ನವದೆಹಲಿ: ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸೋಮವಾರ ತಮ್ಮ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಅನ್ನು ತಮ್ಮ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಬಿಡುಗಡೆ ಮಾಡಿದರು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಸೋನಿಯಾ ಗಾಂಧಿ ಅವರು, ಇದು ತಮ್ಮ ಕುಟುಂಬದ ಬಗ್ಗೆ ಹರಡುತ್ತಿರುವ "ಅವಾಸ್ತವಿಕ" ಕಥೆಗಳನ್ನು ಎದುರಿಸಲು ಮತ್ತು ತಮ್ಮ ಜೀವನದ ಬಗ್ಗೆ ತಮ್ಮದೇ ಆದ ಸ್ಥಾನವನ್ನು ಹಂಚಿಕೊಳ್ಳಲು ಈ ಪುಸ್ತಕ ಬರೆಯಲು ನಿರ್ಧರಿಸಿದೆ. ಇದಕ್ಕೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಇಬ್ಬರೂ ಪ್ರೇರೇಪಿಸಿದರು ಎಂದು ಹೇಳಿದ್ದಾರೆ.
ತಮ್ಮ ಅತ್ತೆ, ಪತಿ, ಮಗ, ಮಗಳು ಮತ್ತು ತಮ್ಮ ಸುತ್ತ ಹಲವಾರು ಕಥೆಗಳು ಹಾಗೂ ಸುಳ್ಳುಗಳನ್ನು ಹೆಣೆಯಲಾಗಿದೆ. ಅವುಗಳು ನಮ್ಮ ನಿಜವಾದ ಜೀವನಕ್ಕೆ ಯಾವುದೇ ರೀತಿಯಿಂದಲೂ ಹೋಲಿಕೆಯಾಗುವುದಿಲ್ಲ ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.
"ಈ ಪುಸ್ತಕ ಬರೆಯಲು ಕಾರಣವೆಂದರೆ ನನ್ನ ಕುಟುಂಬ, ನನ್ನ ಅತ್ತೆ, ನನ್ನ ಪತಿ, ನನ್ನ ಮಗ, ನನ್ನ ಮಗಳು ಮತ್ತು ನನ್ನ ಬಗ್ಗೆ ತುಂಬಾ ಸುಳ್ಳುಗಳನ್ನು ಹೇಳಲಾಗುತ್ತಿದೆ. ಆ ಸುಳ್ಳುಗಳಿಗೆ ಉತ್ತರವಾಗಿ ಈ ಪುಸ್ತಕ ಬರೆಯಲು ನಿರ್ಧರಿಸಿದೆ. ಇದು ಆ "ಅವಾಸ್ತವಿಕ" ಕಥೆಗಳನ್ನು ಎದುರಿಸುತ್ತದೆ" ಎಂದು ಅವರು ಹೇಳಿದರು.
ವಿಮರ್ಶಕರು ಸೇರಿದಂತೆ ಆತ್ಮಚರಿತ್ರೆ ಬಗ್ಗೆ ಜನರು ತೋರಿದ ಪ್ರೀತಿ ಮತ್ತು ಪ್ರತಿಕ್ರಿಯೆಯಿಂದ ನನ್ನ ಮನಸು ತುಂಬಿ ಹೋಗಿದೆ ಎಂದು ಸೋನಿಯಾ ಗಾಂಧಿ ಹೇಳಿದರು.
ಸೋನಿಯಾ ತಮ್ಮ ಮಕ್ಕಳಾದ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಸಮ್ಮುಖದಲ್ಲಿ ಆತ್ಮಚರಿತ್ರೆಯನ್ನು ಬಿಡುಗಡೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಸೇರಿದಂತೆ ಹಲವಾರು ರಾಜಕೀಯ ಪಕ್ಷಗಳ ನಾಯಕರು ಉಪಸ್ಥಿತರಿದ್ದರು.