ನವದೆಹಲಿ: ರಾಜ್ಯಗಳ ನಡುವಿನ ಜಲ ವಿವಾದಗಳನ್ನು ಪರಸ್ಪರ ಸಹಕಾರ ಮತ್ತು ವೇಗವಾದ ಆಡಳಿತಾತ್ಮಕ ಕ್ರಮಗಳ ಮೂಲಕ ಬಗೆಹರಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಕರೆ ನೀಡಿದ್ದಾರೆ.
ಬುಧವಾರ ನಡೆದ 51ನೇ ಪ್ರಗತಿ ಸಭೆಯಲ್ಲಿ ವಿವಿಧ ರಾಜ್ಯಗಳ ಮಹತ್ವದ ಮೂಲಸೌಕರ್ಯ ಯೋಜನೆಗಳನ್ನು ಪರಿಶೀಲಿಸಿದ ಅವರು, ಕೆನ್-ಬೆಟ್ವಾ ನದಿ ಜೋಡಣೆ ಯೋಜನೆಯನ್ನು ಇತರೆ ರಾಜ್ಯಗಳಿಗೆ ಮಾದರಿಯನ್ನಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಸಭೆಯಲ್ಲಿ ರೈಲ್ವೆ, ರಸ್ತೆ ಹಾಗೂ ವಿದ್ಯುತ್ ಕ್ಷೇತ್ರಗಳಿಗೆ ಸಂಬಂಧಿಸಿದ ಒಟ್ಟು ಸುಮಾರು ರೂ.30 ಸಾವಿರ ಕೋಟಿ ಮೌಲ್ಯದ ಏಳು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಪ್ರಧಾನಿ ಪರಿಶೀಲಿಸಿದರು.
ಸಾರ್ವಜನಿಕ ಕಾಮಗಾರಿಗಳ ವಿಳಂಬದಿಂದ ಯೋಜನೆಗಳ ವೆಚ್ಚ ಹೆಚ್ಚುವುದರ ಜೊತೆಗೆ ಜನರಿಗೆ ತಲುಪಬೇಕಾದ ಸೇವೆಗಳು ಸಮಯಕ್ಕೆ ಸಿಗುವುದಿಲ್ಲ ಎಂದು ಹೇಳಿದರು.
ಯೋಜನೆಗಳ ಗಡುವು, ಇಲಾಖೆಗಳ ಸಮನ್ವಯ ಮತ್ತು ಬಾಕಿ ಅಡೆತಡೆಗಳ ನಿವಾರಣೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಕೆನ್-ಬೆಟ್ವಾ ಯೋಜನೆ ಕುರಿತು ಮಾತನಾಡಿದ ಪ್ರಧಾನಿ, ನದಿ ಜೋಡಣೆ, ಜಲ ಸಂರಕ್ಷಣೆ, ಭೂಗರ್ಭ ಜಲ ಮರುಭರ್ತಿ ಹಾಗೂ ಪರಿಣಾಮಕಾರಿ ನೀರಾವರಿ ವ್ಯವಸ್ಥೆಗಳಂತಹ ಯೋಜನೆಗಳನ್ನು ರಾಜ್ಯಗಳು ಗುರುತಿಸಬೇಕು ಎಂದು ಸಲಹೆ ನೀಡಿದರು. ದೀರ್ಘಕಾಲಿಕ ಜಲ ಭದ್ರತೆ ಮತ್ತು ಸಂಪನ್ಮೂಲಗಳ ಸಮರ್ಪಕ ನಿರ್ವಹಣೆಗೆ ಸಮಗ್ರ ಕ್ರಮ ಅಗತ್ಯ ಎಂದು ಹೇಳಿದರು.
PRAGATI ವೇದಿಕೆ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯ ಹೆಚ್ಚಿಸಿ, ಆಡಳಿತ ದಕ್ಷತೆ ಹಾಗೂ ಯೋಜನೆಗಳ ವೇಗವಾದ ಅನುಷ್ಠಾನಕ್ಕೆ ನೆರವಾಗುವ ICT ಆಧಾರಿತ ವ್ಯವಸ್ಥೆಯಾಗಿದೆ. ಸಭೆಯಲ್ಲಿ ಸ್ವಚ್ಛ ಭಾರತ್ ಮಿಷನ್-ಅರ್ಬನ್ 2.0 ಯೋಜನೆಯ ಪ್ರಗತಿಯನ್ನೂ ಪರಿಶೀಲಿಸಲಾಯಿತು.
ವಿದ್ಯುತ್ ಕ್ಷೇತ್ರದ ಪರಿಶೀಲನೆಯ ವೇಳೆ ನಗರ ಪ್ರದೇಶಗಳು, ವಸತಿ ಕಾಲೊನಿಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಮೇಲ್ಚಾವಣಿ ಸೌರ ಘಟಕಗಳ ವಿಸ್ತರಣೆ ಅಗತ್ಯವಿದೆ ಎಂದು ಮೋದಿ ಹೇಳಿದರು.
ರಸ್ತೆ ಮತ್ತು ಬಂದರು ಯೋಜನೆಗಳ ಚರ್ಚೆಯ ವೇಳೆ ವಾಧವನ್ ಬಂದರನ್ನು ಸಮಗ್ರ ಸಾರಿಗೆ ಕೇಂದ್ರದ ಮಾದರಿಯಾಗಿ ಅಭಿವೃದ್ಧಿಪಡಿಸಬೇಕು ಎಂದು ಸೂಚಿಸಿದರು.
ಇದೇ ವೇಳೆ ಸ್ವಚ್ಛ ಭಾರತ್ ಮಿಷನ್ 2.0 ಅನುಷ್ಠಾನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಸೂಚಿಸಿದ ಪ್ರಧಾನಿ, ಕೇವಲ ಮೂಲಸೌಕರ್ಯ ನಿರ್ಮಾಣಕ್ಕೆ ಸೀಮಿತವಾಗದೆ, ನಿಗಾವಳಿ, ಸಾರ್ವಜನಿಕ ಪಾಲ್ಗೊಳ್ಳಿಕೆ ಮತ್ತು ವಿವಿಧ ಇಲಾಖೆಗಳ ಸಮನ್ವಯದ ಮೂಲಕ ಸ್ಪಷ್ಟ ಫಲಿತಾಂಶ ತರುವತ್ತ ಗಮನಹರಿಸಬೇಕು ಎಂದು ಹೇಳಿದರು.
ತ್ಯಾಜ್ಯ ಸಂಸ್ಕರಣಾ ಘಟಕಗಳು ಹಾಗೂ GOBARdhan ಘಟಕಗಳ ನಿರ್ಮಾಣವನ್ನು ವೇಗಗೊಳಿಸುವಂತೆ ರಾಜ್ಯಗಳಿಗೆ ನಿರ್ದೇಶನ ನೀಡಿದರು.
ಕಾಲುವೆಗಳ ಮೇಲ್ಭಾಗದಲ್ಲಿ ಸೌರ ಫಲಕಗಳನ್ನು ಅಳವಡಿಸುವ ಸಾಧ್ಯತೆಗಳನ್ನೂ ಪರಿಶೀಲಿಸಬೇಕು ಎಂದು ಮೋದಿ ಸಲಹೆ ನೀಡಿದರು. ಇದರಿಂದ ನೀರಿನ ಆವಿಯಾಗುವಿಕೆ ಕಡಿಮೆಯಾಗುವುದರ ಜೊತೆಗೆ ಭೂ ಸಂರಕ್ಷಣೆ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನೆಗೂ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಯೋಜನೆಗಳ ಅನುಷ್ಠಾನಕ್ಕೆ ಅಡ್ಡಿಯಾಗಿರುವ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ, ಸಮಯಬದ್ಧ ಕ್ರಮಗಳ ಮೂಲಕ ಯೋಜನೆಗಳ ವೇಗ ಹೆಚ್ಚಿಸಲು ಕೇಂದ್ರ ಸಚಿವಾಲಯಗಳು, ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳು ಹೆಚ್ಚು ಚುರುಕಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.