ಸ್ಪೈಸ್‌ಜೆಟ್‌ 
ದೇಶ

₹35.85 ಕೋಟಿ ಬಾಕಿ: ಸ್ಪೈಸ್‌ಜೆಟ್‌ ಚೆಕ್-ಇನ್ ಸೇವೆಗಳನ್ನು ಸ್ಥಗಿತಗೊಳಿಸಿದ ದುಬೈ ಏರ್‌ಪೋರ್ಟ್ಸ್!

ಅಕ್ಟೋಬರ್ 13ರಿಂದ ಯಾವುದೇ ಪಾವತಿ ಸ್ವೀಕರಿಸಿಲ್ಲ ಮತ್ತು ಬಾಕಿ ಮೊತ್ತವು 14 ಮಿಲಿಯನ್ ಎಇಡಿ (AED) ತಲುಪಿದೆ ಎಂದು ದುಬೈ ಏರ್‌ಪೋರ್ಟ್ಸ್ ನವೆಂಬರ್ 12 ರಂದು ಸ್ಪೈಸ್‌ಜೆಟ್‌ಗೆ ಇಮೇಲ್ ಮೂಲಕ ತಿಳಿಸಿದೆ.

ಆರ್ಥಿಕ ಸಂಕಷ್ಟದಲ್ಲಿರುವ 'ಸ್ಪೈಸ್‌ಜೆಟ್' (SpiceJet) ಸಂಸ್ಥೆಯು ಸುಮಾರು 14 ಮಿಲಿಯನ್ ಯುಎಇ ದಿರ್ಹಮ್‌ಗಳನ್ನು (ಸುಮಾರು ₹35.85 ಕೋಟಿ) ಪಾವತಿಸದ ಕಾರಣ ವಿಮಾನಯಾನ ಸಂಸ್ಥೆಯ ಚೆಕ್-ಇನ್ ಸೇವೆಗಳನ್ನು 'ದುಬೈ ಏರ್‌ಪೋರ್ಟ್ಸ್' ಸ್ಥಗಿತಗೊಳಿಸಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತಿರುವುದಾಗಿ ಸ್ಪೈಸ್‌ಜೆಟ್ ತಿಳಿಸಿದ್ದರೂ, ಆ ಸಮಸ್ಯೆ ಏನೆಂಬುದರ ಬಗ್ಗೆ ಯಾವುದೇ ವಿವರ ನೀಡಿಲ್ಲ.

ನವೆಂಬರ್ 12 ರಂದು ಅಮೃತಸರ, ಜೈಪುರ, ಮುಂಬೈ ಮತ್ತು ದೆಹಲಿಗೆ ನಿಗದಿಯಾಗಿದ್ದ ನಾಲ್ಕು ಪ್ರಯಾಣಿಕ ವಿಮಾನಗಳನ್ನು ರದ್ದುಗೊಳಿಸಲಾಯಿತು. ಏಕೆಂದರೆ, ವಿಮಾನಯಾನ ಸಂಸ್ಥೆಯು ಗ್ರೌಂಡ್-ಹ್ಯಾಂಡ್ಲಿಂಗ್ ಸೇವೆಗಳಿಗೆ ಜವಾಬ್ದಾರರಾಗಿರುವ 'ಡಿನ್ಯಾಟಾ' (dnata) ಎಂಬ ಕಂಪನಿಗೆ ಹಣ ಪಾವತಿಸಿರಲಿಲ್ಲ. ಈ ನಾಲ್ಕು ವಿಮಾನಗಳನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಾಗುತ್ತದೆ ಎಂದು ಹೇಳಲಾಗಿದೆ.

ನವೆಂಬರ್ 12 ರಂದು ಅಮಾನತು ಆದೇಶ ಜಾರಿಗೆ ಬರುವ ಮೊದಲು, ದುಬೈ ವಿಮಾನ ನಿಲ್ದಾಣಗಳು ಅಹಮದಾಬಾದ್ ಮತ್ತು ದೆಹಲಿಗೆ ತೆರಳುವ 'ಸ್ಪೈಸ್‌ಜೆಟ್' (SpiceJet) ವಿಮಾನಗಳಿಗೆ ಚೆಕ್-ಇನ್ ಮಾಡಲು ಅವಕಾಶ ನೀಡಿದ್ದವು. ನಂತರ, ಈ ಸಮಸ್ಯೆ ಬಗೆಹರಿಯುವವರೆಗೂ ದುಬೈನಿಂದ ಹೊರಡಬೇಕಿದ್ದ ಇತರ ವಿಮಾನಗಳ ಹಾರಾಟವನ್ನು ರದ್ದುಗೊಳಿಸುವಂತೆ ವಿಮಾನಯಾನ ಸಂಸ್ಥೆಯ ಸ್ಟೇಷನ್ ಮ್ಯಾನೇಜರ್ ತಮ್ಮ ವಿಮಾನ ಕಾರ್ಯಾಚರಣೆ ತಂಡಕ್ಕೆ ಸೂಚಿಸಿದರು.

ಈ ವಿಷಯದ ಬಗ್ಗೆ ಅರಿವುಳ್ಳವರು ತಿಳಿಸಿದ ಪ್ರಕಾರ, ಅಕ್ಟೋಬರ್ 13ರಿಂದ ಯಾವುದೇ ಪಾವತಿ ಸ್ವೀಕರಿಸಿಲ್ಲ ಮತ್ತು ಬಾಕಿ ಮೊತ್ತವು 14 ಮಿಲಿಯನ್ ಎಇಡಿ (AED) ತಲುಪಿದೆ ಎಂದು ದುಬೈ ಏರ್‌ಪೋರ್ಟ್ಸ್ ನವೆಂಬರ್ 12 ರಂದು ಸ್ಪೈಸ್‌ಜೆಟ್‌ಗೆ ಇಮೇಲ್ ಮೂಲಕ ತಿಳಿಸಿದೆ. ಪಾವತಿ ನಿಯಮಗಳನ್ನು ನಿರಂತರವಾಗಿ ಪಾಲಿಸದಿರುವುದನ್ನು ಉಲ್ಲೇಖಿಸಿರುವ ದುಬೈ ಏರ್‌ಪೋರ್ಟ್ಸ್, ಮುಂದಾಗಬಹುದಾದ ಹೆಚ್ಚಿನ ಆರ್ಥಿಕ ನಷ್ಟವನ್ನು ತಪ್ಪಿಸಲು 'ಚೆಕ್-ಇನ್' ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ.

ವಿಮಾನಯಾನ ಸಂಸ್ಥೆಯು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಬಗೆಹರಿಸಿಕೊಳ್ಳುತ್ತಿದೆ. 'ನಮ್ಮ ಬಳಿ ಸಾಕಷ್ಟು ಬ್ಯಾಂಕ್ ಗ್ಯಾರಂಟಿ (bank guarantee) ವ್ಯವಸ್ಥೆಯಿದೆ ಮತ್ತು ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಲು ನಾವು ಶ್ರಮಿಸುತ್ತಿದ್ದೇವೆ' ಎಂದು ಸ್ಪೈಸ್‌ಜೆಟ್‌ನ ವಕ್ತಾರ ತಿಳಿಸಿದ್ದಾರೆ.

ಸ್ಪೈಸ್‌ಜೆಟ್ ಇದೀಗ ಆರ್ಥಿಕ ಮತ್ತು ಕಾರ್ಯಾಚರಣೆಯ ತೊಂದರೆಗಳನ್ನು ಎದುರಿಸುತ್ತಿದೆ. ಇದರ ಬಳಿ ಇರುವ ವಿಮಾನಗಳ ಸಂಖ್ಯೆ ಸುಮಾರು 12ಕ್ಕೆ ಇಳಿದಿದ್ದು, ಅವುಗಳಲ್ಲಿ ಕೇವಲ ಒಂಬತ್ತು ವಿಮಾನಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ನವೆಂಬರ್ 12ರಂದು 'ಮಿಂಟ್' ವರದಿ ಮಾಡಿದೆ. ಜನವರಿಯಲ್ಲಿ ಶೇ 3.9 ರಷ್ಟಿದ್ದ ಇದರ ದೇಶೀಯ ಮಾರುಕಟ್ಟೆ ಪಾಲು, ಸೆಪ್ಟೆಂಬರ್‌ನಲ್ಲಿ ಶೇ 0.6ಕ್ಕೆ ಕುಸಿದಿದೆ. ಜನವರಿಯಲ್ಲಿ ಸುಮಾರು 5,92,000 ದೇಶೀಯ ಪ್ರಯಾಣಿಕರನ್ನು ಹೊತ್ತೊಯ್ದಿದ್ದ ಈ ವಿಮಾನಯಾನ ಸಂಸ್ಥೆಯು, ಸೆಪ್ಟೆಂಬರ್‌ನಲ್ಲಿ ಸುಮಾರು 73,000 ಪ್ರಯಾಣಿಕರನ್ನು ಹೊತ್ತೊಯ್ದಿದೆ.

ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (DGCA) ದತ್ತಾಂಶದ ಪ್ರಕಾರ, ಸೆಪ್ಟೆಂಬರ್ ತಿಂಗಳಲ್ಲಿ ಸ್ಪೈಸ್‌ಜೆಟ್ ತನ್ನ ನಿಗದಿತ ವಿಮಾನ ಹಾರಾಟಗಳಲ್ಲಿ ಶೇ 20.29 ರಷ್ಟನ್ನು ರದ್ದುಗೊಳಿಸಿದೆ. ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಅದರ ಸಮಯಪಾಲನೆಯ (on-time performance) ಪ್ರಮಾಣವು ಶೇ 16.6 ಕ್ಕೆ ಇಳಿದಿದೆ. ಈ ವಿಮಾನಯಾನ ಸಂಸ್ಥೆಯು ಪೂರೈಕೆದಾರರಿಗೆ ನೀಡಬೇಕಾದ ಬಾಕಿ ಹಣವನ್ನು ಪಾವತಿಸಲು ಪರದಾಡುತ್ತಿದೆ. ನಿಯಂತ್ರಕ ಸಂಸ್ಥೆಗೆ ಸಲ್ಲಿಸಿದ ದಾಖಲೆಗಳ ಪ್ರಕಾರ, ಏಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಸಣ್ಣ ಉದ್ಯಮಗಳಿಗೆ ನೀಡಬೇಕಾಗಿದ್ದ ₹63.03 ಕೋಟಿ ಮೊತ್ತವನ್ನು, ನಿಗದಿತ 45 ದಿನಗಳ ಗಡುವು ಮುಗಿದರೂ ಪಾವತಿಸಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಿಎಸ್‌ಟಿ ಪಾಲು, ಬರ ಪರಿಹಾರ, ಕಬ್ಬು ಬೆಳೆಗಾರರ ಬೇಡಿಕೆ ವಿಷಯ ಪ್ರಸ್ತಾಪಿಸಿದ ಸಿಎಂ; Video

PM Modi visit to Mysuru | ಮೈಸೂರಿಗೆ ಪ್ರಧಾನಿ ಮೋದಿ ಆಗಮನ

ರಾಮಾಯಣ: ರಾವಣನಾಗಿ ಯಶ್ ಆರ್ಭಟಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಹಲವು ದಾಖಲೆಗಳು ಉಡೀಸ್! ಇಲ್ಲಿಯವರೆಗಿನ 'ರೆಕಾರ್ಡ್' ಗಳು

'ಮೋದಿಯಿಂದ ನನ್ನ ಫೋನ್ ಕದ್ದಾಲಿಕೆ': ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ಗಂಭೀರ ಆರೋಪ

4th ODI: 26 ವರ್ಷಗಳಲ್ಲೇ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಹೀನಾಯ ಸೋಲು, ಆದರೂ 2 ಕಳಪೆ ದಾಖಲೆಗಳಿಂದ ಭಾರತ ಪಾರು!