ಲಖನೌ: ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು, ಡಿಸೆಂಬರ್ 12ರಂದು ರಾಮಲಲ್ಲಾನ ದರ್ಶನ ಪಡೆಯಲು ಅಯೋಧ್ಯೆಗೆ ಭೇಟಿ ನೀಡಲು ನಿರ್ಧರಿಸಿದ್ದಾರೆ. ಈ ಭೇಟಿಯನ್ನು ಅಯೋಧ್ಯೆಯ ಸುಮಾರು 400 ಸಾಧು-ಸಂತರು ಬಹಿರಂಗವಾಗಿ ವಿರೋಧಿಸಿದ್ದಾರೆ.
ಅಖಿಲೇಶ್ ಯಾದವ್ ನಗರದ ಸಾಂಪ್ರದಾಯಿಕ ಪವಿತ್ರ ಗಡಿಗಳನ್ನು ಪ್ರವೇಶಿಸದಂತೆ ತಡೆಯುವುದಾಗಿ ಪಣ ತೊಟ್ಟಿರುವ ಸಾಧು-ಸಂತರು, 1990ರ ರಾಮಮಂದಿರ ಆಂದೋಲನದ ವೇಳೆ ಕರಸೇವಕರ ಮೇಲೆ ನಡೆದ ಗುಂಡಿನ ದಾಳಿಗೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ. ಅವರು ಕ್ಷಮೆಯಾಚಿಸಿದರೆ ಮಾತ್ರ ರಾಮಜನ್ಮಭೂಮಿ ಪ್ರದೇಶಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಬುಧವಾರ ತಡರಾತ್ರಿ ಅಯೋಧ್ಯೆಯ ಮಣಿರಾಮ್ ಛಾವಣಿಯಲ್ಲಿ ನಡೆದ ಸಭೆಯಲ್ಲಿ ಅಖಿಲೇಶ್ ಯಾದವ್ ಅವರ ತಂದೆ (ಮುಲಾಯಂ ಸಿಂಗ್ ಯಾದವ್) ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಅಖಿಲೇಶ್ ಕ್ಷಮೆಯಾಚಿಸದ ಹೊರತು, ಅವರ ಭೇಟಿಯನ್ನು ವಿರೋಧಿಸಲು ಸಾಧು-ಸಂತರು ನಿರ್ಧರಿಸಿದರು.
ಸಮಾಜವಾದಿ ಪಕ್ಷದ ಮುಖ್ಯಸ್ಥರ ಪ್ರಸ್ತಾಪಿತ ಭೇಟಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಾಧು-ಸಂತರು, ಸಭೆಯಲ್ಲಿ ಸರ್ವಾನುಮತದಿಂದ ಏಳು ನಿರ್ಣಯಗಳನ್ನು ಅಂಗೀಕರಿಸಿದ್ದಾರೆ. 1990ರ ಗುಂಡಿನ ದಾಳಿಯ ಘಟನೆಗೆ ಅಖಿಲೇಶ್ ಯಾದವ್ ಕ್ಷಮೆಯಾಚಿಸದಿದ್ದರೆ, ಅವರನ್ನು ಅಯೋಧ್ಯೆಯ ಸಾಂಪ್ರದಾಯಿಕ 'ಪಂಚಕೋಶಿ' (ಪವಿತ್ರ) ಗಡಿಯೊಳಗೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಅವರು ಘೋಷಿಸಿದ್ದಾರೆ.
ಇದೇ ವೇಳೆ ಕಣ್ಣೀರು ಹಾಕುತ್ತಾ ಮಾತನಾಡಿದ ಶ್ರೀ ರಾಮಮಂದಿರ ಧಾರ್ಮಿಕ ಸಮಿತಿಯ ಸದಸ್ಯರಾದ ಸ್ವಾమి ರಾಜಕುಮಾರ್ ದಾಸ್ , ಅಖಿಲೇಶ್ ಯಾದವ್ ಅವರು ರಾಮಲಲ್ಲಾನ ದರ್ಶನ ಪಡೆಯಲು ಅಯೋಧ್ಯೆಗೆ ಬರುತ್ತಿದ್ದಾರೆ ಎಂಬ ಮಾಹಿತಿ ನನಗೆ ಸಿಕ್ಕಿದೆ. ಸಾಧು-ಸಂತರಿಗೆ ಅವರ ಭೇಟಿಯ ಬಗ್ಗೆ ಯಾವುದೇ ವಿರೋಧವಿಲ್ಲ, ಏಕೆಂದರೆ ಭಗವಾನ್ ರಾಮ ಎಲ್ಲರಿಗೂ ಸೇರಿದವರು ಮತ್ತು ಅಯೋಧ್ಯೆಯೂ ಎಲ್ಲರಿಗೂ ಸೇರಿದ್ದಾಗಿದೆ. "ಆದರೆ, 1990ರಲ್ಲಿ ಆಗಿನ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಆಡಳಿತಾವಧಿಯಲ್ಲಿ, ಅಕ್ಟೋಬರ್ 30 ಮತ್ತು ನವೆಂಬರ್ 2ರಂದು ರಾಮಭಕ್ತರ ಮೇಲೆ ಗುಂಡು ಹಾರಿಸಿ ಕೊಲ್ಲಲಾಯಿತು. ಸಾಧು-ಸಂತರು ಈ ಘಟನೆಯನ್ನು ವಿರೋಧಿಸುತ್ತಿದ್ದಾರೆ. ಇದಕ್ಕಾಗಿ ಅಖಿಲೇಶ್ ಯಾದವ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಖಿಲೇಶ್ ಯಾದವ್ ಕ್ಷಮೆಯಾಚಿಸಿದ ನಂತರ ಅಯೋಧ್ಯೆಗೆ ಭೇಟಿ ನೀಡಿ, ಸರಯೂ ನದಿಯಲ್ಲಿ ಸ್ನಾನ ಮಾಡಬೇಕು ಮತ್ತು ಹನುಮಾನ್‌ಗಢಿ, ರಾಮ್ ಲಲ್ಲಾ ಸರ್ಕಾರ ಹಾಗೂ ಕನಕ ಬಿಹಾರಿ ಸರ್ಕಾರ ಸೇರಿದಂತೆ ಅಲ್ಲಿನ ಎಲ್ಲಾ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಬೇಕು, ಆದರೆ, ಅದಕ್ಕೂ ಮೊದಲು, ಗುಂಡಿನ ದಾಳಿಯಲ್ಲಿ ತಮ್ಮ ಪುತ್ರರು, ಸಹೋದರರು ಮತ್ತು ಪತಿಯರನ್ನು ಕಳೆದುಕೊಂಡ ಕುಟುಂಬಗಳನ್ನು ಭೇಟಿಯಾಗಿ, ಅವರ ಬಳಿ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದರು.
ಸಾಧು-ಸಂತರು ಅಖಿಲೇಶ್ ಯಾದವ್ ಅವರ ವಿರುದ್ಧ ವೈಯಕ್ತಿಕವಾಗಿ ಅಥವಾ ಅವರು ರಾಮ್ ಲಲ್ಲಾ ದರ್ಶನಕ್ಕೆ ಬರುವುದರ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ, 2012 ರಿಂದ 2017 ರವರೆಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಅಯೋಧ್ಯೆಗೆ ಯಾಕೆ ಭೇಟಿ ನೀಡಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ರಾಮ ಮಂದಿರಕ್ಕೆ ಭೇಟಿ ನೀಡುವ ಅಖಿಲೇಶ್ ಯಾದವ್ ಅವರ ನಿರ್ಧಾರದ ಹಿನ್ನೆಲೆಯಲ್ಲಿ, ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ರಾಜಕೀಯ ವಾಗ್ವಾದಗಳು ಮತ್ತೆ ತೀವ್ರಗೊಂಡಿವೆ. ಡಿಸೆಂಬರ್ 12 ರಂದು ಅವರು ಅಯೋಧ್ಯೆಗೆ ಭೇಟಿ ನೀಡಲಿದ್ದು, ಈ ವೇಳೆ ಅವರ ಕುಟುಂಬದ ಸದಸ್ಯರೂ ಜೊತೆಗಿರುವ ನಿರೀಕ್ಷೆಯಿದೆ.
ಅಖಿಲೇಶ್ ಯಾದವ್ ಅವರ ಈ ಯೋಜಿತ ಭೇಟಿಯನ್ನು ಕೇವಲ ಭಕ್ತಿಪೂರ್ವಕವಾದದ್ದು ಎಂದು ಪರಿಗಣಿಸುವ ಬದಲು, ಇದೊಂದು ರಾಜಕೀಯ ನಡೆ ಎಂದು ವಿವಿಧ ರಾಜಕೀಯ ಮುಖಂಡರು ಮತ್ತು ಸಾಧು-ಸಂತರು ಬಣ್ಣಿಸಿದ್ದಾರೆ.
ಸಿದ್ಧಪೀಠ ನಾಕಾ ಹನುಮಾನ್‌ಗಢಿಯ ಮಹಂತ್ ರಾಮದಾಸ್ ಅವರು, ಅಖಿಲೇಶ್ ಯಾದವ್ ಅವರ ಭೇಟಿಯು ಧಾರ್ಮಿಕವಲ್ಲ, ಬದಲಾಗಿ ರಾಜಕೀಯ ಪ್ರೇರಿತವಾಗಿದೆ. ಸಾಧು-ಸಂತರು ಅವರು ಈ ಭೇಟಿಯನ್ನು ಮುಂದುವರಿಸಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ. "ಅಖಿಲೇಶ್ ಯಾದವ್ ಅಯೋಧ್ಯೆಗೆ ಬಂದರೂ, ಸಾಧು-ಸಂತರು ಅವರನ್ನು ವಿರೋಧಿಸುತ್ತಾರೆ. ಅವರು ತಮ್ಮ ಹೇಳಿಕೆಗಾಗಿ ಕ್ಷಮೆಯಾಚಿಸಿದರೆ ಮಾತ್ರ ಈ ಪ್ರತಿಭಟನೆ ಕೊನೆಗೊಳ್ಳುತ್ತದೆ. ಒಂದು ವೇಳೆ ಅವರು ಕ್ಷಮೆಯಾಚಿಸದಿದ್ದರೆ, ಅವರು ಅಯೋಧ್ಯೆಯಿಂದ ಹಿಂತಿರುಗಬೇಕು ಎಂಬುದು ಸಾಧು-ಸಂತರ ಆಗ್ರಹವಾಗಿದೆ ಎಂದು ಅವರು ಹೇಳಿದ್ದಾರೆ.