ನವದೆಹಲಿ: ಅಮ್ಮ ನನ್ನ ತಂದೆಗೆ ಸೇರಿದವಳು, ನನ್ನ ತಂದೆ ಅವಳಿಗೆ ಸೇರಿದವರು ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ತಮ್ಮ ಹೆತ್ತವರಾದ ಸೋನಿಯಾ ಗಾಂಧಿ - ರಾಜೀವ್ ಗಾಂಧಿ ಅವರ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ.
"ಮಮ್ಮಿ, ಪಾಪಾ ನಿನ್ನನ್ನು ಪ್ರೀತಿಸುತ್ತಿದ್ದರು, ಆದರೆ ಅವರು ನಿಮ್ಮ ಬಗ್ಗೆ ಎಷ್ಟು ಹೆಮ್ಮೆಪಡುತ್ತಾರೆಂದು ನಾನು ಹೇಳಲಾರೆ" ಎಂದು ರಾಹುಲ್ ಗಾಂಧಿ ಅವರು ಸೋನಿಯಾ ಗಾಂಧಿಯವರ ಆತ್ಮಚರಿತ್ರೆ 'ಬಿಲೋಂಗಿಂಗ್: ಎ ಜರ್ನಿ ಆಫ್ ಲವ್' ಅಧಿಕೃತ ಬಿಡುಗಡೆ ಸಮಾರಂಭದಲ್ಲಿ ಹೇಳಿದ್ದಾರೆ.
ಕೇಂಬ್ರಿಡ್ಜ್‌ನ ವಾರ್ಸಿಟಿ ರೆಸ್ಟೋರೆಂಟ್‌ನಲ್ಲಿ ತನ್ನ ಹೆತ್ತವರ ಪ್ರೇಮಕಥೆ ಹೇಗೆ ಪ್ರಾರಂಭವಾಯಿತು ಎಂಬುದನ್ನು ವಿವರಿಸಿದ ರಾಹುಲ್ ಗಾಂಧಿ, ತಾನು ಅಲ್ಲಿದ್ದಾಗ ತನ್ನ “ಗೆಳತಿ”ಯೊಂದಿಗೆ ಅದೇ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು. ಈ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಗರ್ಲ್ಫ್ರೆಂಡ್ ಬಗ್ಗೆ ಮೊಟ್ಟ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದಾರೆ.
"ನನ್ನ ಹೆತ್ತವರ ಬಗ್ಗೆ ಸಾಕಷ್ಟು ಪುರಾಣಗಳಿವೆ. ವಾರ್ಸಿಟಿಯ ರೆಸ್ಟೋರೆಂಟ್‌ನಲ್ಲಿ ಅವರ ಭೇಟಿ ಮತ್ತು ಅವರು ಅಲ್ಲಿ ಹೇಗೆ ಭೇಟಿಯಾದರು ಎಂಬುದು ಒಂದು ದೊಡ್ಡ ಕಥೆ. ಹಲವು ವರ್ಷಗಳ ನಂತರ ನಾನು ಕೇಂಬ್ರಿಡ್ಜ್‌ನಲ್ಲಿದ್ದೆ ಮತ್ತು ನಾನು ನನ್ನ ಗೆಳತಿಗೆ, 'ವಾರ್ಸಿಟಿ ರೆಸ್ಟೋರೆಂಟ್‌ಗೆ ಹೋಗೋಣ' ಎಂದು ಹೇಳಿದೆ ಎಂದು ರಾಹುಲ್ ಗಾಂಧಿ ಕೇಂಬ್ರಿಡ್ಜ್‌ನಲ್ಲಿ ಕಳೆದ ತಮ್ಮ ದಿನಗಳ ವೈಯಕ್ತಿಕ ನೆನಪೊಂದನ್ನು ಹಂಚಿಕೊಂಡಿದ್ದಾರೆ.
"ನನಗೆ ಇನ್ನೂ ಹಳದಿ ಬಾಗಿಲು ನೆನಪಿದೆ ಮತ್ತು ಅಲ್ಲಿ ನಿಂತಿದ್ದ ಸಂಭಾವಿತ ವ್ಯಕ್ತಿ, "ಎಷ್ಟು ಜನ ಇದ್ದೀರಿ?" ಎಂದು ನನಗೆ ಕೇಳಿದರು. ನಾನು, 'ಎರಡು' ಎಂದೆ. ಅವನು, "ಹೋಗಿ ಕುಳಿತುಕೊಳ್ಳಿ" ಎಂದು ಹೇಳಿದನು. ನಾನು ಕುಳಿತು, ಮೆನುವನ್ನು ನೋಡುತ್ತಾ, 'ನಿನಗೆ ಗೊತ್ತಾ, ನನ್ನ ಪೋಷಕರು ಈ ರೆಸ್ಟೋರೆಂಟ್‌ನಲ್ಲಿ ಭೇಟಿಯಾದರು' ಎಂದು ನನ್ನ ಗೆಳತಿಗೆ ಹೇಳಿದೆ. ನನ್ನ ಪೋಷಕರು ಹೇಗೆ ಭೇಟಿಯಾದರು ಎಂಬುದನ್ನು ಅವಳಿಗೆ ಹೇಳಲು ನಾನು ಬಯಸಿದ್ದೆ ಎಂದು ಹಳೆಯ ದಿನಗಳ ನೆನಪುಗಳನ್ನು ರಾಹುಲ್ ಮೆಲಕುಹಾಕಿದರು.
1965 ರಲ್ಲಿ ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ನಲ್ಲಿರುವ ವರ್ಸಿಟಿ ರೆಸ್ಟೋರೆಂಟ್ ಎಂಬ ಸಣ್ಣ ಗ್ರೀಕ್ ರೆಸ್ಟೋರೆಂಟ್‌ನಲ್ಲಿ ತಾವು ರಾಜೀವ್ ಗಾಂಧಿಯವರನ್ನು ಭೇಟಿಯಾದ ಬಗ್ಗೆ ಸೋನಿಯಾ ಗಾಂಧಿ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
544 ಪುಟಗಳ ಸೋನಿಯಾ ಗಾಂಧಿ ಅವರ ‘ಬೆಲಾಂಗಿಂಗ್: ಎ ಜರ್ನಿ ಆಫ್ ಲವ್’ ಆತ್ಮಕಥೆಯನ್ನು ಹಾರ್ಪರ್‌ಕಾಲಿನ್ಸ್ ಇಂಡಿಯಾ ಪ್ರಕಟಿಸಿದೆ. ಇದು ಸೋನಿಯಾ ಗಾಂಧಿಯವರ ಇಟಲಿಯ ಬಾಲ್ಯದಿಂದ ಹಿಡಿದು ಭಾರತದ ಜೀವನ ಮತ್ತು ಅವರ ರಾಜಕೀಯ ವರ್ಷಗಳವರೆಗಿನ ಪಯಣವನ್ನು ವಿವರಿಸುತ್ತದೆ. ಇದು ಸೋನಿಯಾ ಗಾಂಧಿ ಅವರ ವಿವಾಹ, ಭಾರತೀಯ ಸಂಸ್ಕೃತಿಗೆ ಅವರು ಹೊಂದಿಕೊಂಡ ರೀತಿ ಮತ್ತು ಗಾಂಧಿ ಕುಟುಂಬವನ್ನು ಸೇರಿದ ಅನುಭವಗಳನ್ನು ಒಳಗೊಂಡಿದೆ.