ಆದಿ ಶಂಕರಾಚಾರ್ಯರ ತಾತ್ವಿಕ ಕೃತಿಯನ್ನು ಉಲ್ಲೇಖಿಸುವ ಶಾಸನ. 
ದೇಶ

ಹಂಪಾಪುರದಲ್ಲಿ ಆದಿ ಶಂಕರಾಚಾರ್ಯರ 9ನೇ ಶತಮಾನದ ಶಿಲ್ಪ ಪತ್ತೆ: ಇತಿಹಾಸದ ಹೊಸ ಅಧ್ಯಾಯಕ್ಕೆ ನಾಂದಿ, ಅದ್ವೈತ ಗುರುವಿನ ಹೆಜ್ಜೆಗುರುತುಗಳ ಹುಡುಕಾಟಕ್ಕೆ ASI ಸಜ್ಜು..!

ಈ ಮಹತ್ವದ ಸಂಶೋಧನೆಯ ಭಾಗವಾಗಿ ಕರ್ನಾಟಕದ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ಹಂಪಾಪುರ ಗ್ರಾಮದಲ್ಲಿ ಇತ್ತೀಚೆಗೆ (ಅಕ್ಟೋಬರ್ 2026) ಅಪರೂಪದ ಆವಿಷ್ಕಾರವೊಂದು ನಡೆದಿದೆ.

ಚೆನ್ನೈ: ಭಾರತದ ಸನಾತನ ಧರ್ಮ ಮತ್ತು ಅದ್ವೈತ ತತ್ವಶಾಸ್ತ್ರದ ಪ್ರವರ್ತಕರಾದ 8ನೇ ಶತಮಾನದ ಜಗದ್ಗುರು ಆದಿ ಶಂಕರಾಚಾರ್ಯರ ಹೆಜ್ಜೆಗುರುತು ಹಾಗೂ ಪ್ರಾದೇಶಿಕ ಪ್ರಭಾವವನ್ನು ಸಾಕ್ಷ್ಯಚಿತ್ರೀಕರಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಬೃಹತ್ ಶಾಸನಶಾಸ್ತ್ರ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ.

ಕೇಂದ್ರ ಶಿಕ್ಷಣ ಸಚಿವಾಲಯದ ವಿಶೇಷ ಸೂಚನೆಯ ಮೇರೆಗೆ ಆರಂಭವಾಗಿರುವ ಈ ಯೋಜನೆಯಡಿಯಲ್ಲಿ, ಎಎಸ್‌ಐ ತನ್ನಲ್ಲಿರುವ ಸುಮಾರು 84,000ಕ್ಕೂ ಅಧಿಕ ಹಳೆಯ ದಾಖಲಿತ ಶಾಸನಗಳನ್ನು ಜಾಲಾಡುತ್ತಿದೆ. ಈ ಮೂಲಕ ಶಂಕರಾಚಾರ್ಯರ ದಿಗ್ವಿಜಯದ ಪಥವನ್ನು ಡಿಜಿಟಲ್ ರೂಪದಲ್ಲಿ ನಕ್ಷೆ ಮಾಡಲು 'ಭಾರತ್‌ಶ್ರೀ' (BharatSHRI) ಪೋರ್ಟಲ್‌ನಲ್ಲಿ ಪ್ರತ್ಯೇಕ ಕೋಶವನ್ನು ಸಿದ್ಧಪಡಿಸಲಾಗುತ್ತಿದೆ.

ಈ ಮಹತ್ವದ ಸಂಶೋಧನೆಯ ಭಾಗವಾಗಿ ಕರ್ನಾಟಕದ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ಹಂಪಾಪುರ ಗ್ರಾಮದಲ್ಲಿ ಇತ್ತೀಚೆಗೆ (ಅಕ್ಟೋಬರ್ 2026) ಅಪರೂಪದ ಆವಿಷ್ಕಾರವೊಂದು ನಡೆದಿದೆ.

ಇಲ್ಲಿನ 8ನೇ ಶತಮಾನದ ಪ್ರಾಚೀನ ಇಟ್ಟಿಗೆ ರಚನೆಯೊಂದರಲ್ಲಿ ಸಿಕ್ಕ ಹಳೆಯ ಶಿಲ್ಪವನ್ನು ಎಎಸ್‌ಐನ ಐಕಾನೋಗ್ರಫಿ ತಂಡವು ಪರಿಶೀಲಿಸಿದ್ದು, ಅದು ಸ್ವತಃ ಆದಿ ಶಂಕರಾಚಾರ್ಯರದ್ದೇ ವಿಗ್ರಹ ಎಂದು ಅಧಿಕೃತವಾಗಿ ದೃಢೀಕರಿಸಿದೆ.

ಶಂಕರಾಚಾರ್ಯರ ಜೀವಿತಾವಧಿಗೆ ಅತ್ಯಂತ ಹತ್ತಿರದ ಕಾಲಘಟ್ಟಕ್ಕೆ ಸೇರಿದ ಪ್ರಪ್ರಥಮ ಭೌತಿಕ ಪುರಾವೆ ಇದಾಗಿದೆ ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಹಂಪಾಪುರ ಗ್ರಾಮದಲ್ಲಿ ಪತ್ತೆಯಾದ ಶಿಲ್ಪವು ಆದಿ ಶಂಕರಾಚಾರ್ಯರನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಎಎಸ್‌ಐನ ಶಿಲ್ಪಕಲಾ ತಜ್ಞರ ತಂಡ ದೃಢಪಡಿಸಿದೆ.

ಈ ಕುರಿತು ಎಎಸ್‌ಐನ ಶಾಸನಶಾಸ್ತ್ರ ವಿಭಾಗದ ನಿರ್ದೇಶಕ ಕೆ. ಮುನಿರತ್ನಂ ರೆಡ್ಡಿ ಅವರು TNIEಗೆ ಮಾಹಿತಿ ನೀಡಿದ್ದಾರೆ. ಈ ವಿಗ್ರಹವು ಒಂಬತ್ತನೇ ಶತಮಾನಕ್ಕೆ ಸೇರಿದ ಇಟ್ಟಿಗೆ ಕಟ್ಟಡದ ಒಳಭಾಗದಲ್ಲಿ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಆದಿ ಶಂಕರಾಚಾರ್ಯರಿಗೆ ಸಂಬಂಧಿಸಿದ ಶಾಸನಗಳನ್ನು ಗುರುತಿಸಿ, ಅವುಗಳನ್ನು ಸಂಗ್ರಹಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಎಎಸ್‌ಐನ ಶಾಸನಶಾಸ್ತ್ರ ವಿಭಾಗ ಕೈಗೆತ್ತಿಕೊಂಡಿದೆ. ಕೇಂದ್ರ ಶಿಕ್ಷಣ ಸಚಿವಾಲಯದ ಸೂಚನೆಯಂತೆ ಆರಂಭವಾಗಿರುವ ಈ ಯೋಜನೆ ಕೇವಲ ಎರಡು ವಾರಗಳ ಹಿಂದಷ್ಟೇ ಶುರುವಾಗಿದೆ.

ಶಂಕರಾಚಾರ್ಯರಿಗೆ ಸಂಬಂಧಿಸಿದ ಶಾಸನಗಳ ಸಮಗ್ರ ಸಂಗ್ರಹವನ್ನು ಸಿದ್ಧಪಡಿಸಿ, ಶೈಕ್ಷಣಿಕ ಸಂಶೋಧನೆ ಹಾಗೂ ಪಠ್ಯಕ್ರಮ ರೂಪಿಸಲು ನೆರವಾಗುವುದು ಇದರ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದುವರೆಗೆ ಆದಿ ಶಂಕರಾಚಾರ್ಯರಿಗೆ ನೇರವಾಗಿ ಸಂಬಂಧ ಕಲ್ಪಿಸಬಹುದಾದ ಶಾಸನಗಳು ಬಹಳ ಕಡಿಮೆ ಸಂಖ್ಯೆಯಲ್ಲಿವೆ. ಕ್ರಿ.ಶ. 500ರಿಂದ 515ರ ಅವಧಿಗೆ ಸೇರಿದ ಗುಜರಾತ್‌ನಲ್ಲಿ ಪತ್ತೆಯಾದ ತಾಮ್ರದ ಫಲಕದ ಶಾಸನವು ಅವರ ಕುರಿತಾದ ಅತ್ಯಂತ ಪ್ರಾಚೀನ ಉಲ್ಲೇಖಗಳಲ್ಲಿ ಒಂದಾಗಿರಬಹುದು. ಮತ್ತೊಂದು ಪ್ರಮುಖ ಉಲ್ಲೇಖವೆಂದರೆ ತಿರುಚಿರಾಪಳ್ಳಿ ಜಿಲ್ಲೆಯ ಚೋಳಮಾದೇವಿ ದೇವಸ್ಥಾನದಲ್ಲಿ ಪತ್ತೆಯಾದ 11ನೇ ಶತಮಾನದ ಶಾಸನ. ಇದರಲ್ಲಿ ಅವರ ತಾತ್ವಿಕ ಕೃತಿಯ ಬಗ್ಗೆ ಉಲ್ಲೇಖವಿದೆ.

ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರೆ ಆದಿ ಶಂಕರಾಚಾರ್ಯರ ಜೀವನ, ಪ್ರವಾಸಗಳು ಹಾಗೂ ಅವರ ತತ್ವಜ್ಞಾನ ಬೋಧನೆಗಳ ಪ್ರಸರಣದ ಕುರಿತು ಇನ್ನಷ್ಟು ಐತಿಹಾಸಿಕ ದಾಖಲೆಗಳು ಬೆಳಕಿಗೆ ಬರಬಹುದು” ಎಂದು ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಸಾಹಿತ್ಯ ವಿಭಾಗದ ಪ್ರಾಧ್ಯಾಪಕ ಜಿ. ಶಂಕರನಾರಾಯಣನ್ ತಿಳಿಸಿದ್ದಾರೆ.

ಎಎಸ್‌ಐನ ಶಾಸನಶಾಸ್ತ್ರ ವಿಭಾಗವು ಆದಿ ಶಂಕರಾಚಾರ್ಯರು ಭೇಟಿ ನೀಡಿದ್ದರು ಎಂದು ನಂಬಲಾದ 86ಕ್ಕೂ ಹೆಚ್ಚು ಸ್ಥಳಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಇದರಲ್ಲಿ ಕಾಂಚೀಪುರಂ, ಶ್ರೀಶೈಲಂ, ತಿರುಪತಿ, ಶೃಂಗೇರಿ, ಗೋಕರ್ಣ, ತಿರುವನಂತಪುರಂ ಸೇರಿದಂತೆ ವಾರಾಣಸಿ, ಬದರಿನಾಥ, ದ್ವಾರಕಾ ಮತ್ತು ಪುರಿ ಪ್ರಮುಖ ಸ್ಥಳಗಳಾಗಿವೆ.

ಈ ಸ್ಥಳಗಳಿಗೆ ಸಂಬಂಧಿಸಿದಂತೆ ತನ್ನ ಶಾಸನಗಳ ದತ್ತಾಂಶ ಸಂಗ್ರಹವನ್ನು ಪರಿಶೀಲಿಸಿ, ಶಂಕರಾಚಾರ್ಯರ ಉಲ್ಲೇಖಗಳಿರುವ ದಾಖಲೆಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಅವರ ಪ್ರವಾಸಗಳು, ತಾತ್ವಿಕ ಕೊಡುಗೆಗಳು ಹಾಗೂ ಪ್ರಭಾವಕ್ಕೆ ಸಂಬಂಧಿಸಿದ ಐತಿಹಾಸಿಕ ಪುರಾವೆಗಳನ್ನು ಒಂದೆಡೆ ಸಂಗ್ರಹಿಸುವುದು ಯೋಜನೆಯ ಗುರಿಯಾಗಿದೆ.

ಈ ಯೋಜನೆಯ ನೇತೃತ್ವ ವಹಿಸಿರುವ ಕೆ. ಮುನಿರತ್ನಂ ರೆಡ್ಡಿ ಮಾತನಾಡಿ, ಎಎಸ್‌ಐ ಬಳಿ 84 ಸಾವಿರಕ್ಕೂ ಹೆಚ್ಚು ಶಾಸನಗಳ ಸಂಗ್ರಹವಿದೆ ಎಂದು ತಿಳಿಸಿದ್ದಾರೆ.

ನಮ್ಮ ಬಳಿ ಲಭ್ಯವಿರುವ ಎಲ್ಲ ಶಾಸನಗಳನ್ನು ಪರಿಶೀಲಿಸಿ, ಶಂಕರಾಚಾರ್ಯರಿಗೆ ಸಂಬಂಧಿಸಿದ ಉಲ್ಲೇಖಗಳಿರುವ ಶಾಸನಗಳನ್ನು ಪ್ರತ್ಯೇಕಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಪ್ರಾಥಮಿಕ ಪಟ್ಟಿಯ ಪ್ರಕಾರ, ಈ ಸ್ಥಳಗಳಲ್ಲಿ ಅಪಾರ ಸಂಖ್ಯೆಯ ಶಾಸನಗಳು ಲಭ್ಯವಿವೆ. ಉದಾಹರಣೆಗೆ, ಶ್ರೀಶೈಲಂನಲ್ಲಿ 645, ಕಾಂಚೀಪುರಂನಲ್ಲಿ 625, ಚಿದಂಬರಂನಲ್ಲಿ 352 ಮತ್ತು ತಿರುಪತಿಯಲ್ಲಿ 159 ಶಾಸನಗಳು ಎಎಸ್‌ಐನ ದಾಖಲೆಗಳಲ್ಲಿವೆ. ಈ ಎಲ್ಲ ಶಾಸನಗಳನ್ನು ಪರಿಶೀಲಿಸಿ, ಯೋಜನೆಗೆ ಸಂಬಂಧಿಸಿದ ಯಾವುದೇ ಉಲ್ಲೇಖಗಳಿವೆಯೇ ಎಂಬುದನ್ನು ಪತ್ತೆಹಚ್ಚಲಾಗುತ್ತದೆ.

ಈವರೆಗೆ ಮರುಗುರುತಿಸಲಾಗಿರುವ ಪ್ರಮುಖ ದಾಖಲೆಗಳಲ್ಲಿ ತಿರುಚಿ ಜಿಲ್ಲೆಯ ಚೋಳಮಾದೇವಿಯ ಕೈಲಾಸನಾಥ ದೇವಸ್ಥಾನದಲ್ಲಿ ಪತ್ತೆಯಾದ 11ನೇ ಶತಮಾನದ ಶಾಸನವೂ ಸೇರಿದೆ. ಚೋಳ ದೊರೆ ವೀರರಾಜೇಂದ್ರನ ಆಳ್ವಿಕೆಯ ಅವಧಿಯಲ್ಲಿ, ಅಂದರೆ ಕ್ರಿ.ಶ. 1065ರಲ್ಲಿ ಈ ಶಾಸನವನ್ನು ಕೆತ್ತಲಾಗಿದೆ. ದೇವಸ್ಥಾನದ ಗರ್ಭಗುಡಿಯ ದಕ್ಷಿಣ ಗೋಡೆಯ ಮೇಲೆ ಕೆತ್ತಲಾಗಿರುವ ಈ ದ್ವಿಭಾಷಾ ಶಾಸನವು ಸಂಸ್ಕೃತ ಮತ್ತು ತಮಿಳು ಭಾಷೆಗಳಲ್ಲಿದೆ. ಇದನ್ನು ಗ್ರಂಥ ಮತ್ತು ತಮಿಳು ಲಿಪಿಗಳಲ್ಲಿ ಬರೆಯಲಾಗಿದೆ.

ಭಗವತ್ಪಾದ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಆದಿ ಶಂಕರಾಚಾರ್ಯರ 'ಶಾರೀರಕ ಭಾಷ್ಯ' ಕೃತಿಗೆ ಚಿದಾನಂದ ಪಿಡಾರರ್ ಬರೆದ 'ಪ್ರದೀಪಕ' ಎಂಬ ವ್ಯಾಖ್ಯಾನವನ್ನು ಬೋಧಿಸುತ್ತಿದ್ದ ಶಿಕ್ಷಕರ ನಿರ್ವಹಣೆಗಾಗಿ ಭೂಮಿಯನ್ನು ದಾನವಾಗಿ ನೀಡಿದ ವಿವರವನ್ನು ಈ ಶಾಸನ ಒಳಗೊಂಡಿದೆ.

11ನೇ ಶತಮಾನದಲ್ಲೇ ಶಂಕರಾಚಾರ್ಯರ ತಾತ್ವಿಕ ಕೃತಿಗಳನ್ನು ಚೋಳರ ನಾಡಿನಲ್ಲಿ ಅಧ್ಯಯನ ಮಾಡಲಾಗುತ್ತಿತ್ತು ಮತ್ತು ಬೋಧಿಸಲಾಗುತ್ತಿತ್ತು ಎಂಬುದನ್ನು ಈ ಶಾಸನ ಸೂಚಿಸುತ್ತದೆ. ಹೀಗಾಗಿ ಇದು ಅತ್ಯಂತ ಮಹತ್ವದ ದಾಖಲೆಯಾಗಿದೆ ಎಂದು ಮುನಿರತ್ನಂ ರೆಡ್ಡಿ ಹೇಳಿದ್ದಾರೆ.

ಪ್ರಸಿದ್ಧ ಪುರಾತತ್ವ ತಜ್ಞ ಆರ್. ನಾಗಸ್ವಾಮಿ ಅವರು ಮಾತನಾಡಿ, 1991ರ ಮೇ 18ರಂದು 'ದಿ ಇಂಡಿಯನ್ ಎಕ್ಸ್‌ಪ್ರೆಸ್'ನಲ್ಲಿ ಪ್ರಕಟಿಸಿದ 'ಆದಿ ಶಂಕರರನ್ನು ಉಲ್ಲೇಖಿಸುವ ಅತ್ಯಂತ ಪ್ರಾಚೀನ ಶಾಸನ' ಎಂಬ ಲೇಖನದಲ್ಲೂ ಈ ಶಾಸನದ ಮಹತ್ವವನ್ನು ವಿವರಿಸಿದ್ದರು. ಬ್ರಹ್ಮಸೂತ್ರಗಳ ಮೇಲಿನ ಶಂಕರ ಭಾಷ್ಯವನ್ನು ಚೋಳರ ಕಾಲದಲ್ಲಿ 'ಭಗವತ್ಪಾದೀಯಂ' ಎಂದು ಕರೆಯಲಾಗುತ್ತಿತ್ತು ಎಂಬುದನ್ನೂ ಈ ಶಾಸನ ತೋರಿಸುತ್ತದೆ” ಎಂದು ಅವರು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದರು ಎಂದು ಹೇಳಿದ್ದಾರೆ.

ಇದೀಗ ಎಎಸ್‌ಐ ಚೋಳಮಾದೇವಿ ದೇವಸ್ಥಾನದಲ್ಲಿರುವ ಶಾಸನಗಳ ಹೊಸದಾಗಿ ಪ್ರತಿಗಳನ್ನು ಸಿದ್ಧಪಡಿಸುವ ಕಾರ್ಯವನ್ನೂ ಆರಂಭಿಸಿದೆ. 1991ರಲ್ಲಿ ಈ ಶಾಸನಗಳ ಮುದ್ರಿತ ಪ್ರತಿರೂಪಗಳನ್ನು (ಎಸ್ಟಾಂಪೇಜ್‌) ಸಿದ್ಧಪಡಿಸಲಾಗಿತ್ತು. ಆದರೆ, ಆ ಹಳೆಯ ಪ್ರತಿಗಳು ಈಗ ಲಭ್ಯವಿಲ್ಲದ ಕಾರಣ ಹೊಸದಾಗಿ ಅವುಗಳನ್ನು ದಾಖಲಿಸಲಾಗುತ್ತಿದೆ.

ಶಂಕರಾಚಾರ್ಯರ ಪ್ರವಾಸಕ್ಕೆ ಸಂಬಂಧಿಸಿದ ಸ್ಥಳಗಳ ಕುರಿತು ಹೊಸ ಮಾಹಿತಿಯೂ ತಂಡಕ್ಕೆ ಲಭ್ಯವಾಗುತ್ತಿದೆ ಎಂದು ಮುನಿರತ್ನಂ ರೆಡ್ಡಿ ತಿಳಿಸಿದ್ದಾರೆ.

ಇತ್ತೀಚೆಗೆ ಅವರು ಅಮರಾವತಿಯ ಕೆಲವು ಸ್ಥಳಗಳಿಗೂ ಭೇಟಿ ನೀಡಿದ್ದರು ಎಂಬ ಮಾಹಿತಿ ನಮಗೆ ಸಿಕ್ಕಿದೆ. ಅಗತ್ಯವಿರುವ ಕಡೆಗಳಲ್ಲಿನ ಶಾಸನಗಳನ್ನು ಪರಿಶೀಲಿಸುತ್ತೇವೆ. ಮಾಹಿತಿಯ ಸತ್ಯಾಸತ್ಯತೆ ಖಚಿತಪಡಿಸಿಕೊಳ್ಳಲು ಆ ಸ್ಥಳಗಳಿಗೆ ತಂಡಗಳನ್ನೂ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ.

ಯೋಜನೆಯ ಪ್ರಗತಿ ಮತ್ತು ಮುಂದಿನ ಕಾರ್ಯಯೋಜನೆ ಕುರಿತು ಚರ್ಚಿಸಲು ಮುನಿರತ್ನಂ ರೆಡ್ಡಿ ಅವರು ನವೆಂಬರ್ 6ರಂದು ಕೇಂದ್ರ ಶಿಕ್ಷಣ ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ. ಈ ಯೋಜನೆಯಡಿ ದಾಖಲಿಸಿ, ದೃಢೀಕರಿಸಲಾದ ಶಾಸನಗಳನ್ನು ಡಿಜಿಟಲೀಕರಣಗೊಳಿಸಿ 'ಭಾರತ್‌ಶ್ರೀ' ವೇದಿಕೆಯಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವೈವಾಹಿಕ ಕಲಹ: ಬೆಂಗಳೂರಿನಲ್ಲಿ ಒಂದೇ ಕುಟುಂಬದ 7 ಮಂದಿಯನ್ನು ಭೀಕರ ಹತ್ಯೆ ಮಾಡಿದ ಕ್ಯಾಬ್ ಚಾಲಕ !

ಅಮೆರಿಕಕ್ಕೆ ಬಿಗ್ ಶಾಕ್; ಪರಮಾಣು ಸ್ಥಾವರಗಳ ಮೇಲಿನ ದಾಳಿಗೆ ಖಂಡನೆ, ಇರಾನ್ ಪರ ನಿಂತ ರಷ್ಯಾ; ಯುದ್ಧ ನಿಲ್ಲಿಸಲು ಸರ್ವಪ್ರಯತ್ನ ಎಂದ ಪುಟಿನ್..!

ಅಮೆರಿಕ ಚುನಾವಣೆಯಲ್ಲಿ ಹಿನ್ನಡೆ ಬೆನ್ನಲ್ಲೇ ಇರಾನ್ ಮೇಲೆ ಟ್ರಂಪ್ ಕೆಂಗಣ್ಣು; ಯುದ್ಧ ಮತ್ತಷ್ಟು ಭೀಕರಗೊಳಿಸುವ ಸುಳಿವು, ಇಡೀ ದೇಶವನ್ನೇ ನಾಶಪಡಿಸುವ ಎಚ್ಚರಿಕೆ..!

ಕಬ್ಬು ಬೆಳೆಗಾರರ ಹೋರಾಟ ಅಂತ್ಯ, ಶುಕ್ರವಾರದಿಂದ ಕಾರ್ಖಾನೆಗಳು ಆರಂಭ: ರೈತ ಮುಖಂಡ ಚೂನಪ್ಪ ಪೂಜಾರಿ

Asian Champions Trophy 2026 Final: ಜಪಾನ್ ವಿರುದ್ಧ 4-1 ಅಂತರದ ಗೆಲುವು; ದಾಖಲೆ ನಿರ್ಮಿಸಿದ ಭಾರತಕ್ಕೆ 6ನೇ ಟ್ರೋಫಿ