ಮೈಕ್ ಕಿತ್ತೆಸೆದ ಶಾಸಕ ಹರೀಶ್ ಸಿಂಗ್ 
ದೇಶ

ಜೌಲ್ಜಿಬಿ ಮೇಳದಲ್ಲಿ ಹೈಡ್ರಾಮಾ: ವೇದಿಕೆಯಲ್ಲೇ ಮೈಕ್ ಎಸೆದ ಕಾಂಗ್ರೆಸ್ ಶಾಸಕ, ಉತ್ತರಾಖಂಡ ಸಿಎಂಗೆ ಬಹಿರಂಗ ಸವಾಲು!

ಉತ್ತರಾಖಂಡದ ಪಿಥೋರಗಢ ಜಿಲ್ಲೆಯ ಜೌಲ್ಜಿಬಿ ಮೇಳದಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಸಮ್ಮುಖದಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿ ಧಾರ್ಚುಲಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹರೀಶ್ ಸಿಂಗ್ ಧಾಮಿ..

ಡೆಹ್ರಾಡೂನ್: ಉತ್ತರಾಖಂಡದ ಜೌಲ್ಜಿಬಿ ಮೇಳದಲ್ಲಿ ಶನಿವಾರ ರಾಜಕೀಯ ಹೈಡ್ರಾಮಾ ನಡೆದಿದ್ದು, ಕಾರ್ಯಕ್ರಮದ ವೇದಿಕೆಯಲ್ಲೇ ಕಾಂಗ್ರೆಸ್ ಶಾಸಕ ಹರೀಶ್ ಸಿಂಗ್ ಧಾಮಿ ಮೈಕ್ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರಾಖಂಡದ ಪಿಥೋರಗಢ ಜಿಲ್ಲೆಯ ಜೌಲ್ಜಿಬಿ ಮೇಳದಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಸಮ್ಮುಖದಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿ ಧಾರ್ಚುಲಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹರೀಶ್ ಸಿಂಗ್ ಧಾಮಿ ವೇದಿಕೆಯಲ್ಲೇ ಮೈಕ್ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, 2027ರ ವಿಧಾನಸಭಾ ಚುನಾವಣೆಯಲ್ಲಿ ಧಾರ್ಚುಲಾ ಕ್ಷೇತ್ರದಿಂದ ತಮ್ಮ ವಿರುದ್ಧ ಸ್ಪರ್ಧಿಸುವಂತೆ ಮುಖ್ಯಮಂತ್ರಿಗೆ ಬಹಿರಂಗ ಸವಾಲು ಹಾಕಿದ್ದಾರೆ.

ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ವಿಡಿಯೋಗಳಲ್ಲಿ ಶಾಸಕ ಹರೀಶ್ ಸಿಂಗ್ ಧಾಮಿ ವೇದಿಕೆಯಲ್ಲಿದ್ದವರೊಂದಿಗೆ ವಾಗ್ವಾದ ನಡೆಸುವುದು, ಮೈಕ್ ಎಸೆಯುವುದು ಕಂಡುಬಂದಿದೆ. ಗದ್ದಲದ ನಡುವೆ ಕುರ್ಚಿಗಳು ಮತ್ತು ವೇದಿಕೆಯಲ್ಲಿದ್ದ ಉಪಕರಣಗಳನ್ನು ಎಸೆಯಲಾಗಿದೆ ಎನ್ನಲಾಗಿದೆ.

ಸಿಎಂ ಹೋದ ಬಳಿಕ ಮೈಕ್ ಆಫ್ ಮಾಡಿದರು!

ಭಾರತ-ನೇಪಾಳ ಗಡಿಯಲ್ಲಿರುವ ಕಾಳಿ ಮತ್ತು ಗೋರಿ ನದಿಗಳ ಸಂಗಮ ಸ್ಥಳದಲ್ಲಿ ಜೌಲ್ಜಿಬಿ ಮೇಳ ನಡೆಯುತ್ತಿದೆ. ಶನಿವಾರ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮೇಳವನ್ನು ಉದ್ಘಾಟಿಸಿ ಅಲ್ಲಿಂದ ತೆರಳಿದ ಬಳಿಕ ಈ ಘಟನೆ ನಡೆದಿದೆ.

ಘಟನೆ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಹರೀಶ್ ಸಿಂಗ್ ಧಾಮಿ, ಮುಖ್ಯಮಂತ್ರಿಗಳು ಮಾತನಾಡಿ ತೆರಳಿದ ನಂತರ ತಾವು ಮೈಕ್ ಹಿಡಿದು ಮಾತನಾಡಲು ಮುಂದಾದಾಗ ಧ್ವನಿವರ್ಧಕ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಯಿತು ಎಂದು ಆರೋಪಿಸಿದ್ದಾರೆ.

"ಮುಖ್ಯಮಂತ್ರಿಗಳು ಮಾತನಾಡಿ ಹೋದ ಬಳಿಕ ನಾನು ಮೈಕ್ ಹಿಡಿದು ಮಾತನಾಡಲು ಆರಂಭಿಸಿದೆ. ಆದರೆ, ಸರ್ಕಾರ ಮತ್ತು ಮುಖ್ಯಮಂತ್ರಿಗಳ ಒತ್ತಡದಿಂದ ಧ್ವನಿವರ್ಧಕ ವ್ಯವಸ್ಥೆಯನ್ನು ಆಫ್ ಮಾಡಲಾಯಿತು. ಇದು ನ್ಯಾಯವೇ? ಧಾರ್ಚುಲಾ ಕ್ಷೇತ್ರದ ಶಾಸಕನಾಗಿ ಮಾತನಾಡುವ ಹಕ್ಕು ನನಗಿಲ್ಲವೇ?" ಎಂದು ಅವರು ಪ್ರಶ್ನಿಸಿದ್ದಾರೆ.

ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪ್ರಶ್ನೆ

ತಮ್ಮ ಕ್ಷೇತ್ರದ ಅಭಿವೃದ್ಧಿ ಸಮಸ್ಯೆಗಳು, ಈಡೇರದ ಭರವಸೆಗಳು ಮತ್ತು ಹದಗೆಟ್ಟ ರಸ್ತೆಗಳನ್ನು ಪ್ರಸ್ತಾಪಿಸಲು ಬಯಸಿದ್ದೆ ಎಂದು ಶಾಸಕ ತಿಳಿಸಿದ್ದಾರೆ. 2022ರಲ್ಲಿ ಜೌಲ್ಜಿಬಿ ಮೇಳದ ಮೈದಾನದ ಸೌಂದರ್ಯೀಕರಣ ಮತ್ತು ಅಭಿವೃದ್ಧಿಗೆ ನೀಡಿದ್ದ ಭರವಸೆಗಳು ಏನಾದವು ಎಂದು ಪ್ರಶ್ನಿಸಿದ್ದಾರೆ.

ಧಾರ್ಚುಲಾದಲ್ಲಿ ಸಿವಿಲ್ ಲೈನ್ಸ್ ನಿರ್ಮಾಣದ ಪ್ರಸ್ತಾವನೆ ಹಾಗೂ ಈ ಭಾಗದ ರಸ್ತೆ ಕಾಮಗಾರಿಗಳ ಪ್ರಗತಿ ಬಗ್ಗೆಯೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎರಡು ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಎಂಟು ವರ್ಷದ ಬಾಲಕನ ಘಟನೆಯನ್ನೂ ಉಲ್ಲೇಖಿಸಿದ ಅವರು, ಈ ಭಾಗದ ರಸ್ತೆ ವ್ಯವಸ್ಥೆಯ ದುಸ್ಥಿತಿಗೆ ಸರ್ಕಾರವೇನು ಉತ್ತರ ನೀಡುತ್ತದೆ ಎಂದು ಪ್ರಶ್ನಿಸಿದ್ದಾರೆ.

2027ರ ಚುನಾವಣೆಗೆ ಸಿಎಂಗೆ ಸವಾಲು

"ನಾನು ಯಾರಿಗೂ ಹೆದರಿ ತಲೆಬಾಗುವುದನ್ನು ಕಲಿತಿಲ್ಲ. ನನ್ನಿಂದ ತಪ್ಪಾಗಿದ್ದರೆ ಅದನ್ನು ಒಪ್ಪಿಕೊಂಡು ಕ್ಷಮೆ ಕೇಳುತ್ತೇನೆ. ಅದಕ್ಕಾಗಿಯೇ ಮುಖ್ಯಮಂತ್ರಿಗಳಿಗೆ ಬಹಿರಂಗ ಸವಾಲು ಹಾಕಿದ್ದೇನೆ. ಅವರಿಗೆ ಧೈರ್ಯವಿದ್ದರೆ 2027ರ ವಿಧಾನಸಭಾ ಚುನಾವಣೆಯಲ್ಲಿ ಧಾರ್ಚುಲಾ ಕ್ಷೇತ್ರದಿಂದ ಸ್ಪರ್ಧಿಸಲಿ" ಎಂದು ಹರೀಶ್ ಧಾಮಿ ಹೇಳಿದ್ದಾರೆ.

ತಮ್ಮ ಪಕ್ಷ ಅನುಮತಿ ನೀಡಿದರೆ, ಮುಖ್ಯಮಂತ್ರಿ ಆಯ್ಕೆ ಮಾಡುವ ಯಾವುದೇ ಕ್ಷೇತ್ರದಿಂದಲೂ ಅವರ ವಿರುದ್ಧ ಸ್ಪರ್ಧಿಸಲು ಸಿದ್ಧ ಎಂದು ತಿಳಿಸಿದ್ದಾರೆ. ಇದೇ ವೇಳೆ, ಮುಖ್ಯಮಂತ್ರಿಯನ್ನು 'ದರ್ಪೋಕ್ ಧಾಮಿ' (ಹೇಡಿ ಧಾಮಿ) ಎಂದು ಟೀಕಿಸಿದ್ದಾರೆ. ಪುಷ್ಕರ್ ಸಿಂಗ್ ಧಾಮಿ ಅವರ ಜನಪ್ರಿಯ ರಾಜಕೀಯ ಬಿರುದಾದ 'ಧಾಕಡ್ ಧಾಮಿ' ಎಂಬ ಹೆಸರನ್ನು ಉಲ್ಲೇಖಿಸಿ ವ್ಯಂಗ್ಯವಾಡಿದ್ದಾರೆ.

ಘಟನೆಯ ವೇಳೆ ತಮ್ಮಿಂದ ತಪ್ಪುಗಳಾಗಿರಬಹುದು ಎಂದು ಒಪ್ಪಿಕೊಂಡಿರುವ ಅವರು, ತಮ್ಮ ಕ್ಷೇತ್ರದ ಜನರಲ್ಲಿ ಕ್ಷಮೆಯನ್ನೂ ಕೇಳಿದ್ದಾರೆ. ಆದರೆ, ಇದು ಕೇವಲ ತನಗಾದ ಅವಮಾನವಲ್ಲ, ಧಾರ್ಚುಲಾ ಮತ್ತು ಮುನ್ಸಿಯಾರಿ ಜನರಿಗೆ ಮಾಡಿದ ಅವಮಾನ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನಿಂದಲೂ ಶಾಸಕರಿಗೆ ಬೆಂಬಲ

ಈ ಘಟನೆಯನ್ನು ಕಾಂಗ್ರೆಸ್ ಪಕ್ಷವೂ ಖಂಡಿಸಿದೆ. ಪಕ್ಷದ ವಕ್ತಾರೆ ಗರಿಮಾ ದಸೌನಿ ಅವರು ಮುಖ್ಯಮಂತ್ರಿ ಮತ್ತು ಕಾರ್ಯಕ್ರಮದ ಆಯೋಜಕರು ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಖ್ಯಮಂತ್ರಿಗಳು ವಿಧಾನಸಭಾ ಕ್ಷೇತ್ರವೊಂದಕ್ಕೆ ಭೇಟಿ ನೀಡಿದಾಗ ಆ ಕ್ಷೇತ್ರದ ಚುನಾಯಿತ ಪ್ರತಿನಿಧಿಯನ್ನು ವೇದಿಕೆಗೆ ಆಹ್ವಾನಿಸಿ, ಆಸನ ನೀಡಿ ಮಾತನಾಡಲು ಅವಕಾಶ ಕಲ್ಪಿಸುವುದು ಶಿಷ್ಟಾಚಾರ. ಆದರೆ, ಶನಿವಾರ ಹರೀಶ್ ಧಾಮಿ ಮಾತನಾಡುವ ಮೊದಲೇ ಪುಷ್ಕರ್ ಸಿಂಗ್ ಧಾಮಿ ಕಾರ್ಯಕ್ರಮದಿಂದ ತೆರಳಿದ್ದಾರೆ.

ಬಳಿಕ ಶಾಸಕ ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪ್ರಸ್ತಾಪಿಸಲು ಮೈಕ್ ಹಿಡಿದಾಗ ಧ್ವನಿವರ್ಧಕ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ದಸೌನಿ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹವಾಮಾನ: ನವೆಂಬರ್ 17ರ ವೇಳೆಗೆ ಬಂಗಾಳ ಕೊಲ್ಲಿಯಲ್ಲಿ ತೀವ್ರ ಚಂಡಮಾರುತ ಸಾಧ್ಯತೆ; ಭಾರಿ ಮಳೆಯ ಎಚ್ಚರಿಕೆ

ಮಿಯಾಮಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರಿ ದುರಂತ; ಟ್ಯಾಕ್ಸಿವೇಯಲ್ಲಿ ಬೋಯಿಂಗ್ ವಿಮಾನಗಳ ಡಿಕ್ಕಿ, ಇಬ್ಬರಿಗೆ ಗಾಯ!

ಗಾಜಾ: ಅಕ್ಟೋಬರ್ 7ರ ದಾಳಿಯ ರೂವಾರಿ, ಹಮಾಸ್ ಕಮಾಂಡರ್ ಸಮೀರ್ ಅಬು ಯೂನಿಸ್ ಇಸ್ರೇಲ್ ದಾಳಿಯಲ್ಲಿ ಫಿನಿಶ್!

ಕ್ಯಾನ್ಸರ್ ರೋಗಿಗಳಿಗೆ ಗುಡ್‌ನ್ಯೂಸ್: ಕಿದ್ವಾಯಿಯಲ್ಲಿ 200 ಹಾಸಿಗೆಗಳ ಹೊಸ ಘಟಕ, 5 ಜಿಲ್ಲೆಗಳಲ್ಲಿ ಆಸ್ಪತ್ರೆ: ಸಿಎಂ ಡಿಕೆಶಿ ಘೋಷಣೆ

ಭ್ರಷ್ಟಾಚಾರ ಆರೋಪ: HK ಪಾಟೀಲ್`ಗೆ ಲೋಕಾಯುಕ್ತ ಕಂಟಕ, ದಾಖಲೆ ನೀಡುವಂತೆ ಕೋರ್ಟ್ ಸೂಚನೆ