ಹೈದರಾಬಾದ್: ಮೀನುಗಾರರನ್ನು ರಕ್ಷಿಸುವ ಕಾರ್ಯಾಚರಣೆ ವೇಳೆ ದೋಣಿಯೊಂದು ಮಗುಚಿಬಿದ್ದ ಪರಿಣಾಮ 10 ಮಂದಿ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಸಿಬ್ಬಂದಿ ನಾಪತ್ತೆಯಾಗಿರುವ ಘಟನೆ ತೆಲಂಗಾಣದ (Telangana) ಖಮ್ಮಂ ಜಿಲ್ಲೆಯಲ್ಲಿ ನಡೆದಿದೆ. ಬುಧವಾರ ಸಂಜೆ ಸಾತುಪಲ್ಲಿ ಮಂಡಲದ ಬೇತುಪಲ್ಲಿ ಸರೋವರದಲ್ಲಿ ಈ ಅವಘಡ ಸಂಭವಿಸಿದೆ.
ಸರೋವರದಲ್ಲಿ ಸಿಲುಕಿದ್ದ ಮೀನುಗಾರರ ಗುಂಪನ್ನು ರಕ್ಷಿಸಲು ಎಸ್‌ಡಿಆರ್‌ಎಫ್ ಸಿಬ್ಬಂದಿ ಎರಡು ದೋಣಿಗಳಲ್ಲಿ ತೆರಳಿದ್ದರು. ಈ ವೇಳೆ ದೋಣಿಗಳು ಮಗುಚಿಬಿದ್ದಿದ್ದು, 10 ಸಿಬ್ಬಂದಿ ನಾಪತ್ತೆಯಾಗಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಖಮ್ಮಂ ಜಿಲ್ಲಾಧಿಕಾರಿ ದಿವಾಕರ ಟಿ.ಎಸ್. ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ನಾಪತ್ತೆಯಾದ ಸಿಬ್ಬಂದಿಗಾಗಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ.
ಈ ಘಟನೆ ಕುರಿತು ತೆಲಂಗಾಣ ಕಂದಾಯ ಸಚಿವ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಾಪತ್ತೆಯಾದ ಎಸ್‌ಡಿಆರ್‌ಎಫ್ ಸಿಬ್ಬಂದಿ ಇರುವ ಸಂಭವನೀಯ ಸ್ಥಳವನ್ನು ರಕ್ಷಣಾ ತಂಡಗಳು ಗುರುತಿಸಿವೆ ಎಂದು ತಿಳಿಸಿದ್ದಾರೆ. ಅವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತರಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.