ರಾಪ್ತಾಡು ಶಾಲೆ ದಾಳಿ ಆರೋಪಿ ಕಾಲಿಗೆ ಗುಂಡು 
ದೇಶ

ವಿದ್ಯಾರ್ಥಿನಿ ಮೇಲೆ ಚೈನ್ ಸಾ ದಾಳಿ ಪ್ರಕರಣ: ಆರೋಪಿ ಹೇಮಂತ್ ಗೆ ಪೊಲೀಸರ ಗುಂಡೇಟು, ಪರಿಸ್ಥಿತಿ ಗಂಭೀರ!

ಭಾನುವಾರ ರಾತ್ರಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನಂತಪುರ: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಪ್ತಾಡು ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ 15 ವರ್ಷದ ಹತ್ತನೇ ತರಗತಿ ವಿದ್ಯಾರ್ಥಿನಿ ಮೇಲೆ ಚೈನ್ಸಾ ಯಂತ್ರದಿಂದ ದಾಳಿ ನಡೆಸಿದ್ದ 21 ವರ್ಷದ ಆರೋಪಿ ಹೇಮಂತ್ ಅಲಿಯಾಸ್ ದಮ್ಮು ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

ಭಾನುವಾರ ರಾತ್ರಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಹೇಮಂತ್‌ನನ್ನು ಭಾನುವಾರ ಸಂಜೆ ಜಿಲ್ಲೆಯ ಆತ್ಮಕೂರು ಅರಣ್ಯ ಪ್ರದೇಶದಲ್ಲಿ ವಿಶೇಷ ಪೊಲೀಸ್ ತಂಡ ಬಂಧಿಸಿತ್ತು.

ಬಳಿಕ ಕೃತ್ಯ ನಡೆದ ಸ್ಥಳದ ಮಹಜರು ಹಾಗೂ ಮರುಸೃಷ್ಟಿಗಾಗಿ ಆತನನ್ನು ರಾಪ್ತಾಡುಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ, ತನ್ನನ್ನು ಕರೆದೊಯ್ಯುತ್ತಿದ್ದ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ ಎಂದು ಅನಂತಪುರ ಪೊಲೀಸ್ ಕೇಂದ್ರ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರು ಸುತ್ತು ಗುಂಡು, ಆರೋಪಿ ಪರಿಸ್ಥಿತಿ ಗಂಭೀರ

ಆರೋಪಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಪ್ರಯತ್ನಿಸಿದಾಗ ಆತ ಕಲ್ಲು ತೂರಾಟ ನಡೆಸಿದ್ದಾನೆ. ಈ ವೇಳೆ ಹಲವು ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ ಎಂದು ಅಧಿಕಾರಿ ಹೇಳಿದ್ದಾರೆ. ಆರೋಪಿ ತಪ್ಪಿಸಿಕೊಳ್ಳುವುದನ್ನು ತಡೆಯಲು ಮತ್ತು ಆತನನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಆತ್ಮರಕ್ಷಣೆಗಾಗಿ ಗುಂಡಿನ ದಾಳಿ ನಡೆಸಿದ್ದಾರೆ. ಒಟ್ಟು ಆರು ಸುತ್ತು ಗುಂಡು ಹಾರಿಸಲಾಗಿದ್ದು, ಹೇಮಂತ್ ಗಂಭೀರವಾಗಿ ಗಾಯಗೊಂಡಿದ್ದಾನೆ.

ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆತನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರೆಪ್ರಜ್ಞಾವಸ್ಥೆಯಲ್ಲಿದ್ದ ಹೇಮಂತ್‌ನನ್ನು ಪೊಲೀಸರು ಆಸ್ಪತ್ರೆಗೆ ಹೊತ್ತೊಯ್ಯುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಬಾಲಕಿಯ ಸ್ಥಿತಿ ಚಿಂತಾಜನಕ; ಮುಂದಿನ 48 ಗಂಟೆ ನಿರ್ಣಾಯಕ

ಇತ್ತ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿನಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಯ ಆರೋಗ್ಯ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ ಎಂದು ಆಂಧ್ರಪ್ರದೇಶದ ಶಿಕ್ಷಣ ಮತ್ತು ಐಟಿ ಸಚಿವ ನಾರಾ ಲೋಕೇಶ್ ತಿಳಿಸಿದ್ದಾರೆ.

ಸಚಿವ ಲೋಕೇಶ್ ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಕುಟುಂಬಸ್ಥರನ್ನು ಭೇಟಿಯಾಗಿದ್ದಾರೆ. ವೈದ್ಯರೊಂದಿಗೆ ಮಾತುಕತೆ ನಡೆಸಿ ಬಾಲಕಿಯ ಆರೋಗ್ಯ ಸ್ಥಿತಿ ಹಾಗೂ ನೀಡಲಾಗುತ್ತಿರುವ ಚಿಕಿತ್ಸೆಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. "ಮುಂದಿನ 48 ಗಂಟೆಗಳು ಅತ್ಯಂತ ನಿರ್ಣಾಯಕವಾಗಿವೆ. ಬಾಲಕಿ ಶೀಘ್ರ ಗುಣಮುಖಳಾಗಲಿ ಎಂದು ರಾಜ್ಯದ ಜನರು ಪ್ರಾರ್ಥಿಸಬೇಕು" ಎಂದು ಸಚಿವರು ಮನವಿ ಮಾಡಿದ್ದಾರೆ.

12 ಗಂಟೆಗಳ ಶಸ್ತ್ರಚಿಕಿತ್ಸೆ; ಐಸಿಯುನಲ್ಲಿ ಚಿಕಿತ್ಸೆ

ಶನಿವಾರ ಬೆಳಗ್ಗೆ ಸುಮಾರು 10.30ರ ವೇಳೆಗೆ ಆರೋಪಿ ಹೇಮಂತ್ ಚೈನ್ಸಾ ಯಂತ್ರದೊಂದಿಗೆ ಶಾಲೆಯ ಆವರಣ ಪ್ರವೇಶಿಸಿ ವಿದ್ಯಾರ್ಥಿನಿ ಮೇಲೆ ದಾಳಿ ನಡೆಸಿದ್ದ. ಈ ವೇಳೆ ಮಧ್ಯಪ್ರವೇಶಿಸಲು ಯತ್ನಿಸಿದ ಮತ್ತೊಬ್ಬ ವಿದ್ಯಾರ್ಥಿನಿಯೂ ಗಾಯಗೊಂಡಿದ್ದಳು. ಗಂಭೀರವಾಗಿ ಗಾಯಗೊಂಡಿದ್ದ ಮುಖ್ಯ ಸಂತ್ರಸ್ತೆಯನ್ನು ಆರಂಭದಲ್ಲಿ ಅನಂತಪುರ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಸ್ಥಿತಿ ಸ್ಥಿರಗೊಳಿಸಲು ವೈದ್ಯರು ಸುಮಾರು ಎಂಟು ಗಂಟೆಗಳ ಕಾಲ ಚಿಕಿತ್ಸೆ ನೀಡಿದ್ದರು.

ಬಾಲಕಿಯ ಬಲಗೈ ಭುಜದ ಸಮೀಪ ಆಳವಾದ ಗಾಯವಾಗಿದ್ದು, ಮೂಳೆ ಸಂಧಿ ಕಾಣಿಸುವಷ್ಟು ಗಂಭೀರವಾಗಿತ್ತು. ಮುಖಕ್ಕೂ ತೀವ್ರ ಗಾಯಗಳಾಗಿದ್ದವು. ಆಕೆಗೆ ಹಲವು ಶಸ್ತ್ರಚಿಕಿತ್ಸೆಗಳ ಅಗತ್ಯವಿತ್ತು ಎಂದು ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಾಲಕಿಯನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಸುಮಾರು 12 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಆಕೆಯನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ಸ್ಥಳಾಂತರಿಸಲಾಗಿದೆ ಎಂದು ಸಚಿವ ಲೋಕೇಶ್ ಹೇಳಿದ್ದಾರೆ.

ಕುಟುಂಬಕ್ಕೆ ಸರ್ಕಾರದ ನೆರವಿನ ಭರವಸೆ

ಬಾಲಕಿಯ ಕುಟುಂಬಕ್ಕೆ ಸರ್ಕಾರ ಸಂಪೂರ್ಣ ನೆರವು ನೀಡಲಿದೆ ಎಂದು ಸಚಿವ ಲೋಕೇಶ್ ಭರವಸೆ ನೀಡಿದ್ದಾರೆ. ಈ ಘಟನೆ ಅತ್ಯಂತ ದುರದೃಷ್ಟಕರವಾಗಿದ್ದು, ಇದನ್ನು ರಾಜಕೀಯಗೊಳಿಸಬಾರದು ಎಂದು ಅವರು ಹೇಳಿದ್ದಾರೆ. ಬಾಲಕಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸುವುದು, ಮುಂದಿನ ಚಿಕಿತ್ಸೆಗೆ ನೆರವಾಗುವುದು ಹಾಗೂ ಆಕೆ ಸಹಜ ಜೀವನಕ್ಕೆ ಮರಳಲು ಅಗತ್ಯವಾದ ಪುನರ್ವಸತಿ ಕಲ್ಪಿಸುವುದು ಸರ್ಕಾರದ ಸಾಮೂಹಿಕ ಜವಾಬ್ದಾರಿಯಾಗಿದೆ. ವೈಯಕ್ತಿಕವಾಗಿಯೂ ಇದು ತಮ್ಮ ಜವಾಬ್ದಾರಿ ಎಂದು ಲೋಕೇಶ್ ತಿಳಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಶಾಲೆಗಳಲ್ಲಿ ಈಗಿರುವ ಸುರಕ್ಷತಾ ಕ್ರಮಗಳು ಮತ್ತು ನಿಯಮಾವಳಿಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದೂ ಅವರು ಹೇಳಿದ್ದಾರೆ.

ಮಹಿಳೆಯರಿಗೆ ಕಿರುಕುಳ ನೀಡಿದರೆ ಕಠಿಣ ಕ್ರಮ

ಇದೇ ವೇಳೆ ಮಹಿಳೆಯರ ವಿರುದ್ಧ ಅಸಭ್ಯವಾಗಿ ವರ್ತಿಸುವುದು, ಕಿರುಕುಳ ನೀಡುವುದು ಅಥವಾ ಅನುಚಿತ ಕಾಮೆಂಟ್‌ಗಳನ್ನು ಮಾಡುವುದು ಸಹಿಸುವುದಿಲ್ಲ ಎಂದು ಸಚಿವ ಲೋಕೇಶ್ ಎಚ್ಚರಿಕೆ ನೀಡಿದ್ದಾರೆ. ಆಂಧ್ರಪ್ರದೇಶದಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ದಾಳಿಯಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ. ತಪ್ಪಿತಸ್ಥರೆಲ್ಲರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಸುಮ್ನಿದ್ರೆ 5 ನಿಮಿಷ, ಇಲ್ಲಾಂದ್ರೆ 1 ಗಂಟೆ': ಕಾರ್ಯಕರ್ತರಿಗೆ ಮಲ್ಲಿಕಾರ್ಜುನ ಖರ್ಗೆ ವಾರ್ನಿಂಗ್! Video

Arnab ಬಳಿಕ ಮತ್ತೊಂದು ಇರುಸು 'ಮುರಸು': ನವೆಂಬರ್ 3ರಂದು ಆಂಧ್ರ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ!

ಪಂಚಕುಲ ಶಾಲೆ ದಾಳಿ: 'ದೇವರ ದಯೆ, ಪ್ರಾಣಾಪಾಯದಿಂದ ಬಾಲಕಿ ಪಾರು'; ಆರೋಪಿ ಬಾಲಕ ವೀಕ್ಷಣಾ ಗೃಹಕ್ಕೆ; ಶಿಕ್ಷಕರ ಅಮಾನತು!

2024 ರ ಚುನಾವಣೆ ಅಕ್ರಮ; ಜ್ಞಾನೇಶ್ ಕುಮಾರ್ ಜೈಲಿಗೆ ಹೋಗುತ್ತಾರೆ, ನಾನು ಹೇಳಿದ್ದೆಲ್ಲಾ ಯಾವಾಗಲೂ ನಿಜವಾಗುತ್ತದೆ-ರಾಹುಲ್ ಗಾಂಧಿ

ನಟ ದೇವರಾಜ್ ಪುತ್ರನ ಅದ್ಧೂರಿ ಮದುವೆ ಸಮಾರಂಭ: ನಮಿತಾಳನ್ನು ವರಿಸಿದ ನಟ ಪ್ರಣಮ್ ದೇವರಾಜ್!