ಉಖ್ರುಲ್: ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿ ಶುಕ್ರವಾರ ಶಂಕಿತ ಉಗ್ರರು ಎರಡು ಕಾರುಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಗುಂಡಿನ ದಾಳಿಯು ಇಂಫಾಲ-ಉಖ್ರುಲ್ ರಸ್ತೆಯ 'ನ್ಯೂ ಹೆವನ್'(New Heaven) ಪ್ರದೇಶದಲ್ಲಿ ನಡೆದಿದೆ.
"ದಾಳಿಯಲ್ಲಿ ಎರಡು ಕಾರುಗಳಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಾಹನಗಳ ಮುಂಭಾಗದ ಗಾಜುಗಳ ಮೇಲೆ ಗುಂಡು ತಗುಲಿದ ಗುರುತುಗಳು ಕಂಡುಬಂದಿವೆ" ಎಂದು ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ.
ಕಾಂಗ್‌ಪೋಕ್‌ಪಿಯ ಟಫೌ ಕುಕಿ ಗ್ರಾಮದ ಸಮೀಪ ಮತ್ತು ನೆರೆಯ ಸೇನಾಪತಿ ಜಿಲ್ಲೆಯ ಕೈಲೆಂಗ್‌ಜಾಂಗ್‌ನಲ್ಲಿ, ಪರಸ್ಪರ ವೈರಿ ಗುಂಪುಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ಘಟನೆಯಲ್ಲಿ 42 ವರ್ಷದ ಕುಕಿ ಮಹಿಳೆಯೊಬ್ಬರು ಗುಂಡೇಟಿನಿಂದ ಮೃತಪಟ್ಟಿದ್ದಾರೆ ಮತ್ತು ಇಬ್ಬರು ಪುರುಷರು ಗಾಯಗೊಂಡಿದ್ದರು. ಈ ಘಟನೆ ನಡೆದ ಮರುದಿನವೇ ಉಗ್ರರ ದಾಳಿ ನಡೆದಿದೆ.