ಮುರುಸು ಚಂಡಮಾರುತ 
ದೇಶ

Arnab ಬಳಿಕ ಮತ್ತೊಂದು ಇರುಸು 'ಮುರಸು': ನವೆಂಬರ್ 3ರಂದು ಆಂಧ್ರ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ!

ನವೆಂಬರ್ 2ರ ಬೆಳಗಿನ ವೇಳೆಗೆ ಇದು ತೀವ್ರ ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದ್ದು, ಕರಾವಳಿ ದಾಟುವ ಸಂದರ್ಭದಲ್ಲಿ ಗಂಟೆಗೆ 100ರಿಂದ 110 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ.

ಅಮರಾವತಿ: ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ‘ಮುರಸು’ ಚಂಡಮಾರುತ ಮತ್ತಷ್ಟು ತೀವ್ರಗೊಳ್ಳುತ್ತಿದ್ದು, ನವೆಂಬರ್ 3ರಂದು ಆಂಧ್ರಪ್ರದೇಶದ ದಕ್ಷಿಣ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ನವೆಂಬರ್ 2ರ ಬೆಳಗಿನ ವೇಳೆಗೆ ಇದು ತೀವ್ರ ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದ್ದು, ಕರಾವಳಿ ದಾಟುವ ಸಂದರ್ಭದಲ್ಲಿ ಗಂಟೆಗೆ 100ರಿಂದ 110 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ.

ಗಾಳಿಯ ವೇಗ ಕೆಲವೊಮ್ಮೆ ಗಂಟೆಗೆ 120 ಕಿ.ಮೀ ತಲುಪಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಭಾನುವಾರ ಮಧ್ಯಾಹ್ನ 2.30ರವರೆಗಿನ ಆರು ಗಂಟೆಗಳ ಅವಧಿಯಲ್ಲಿ ಚಂಡಮಾರುತವು ಗಂಟೆಗೆ 27 ಕಿ.ಮೀ ವೇಗದಲ್ಲಿ ಪಶ್ಚಿಮ-ವಾಯವ್ಯ ದಿಕ್ಕಿನತ್ತ ಚಲಿಸಿದೆ.

ನವೆಂಬರ್ 1ರ ಮಧ್ಯಾಹ್ನ 2.30ರ ವೇಳೆಗೆ ನೈಋತ್ಯ ಮತ್ತು ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯ ಭಾಗದಲ್ಲಿ, ಉತ್ತರ ಅಕ್ಷಾಂಶ 12.4 ಡಿಗ್ರಿ ಮತ್ತು ಪೂರ್ವ ರೇಖಾಂಶ 84.6 ಡಿಗ್ರಿಯಲ್ಲಿ ಕೇಂದ್ರಿತವಾಗಿತ್ತು.

ಚೆನ್ನೈನಿಂದ ಸುಮಾರು 480 ಕಿ.ಮೀ, ನೆಲ್ಲೂರಿನಿಂದ 550 ಕಿ.ಮೀ, ಮಚಲಿಪಟ್ಟಣಂನಿಂದ 560 ಕಿ.ಮೀ, ಒಂಗೋಲ್‌ನಿಂದ 600 ಕಿ.ಮೀ ಹಾಗೂ ವಿಶಾಖಪಟ್ಟಣಂನಿಂದ 610 ಕಿ.ಮೀ ದೂರದಲ್ಲಿ ಚಂಡಮಾರುತವಿದೆ ಎಂದು ಐಎಂಡಿ ತಿಳಿಸಿದೆ.

ನವೆಂಬರ್ 3ರ ನಸುಕಿನಲ್ಲಿ ಕರಾವಳಿ ದಾಟುವ ಸಾಧ್ಯತೆ

ಚಂಡಮಾರುತವು ಪಶ್ಚಿಮ-ವಾಯವ್ಯ ದಿಕ್ಕಿನಲ್ಲಿ ಚಲಿಸಿ ನವೆಂಬರ್ 2ರ ಬೆಳಗಿನ ವೇಳೆಗೆ ತೀವ್ರ ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ. ನಂತರ ವಾಯವ್ಯ ದಿಕ್ಕಿನಲ್ಲಿ ಚಲಿಸಿ, ದಕ್ಷಿಣ ಆಂಧ್ರಪ್ರದೇಶದ ಕರಾವಳಿಯಲ್ಲಿ ನೆಲ್ಲೂರು ಮತ್ತು ನರಸಾಪುರಂ ನಡುವಿನ ಪ್ರದೇಶದಲ್ಲಿ ಕರಾವಳಿ ದಾಟುವ ನಿರೀಕ್ಷೆಯಿದೆ.

ನವೆಂಬರ್ 2ರ ರಾತ್ರಿ 11.30ರಿಂದ ನವೆಂಬರ್ 3ರ ಬೆಳಗಿನ ಜಾವ 4 ಗಂಟೆಯ ನಡುವೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಾಪಟ್ಲಾ ಬಳಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ

ಚಂಡಮಾರುತದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಭಾನುವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ನವೆಂಬರ್ 3ರ ಬೆಳಗ್ಗೆ ಬಾಪಟ್ಲಾ ಸಮೀಪ ಚಂಡಮಾರುತ ಕರಾವಳಿ ದಾಟುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗೆ ಮಾಹಿತಿ ನೀಡಿದ್ದಾರೆ.

"ಮತ್ತೊಂದು ಚಂಡಮಾರುತ ಆಂಧ್ರಪ್ರದೇಶದತ್ತ ಬರುತ್ತಿದೆ. ನವೆಂಬರ್ 3ರ ಬೆಳಗ್ಗೆ ಬಾಪಟ್ಲಾ ಬಳಿ ತೀವ್ರ ಚಂಡಮಾರುತ ಕರಾವಳಿ ದಾಟುವ ನಿರೀಕ್ಷೆಯಿದೆ. ಹೀಗಾಗಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಅಧಿಕಾರಿಗಳು ಸಂಪೂರ್ಣ ಸಿದ್ಧರಾಗಿರಬೇಕು" ಎಂದು ನಾಯ್ಡು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಲವು ಜಿಲ್ಲೆಗಳಲ್ಲಿ ಅತಿ ಭಾರೀ ಮಳೆ ಎಚ್ಚರಿಕೆ

ನವೆಂಬರ್ 2ರಂದು ದಕ್ಷಿಣ ಮತ್ತು ಮಧ್ಯ ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕೆಲವು ಪ್ರದೇಶಗಳಲ್ಲಿ ಅತಿ ಭಾರೀ ಮಳೆಯಾಗಬಹುದು. ನವೆಂಬರ್ 3 ಮತ್ತು 4ರಂದು ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಅತಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಅತಿ ಭಾರೀ ಮಳೆಯಾಗುವ ಸಾಧ್ಯತೆಯಿರುವ 20 ಮಂಡಲಗಳ ಪೈಕಿ ಎಲೂರು ಜಿಲ್ಲೆಯಲ್ಲಿ 9, ಕೃಷ್ಣಾ ಮತ್ತು ಎನ್‌ಟಿಆರ್ ಜಿಲ್ಲೆಗಳಲ್ಲಿ ತಲಾ 5 ಹಾಗೂ ಬಾಪಟ್ಲಾ ಜಿಲ್ಲೆಯಲ್ಲಿ ಒಂದು ಮಂಡಲವಿದೆ.

ಭಾರಿ ಮಳೆ ಸಾಧ್ಯತೆ

ನವೆಂಬರ್ 3ರಂದು ಆಂಧ್ರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಎಲೂರು – 179 ಮಿ.ಮೀ, ಕೃಷ್ಣಾ – 163 ಮಿ.ಮೀ, ಎನ್‌ಟಿಆರ್ – 161 ಮಿ.ಮೀ, ಪಶ್ಚಿಮ ಗೋದಾವರಿ – 147 ಮಿ.ಮೀ, ಗುಂಟೂರು – 119 ಮಿ.ಮೀ ಮತ್ತು ಬಾಪಟ್ಲಾ – 104 ಮಿ.ಮೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿದ್ಯಾರ್ಥಿನಿ ಮೇಲೆ ಚೈನ್ ಸಾ ದಾಳಿ ಪ್ರಕರಣ: ಆರೋಪಿ ಹೇಮಂತ್ ಗೆ ಪೊಲೀಸರ ಗುಂಡೇಟು, ಪರಿಸ್ಥಿತಿ ಗಂಭೀರ!

'ಸುಮ್ನಿದ್ರೆ 5 ನಿಮಿಷ, ಇಲ್ಲಾಂದ್ರೆ 1 ಗಂಟೆ': ಕಾರ್ಯಕರ್ತರಿಗೆ ಮಲ್ಲಿಕಾರ್ಜುನ ಖರ್ಗೆ ವಾರ್ನಿಂಗ್! Video

ಪಂಚಕುಲ ಶಾಲೆ ದಾಳಿ: 'ದೇವರ ದಯೆ, ಪ್ರಾಣಾಪಾಯದಿಂದ ಬಾಲಕಿ ಪಾರು'; ಆರೋಪಿ ಬಾಲಕ ವೀಕ್ಷಣಾ ಗೃಹಕ್ಕೆ; ಶಿಕ್ಷಕರ ಅಮಾನತು!

2024 ರ ಚುನಾವಣೆ ಅಕ್ರಮ; ಜ್ಞಾನೇಶ್ ಕುಮಾರ್ ಜೈಲಿಗೆ ಹೋಗುತ್ತಾರೆ, ನಾನು ಹೇಳಿದ್ದೆಲ್ಲಾ ಯಾವಾಗಲೂ ನಿಜವಾಗುತ್ತದೆ-ರಾಹುಲ್ ಗಾಂಧಿ

ನಟ ದೇವರಾಜ್ ಪುತ್ರನ ಅದ್ಧೂರಿ ಮದುವೆ ಸಮಾರಂಭ: ನಮಿತಾಳನ್ನು ವರಿಸಿದ ನಟ ಪ್ರಣಮ್ ದೇವರಾಜ್!