ಅಮರಾವತಿ: ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ‘ಮುರಸು’ ಚಂಡಮಾರುತ ಮತ್ತಷ್ಟು ತೀವ್ರಗೊಳ್ಳುತ್ತಿದ್ದು, ನವೆಂಬರ್ 3ರಂದು ಆಂಧ್ರಪ್ರದೇಶದ ದಕ್ಷಿಣ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ನವೆಂಬರ್ 2ರ ವೇಳೆಗೆ ಇದು ತೀವ್ರ ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದ್ದು, ಕರಾವಳಿ ದಾಟುವ ಸಂದರ್ಭದಲ್ಲಿ ಗಂಟೆಗೆ 100ರಿಂದ 110 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಗಾಳಿಯ ವೇಗ ಕೆಲವೊಮ್ಮೆ ಗಂಟೆಗೆ 120 ಕಿ.ಮೀ ತಲುಪಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಭಾನುವಾರ ಮಧ್ಯಾಹ್ನ 2.30ರವರೆಗಿನ ಆರು ಗಂಟೆಗಳ ಅವಧಿಯಲ್ಲಿ ಚಂಡಮಾರುತವು ಗಂಟೆಗೆ 27 ಕಿ.ಮೀ ವೇಗದಲ್ಲಿ ಪಶ್ಚಿಮ-ವಾಯವ್ಯ ದಿಕ್ಕಿನತ್ತ ಚಲಿಸಿದೆ. ನವೆಂಬರ್ 1ರ ಮಧ್ಯಾಹ್ನ 2.30ರ ವೇಳೆಗೆ ನೈಋತ್ಯ ಮತ್ತು ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯ ಭಾಗದಲ್ಲಿ, ಉತ್ತರ ಅಕ್ಷಾಂಶ 12.4 ಡಿಗ್ರಿ ಮತ್ತು ಪೂರ್ವ ರೇಖಾಂಶ 84.6 ಡಿಗ್ರಿಯಲ್ಲಿ ಕೇಂದ್ರಿತವಾಗಿತ್ತು.
ಚೆನ್ನೈನಿಂದ ಸುಮಾರು 480 ಕಿ.ಮೀ, ನೆಲ್ಲೂರಿನಿಂದ 550 ಕಿ.ಮೀ, ಮಚಲಿಪಟ್ಟಣಂನಿಂದ 560 ಕಿ.ಮೀ, ಒಂಗೋಲ್‌ನಿಂದ 600 ಕಿ.ಮೀ ಹಾಗೂ ವಿಶಾಖಪಟ್ಟಣಂನಿಂದ 610 ಕಿ.ಮೀ ದೂರದಲ್ಲಿ ಚಂಡಮಾರುತವಿದೆ ಎಂದು ಐಎಂಡಿ ತಿಳಿಸಿದೆ.
ಒಡಿಶಾದ ದಕ್ಷಿಣ ಭಾಗದಲ್ಲಿ ಹೈ ಅಲರ್ಟ್
ಇತ್ತ ‘ಮುರಸು’ ಚಂಡಮಾರುತದ ಪರಿಣಾಮವಾಗಿ ಒಡಿಶಾದ ದಕ್ಷಿಣ ಭಾಗದಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ತಗ್ಗು ಪ್ರದೇಶಗಳು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸರ್ಕಾರ ಆದೇಶಿಸಿದೆ ಎಂದು ವಿಪತ್ತು ನಿರ್ವಹಣಾ ಸಚಿವ ಸುರೇಶ್ ಪೂಜಾರಿ ತಿಳಿಸಿದ್ದಾರೆ. ಭುವನೇಶ್ವರ ಹವಾಮಾನ ಕೇಂದ್ರದ ನಿರ್ದೇಶಕಿ ಮನೋರಮಾ ಮೊಹಾಂತಿ ಅವರ ಪ್ರಕಾರ, ನವೆಂಬರ್ 2ರಿಂದ ಒಡಿಶಾದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ನವೆಂಬರ್ 3 ಮತ್ತು 4ರಂದು ಮಳೆಯ ತೀವ್ರತೆ ಹೆಚ್ಚಾಗಲಿದೆ.
32,500 ಕ್ಯೂಸೆಕ್ ಒಳಹರಿವಿನ ನಿರೀಕ್ಷೆ
ಭಾರೀ ಮಳೆಯ ಹಿನ್ನೆಲೆಯಲ್ಲಿ ನವೆಂಬರ್ 3ರಂದು ಬುಡಮೇರು ಪ್ರದೇಶಕ್ಕೆ ಸುಮಾರು 32,500 ಕ್ಯೂಸೆಕ್ ನೀರು ಹರಿದುಬರುವ ನಿರೀಕ್ಷೆಯಿದೆ. ಎರ್ರಕಲ್ವ, ಗೊನೆಲವಾಗು, ಜಲ್ಲೇರು ಮತ್ತು ಪಂಪಾ ಸೇರಿದಂತೆ ಹಲವು ಜಲಾಶಯಗಳಿಗೂ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುವ ಸಾಧ್ಯತೆಯಿದೆ. ಚಂಡಮಾರುತದ ಬಲವಾದ ಗಾಳಿಯಿಂದ 12 ಜಿಲ್ಲೆಗಳಲ್ಲಿ ಸುಮಾರು 15,128 ವಿದ್ಯುತ್ ಕಂಬಗಳು ಹಾನಿಗೊಳಗಾಗಬಹುದು ಎಂದು ಪ್ರಾಥಮಿಕ ಅಂದಾಜು ಮಾಡಲಾಗಿದೆ.
ದೆಹಲಿ ಪ್ರವಾಸ ರದ್ದುಪಡಿಸಿದ ಚಂದ್ರಬಾಬು ನಾಯ್ಡು
ಚಂಡಮಾರುತದ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಸೋಮವಾರ ನಿಗದಿಯಾಗಿದ್ದ ತಮ್ಮ ದೆಹಲಿ ಪ್ರವಾಸವನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರದ್ದುಗೊಳಿಸಿದ್ದಾರೆ. ಇದೇ ವೇಳೆ, ಈ ಹಿಂದೆ ಆಂಧ್ರಪ್ರದೇಶಕ್ಕೆ ಅಪ್ಪಳಿಸಿದ್ದ ‘ಅರ್ನಬ್’ ಚಂಡಮಾರುತದಿಂದ ಉಂಟಾದ ಹಾನಿ ಮತ್ತು ಪರಿಹಾರ ಕಾರ್ಯಗಳ ಪ್ರಗತಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಹಾನಿಗೊಳಗಾದ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಪುನಃಸ್ಥಾಪನೆ ಕುರಿತು ವಿಚಾರಿಸಿದ್ದು, ಭಾನುವಾರ ರಾತ್ರಿಯೊಳಗೆ ಎಲ್ಲೆಡೆ ವಿದ್ಯುತ್ ಸಂಪರ್ಕ ಮರುಸ್ಥಾಪನೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳಿಗೆ ಸಿಎಂ ನಾಯ್ಡು ಸೂಚನೆ
ಚಂಡಮಾರುತ ಹಿನ್ನೆಲೆಯಲ್ಲಿ ಅಗತ್ಯ ಸಿಬ್ಬಂದಿ, ಯಂತ್ರೋಪಕರಣ ಹಾಗೂ ಪರಿಹಾರ ಸಾಮಗ್ರಿಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸಿಕೊಳ್ಳುವಂತೆ ನಾಯ್ಡು ಸೂಚಿಸಿದ್ದಾರೆ. ವಿದ್ಯುತ್ ಮೂಲಸೌಕರ್ಯಕ್ಕೆ ಹಾನಿಯಾದರೆ ವಿದ್ಯುತ್ ಪೂರೈಕೆಯನ್ನು ಎಷ್ಟು ಸಮಯದಲ್ಲಿ ಪುನಃಸ್ಥಾಪಿಸಬಹುದು ಎಂಬುದರ ಕುರಿತು ಸ್ಪಷ್ಟ ವೇಳಾಪಟ್ಟಿ ರೂಪಿಸಿ, ಸಾರ್ವಜನಿಕರಿಗೆ ಮಾಹಿತಿ ನೀಡುವಂತೆಯೂ ತಿಳಿಸಿದ್ದಾರೆ.
ಚಂಡಮಾರುತದ ಪರಿಸ್ಥಿತಿಯ ಕುರಿತು ಪ್ರತಿ ನಾಲ್ಕು ಗಂಟೆಗಳಿಗೊಮ್ಮೆ ಬುಲೆಟಿನ್ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಂಪರ್ಕ ಕಡಿತವಾಗದಂತೆ ದೂರಸಂಪರ್ಕ ಕಂಪನಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದೂ ಹೇಳಿದ್ದಾರೆ.
ಅಕ್ಟೋಬರ್‌ನಲ್ಲಿ ಅಪ್ಪಳಿಸಿದ್ದ ‘ಅರ್ನಬ್’ ಚಂಡಮಾರುತದ ವೇಳೆ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ಉಂಟಾಗಿದ್ದನ್ನು ಉಲ್ಲೇಖಿಸಿದ ನಾಯ್ಡು, ಈ ಬಾರಿ ಅಂತಹ ಸಮಸ್ಯೆ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದ್ದಾರೆ.
ಅಂದಹಾಗೆ ಅಕ್ಟೋಬರ್ 28ರಂದು ಆಂಧ್ರ ಕರಾವಳಿಗೆ ಅಪ್ಪಳಿಸಿದ್ದ ‘ಅರ್ನಬ್’ ಚಂಡಮಾರುತಕ್ಕೆ ಏಳು ಮಂದಿ ಬಲಿಯಾಗಿದ್ದರು. ಕೃಷಿ, ಮೂಲಸೌಕರ್ಯ ಹಾಗೂ ವಿದ್ಯುತ್ ಪೂರೈಕೆಗೆ ವ್ಯಾಪಕ ಹಾನಿಯಾಗಿತ್ತು. ಇನ್ನು ‘ಮುರಸು’ ಎಂದರೆ ಯುದ್ಧದ ನಗಾರಿ ಎಂದರ್ಥ. ಈ ಚಂಡಮಾರುತಕ್ಕೆ ಭಾರತವೇ ಈ ಹೆಸರನ್ನು ನೀಡಿದೆ.