ನವದೆಹಲಿ: ದೀಪಾವಳಿ ಸಂಭ್ರಮದ ನಡುವೆ ಸೂತಕ ಆವರಿಸಿದ್ದು, ಪಟಾಕಿ ಸಿಡಿಸುವಾಗ ರಾಕೆಟ್ ಮಾದರಿಯ ಪಟಾಕಿ ಸ್ಫೋಟಗೊಂಡು 10 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ರಾಜಧಾನಿ ದೆಹಲಿಯ ನರೆಲಾ ಪ್ರದೇಶದಲ್ಲಿ ಭಾನುವಾರ ರಾತ್ರಿ ಈ ದುರಂತ ಸಂಭವಿಸಿದೆ. ಮೃತ ಬಾಲಕನನ್ನು ರಿಷಿ ಎಂದು ಗುರುತಿಸಲಾಗಿದೆ. ಪಟಾಕಿ ಸಿಡಿಸುವಾಗ ರಾಕೆಟ್ ಮಾದರಿಯ ಪಟಾಕಿ ಸ್ಫೋಟಗೊಂಡು ಎದೆಗೆ ಬಡಿದ ಪರಿಣಾಮ 10 ವರ್ಷದ ಬಾಲಕ ಮೃತಪಟ್ಟಿದ್ದಾನೆ.
ಭಾನುವಾರ ರಾತ್ರಿ ಕುಟುಂಬದವರೊಂದಿಗೆ ಸೇರಿ ಬಾಲಕ ಪಟಾಕಿ ಸಿಡಿಸುತ್ತಿದ್ದ. ಈ ವೇಳೆ ಆಕಾಶಕ್ಕೆ ಚಿಮ್ಮಬೇಕಿದ್ದ ರಾಕೆಟ್ ಪಟಾಕಿ ಮೇಲಕ್ಕೆ ಹಾರುವ ಬದಲು ನೇರವಾಗಿ ಬಾಲಕನ ಎದೆಗೆ ಬಡಿದು ಸ್ಫೋಟಗೊಂಡಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಆತನನ್ನು ತಕ್ಷಣ ನರೆಲಾದ ಸತ್ಯವಾಡಿ ರಾಜಾ ಹರಿಶ್ಚಂದ್ರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆರೋಪ
ಆಸ್ಪತ್ರೆಯ ವೈದ್ಯರು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದ ಕಾರಣ ತಮ್ಮ ಮಗ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಬಾಲಕನ ಅಣ್ಣ ಮೋಹಿತ್ ಮಾತನಾಡಿ, "ತುರ್ತು ಪರಿಸ್ಥಿತಿ ಇದ್ದರೂ ವೈದ್ಯರು ತಕ್ಷಣ ಚಿಕಿತ್ಸೆ ನೀಡಲು ಮುಂದಾಗಲಿಲ್ಲ. ನಿಧಾನವಾಗಿ ಬಂದು ಎದೆಯನ್ನು ಒತ್ತಲಾರಂಭಿಸಿದರು. ಅವನಿಗೆ ಚಿಕಿತ್ಸೆ ಬೇಗ ದೊರೆತಿದ್ದರೆ ಬದುಕಿಸಬಹುದಿತ್ತು. ಆಸ್ಪತ್ರೆಗೆ ಕರೆತಂದಾಗ ಆತ ಜೀವಂತವಾಗಿದ್ದ" ಎಂದು ಆರೋಪಿಸಿದ್ದಾನೆ.
ಪ್ರಜ್ಞೆ ತಪ್ಪಿದ ತಂದೆ
ಬಾಲಕನ ತಂದೆ ಆಸ್ಪತ್ರೆಗೆ ಬಂದಾಗ ಮಗನ ಸಾವಿನ ಸುದ್ದಿ ಕೇಳಿ ಪ್ರಜ್ಞೆ ತಪ್ಪಿದ್ದರು. ಈ ವೇಳೆ ತಂದೆಯನ್ನು ನೋಡಿಕೊಳ್ಳುತ್ತಿದ್ದ ಕಾರಣ ರಿಷಿಯ ಮೃತದೇಹವನ್ನು ಯಾವಾಗ ಕೊಂಡೊಯ್ಯಲಾಯಿತು ಎಂಬುದೂ ತಿಳಿಯಲಿಲ್ಲ ಎಂದು ಮೋಹಿತ್ ಹೇಳಿದ್ದಾರೆ.
ಬಾಲಕನ ತಾಯಿ ಅಂಜಲಿ ಕೂಡ ಆಸ್ಪತ್ರೆಯ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ. "ಮಗ ಅನಾರ್ (ಹೂವಿನ ಕುಂಡ) ಮತ್ತು ಆಕಾಶಕ್ಕೆ ಚಿಮ್ಮುವ ಪಟಾಕಿಗಳನ್ನು ಸಿಡಿಸುತ್ತಿದ್ದ.
ಈ ವೇಳೆ ಹಿಂದಿನಿಂದ ಬಂದ ಪಟಾಕಿಯೊಂದು ಆತನ ಎದೆಗೆ ಬಡಿದಿದೆ. ಇದರಿಂದ ರಕ್ತನಾಳಗಳಿಗೆ ಹಾನಿಯಾಗಿತ್ತು. ಆತ ಉಸಿರಾಡುತ್ತಿದ್ದ ಕಾರಣ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ, ಅಲ್ಲಿ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ" ಎಂದು ಆರೋಪಿಸಿದ್ದಾರೆ.
ದೀಪಾವಳಿ ದಿನ ಅಗ್ನಿಶಾಮಕ ದಳಕ್ಕೆ 257 ಕರೆ
ಇನ್ನೊಂದೆಡೆ, ದೀಪಾವಳಿ ದಿನ ದೆಹಲಿ ಅಗ್ನಿಶಾಮಕ ಇಲಾಖೆಗೆ ಒಟ್ಟು 257 ತುರ್ತು ಕರೆಗಳು ಬಂದಿದ್ದವು. ಇವುಗಳಲ್ಲಿ 214 ಕರೆಗಳು ಬೆಂಕಿ ಅವಘಡಗಳಿಗೆ ಸಂಬಂಧಿಸಿದ್ದವು. ಈ ಪೈಕಿ 24 ಕರೆಗಳು ಪಟಾಕಿಯಿಂದ ಸಂಭವಿಸಿದ ಬೆಂಕಿ ಅವಘಡಗಳ ಕುರಿತು ಬಂದಿದ್ದವು.
ರಾತ್ರಿ 8ರಿಂದ 10 ಗಂಟೆಯ ಅವಧಿಯಲ್ಲಿ ಅತಿ ಹೆಚ್ಚು ಅಂದರೆ 85 ಕರೆಗಳು ಬಂದಿದ್ದವು. ರಾತ್ರಿ 10ರಿಂದ ಮಧ್ಯರಾತ್ರಿ 12ರ ನಡುವೆ 61 ಕರೆಗಳು ಬಂದಿದ್ದವು. ನಗರದ ವಿವಿಧೆಡೆ ಬೆಂಕಿ ಅವಘಡಗಳನ್ನು ನಿಯಂತ್ರಿಸುವ ಕಾರ್ಯಾಚರಣೆ ವೇಳೆ ಐವರು ಅಗ್ನಿಶಾಮಕ ಸಿಬ್ಬಂದಿಯೂ ಗಾಯಗೊಂಡಿದ್ದಾರೆ.