಂಪತಿಗಳಿಗೆ ಆರ್ಥಿಕ ನೆರವು, ಗೃಹೋಪಯೋಗಿ ವಸ್ತುಗಳು ಮತ್ತು ಇತರೆ ಸೌಲಭ್ಯಗಳನ್ನು ನೀಡಲಾಗುತ್ತಿತ್ತು.

ಈ ಯೋಜನೆಯ ಉದ್ದೇಶ ವರದಕ್ಷಿಣೆ ಪದ್ಧತಿಯನ್ನು ತಡೆಹಿಡಿಯುವುದು ಹಾಗೂ ಬಡ ಕುಟುಂಬಗಳ ಮೇಲಿನ ವಿವಾಹದ ಆರ್ಥಿಕ ಭಾರವನ್ನು ಕಡಿಮೆ ಮಾಡುವುದು ಆಗಿತ್ತು. ಆದರೆ ಸ್ಥಳೀಯ ಮಧ್ಯವರ್ತಿಗಳು, ಯೋಜನಾ ಸಂಯೋಜಕರು ಮತ್ತು ಕೆಲವು ಅಧಿಕಾರಿಗಳು ಸೇರಿ ನಕಲಿ ಫಲಾನುಭವಿಗಳ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

42 ವರರಿಗೆ ಮದುಮಗಳೇ ಇಲ್ಲ

ದಾಖಲೆಗಳಲ್ಲಿ 42 ಮಂದಿ ವರರ ಹೆಸರುಗಳಿದ್ದರೂ, ಒಬ್ಬರಿಗೂ ನಿಜವಾದ ವಧು ಪತ್ತೆಯಾಗಿಲ್ಲ. “42 ವರರು, 0 ವಧುಗಳು” ಎಂದು ಕರೆಯಲಾಗುತ್ತಿರುವ ಈ ಹಗರಣವು ರಾಜಕೀಯ ಆಕ್ರೋಶ, ಆಡಳಿತಾತ್ಮಕ ಕ್ರಮಗಳು ಮತ್ತು ಕಲ್ಯಾಣ ಯೋಜನೆಗಳ ಜಾರಿಗೆ ಸಂಬಂಧಿಸಿದ ಭ್ರಷ್ಟಾಚಾರದ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಈ ಕುರಿತ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

mass wedding scam in Madhya Pradesh
ಭೋಜಶಾಲಾ ಸರಸ್ವತಿ ದೇವಸ್ಥಾನಕ್ಕೆ ಸೇರಿದ್ದು; ಮಸೀದಿಗೆ ಪರ್ಯಾಯ ಭೂಮಿ: ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು

ಹಗರಣ ಬೆಳಕಿಗೆ ಬಂದದ್ದು ಹೇಗೆ?

ಇತ್ತೀಚೆಗೆ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸಲ್ಲಿಸಲಾದ ದಾಖಲೆಗಳಲ್ಲಿ ಅನೇಕ ಅಕ್ರಮಗಳು ಕಂಡುಬಂದ ನಂತರ ಈ ಹಗರಣ ಬೆಳಕಿಗೆ ಬಂದಿದೆ. ಆಡಳಿತ ಮೂಲಗಳ ಪ್ರಕಾರ, ಪರಿಶೀಲನಾ ತಂಡಗಳು ಹಲವು ಅಸಂಗತತೆಗಳನ್ನು ಪತ್ತೆಹಚ್ಚಿವೆ. ಪ್ರಮುಖವಾಗಿ ದಾಖಲೆಗಳಲ್ಲಿ ಉಲ್ಲೇಖಿಸಲಾದ ವಧುಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ.

ಅಲ್ಲದೆ ಹಲವಾರು ವಿಳಾಸಗಳು ನಕಲಿ ಅಥವಾ ಅಪೂರ್ಣವಾಗಿದ್ದವು. ದಾಖಲೆಗಳಿಗೆ ಜೋಡಿಸಲಾದ ಕೆಲವು ಛಾಯಾಚಿತ್ರಗಳು ಡುಪ್ಲಿಕೇಟ್ ಅಥವಾ ಡಿಜಿಟಲ್ ತಿದ್ದುಪಡಿ ಮಾಡಿದಂತಿದ್ದವು. ಅನೇಕ “ಜೋಡಿಗಳು” ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಇದು ಸ್ಥಳೀಯರ ಅನುಮಾನಕ್ಕೆ ಎಡೆಮಾಡಿಕೊಟ್ಟವು. ಅಲ್ಲದೆ ಸಾಮೂಹಿಕ ವಿವಾಹ ಕಾರ್ಯಕ್ರಮದ ಪರಿಶೀಲನೆ ವೇಳೆ ಕೇವಲ ಪುರುಷರು ಅಂದರೆ ವರರು ಮಾತ್ರ ಹಾಜರಿದ್ದರು. ಮದುಮಗಳು ಇರಲೇ ಇಲ್ಲ.

ಅತ್ಯಂತ ಆಘಾತಕಾರಿ ಸಂಗತಿ ಎಂದರೆ, ದಾಖಲೆಗಳಲ್ಲಿ ನೋಂದಾಯಿಸಿದ್ದ 42 ಮಂದಿ ವರರಿಗೆ ಹೊಂದುವಂತಹ ವಧುಗಳೇ ವೇದಿಕಯಲ್ಲಿ ಇರಲಿಲ್ಲ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. “ಇದು ಕೇವಲ ದಾಖಲೆ ದೋಷವಲ್ಲ. ಪ್ರಾಥಮಿಕ ತನಿಖೆಯ ಪ್ರಕಾರ ಇದು ವ್ಯವಸ್ಥಿತವಾಗಿ ರೂಪಿಸಲಾದ ನಕಲಿ ದಾಖಲೆಗಳ ಜಾಲ,” ಎಂದು ತನಿಖೆಗೆ ಸಂಬಂಧಿಸಿದ ಅಧಿಕಾರಿ ತಿಳಿಸಿದ್ದಾರೆ.

ನಕಲಿ ಆಧಾರ್ ವಿವರಗಳು, ತಿದ್ದುಪಡಿ ಮಾಡಿದ ಫೋಟೋಗಳು ಮತ್ತು ಕಪಟ ವಿವಾಹ ಪ್ರಮಾಣಪತ್ರಗಳನ್ನು ಬಳಸಿ ಅರ್ಜಿಗಳನ್ನು ಸಿದ್ಧಪಡಿಸಲಾಗಿತ್ತು. ಬಳಿಕ ಆ ಹೆಸರುಗಳನ್ನು ಯೋಜನೆಯಡಿ ಅನುಮೋದಿಸಿ, ಸರ್ಕಾರದಿಂದ ಬಿಡುಗಡೆಯಾದ ಹಣವನ್ನು ಬೇರೆಡೆಗೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

mass wedding scam in Madhya Pradesh
ಬೆಂಗಳೂರು ಬಲು ದುಬಾರಿ: ನಮ್ ಊರಲ್ಲಿ ಬಟ್ಟೆ ಇಸ್ತ್ರಿಗೆ ಬರೀ 5 ರೂಪಾಯಿ, ಆದ್ರೆ ಇಲ್ಲಿ 20 ರೂಪಾಯಿ!: ನೊಯ್ಡಾ ನಿವಾಸಿ ಅಚ್ಚರಿ!

ನಕಲಿ ವರರು

ಮತ್ತೆ ಕೆಲ ಪ್ರಕರಣಗಳಲ್ಲಿ ದಾಖಲಾತಿ ಮತ್ತು ಕಾರ್ಯಕ್ರಮದ ಸಮಯದಲ್ಲಿ “ವರ”ರಂತೆ ನಟಿಸಲು ವ್ಯಕ್ತಿಗಳನ್ನು ಹಣಕೊಟ್ಟು ಕರೆಸಿದ ಶಂಕೆ ಕೂಡ ಇದೆ. ಸ್ಥಳೀಯ ಮಟ್ಟದ ಪರಿಶೀಲನಾ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ದಾಖಲೆಗಳ ಮೇಲೆ ಅವಲಂಬಿತವಾಗಿದ್ದ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಧಿಕಾರಿಗಳ ಅಮಾನತು, ತನಿಖೆ ಆರಂಭ

ಇತ್ತ ಹಗರಣ ಬಯಲಿಗೆ ಬರುತ್ತಲೇ ಮಧ್ಯ ಪ್ರದೇಶ ಸರ್ಕಾರದ ವಿರುದ್ಧ ವಿಪಕ್ಷಗಳು ತೀವ್ರ ಕಿಡಿಕಾರಿವೆ. “ಇದು ಕೇವಲ ಹಣಕಾಸು ಹಗರಣವಲ್ಲ. ಬಡವರ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆ,” ಎಂದು ವಿರೋಧ ಪಕ್ಷದ ವಕ್ತಾರರು ಹೇಳಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಎಚ್ಚೆತ ಸರ್ಕಾರ ಹಗರಣ ಬೆಳಕಿಗೆ ಬಂದ ನಂತರ, ಕಾರ್ಯಕ್ರಮದ ಆಯೋಜನೆ ಮತ್ತು ಅನುಮೋದನೆಗೆ ಸಂಬಂಧಿಸಿದ ಕೆಲವು ಅಧಿಕಾರಿಗಳನ್ನು ಅಮಾನತು ಮಾಡಿದೆ.

ಅಂತೆಯೇ ಪೊಲೀಸರು ಹಣಕಾಸು ದಾಖಲೆಗಳು, ಫಲಾನುಭವಿಗಳ ಪಟ್ಟಿಗಳು ಹಾಗೂ ಡಿಜಿಟಲ್ ದಾಖಲೆಗಳ ಪರಿಶೀಲನೆ ಆರಂಭಿಸಿದ್ದಾರೆ. ಅಲ್ಲದೆ ಈ ಹಗರಣ ಒಂದು ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ.. ಇಡೀ ರಾಜ್ಯಕ್ಕೇ ವ್ಯಾಪಿಸಿದೆ ಎಂಬ ಅನುಮಾನವೂ ವ್ಯಕ್ತವಾಗಿದೆ. ತನಿಖೆಯಲ್ಲಿ ಯಾರೇ ತಪ್ಪಿತಸ್ಥರಾಗಿದ್ದರೂ ಅವರನ್ನು ಬಿಡುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.

mass wedding scam in Madhya Pradesh
ನಟಿ ತ್ವಿಶಾ ಶರ್ಮಾ ಸಾವು: ಮಾಜಿ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ಮಧ್ಯಪ್ರದೇಶ ಹೈಕೋರ್ಟ್

ಮುಂದೇನು?

ತನಿಖೆ ವಿಸ್ತರಿಸುತ್ತಿರುವಂತೆ, ಇತ್ತೀಚೆಗೆ ನಡೆದ ಎಲ್ಲಾ ಸಾಮೂಹಿಕ ವಿವಾಹ ಕಾರ್ಯಕ್ರಮಗಳ ಪರಿಶೀಲನೆ ನಡೆಯುವ ಸಾಧ್ಯತೆ ಇದೆ. ಹಣ ದುರುಪಯೋಗವಾಗಿದೆ ಎಂಬುದು ಸಾಬೀತಾದರೆ ಹಣ ವಸೂಲಾತಿ ಕ್ರಮಗಳನ್ನೂ ಕೈಗೊಳ್ಳಬಹುದು. ಇದೀಗ ಸರ್ಕಾರದ ಮುಂದೆ ಇರುವ ದೊಡ್ಡ ಸವಾಲು ಎಂದರೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಜನರ ವಿಶ್ವಾಸವನ್ನು ಮರಳಿ ಪಡೆಯುವುದು. ಪ್ರಸ್ತುತ, “42 ವರರು, 0 ವಧುಗಳು” ಎಂಬ ಘಟನೆ ವ್ಯವಸ್ಥೆಯ ಲೋಪಗಳು ಮತ್ತು ಭ್ರಷ್ಟಾಚಾರ ಹೇಗೆ ಕಲ್ಯಾಣ ಯೋಜನೆಯನ್ನು ರಾಷ್ಟ್ರೀಯ ಮಟ್ಟದ ಅವಮಾನವನ್ನಾಗಿ ಮಾಡಬಹುದು ಎಂಬುದಕ್ಕೆ ಉದಾಹರಣೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com