ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಪರ್ವತ ಪ್ರದೇಶದಿಂದ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು (SPO) ಕಾಣೆಯಾಗಿದ್ದಾರೆ. ಎಸ್ಪಿಒಗಳಾದ ರಶ್ಪಾಲ್ ಕುಮಾರ್ ಮತ್ತು ಬಾಬಿ ಚಂದ್ ಅವರನ್ನು ಸ್ಥಳೀಯ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪಿನಲ್ಲಿ (SOG) ನಿಯೋಜಿಸಲಾಗಿತ್ತು.
ಡಚ್ಚನ್-ಮಾರ್ವಾ ಪ್ರದೇಶದಿಂದ ಇಬ್ಬರು ಅಧಿಕಾರಿಗಳು ಕಾಣೆಯಾಗಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಕಾಣೆಯಾದ ಎಸ್ಪಿಒಗಳನ್ನು ಪತ್ತೆಹಚ್ಚಲು ಈ ಪ್ರದೇಶದಲ್ಲಿ ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
ಕುಲ್ಗಾಮ್ ಜಿಲ್ಲೆಯಲ್ಲಿ ಇಂದು ಸಿಆರ್ಪಿಎಫ್ ತಂಡದ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಈ ಘಟನೆ ನಡೆದಿದೆ. ಬೈಕ್ನಲ್ಲಿ ಬಂದ ಅಪರಿಚಿತ ದಾಳಿಕೋರರು ಸಿಆರ್ಪಿಎಫ್ ಚೆಕ್ಪಾಯಿಂಟ್ ಮೇಲೆ ಗುಂಡು ಹಾರಿಸಿ, ಮೂವರು ಸೈನಿಕರನ್ನು ಗಂಭೀರವಾಗಿ ಗಾಯಗೊಳಿಸಿದ್ದಾರೆ. ಮಧ್ಯಾಹ್ನ 2:15 ರ ಸುಮಾರಿಗೆ ಗುಂಡಿನ ದಾಳಿ ನಡೆದಿತ್ತು. ದಾಳಿಕೋರರು ಚೆಕ್ಪಾಯಿಂಟ್ನಲ್ಲಿ ನಿಯೋಜಿಸಲಾದ ಸಿಆರ್ಪಿಎಫ್ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡಿದ್ದರು. ಗುಂಡು ಹಾರಿಸಿ ತಕ್ಷಣ ದಾಳಿಕೋರರು ಅಲ್ಲಿಂದ ಪರಾರಿಯಾಗಿದ್ದರು.