

ಬೆಂಗಳೂರು: ದೇಶದ ದುಬಾರಿ ನಗರಗಳಲ್ಲಿ ರಾಜ್ಯ ರಾಜಧಾನಿ ಹಾಗೂ ಸಿಲಿಕಾನ್ ಸಿಟಿ ಬೆಂಗಳೂರು ಕೂಡ ಪ್ರಮುಖ ಸ್ಥಾನದಲ್ಲಿದ್ದು, ಇಲ್ಲಿ ಮನೆ ಬಾಡಿಗೆಯಿಂದ ಮನೆಯಲ್ಲಿ ಬಳಸುವ ಬಹುತೇಕ ಎಲ್ಲ ವಸ್ತುಗಳೂ ದುಬಾರಿ ಎನ್ನಲಾಗುತ್ತದೆ.
ಈ ಹಿಂದೆ ಬೆಂಗಳೂರು ನಗರದ ದುಬಾರಿ ಮನೆ ಬಾಡಿಗೆ ಕುರಿತಂತೆ ವ್ಯಾಪಕ ಸುದ್ದಿಯಾಗಿತ್ತು. ದುಬಾರಿ ಬಾಡಿಗೆ ನೀಡಿದರೂ ಸೂಕ್ತ ವ್ಯವಸ್ಥೆ ಗಳಿರುವ ಮನೆಗಳು ಸಿಗುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದರು. ಈ ಎಲ್ಲ ಆರೋಪಗಳ ನಡುವೆಯೇ ಇಲ್ಲೋರ್ವ ವ್ಯಕ್ತಿ ಬೆಂಗಳೂರಿನ ದುಬಾರಿ ಜೀವನಶೈಲಿ ಕುರಿತು ಮಾಡಿರುವ ಟ್ವೀಟ್ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಹೌದು.. ವೆಂಚರ್ ಕ್ಯಾಪಿಟಲಿಸ್ಟ್ ಸಜಿತ್ ಪೈ ಇತ್ತೀಚೆಗೆ ನೋಯ್ಡಾದಿಂದ ಬೆಂಗಳೂರಿಗೆ ಸ್ಥಳಾಂತರಗೊಂಡ ನಂತರ, ಇಂದಿರಾನಗರ ಪ್ರದೇಶದಲ್ಲಿ ಬಟ್ಟೆ ಇಸ್ತ್ರಿ ಮಾಡುವವರ ಶುಲ್ಕದ ಕುರಿತು ಮಾಡಿರುವ ಟ್ವೀಟ್ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ. ವೆಂಚರ್ ಕ್ಯಾಪಿಟಲಿಸ್ಟ್ ಸಜಿತ್ ಪೈ, ನಗರದ ಹೆಚ್ಚಿದ ಇಸ್ತ್ರಿ ದರಗಳನ್ನು ನೋಯ್ಡಾದ ದರಗಳೊಂದಿಗೆ ಹೋಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದಾರೆ.
ಇತ್ತೀಚೆಗೆ ಇಂದಿರಾನಗರ ಪ್ರದೇಶಕ್ಕೆ ಸ್ಥಳಾಂತರಗೊಂಡಿರುವ ಸಜಿತ್ ಪೈ, ಸ್ಥಳೀಯ ಲಾಂಡ್ರಿ ಸೇವೆಗಳ ಹೆಚ್ಚಿದ ವೆಚ್ಚವನ್ನು ನೋಡಿ ನಿಜವಾಗಿಯೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರವಾಗಿ ಅವರು ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದಾರೆ.
ಇಸ್ತ್ರಿಗೂ ವ್ಯಾಪಿಸಿತೇ ಮಧ್ಯ ಪ್ರಾಚ್ಯ ಬಿಕ್ಕಟ್ಟು?
ಇತ್ತೀಚಿನ ತಿಂಗಳಲ್ಲಿ ಅಮೆರಿಕಾ-ಇರಾನ್-ಇಸ್ರೇಲ್ ಸಂಘರ್ಷದ ಪರಿಣಾಮವಾಗಿ ಭಾರತದೆಲ್ಲೆಡೆ ಆಹಾರ, ಇಂಧನ ಮತ್ತು ಮೂಲಭೂತ ಸೇವೆಗಳ ಬೆಲೆ ಏರಿಕೆಯಾಗಿದ್ದರೂ, ಪೈ ಅವರ ಈ ಹೈಪರ್-ಲೋಕಲ್ ಸೇವಾ ದರಗಳ ವ್ಯತ್ಯಾಸದ ಕುರಿತ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಪೈ ಅವರು ನೋಯ್ಡಾದಲ್ಲಿ ಪ್ರತಿಯೊಂದು ಬಟ್ಟೆಗೆ ಸುಮಾರು 5 ರೂ ಪಾವತಿಸುತ್ತಿದ್ದೆನೆಂದು ಹೇಳಿದ್ದು, ಬೆಂಗಳೂರಿನಲ್ಲಿ ಸ್ವಲ್ಪ ಹೆಚ್ಚು ಇರಬಹುದು ಎಂದು ನಿರೀಕ್ಷಿಸಿದ್ದೆ. ಆದರೆ ಇಂದಿರಾನಗರದಲ್ಲಿನ ಇಸ್ತ್ರಿ ದರಗಳು ಅವರನ್ನು ಆಶ್ಚರ್ಯಕ್ಕೀಡಾಗಿಸಿವೆ ಎಂದಿದ್ದಾರೆ.
“ಈ ತಿಂಗಳ ಆರಂಭದಲ್ಲೇ ನಾನು ಬೆಂಗಳೂರಿಗೆ ಬಂದೆ. ಇಲ್ಲಿ ಇಸ್ತ್ರಿ ವೆಚ್ಚ ಹೆಚ್ಚು ಇರುವುದೇ ನನಗೆ ಅತ್ಯಂತ ಆಶ್ಚರ್ಯಕರ ಸಂಗತಿಯಾಗಿತ್ತು. ನಾನು ಮೊದಲು ವಾಸಿಸುತ್ತಿದ್ದ ನೋಯ್ಡಾದಲ್ಲಿ ಪ್ರತಿಯೊಂದು ಬಟ್ಟೆಗೆ 5 ಇತ್ತು. ಅದು ಸ್ವಲ್ಪ ಕಡಿಮೆ ದರವೆಂದು ನನಗೆ ಗೊತ್ತಿತ್ತು. ಆದ್ದರಿಂದ ಸ್ವಲ್ಪ ಹೆಚ್ಚು ಇರಬಹುದು ಎಂದು ನಿರೀಕ್ಷಿಸಿದ್ದೆ. ಆದರೆ ಇಲ್ಲಿ ಪ್ರತಿ ಬಟ್ಟೆಗೆ 12 ರಿಂದ 20 ರೂಗಳಷ್ಟಿದೆ. ಈ ದರ ಕೇಳಿದ್ದು ನನಗೆ ಆಶ್ಚರ್ಯವಾಯಿತು” ಎಂದು ಹೇಳಿದ್ದಾರೆ.
ಮುಂಬೈನಿಂದ ಬೆಂಗಳೂರಿಗೆ ಬಂದವರಿಗೂ ಇಲ್ಲಿ ಇಸ್ತ್ರಿ ವೆಚ್ಚ ನೋಡಿ ಆಶ್ಚರ್ಯವಾಗಿದೆ ಎಂದು ಪೈ ಹೇಳಿದರು. ಬೆಂಗಳೂರುದಲ್ಲಿನ ಇಸ್ತ್ರಿ ಅಂಗಡಿಗಳು ಸಾಮಾನ್ಯವಾಗಿ ಎಲ್‌ಪಿಜಿ ಆಧಾರಿತ ಇಸ್ತ್ರಿ ಯಂತ್ರಗಳನ್ನು ಬಳಸುವುದರಿಂದ ದರ ಹೆಚ್ಚಿರಬಹುದು ಎಂದು ಅವರು ಅಭಿಪ್ರಾಯಪಟ್ಟರು. NCR ನಗರಗಳಲ್ಲಿ ಇನ್ನೂ ಕಲ್ಲಿದ್ದಲು ತುಂಬಿದ ಸಾಂಪ್ರದಾಯಿಕ ಇಸ್ತ್ರಿ ಪೆಟ್ಟಿಗೆಗಳನ್ನು ಬಳಸುತ್ತಾರೆ. ಇದು ಹೆಚ್ಚಿನ ದರಗಳಿಗೆ ಒಂದು ಕಾರಣವಾಗಿರಬಹುದು ಎಂದು ಪೈ ಅಭಿಪ್ರಾಯಪಟ್ಟಿದ್ದಾರೆ.
“ಇದಕ್ಕೆ ಸಂಬಂಧಿಸಿದ ಮತ್ತೊಂದು ವಿಚಾರ ಎಂದರೆ, NCR ಪ್ರದೇಶದಲ್ಲಿ ಹೆಚ್ಚು ತಂದೂರ್ ಹೋಟೆಲ್‌ಗಳು ಇರುವುದರಿಂದ ಕಲ್ಲಿದ್ದಲು ದರ ಕಡಿಮೆ ಇರಬಹುದೇ? ಬೆಂಗಳೂರಿನೊಂದಿಗೆ ಹೋಲಿಸಿದರೆ ಹಾಗಿರಬಹುದೇ? ನನಗೆ ಖಚಿತವಾಗಿ ಗೊತ್ತಿಲ್ಲ. ಆದರೆ ನಮ್ಮ ಊರಿನಲ್ಲಿ ಇಸ್ತ್ರಿ ವೆಚ್ಚ ಏಕೆ ಹೆಚ್ಚು ಎಂಬುದರ ಬಗ್ಗೆ ಜನರ ಅಭಿಪ್ರಾಯಗಳನ್ನು ಕೇಳಲು ಇಷ್ಟಪಡುತ್ತೇನೆ,” ಎಂದು ಅವರು ಹೇಳಿದ್ದಾರೆ.
ವ್ಯಾಪಕ ಪ್ರತಿಕ್ರಿಯೆ
ಪೈ ಅವರ ಪೋಸ್ಟ್ ವೈರಲ್ ಆದ ನಂತರ, ಕೆಲ ಬಳಕೆದಾರರು ತಮ್ಮ ಪ್ರದೇಶದ ದರಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಕೆಲವರು ಇಸ್ತ್ರಿ ಕೆಲಸ ಬಹಳ ಶ್ರಮದಾಯಕವಾಗಿದ್ದು, ಇವರು ಹೆಚ್ಚು ಹಣ ಕೇಳುತ್ತಿಲ್ಲ ಎಂದು ತಮ್ಮ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
“ಸುರತ್‌ನಲ್ಲಿ ಸಾಮಾನ್ಯ ಇಸ್ತ್ರಿಗೆ 10 ರೂ ಮತ್ತು ಸ್ಟೀಮ್ ಇಸ್ತ್ರಿಗೆ 25 ರೂಗಳಿವೆ. ಇಲ್ಲಿ ವಿದ್ಯುತ್ ಆಧಾರಿತ ಇಸ್ತ್ರಿಯೇ ಹೆಚ್ಚು ಕಾಣಿಸುತ್ತದೆ. ವಾರಕ್ಕೆ ಮೂರು ಬಾರಿ ಮನೆಗೆ ಬಂದು ತೆಗೆದುಕೊಂಡು ಹೋಗುವ ಹಾಗೂ ತಂದುಕೊಡುವ ಸೇವೆ ಉಚಿತ,” ಎಂದು ಒಬ್ಬ ಬಳಕೆ ದಾರರು ಹೇಳಿದ್ದಾರೆ.
ಇನ್ನೊಬ್ಬರು, “ಥಾಣೆಯಲ್ಲಿ ಸಾಮಾನ್ಯ ಇಸ್ತ್ರಿಗೆ 7 ಮತ್ತು ಸ್ಟೀಮ್ ಇಸ್ತ್ರಿಗೆ 20 ರೂ. ಈ ಚರ್ಚೆಯಲ್ಲಿ ಕೆಲವೆಡೆ ಹೇಳಿರುವ ದರಗಳು ನಿಜಕ್ಕೂ ಆಶ್ಚರ್ಯಕರ. ಮುಂಬೈ ಮೆಟ್ರೋಪಾಲಿಟನ್ ಪ್ರದೇಶಕ್ಕಿಂತ ದುಬಾರಿ ನಗರ ಮತ್ತೊಂದಿರಬಹುದು ಎಂದು ತಿಳಿದಿರಲಿಲ್ಲ” ಎಂದು ಹೇಳಿದ್ದಾರೆ.
ಮೂರನೇ ಬಳಕೆದಾರರು, “ಇವು ತುಂಬಾ ಶ್ರಮದಾಯಕ ಕೆಲಸಗಳು. ಇದು ಕೇವಲ ವೆಚ್ಚದ ವಿಷಯವಲ್ಲ. ದೈಹಿಕ ಒತ್ತಡ ಮತ್ತು ಉದ್ಯೋಗ ಸಂಬಂಧಿತ ಅಪಾಯಗಳೂ ಇವೆ. ಅವರು ಹೆಚ್ಚು ಹಣ ಕೇಳುತ್ತಿಲ್ಲ,” ಎಂದು ಪ್ರತಿಕ್ರಿಯಿಸಿದ್ದಾರೆ.
Advertisement