ಹೈದರಾಬಾದ್: ಟಾಲಿವುಡ್ ನ ಖ್ಯಾತ ನಟ ಹಾಗೂ ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಮತ್ತು ರಷ್ಯಾ ಮೂಲದ ನಟಿ ಅನ್ನಾ ಲೆಜಿನೋವಾ ವಿಚ್ಛೇದನ ಘೋಷಣೆ ಬೆನ್ನಲ್ಲೇ ಜ್ಯೋತಿಷಿ ವೇಣು ಸ್ವಾಮಿ ಅವರ ಹಳೆಯ ಹೇಳಿಕೆಗಳು ಮತ್ತೆ ವೈರಲ್ ಆಗಿವೆ.
ಜನಸೇನಾ ಪಕ್ಷದ ನಾಯಕ, ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಅವರ ಪತ್ನಿ ಅನ್ನಾ ಲೆಜಿನೋವಾ ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿರುವುದು ರಾಜಕೀಯ ಹಾಗೂ ಸಿನಿಮಾ ವಲಯದಲ್ಲಿ ಸಂಚಲನ ಮೂಡಿಸಿದೆ.
ಪರಸ್ಪರ ಒಪ್ಪಿಗೆ ಮತ್ತು ಗೌರವದೊಂದಿಗೆ ದಾಂಪತ್ಯ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿರುವುದಾಗಿ ಪವನ್ ಕಲ್ಯಾಣ್ ಮತ್ತು ಅನ್ನಾ ಲೆಜಿನೋವಾ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ವಿಚ್ಛೇದನದ ಬಳಿಕವೂ ಉತ್ತಮ ಸ್ನೇಹಿತರಾಗಿ ಮುಂದುವರಿಯುವುದಾಗಿ ಅವರು ತಿಳಿಸಿದ್ದಾರೆ.
ಮಕ್ಕಳ ಭವಿಷ್ಯಕ್ಕೆ ಮೊದಲ ಆದ್ಯತೆ
ತಮ್ಮ ಮಕ್ಕಳ ಭವಿಷ್ಯ ಮತ್ತು ಮಾನಸಿಕ ನೆಮ್ಮದಿಗೆ ಮೊದಲ ಆದ್ಯತೆ ನೀಡುವುದಾಗಿ ಇಬ್ಬರೂ ಹೇಳಿದ್ದಾರೆ. ಜವಾಬ್ದಾರಿಯುತ ಪೋಷಕರಾಗಿ ಮಕ್ಕಳ ಪಾಲನೆ ಮತ್ತು ಬೆಳವಣಿಗೆಯ ಹೊಣೆಯನ್ನು ಒಟ್ಟಾಗಿ ನಿಭಾಯಿಸುವುದಾಗಿಯೂ ಸ್ಪಷ್ಟಪಡಿಸಿದ್ದಾರೆ.
ಪವನ್ ಕಲ್ಯಾಣ್ ಮತ್ತು ಅನ್ನಾ ಲೆಜಿನೋವಾ ಅವರ ಪರಿಚಯ 2011ರಲ್ಲಿ ಬಿಡುಗಡೆಯಾದ 'ತೀನ್ ಮಾರ್' ಸಿನಿಮಾ ಚಿತ್ರೀಕರಣದ ವೇಳೆ ಆಗಿತ್ತು. ಪರಿಚಯ ಪ್ರೀತಿಗೆ ತಿರುಗಿ, 2013ರ ಡಿಸೆಂಬರ್‌ನಲ್ಲಿ ಇಬ್ಬರೂ ವಿವಾಹವಾಗಿದ್ದರು. ಇದೀಗ ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಘೋಷಣೆ ಮಾಡಿದ್ದಾರೆ.
ನಾಲ್ಕನೇ ಮದುವೆ ಬಗ್ಗೆ ವೇಣು ಸ್ವಾಮಿ ಭವಿಷ್ಯವಾಣಿ!
ಈ ಬೆಳವಣಿಗೆಯ ಬೆನ್ನಲ್ಲೇ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಅವರು ಈ ಹಿಂದೆ ಪವನ್ ಕಲ್ಯಾಣ್ ಅವರ ವೈವಾಹಿಕ ಜೀವನದ ಬಗ್ಗೆ ನೀಡಿದ್ದ ಭವಿಷ್ಯವಾಣಿಗಳು ಮತ್ತೆ ಮುನ್ನೆಲೆಗೆ ಬಂದಿವೆ. ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಅವರ ಹಳೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಹರಿದಾಡುತ್ತಿವೆ.
ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ಪವನ್ ಕಲ್ಯಾಣ್ ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಿದರೂ ವೈಯಕ್ತಿಕ ಜೀವನದಲ್ಲಿ ಸವಾಲುಗಳನ್ನು ಎದುರಿಸಬಹುದು ಎಂದು ಹೇಳಿದ್ದರು.
ಅಲ್ಲದೆ, ಪವನ್ ಕಲ್ಯಾಣ್ ಅವರ ಜಾತಕದಲ್ಲಿ ಗುರು ಗ್ರಹ ನೀಚ ಸ್ಥಾನದಲ್ಲಿರುವುದರಿಂದ ಅವರ ವೈವಾಹಿಕ ಜೀವನದ ಬಗ್ಗೆ ಕೆಲವು ಅಂದಾಜುಗಳನ್ನು ಮಾಡಬಹುದು. ಅವರು ನಾಲ್ಕನೇ ಮದುವೆಯಾಗುವ ಸಾಧ್ಯತೆಯೂ ಇದೆ ಎಂದು ವೇಣು ಸ್ವಾಮಿ ಹೇಳಿದ್ದರು ಎನ್ನಲಾಗಿದೆ.
ಹಳೆಯ ವಿಡಿಯೋ ಮರುಹಂಚಿಕೊಂಡ ವೇಣು ಸ್ವಾಮಿ
ಪವನ್ ಕಲ್ಯಾಣ್ ಮತ್ತು ಅನ್ನಾ ಲೆಜಿನೋವಾ ವಿಚ್ಛೇದನ ಘೋಷಣೆ ಬೆನ್ನಲ್ಲೇ ವೇಣು ಸ್ವಾಮಿ ತಮ್ಮ ಹಳೆಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮರುಹಂಚಿಕೊಂಡಿದ್ದಾರೆ. ಆದರೆ ಟೀಕೆಗಳು ವ್ಯಕ್ತವಾಗಬಹುದು ಎಂಬ ಕಾರಣಕ್ಕೋ ಎಂಬಂತೆ ತಮ್ಮ ಖಾತೆಯ ಕಾಮೆಂಟ್ ವಿಭಾಗವನ್ನು ನಿಷ್ಕ್ರಿಯಗೊಳಿಸಿದ್ದಾರೆ.
ಈಗ ಪವನ್ ಕಲ್ಯಾಣ್ ಅವರ ವಿಚ್ಛೇದನದ ವಿಚಾರದ ಜೊತೆಗೆ ವೇಣು ಸ್ವಾಮಿ ಅವರ ಹಳೆಯ ಭವಿಷ್ಯವಾಣಿಯೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಆದರೆ ನಾಲ್ಕನೇ ಮದುವೆ ಕುರಿತ ಹೇಳಿಕೆ ವೇಣು ಸ್ವಾಮಿ ಅವರ ಜ್ಯೋತಿಷ್ಯ ಅಭಿಪ್ರಾಯವಾಗಿದ್ದು, ಇದನ್ನು ಖಚಿತ ಬೆಳವಣಿಗೆಯೆಂದು ಪರಿಗಣಿಸಲಾಗದು.