ಬಾಬರಿ ಮಸೀದಿ ಮಾದರಿ ಕಟ್ಟಿಯೇ ತಿರುತ್ತೇವೆ ಎಂದ ಶಾಸಕ ಹುಮಾಯೂನ್ Online Desk
ದೇಶ

ಬಂಗಾಳದಲ್ಲಿ ಬಾಬರಿ ಕಿಚ್ಚು: ಬಾಬರಿ ಮಸೀದಿ ಮಾದರಿ ಕಟ್ಟಿಯೇ ತಿರುತ್ತೇವೆ ಎಂದ ಶಾಸಕ ಹುಮಾಯೂನ್, ತಾಕತ್ತಿದ್ದರೆ ತಡೆಯಿರಿ ಎಂದು ಬಿಜೆಪಿ ಸರ್ಕಾರಕ್ಕೆ ಸವಾಲು

ಬಂಗಾಳದಲ್ಲಿ ಬಾಬರಿ ಮಸೀದಿ ಮಾದರಿಯ ಮಸೀದಿ ನಿರ್ಮಾಣದ ವಿಚಾರ ಮತ್ತೊಮ್ಮೆ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ನೌಡಾ ಶಾಸಕ ಹುಮಾಯೂನ್ ಕಬೀರ್, ಮುರ್ಶಿದಾಬಾದ್ ಜಿಲ್ಲೆಯಲ್ಲಿ ಬಾಬರಿ ಮಸೀದಿ ಮಾದರಿಯ ಹೊಸ ಮಸೀದಿ ನಿರ್ಮಾಣದ ವಿಚಾರವಾಗಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಬಹಿರಂಗ ಸವಾಲು ಹಾಕಿದ್ದಾರೆ.

ಮುರ್ಷಿದಾಬಾದ್‌ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಬಾಬರಿ ಮಸೀದಿ ಮಾದರಿಯ ಮಸೀದಿ ನಿರ್ಮಾಣದ ವಿಚಾರ ಮತ್ತೊಮ್ಮೆ ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಆಮ್ ಜನತಾ ಉನ್ನಯನ್ ಪಾರ್ಟಿ ಅಧ್ಯಕ್ಷ ಹಾಗೂ ನೌಡಾ ವಿಧಾನಸಭಾ ಕ್ಷೇತ್ರದ ಶಾಸಕ ಹುಮಾಯೂನ್ ಕಬೀರ್, ಮುರ್ಶಿದಾಬಾದ್ ಜಿಲ್ಲೆಯಲ್ಲಿ 'ಬಾಬರಿ ಮಸೀದಿ' ಮಾದರಿಯ ಹೊಸ ಮಸೀದಿ ನಿರ್ಮಾಣದ ವಿಚಾರವಾಗಿ ರಾಜ್ಯ ಬಿಜೆಪಿ ಸರ್ಕಾರ ಮತ್ತು ಪೊಲೀಸರಿಗೆ ಬಹಿರಂಗ ಸವಾಲು ಹಾಕಿದ್ದು, ಇದೀಗ ರಾಜಕೀಯ ವಲಯದಲ್ಲಿ ತೀವ್ರ ವಿವಾದ ಸೃಷ್ಟಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಮುರ್ಷಿದಾಬಾದ್‌ನ ಬೆಲ್ಡಾಂಗಾದಲ್ಲಿ ಪ್ರಸ್ತಾವಿತ ಮಸೀದಿ ಆವರಣದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಹುಮಾಯೂನ್ ಕಬೀರ್, ಡಿಸೆಂಬರ್ 6ರಂದು ಮಸೀದಿ ನಿರ್ಮಾಣ ಯೋಜನೆಯ ಎರಡನೇ ಹಂತದ ನಿಮಿತ್ತ ಬರೋಬ್ಬರಿ 5 ಲಕ್ಷ ಜನರನ್ನು ಸೇರಿಸುವುದಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ, ಅಂದು ರೆಜಿನಗರದಿಂದ ಬಹರಂಪುರದವರೆಗಿನ ಸುಮಾರು 30 ಕಿಲೋಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು (NH-12) 4 ರಿಂದ 5 ಗಂಟೆಗಳ ಕಾಲ ಬಂದ್ ಮಾಡುವುದಾಗಿ ಎಚ್ಚರಿಸಿದ್ದಾರೆ. ಇದರೊಂದಿಗೆ, "ಡಿಸೆಂಬರ್ 6ರ ಕಾರ್ಯಕ್ರಮಕ್ಕೆ ತಡೆ ಒಡ್ಡಲು ಬಂದರೆ ಮುಸ್ಲಿಂ ಬಾಂಧವರು ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣವಾಗಿ ವಶಕ್ಕೆ ಪಡೆಯಲಿದ್ದಾರೆ. ಅದನ್ನು ತಡೆಯುವ ಶಕ್ತಿ ಇದ್ದರೆ ಇಲ್ಲಿನ ಪೊಲೀಸ್ ಆಡಳಿತ ತಡೆದು ತೋರಿಸಲಿ" ಎಂದು ಸವಾಲು ಹಾಕಿದ್ದಾರೆ.

87 ಕೋಟಿ ವೆಚ್ಚದಲ್ಲಿ ಬಾಬರಿ ಮಸೀದಿ

ಮುಂದುವರೆದು, ಅಯೋಧ್ಯೆಯಲ್ಲಿ 1992ರ ಡಿಸೆಂಬರ್ 6ರಂದು ಧ್ವಂಸಗೊಂಡ ಬಾಬರಿ ಮಸೀದಿಯ ನೆನಪಿನಲ್ಲಿ ಕೈಗೆತ್ತಿಕೊಂಡಿರುವ ಮೂರು ಅಂತಸ್ತಿನ ಬೃಹತ್ ಮಸೀದಿಯನ್ನು ಸುಮಾರು 87 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, 2028ರ ಡಿಸೆಂಬರ್ ವೇಳೆಗೆ ಇದು ಪೂರ್ಣಗೊಳ್ಳಲಿದೆ ಎಂದು ಕಬೀರ್ ತಿಳಿಸಿದ್ದಾರೆ. ಅದರಂತೆ, ಮಸೀದಿ ನಿರ್ಮಾಣದ ಹೆಸರಿನಲ್ಲಿ ಸಾರ್ವಜನಿಕ ಶಾಂತಿ ಕದಡುವ ಮತ್ತು ಹೆದ್ದಾರಿ ತಡೆಯುವ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಮುರ್ಶಿದಾಬಾದ್‌ನ ಬೆಲ್ಡಂಗಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸ್ ಆಡಳಿತವು ಹದ್ದಿನ ಕಣ್ಣಿಟ್ಟಿದ್ದು, ಭದ್ರತೆಯನ್ನು ತೀವ್ರಗೊಳಿಸಿದೆ.

ಬಿಜೆಪಿ ಕಿಡಿ

ಹುಮಾಯೂನ್ ಕಬೀರ್ ಅವರ ಈ ಧಾರ್ಮಿಕ ಧ್ರುವೀಕರಣ ಮತ್ತು ಬೆದರಿಕೆಯ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕೇಂದ್ರ ಸಚಿವ ಸುಕಾಂತ ಮುಜುಂದಾರ್ ಪ್ರತಿಕ್ರಿಯಿಸಿ, "ರಾಷ್ಟ್ರೀಯ ಹೆದ್ದಾರಿ ತಡೆಯುವುದು ಜಾಮೀನು ರಹಿತ ಅಪರಾಧವಾಗಿದೆ. ಶಾಸಕರು ಇಂತಹ ಕಾನೂನುಬಾಹಿರ ಕೃತ್ಯಗಳಿಂದ ದೂರವಿರಬೇಕು" ಎಂದು ಎಚ್ಚರಿಸಿದ್ದಾರೆ. ಸ್ಥಳೀಯ ಬಿಜೆಪಿ ಶಾಸಕರು, ಜನರು ಇಂತಹ ಹೇಳಿಕೆಗಳನ್ನು ತಿರಸ್ಕರಿಸಿದ್ದಾರೆ, ಬಾಬರ್ ಹೆಸರಿನಲ್ಲಿ ಮಸೀದಿ ನಿರ್ಮಿಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾಂಗ್ರೆಸ್ ನಾಯಕರನ್ನು ತುಂಡು ತುಂಡಾಗಿ ಕತ್ತರಿಸಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ': ನಾಲಿಗೆ ಹರಿಬಿಟ್ಟ ನಾರಾಯಣಸ್ವಾಮಿ!

ದೇಶಾದ್ಯಂತ ಅರಾಜಕತೆ ಸೃಷ್ಟಿಸಲು ರಾಹುಲ್ ಗಾಂಧಿ ಯತ್ನ: ಬಿಜೆಪಿ ಪ್ರತಿಭಟನೆಯಲ್ಲಿ ವಿಜಯೇಂದ್ರ ವಾಗ್ದಾಳಿ

'ಅಂಕಲ್ ಜೊತೆ ರೊಮ್ಯಾನ್ಸ್, ಯಾವಾಗ ಸಾಯುತ್ತೇನೋ ಅಂತ ಕಾಯ್ತಿದ್ದೆ': ತೆಲುಗು ನಟನ ಸಿನಿಮಾ ಕುರಿತು ನಟಿ Radhika Apte ಅಸಮಾಧಾನ! Video

'ಹೆಸರಿಗೆ ಮಾತ್ರ ನಿರ್ಬಂಧ, ಅಂಗಡಿಗಳಲ್ಲಿ ಎಲ್ಲ ರೀತಿಯ ಪಟಾಕಿಗಳೂ ಸಿಗುತ್ತಿವೆ’: ಸುಪ್ರೀಂ ಕೋರ್ಟ್ ಕಳವಳ, ಕೇಂದ್ರಕ್ಕೆ ಖಡಕ್ ಸೂಚನೆ

'ಯಾವಾಗಲೂ PUBG ಆಡುತ್ತಿದ್ದ': ಪಂಚಕುಲ ಶಾಲೆ ದಾಳಿ ಆರೋಪಿ ಬಾಲಕನ ಚಟದ ಕುರಿತು ಅಂಕಲ್ ರೋಚಕ ಮಾಹಿತಿ!