ಪಾಟ್ನಾ (ಬಿಹಾರ): ಡಿಸೆಂಬರ್ 2025ರ ವಾರ್ಷಿಕ ಆಸ್ತಿ ಘೋಷಣೆಯಲ್ಲಿ ಅವರು ತಮ್ಮ ಒಟ್ಟು ಆಸ್ತಿ ಮೌಲ್ಯ ₹32.61 ಲಕ್ಷ ಎಂದು ಘೋಷಿಸಿಕೊಂಡಿದ್ದ ಬಿಹಾರದ ಕಾನೂನು ಸಚಿವ ಸಂಜಯ್ ಸಿಂಗ್ ಟೈಗರ್ ಅವರ ಪಾಟ್ನಾ ನಿವಾಸದಲ್ಲಿ ಕಳ್ಳತನ ನಡೆದಿದ್ದು, ಸುಮಾರು ₹90 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ನಗದನ್ನು ದೋಚಲಾಗಿದೆ. ಪಾಟ್ನಾದ ಶಾಸ್ತ್ರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎಜಿ ಕಾಲೋನಿಯಲ್ಲಿರುವ ಸಚಿವರ ಎರಡು ಅಂತಸ್ತಿನ ಖಾಸಗಿ ನಿವಾಸದಲ್ಲಿ ಈ ಘಟನೆ ಸಂಭವಿಸಿದೆ. ಆ ಕುರಿತ ವರದಿ ಇಲ್ಲಿದೆ:
ಏನೇನು ಕಳವಾಗಿದೆ?
ನವೆಂಬರ್ 14 ಮತ್ತು 15ರ ಮಧ್ಯರಾತ್ರಿ ಪಾಟ್ನಾದ ಶಾಸ್ತ್ರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎಜಿ ಕಾಲೋನಿಯಲ್ಲಿರುವ ಸಚಿವರ ಎರಡು ಅಂತಸ್ತಿನ ಖಾಸಗಿ ನಿವಾಸದಲ್ಲಿ, ಸುಮಾರು 600 ಗ್ರಾಂ ಚಿನ್ನಾಭರಣ, 2 ಕೆಜಿ ಬೆಳ್ಳಿ, ₹7 ಲಕ್ಷ ನಗದು ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಕಳ್ಳರು ದೋಚಿದ್ದಾರೆ.
ಮುಂದುವರೆದು, ಸಚಿವರ ಕಿರಿಯ ಸಹೋದರರು ತಮ್ಮ ಕುಟುಂಬಗಳೊಂದಿಗೆ ಈ ಮನೆಯಲ್ಲಿ ವಾಸವಿದ್ದರು. ಅವರೆಲ್ಲರೂ ಛತ್ ಪೂಜೆಗಾಗಿ ಭೋಜ್‌ಪುರ ಜಿಲ್ಲೆಯ ತಮ್ಮ ಸ್ವಗ್ರಾಮಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ಕೃತ್ಯ ನಡೆದಿದೆ. ರಾತ್ರಿ ಮನೆಯಲ್ಲಿ ಮಲಗಲು ನೆರೆಯವರಿಗೆ ಕೀಲಿ ಕೊಡಲಾಗಿತ್ತಾದರೂ ಅವರು ಬಾರದ ಕಾರಣ ಮನೆ ಖಾಲಿಯಿತ್ತು. ಅದರಂತೆ, ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಏಳು ಜನರ ತಂಡವೊಂದು ಎರಡು ಸ್ಕೂಟರ್ ಮತ್ತು ಒಂದು ಬೈಕ್‌ನಲ್ಲಿ ಬಂದು ಕಾಂಪೌಂಡ್ ಜಿಗಿದು ಒಳನುಗ್ಗಿದೆ. ಸುಮಾರು ಒಂದೂವರೆ ಗಂಟೆಗಳ ಕಾಲ ಮನೆಯಲ್ಲಿದ್ದ ಕಳ್ಳರು ಹಲವು ಕೊಠಡಿಗಳ ಬೀಗ ಒಡೆದು ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ.
ಒಳಗಿನವರ ಕೈವಾಡದ ಶಂಕೆ!
ಏತನ್ಮಧ್ಯೆ, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಪಾಟ್ನಾ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಜೊತೆಗೆ, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯ ವೇಳೆ, ಕಳ್ಳರು ಮನೆಯ ಕಾಂಪೌಂಡ್ ಜಿಗಿದು ಒಳನುಗ್ಗುವ ಕೆಲವೇ ನಿಮಿಷಗಳ ಮೊದಲು ಪೊಲೀಸ್ ಗಸ್ತು ವಾಹನವೊಂದು ಅದೇ ರಸ್ತೆಯಲ್ಲಿ ಹಾದುಹೋಗಿರುವುದು ಕಂಡುಬಂದಿದೆ. ಇದರೊಂದಿಗೆ, ಮನೆಯಲ್ಲಿ ಯಾರೂ ಇಲ್ಲದಿರುವುದು ಹಾಗೂ ಚಿನ್ನಾಭರಣ, ನಗದು ಎಲ್ಲಿಡಲಾಗಿದೆ ಎಂಬ ನಿಖರ ಮಾಹಿತಿ ಕಳ್ಳರಿಗೆ ತಿಳಿದಿದ್ದರಿಂದ, ಪರಿಚಯಸ್ಥರು ಅಥವಾ ಮನೆಯ ಒಳಗಿನ ಮಾಹಿತಿ ನೀಡಿದ ವ್ಯಕ್ತಿಯ ಪಾತ್ರದ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅದರಲ್ಲೂ, ವಶಕ್ಕೆ ಪಡೆಯಲಾದ ಮೂವರು ಶಂಕಿತರಲ್ಲಿ ಒಬ್ಬ ವ್ಯಕ್ತಿ ಕಳ್ಳರಿಗೆ ಮನೆಯ ಒಳಾಂಗಣದ ಮಾಹಿತಿ ನೀಡಿದ್ದಾನೆ ಎಂದು ಶಂಕಿಸಲಾಗಿದೆ.
ಆಸ್ತಿ ಘೋಷಣೆ ಚರ್ಚೆ!
ಈ ಕಳ್ಳತನದ ಬೆನ್ನಲ್ಲೇ ಸಚಿವರ ಆಸ್ತಿ ವಿವರಗಳ ಬಗ್ಗೆಯೂ ಚರ್ಚೆ ಶುರುವಾಗಿಯಿದೆ. 2025ರ ಡಿಸೆಂಬರ್‌ನಲ್ಲಿ ಸಲ್ಲಿಸಿದ ವಾರ್ಷಿಕ ಆಸ್ತಿ ಘೋಷಣೆಯಲ್ಲಿ ಅವರು ತಮ್ಮ ಒಟ್ಟು ಆಸ್ತಿ ಕೇವಲ ₹32.61 ಲಕ್ಷ ಎಂದು ಘೋಷಿಸಿಕೊಂಡಿದ್ದರು. ಈ ಮೂಲಕ ಸಾಮ್ರಾಟ್ ಚೌಧರಿ ನೇತೃತ್ವದ ಬಿಹಾರ ಸಂಪುಟದ ಅತ್ಯಂತ ಕಡಿಮೆ ಆಸ್ತಿ ಹೊಂದಿರುವ ಸಚಿವರಲ್ಲಿ 35 ಸಚಿವರ ಪೈಕಿ ₹1 ಕೋಟಿಗಿಂತ ಕಡಿಮೆ ಆಸ್ತಿ ಘೋಷಿಸಿಕೊಂಡಿರುವ ಕೇವಲ ಮೂವರು ಸಚಿವರಲ್ಲಿ ಸಂಜಯ್ ಸಿಂಗ್ ಟೈಗರ್ ಕೂಡ ಒಬ್ಬರು. ಆದರೆ, ಇವರ ಮನೆಯಲ್ಲೇ ₹90 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ನಗದು ಕಳವಾಗಿರುವುದು ಗಮನ ಸೆಳೆದಿದೆ. ಮತ್ತೊಂದೆಡೆ ಕಳ್ಳತನವಾದ ಚಿನ್ನಾಭರಣವು, ಸಚಿವರ ಸಹೋದರರ ಕುಟುಂಬಕ್ಕೆ ಸೇರಿದ ಆಸ್ತಿ ಎನ್ನಲಾಗಿದೆ.