ನಟಿ ನಜ್ರಿಯಾ ಬಟ್ಟೆ ಬಗ್ಗೆ ನೀತಿ ಪಾಠ ಮಾಡಿದ್ದ ಪ್ರವಚನಕಾರ ಪೋಕ್ಸೋ ಕೇಸ್‌ನಲ್ಲಿ ಅರೆಸ್ಟ್ Online Desk
ದೇಶ

ಆಧ್ಯಾತ್ಮಿಕ ಚಿಕಿತ್ಸೆ ಹೆಸರಲ್ಲಿ ಅಪ್ರಾಪ್ತೆ ಮೇಲೆ ದೌರ್ಜನ್ಯ: ನಟಿ ನಜ್ರಿಯಾ ಬಟ್ಟೆ ಬಗ್ಗೆ ನೀತಿ ಪಾಠ ಮಾಡಿದ್ದ ಪ್ರವಚನಕಾರ ಪೋಕ್ಸೋ ಕೇಸ್‌ನಲ್ಲಿ ಅರೆಸ್ಟ್

ದುಬೈನಲ್ಲಿ ನಡೆದ ಸಿನಿಮಾ ಪ್ರಚಾರದ ವೇಳೆ ಆಫ್-ಶೋಲ್ಡರ್ ಉಡುಪು ಧರಿಸಿದ್ದಕ್ಕಾಗಿ ನಟಿ ನಜ್ರಿಯಾ ನಜೀಮ್ ವಿರುದ್ಧ ನೀತಿ ಪಾಠ ಮಾಡಿದ್ದ ಕೇರಳಂನ ಇಸ್ಲಾಮಿಕ್ ಪ್ರವಚನಕಾರ ಮುಹಮ್ಮದ್ ನಿಯಾಸ್ ಜೌಹರಿ ಎಂಬಾತನನ್ನು ಪೋಕ್ಸೊ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಕೊಲ್ಲಂ (ಕೇರಳಂ): ಸೋಷಿಯಲ್ ಮೀಡಿಯಾದಲ್ಲಿ ಕುಳಿತು ಪರರ ಚಾರಿತ್ರ್ಯವನ್ನು ಅಳೆಯುತ್ತಾ, ಧರ್ಮ ಮತ್ತು ಸಭ್ಯತೆಯ ದೊಡ್ಡ ದೊಡ್ಡ ಪಾಠಗಳನ್ನು ಬೋಧಿಸುವವರ ನಿಜವಾದ ಮುಖ ಹೇಗಿರುತ್ತದೆ ಎಂಬುದಕ್ಕೆ ಕೇರಳಂನಲ್ಲಿ ನಡೆದಿರುವ ಈ ಘಟನೆ ದೊಡ್ಡ ಸಾಕ್ಷಿಯಾಗಿದೆ. ದುಬೈನಲ್ಲಿ ನಟಿ ನಜ್ರಿಯಾ ನಜೀಮ್ ಧರಿಸಿದ್ದ ಉಡುಪನ್ನು ತೀವ್ರವಾಗಿ ಖಂಡಿಸಿ, ಸಾರ್ವಜನಿಕವಾಗಿ ನೀತಿ ಬೋಧನೆ ಮಾಡಿದ್ದ ಜನಪ್ರಿಯ ಇಸ್ಲಾಮಿಕ್ ಉಪದೇಶಕನೊಬ್ಬ ಈಗ ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯದ (POCSO) ಆರೋಪದಡಿ ಜೈಲು ಪಾಲಾಗಿದ್ದಾನೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಪ್ರಕರಣ?

ಕೇರಳಂನ ಕೊಲ್ಲಂ ಜಿಲ್ಲೆಯ ಓಚಿರಾ ಎಂಬಲ್ಲಿರುವ ಹಬೀಬಿಯಾ ಇಸ್ಲಾಮಿಕ್ ಅಕಾಡೆಮಿ ಸಂಸ್ಥೆಯ ನಿರ್ದೇಶಕನಾಗಿರುವ 34 ವರ್ಷದ ಇಸ್ಲಾಮಿಕ್ ಉಪದೇಶಕ ಹಾಗೂ ಯೂಟ್ಯೂಬರ್ ಮುಹಮ್ಮದ್ ನಿಯಾಸ್ ಜೌಹರಿ (ಉಸ್ತಾದ್ ಮುಹಮ್ಮದ್ ನಿಯಾಸ್), 16 ವರ್ಷದ ಅಪ್ರಾಪ್ತ ಬಾಲಕಿಯ ಕುಟುಂಬಸ್ಥರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ. ಬಾಲಕಿಯ ಅಜ್ಜಿಯ ಅನಾರೋಗ್ಯಕ್ಕೆ ದುಷ್ಟಶಕ್ತಿಗಳ ಕಾಟವೇ ಕಾರಣ, ಅದನ್ನು ಪ್ರಾರ್ಥನೆ ಮತ್ತು ಧಾರ್ಮಿಕ ಶುದ್ಧೀಕರಣದ ಮೂಲಕ ಗುಣಪಡಿಸುವುದಾಗಿ ನಂಬಿಸಿದ್ದ. ಅದರಂತೆ, ಈ ಧಾರ್ಮಿಕ ವಿಧಿವಿಧಾನಗಳ ನೆಪದಲ್ಲಿ ಬಾಲಕಿ ಮತ್ತು ಆಕೆಯ ಅಜ್ಜಿಯನ್ನು ತನ್ನ ಇಸ್ಲಾಮಿಕ್ ಅಕಾಡೆಮಿಗೆ ಹಾಗೂ ಬಾಡಿಗೆ ಮನೆಗೆ ಕರೆಸಿಕೊಂಡಿದ್ದ. ಅಲ್ಲಿ ಬಾಲಕಿಗೆ ಬೆದರಿಕೆ ಹಾಕಿ, ಹಲವು ತಿಂಗಳುಗಳ ಕಾಲ ಆಕೆಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಹಾಗಾದ್ರೆ, ವಿಷಯ ಬೆಳಕಿಗೆ ಬಂದಿದ್ದು ಹೇಗೆ?

ಈ ದೌರ್ಜನ್ಯದಿಂದ ತೀವ್ರ ಮಾನಸಿಕ ಆಘಾತಕ್ಕೊಳಗಾಗಿದ್ದ ಬಾಲಕಿ ಇತ್ತೀಚೆಗೆ ತನ್ನ ಸ್ನೇಹಿತರ ಬಳಿ ವಿಷಯ ಹಂಚಿಕೊಂಡಿದ್ದಾಳೆ. ಸ್ನೇಹಿತರ ಮಾರ್ಗದರ್ಶನದ ಮೇರೆಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ವೈದ್ಯಕೀಯ ವರದಿ ಮತ್ತು ಮೊಬೈಲ್ ಚಾಟ್‌ಗಳ ಆಧಾರದ ಮೇಲೆ ಕೊಲ್ಲಂ ಪೊಲೀಸರು ಪೋಕ್ಸೋ ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಏತನ್ಮಧ್ಯೆ, ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಈತ ಧಾರ್ಮಿಕ ಸಂಸ್ಥೆಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಗಳ ಅನುಮಾನಾಸ್ಪದ ಆರ್ಥಿಕ ವಹಿವಾಟು ನಡೆಸಿರುವುದು ಪತ್ತೆಯಾಗಿದೆ. ಅಲ್ಲದೆ, ಈತನ ಯೂಟ್ಯೂಬ್ ಚಾನೆಲ್‌ನ ಆದಾಯ ಮತ್ತು ಬ್ಯಾಂಕ್ ಖಾತೆಗಳ ತನಿಖೆ ನಡೆಯುತ್ತಿದೆ.

ಇದಕ್ಕೂ ಮುನ್ನ ದುಬೈನಲ್ಲಿ ನಡೆದ ನಟಿ ನಜ್ರಿಯಾ ನಜೀಮ್ ನಟನೆಯ ಹೊಸ ತಮಿಳು ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಹಳದಿ ಬಣ್ಣದ ಆಫ್-ಶೋಲ್ಡರ್ ಉಡುಪು ಧರಿಸಿದ್ದರು. ಇದರ ವಿಡಿಯೋ ವೈರಲ್ ಆದಾಗ, ಲಕ್ಷಾಂತರ ಸಬ್‌ಸ್ಕ್ರೈಬರ್ಸ್ ಹೊಂದಿರುವ ಈ ಪ್ರವಚನಕಾರ ನಿಯಾಸ್, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ನಜ್ರಿಯಾ ಅವರ ವಸ್ತ್ರಧಾರಣೆಯನ್ನು ತೀವ್ರವಾಗಿ ಟೀಕಿಸಿದ್ದ. "ಅವರೊಬ್ಬ ಮುಸ್ಲಿಂ ನಟಿಯಾಗಿದ್ದರೂ ಇಸ್ಲಾಮಿಕ್ ಕಾನೂನು ಪಾಲಿಸುತ್ತಿಲ್ಲ, ಅವರು ಧರಿಸಿರುವ ಬಟ್ಟೆ ಇಸ್ಲಾಮಿಕ್ ವಿರೋಧಿ" ಎಂದು ನೀತಿ ಪಾಠ ಮಾಡಿದ್ದ. ಆದರೆ, ಇದೀಗ ನಟಿಯ ಬಟ್ಟೆ ಬಗ್ಗೆ ಮಾತನಾಡಿದ್ದ ವ್ಯಕ್ತಿಯೇ ಆಧ್ಯಾತ್ಮಿಕ ಚಿಕಿತ್ಸೆ ಹೆಸರಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿ ಪೋಕ್ಸೊ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈತ ಇನ್ನೂ ಹಲವು ಮಹಿಳೆಯರು ಮತ್ತು ಹುಡುಗಿಯರಿಗೆ ಇದೇ ರೀತಿ ವಂಚಿಸಿರುವ ಶಂಕೆ ಇದ್ದು, ಪೊಲೀಸರು ಆತನ ಬ್ಯಾಂಕ್ ಖಾತೆ ಹಾಗೂ ಮೊಬೈಲ್ ಸಾಧನಗಳನ್ನು ವಶಕ್ಕೆ ಪಡೆದು ತನಿಖೆ ತೀವ್ರಗೊಳಿಸಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೊದಲು ಮೋದಿ, BJPಗೆ ಡೀಸೆಲ್ ದರ ಇಳಿಸೋಕೆ ಹೇಳಿ': ಬಸ್ ಪ್ರಯಾಣ ದರ ಹೆಚ್ಚಳ ಸಮರ್ಥಿಸಿಕೊಂಡ ಸಿಎಂ ಡಿಕೆ ಶಿವಕುಮಾರ್!

ದೀಪಾವಳಿಗೂ ಮುನ್ನ ಅಗ್ನಿವೀರರಿಗೆ ಕೇಂದ್ರದಿಂದ ಗುಡ್ ನ್ಯೂಸ್: 18,000 ಅಗ್ನಿವೀರರ ಸೇವಾ ಅವಧಿ 2 ವರ್ಷ ವಿಸ್ತರಣೆ!

ನಿಮಗೆ ಭಾರತೀಯ ಸಂಸ್ಕೃತಿ ಬಗ್ಗೆ ಅರಿವಿಲ್ಲ; ವ್ಯಾಲೆಂಟೈನ್ಸ್ ಡೇ ಗೆ ಗುಲಾಬಿ ಹೂವು ಕೊಡ್ತಾರೆ ದೀಪಾವಳಿಗಲ್ಲ: ರಾಹುಲ್ ವಿರುದ್ಧ ಬಿಸ್ವಾ ಶರ್ಮಾ ವ್ಯಂಗ್ಯ!

US Midterm Polls: ಅಮೆರಿಕದ ಮೊದಲ ಮುಸ್ಲಿಂ ಸೆನೆಟರ್ ಆಗಿ ಇತಿಹಾಸ ಸೃಷ್ಟಿಸಿದ ಅಬ್ದುಲ್‌; ಕರ್ನಾಟಕದೊಂದಿಗೂ ನಂಟು!

ಗಾಳಿಗೆ ವಿರುದ್ಧವಾಗಿ ಪುರಿ ಜಗನ್ನಾಥ್ ದೇಗುಲ ಧ್ವಜ ಹಾರಾಟ: ಪವಾಡ ಅಲ್ಲ, ವಿಜ್ಞಾನ ಎಂದ RJ ಪೃಥ್ವಿ, ನೆಟ್ಟಿಗರ ತರಾಟೆ-video