ಸಿಎಂ ವಿಜಯ್ 
ದೇಶ

ಸೂರಸಂಹಾರ ಉತ್ಸವದಲ್ಲಿ ಸಿಎಂ ವಿಜಯ್ ಗೆ 'ಅರೋಗರ" ಘೋಷಣೆ: ತಮಿಳುನಾಡಿನಲ್ಲಿ ರಾಜಕೀಯ ವಿವಾದ ಭುಗಿಲು! Video

ಮುಖ್ಯಮಂತ್ರಿಯಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಇಂತಹ ವೈಯಕ್ತಿಕ ವೈಭವೀಕರಣವನ್ನು ಬೆಂಬಲಿಸುವುದಿಲ್ಲ ಅಥವಾ ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.

ಚೆನ್ನೈ: ಇತ್ತೀಚೆಗೆ ನಡೆದ ದೇವಾಲಯದ ಉತ್ಸವವೊಂದರಲ್ಲಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು ಹೊಗಳಲು "ಅರೋಗರ" (Arogara) ಜಯ ಘೋಷಣೆ ಬಳಸಿದ ಘಟನೆಯು ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಸಂಪುಟ ಸಹೋದ್ಯೋಗಿ ಎಸ್. ರಮೇಶ್ ಅವರು ಮಂಗಳವಾರ ಸ್ಪಷ್ಟನೆ ನೀಡಿದ್ದು, ಮುಖ್ಯಮಂತ್ರಿಯಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಇಂತಹ ವೈಯಕ್ತಿಕ ವೈಭವೀಕರಣವನ್ನು ಬೆಂಬಲಿಸುವುದಿಲ್ಲ ಅಥವಾ ಬಯಸುವುದಿಲ್ಲ ಎಂದು ತಿಳಿಸಿದ್ದಾರೆ. ಈ ಘಟನೆಯಲ್ಲಿ ಭಾಗಿಯಾದ ಗಾಯಕರೊಂದಿಗೆ ಅಧಿಕಾರಿಗಳು ಈಗಾಗಲೇ ಮಾತನಾಡಿದ್ದು, ಅವರಿಂದ ಅಧಿಕೃತ ವಿವರಣೆಯನ್ನು ಕೋರಿದ್ದಾರೆ.

ಈ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನವಾಗಿ, ಸಂಬಂಧಪಟ್ಟ ಕಲಾವಿದರು ಈ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವುದಾಗಿ ಸರ್ಕಾರಕ್ಕೆ ಭರವಸೆ ನೀಡಿದ್ದಾರೆ ಎಂದು ಸಚಿವರು ತಿಳಿಸಿದರು.

ತಿರುಚೆಂದೂರು ಮುರುಗನ್ ದೇವಾಲಯದಲ್ಲಿ ನಡೆದ 'ಸೂರಸಂಹಾರ' ಉತ್ಸವದ ವೇಳೆ ಹಿನ್ನೆಲೆ ಗಾಯಕ ವೇಲ್ಮುರುಗನ್ ಅವರು, ಸಾಂಪ್ರದಾಯಿಕವಾಗಿ ಮುರುಗನ್ ದೇವರಿಗೆ ಬಳಸುವ 'ಅರೋಗರ' ಎಂಬ ಪವಿತ್ರ ಘೋಷಣೆಯನ್ನು ಬಳಸಿ, ಮುಖ್ಯಮಂತ್ರಿ ಹಾಗೂ ರಾಜ್ಯದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಸಚಿವ ರಮೇಶ್ ಅವರನ್ನು ಹೊಗಳಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ.

ಮಂಗಳವಾರ ಈ ವಿವಾದ ಮತ್ತಷ್ಟು ಭುಗಿಲೆದ್ದಿತ್ತು. ಆಡಳಿತಾರೂಢ ಟಿವಿಕೆ (TVK) ಪಕ್ಷದ ವಿರುದ್ಧ ಡಿಎಂಕೆ (DMK) ಮತ್ತು ಬಿಜೆಪಿ (BJP) ಎರಡೂ ಪಕ್ಷಗಳು ಒಂದಾಗಿ ಟೀಕಿಸಿವೆ. ರಾಜ್ಯದ ಪ್ರಮುಖ ಧಾರ್ಮಿಕ ಉತ್ಸವವೊಂದನ್ನು 'ರಾಜಕೀಯಗೊಳಿಸಲಾಗಿದೆ' ಎಂದು ಆರೋಪಿಸಿ, ಆಡಳಿತ ಪಕ್ಷ ಮತ್ತು ಗಾಯಕ ವೇಲ್ಮುರುಗನ್ ವಿರುದ್ಧ ಈ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

ವಿವಾದ ಹುಟ್ಟಿದ್ದು ಹೇಗೆ? ಕಂದ ಷಷ್ಠಿ ಉತ್ಸವದ ಭಾಗವಾಗಿ ಭಾನುವಾರ ತಿರುಚೆಂದೂರು ದೇವಸ್ಥಾನದಲ್ಲಿ ಸೂರಸಂಹಾರಂ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. 'ಸೂರಸಂಹಾರ' - ಅಂದರೆ ಭಗವಾನ್ ಮುರುಗನ್ ರಾಕ್ಷಸ ಸುರಾಪದ್ಮನನ್ನು ಸಂಹರಿಸುವ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯದ ಸಂಕೇತವಾಗಿ ಆಚರಿಸಲಾಗುತ್ತಿದೆ. ಈ ವೇಳೆ ಗಾಯಕ ವೇಲುಮುರುಗನ್, 'ಮುಖ್ಯಮಂತ್ರಿಗೆ ಅರೋಗರ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಚಿವರಿಗೆ ಆರೋಗರ ಎಂದು ಘೋಷಣೆ ಕೂಗಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇದು ತಮಿಳುನಾಡು ಎಂದೆಂದಿಗೂ ಕಂಡರಿಯದ ಅಸಹ್ಯ ರಾಜಕೀಯ ಎಂದು ಡಿಎಂಕೆ ಖಂಡಿಸಿದ್ದು, ಸಿಎಂ ವಿಜಯ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದೆ.

ಟಿವಿಕೆ ಸರ್ಕಾರ ಮುರುಗನ್ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಮಾಜಿ ಸಚಿವ ಪಿ. ಗೀತಾ ಜೀವನ್ ಆರೋಪಿಸಿದ್ದಾರೆ. ಅಣ್ಣಾಮಲೈ ಕೂಡಾ ತೀವ್ರವಾಗಿ ಖಂಡಿಸಿದ್ದಾರೆ. ಧಾರ್ಮಿಕ ಕಾರ್ಯಕ್ರಮದ ವೇಳೆ ರಾಜಕೀಯ ಬೆರೆಯಲು ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಮುನ್ನಾನಿ ನಿಯೋಗ ಟೂಟಿಕೊರಿನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದೆ.

ಗಾಯಕ ವೇಲ್ಮುರುಗನ್ ಕೂಡಲೇ ಜನರ ಕ್ಷಮೆಯಾಚಿಸಬೇಕು ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮನಿಲಾದಲ್ಲಿ ಕ್ವಾಡ್ ಶೃಂಗಸಭೆ 2026: ಪ್ರಧಾನಿ ಮೋದಿ ಗ್ರೇಟ್ ಲೀಡರ್, 'ವೆರಿ ಟಫ್ ಮ್ಯಾನ್' ಎಂದ ಡೊನಾಲ್ಡ್ ಟ್ರಂಪ್!

'ಅಪ್ಪನ ತೊಡೆಯ ಮೇಲೆ ಅಮ್ಮ' ಹೇಳಿಕೆ: BJP, RSS ಮನಸ್ಸಿನಲ್ಲಿ ದ್ವೇಷ ತುಂಬಿಕೊಂಡಿವೆ - ರಾಹುಲ್ ಗಾಂಧಿ ಕಿಡಿ!

ಬೆಂಗಳೂರು: ಬಾಗಲೂರು ಬಳಿ ಕಾರಿನಲ್ಲಿ ವ್ಯಕ್ತಿಯ ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಗುಂಡಿಕ್ಕಿ ಹತ್ಯೆ ಶಂಕೆ!

IPLಗೂ ವಿದಾಯ: 'ನನ್ನ ಹೆಸರನ್ನೂ ಸೇರಿಸಿಬಿಡಿ': MS ಧೋನಿ ಭಾವುಕ ಸಂದೇಶ ಕೇಳಿ CSK ಮ್ಯಾನೇಜ್ ಮೆಂಟ್ ಸ್ಥಬ್ಧ!

IPL ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ MS ಧೋನಿ: ಅವರ ಮುಂದಿನ ನಡೆ ಏನು?