ಬೆಂಗಳೂರು: ರೌಡಿಗಳಿಗೆ ಪೊಲೀಸರ ಭಯ ಇರಬೇಕು, ಖಾಕಿ ಸಮವಸ್ತ್ರಕ್ಕೆ ಗೌರವ ಸಿಗುವಂತೆ ಕಠಿಣ ಕ್ರಮ ಕೈಗೊಳ್ಳಿ ಎಂಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಖಡಕ್ ಸೂಚನೆ ಬೆನ್ನಲ್ಲೇ, ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನಾದ್ಯಂತ 100ಕ್ಕೂ ಹೆಚ್ಚು ರೌಡಿಶೀಟರ್‌ಗಳ ಮನೆಗಳ ಮೇಲೆ ಸಿಸಿಬಿ ಹಾಗೂ ನೂತನ ರೌಡಿ ಸ್ಕ್ವಾಡ್ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಬೆಳ್ಳಂಬೆಳಗ್ಗೆ ರೌಡಿಗಳಿಗೆ ಪೊಲೀಸ್ ಶಾಕ್
ಬೆಳಗಿನ ಜಾವ ನಿದ್ದೆಯಲ್ಲಿದ್ದ ರೌಡಿಶೀಟರ್‌ಗಳಿಗೆ ಪೊಲೀಸರು ದಿಢೀರ್ ಶಾಕ್ ನೀಡಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ಅವರ ಮಾರ್ಗದರ್ಶನದಲ್ಲಿ, ರೌಡಿ ನಿಗ್ರಹ ದಳದ ಮುಖ್ಯಸ್ಥ ಹಾಗೂ ಸಂಚಾರ ವಿಭಾಗದ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರ ನೇತೃತ್ವದಲ್ಲಿ ನಗರದ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಜ್ಯೋತಿ ನಗರ ಸೇರಿದಂತೆ ವಿವಿಧ ವಿಭಾಗಗಳಲ್ಲಿ 100ಕ್ಕೂ ಹೆಚ್ಚು ರೌಡಿಶೀಟರ್‌ಗಳ ಮನೆಗಳಲ್ಲಿ ಶೋಧ ಕಾರ್ಯ ನಡೆಸಿ, ಅವರ ಪ್ರಸ್ತುತ ಚಲನವಲನಗಳು ಮತ್ತು ಅಪರಾಧ ಹಿನ್ನೆಲೆಯ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ. ಈ ವೇಳೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ.
ಸಿಎಂ ಖಡಕ್ ಸೂಚನೆ
ಸ್ಥಳೀಯ ಪೊಲೀಸ್ ಠಾಣೆಯ ಕೆಲವು ಸಿಬ್ಬಂದಿಯೊಂದಿಗೆ ರೌಡಿಗಳು ಸಂಪರ್ಕ ಹೊಂದಿದ್ದು, ದಾಳಿಯ ಮಾಹಿತಿಯನ್ನು ಮೊದಲೇ ಸೋರಿಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ದೂರುಗಳಿದ್ದವು. ಈ ಹಿನ್ನೆಲೆಯಲ್ಲಿ ಕಳೆದ ವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಸ್ಥಳೀಯ ಠಾಣೆಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ಪೊಲೀಸ್ ಆಯುಕ್ತರ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರತ್ಯೇಕ 'ಆಂಟಿ-ರೌಡಿ ಸ್ಕ್ವಾಡ್' ರಚಿಸಿ, ರೌಡಿಸಂ ಮತ್ತು ಡ್ರಗ್ಸ್ ಜಾಲವನ್ನು ಸಂಪೂರ್ಣ ಮಟ್ಟಹಾಕುವಂತೆ ಸೂಚಿಸಿದ್ದರು.
ಹೊಸ ವ್ಯವಸ್ಥೆ, ಅಪರಾಧಗಳಿಗೆ ಬ್ರೇಕ್!
ರೌಡಿಸಂ ಸಂಪೂರ್ಣ ನಿಯಂತ್ರಣಕ್ಕಾಗಿ ಪ್ರತ್ಯೇಕ ರೌಡಿ ಸ್ಕ್ವಾಡ್ ಹಾಗೂ ಎಡಿಜಿಪಿ ಶ್ರೇಣಿಯ ಹಿರಿಯ ಅಧಿಕಾರಿಯ ನೇತೃತ್ವದಲ್ಲಿ ಪ್ರತ್ಯೇಕ ಕಮಿಷನರೇಟ್ ವ್ಯವಸ್ಥೆ ರೂಪಿಸಿರುವುದಾಗಿ ಸಿಎಂ ಮಾಹಿತಿ ನೀಡಿದ್ದರು. ರಾತ್ರಿ ಗಸ್ತು ಹೆಚ್ಚಿಸಿ, ಒಂದು ತಿಂಗಳೊಳಗೆ ಸಾರ್ವಜನಿಕರಿಗೆ ಗೋಚರಿಸುವಂತಹ ಫಲಿತಾಂಶ ನೀಡುವಂತೆ ಸೂಚಿಸಿದ್ದರು. ಇದರ ಜೊತೆಗೆ ಡ್ರಗ್ಸ್ ದಂಧೆ, ಸುಲಿಗೆ ಮತ್ತು ಸಂಘಟಿತ ಅಪರಾಧಗಳ ವಿರುದ್ಧವೂ ಕಠಿಣ ಕ್ರಮ ಜರುಗಿಸಲು ನಿರ್ದೇಶಿಸಿದ್ದರು. ಈಗ ನಡೆದಿರುವ ರೌಡಿ ಸ್ಕ್ವಾಡ್ ದಾಳಿಯಿಂದ ಅಪರಾಧಿಗಳಿಗೆ ಸ್ಪಷ್ಟ ಎಚ್ಚರಿಕೆ ರವಾನೆಯಾದಂತಾಗಿದೆ.