ವಿಶಾಖಪಟ್ಟಣ (ಆಂಧ್ರಪ್ರದೇಶ): ಕರ್ನಾಟಕ ಮತ್ತು ತಮಿಳುನಾಡು (ಜೊತೆಗೆ ಕೇರಳ ಮತ್ತು ಪುದುಚೇರಿ) ನಡುವಿನ ಕಾವೇರಿ ನದಿ ವಿವಾದ ಹಾಗೂ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ನಡುವಿನ ಕೃಷ್ಣಾ ಮತ್ತು ಗೋದಾವರಿ ನದಿ ಈ ವಿವಾದಗಳನ್ನು ಬಗೆಹರಿಸಲು ನ್ಯಾಯಮಂಡಳಿಗಳು ಮತ್ತು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ್ದರೂ, ಹಲವಾರು ಕಾರಣಗಳಿಂದಾಗಿ ವರ್ಷಗಳಿಂದಲೂ ಜೀವಂತವಾಗಿವೆ.! ಆದರೆ, ಈ ಸುಮಸ್ಯೆಗೆ ಗೋದಾವರಿ ಮತ್ತು ಕಾವೇರಿ ನದಿಗಳ ಜೋಡಣೆಯ ಮೂಲಕ ಬಗೆಹರಿಸಬಹುದು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಹೊಸ ಪ್ರತಿಪಾದನೆ ಮುಂದಿಟ್ಟಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ವಿಶಾಖಪಟ್ಟಣದಲ್ಲಿ ನಡೆದ 31ನೇ ಭಾರತೀಯ ಕೈಗಾರಿಕಾ ಒಕ್ಕೂಟದ ಪಾಲುದಾರಿಕೆ ಶೃಂಗಸಭೆ 2026ರಲ್ಲಿ ಮಾತನಾಡಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಗೋದಾವರಿ ಮತ್ತು ಕಾವೇರಿ ನದಿಗಳನ್ನು ಜೋಡಿಸುವ ಮೂಲಕ ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬಹುದು ಎಂದು ಪ್ರತಿಪಾದಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸಮ್ಮುಖದಲ್ಲೇ ಮಾತನಾಡಿದ ನಾಯ್ಡು, ದಕ್ಷಿಣ ಭಾರತದ ರಾಜ್ಯಗಳು ನೀರಿಗಾಗಿ ಪರಸ್ಪರ ಸಂಘರ್ಷಕ್ಕಿಳಿಯುವ ಬದಲು ಸಹಕಾರದ ಮೂಲಕ ಈ ಯೋಜನೆಯನ್ನು ಜಾರಿಗೊಳಿಸಿದರೆ ನೀರಿನ ಯುದ್ಧಗಳು ನಿಲ್ಲಲಿವೆ ಎಂದರು.
ನಾಯ್ಡು ಹೇಳಿದ್ದೇನು?
ಗೋದಾವರಿ ನದಿಯಿಂದ ವ್ಯರ್ಥವಾಗಿ ಸಮುದ್ರ ಸೇರುವ ಹೆಚ್ಚುವರಿ ನೀರನ್ನು ಪೋಲಾವರಂ ಯೋಜನೆ ಹಾಗೂ ನಾಗಾರ್ಜುನ ಸಾಗರದ ಮೂಲಕ ಕೃಷ್ಣಾ ನದಿಗೆ ಹರಿಸಲಾಗುವುದು. ಅಲ್ಲಿಂದ ಪೆನ್ನಾರ್ ನದಿಯ ಸೋಮಶಿಲಾ ಅಣೆಕಟ್ಟೆಗೆ ತಂದು, ಅಂತಿಮವಾಗಿ ತಮಿಳುನಾಡಿನ ಕಾವೇರಿ ನದಿಯ ಗ್ರ್ಯಾಂಡ್ ಅಣೆಕಟ್ಟೆಗೆ ಜೋಡಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಜೊತೆಗೆ, ನೀರು ಆವಿಯಾಗುವುದನ್ನು ತಡೆಯಲು ಮತ್ತು ಭೂಸ್ವಾಧೀನದ ಸಮಸ್ಯೆಗಳನ್ನು ಕಡಿಮೆ ಮಾಡಲು ಕಾಲುವೆಗಳ ಬದಲು ಬೃಹತ್ ಉಕ್ಕಿನ ಪೈಪ್ಗಳ ಮೂಲಕ ನೀರನ್ನು ಕೊಂಡೊಯ್ಯುವ ಪ್ರಸ್ತಾಪವನ್ನು ನಾಯ್ಡು ಮುಂದಿಟ್ಟಿದ್ದಾರೆ. ಇದರೊಂದಿಗೆ, ಈ ಯೋಜನೆಯನ್ನು ಕೇಂದ್ರ ಸರ್ಕಾರವು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಈಗಾಗಲೇ ಮನವಿ ಮಾಡಿದ್ದು, 2027ರ ಮಾರ್ಚ್ ವೇಳೆಗೆ ಪೋಲಾವರಂ ಯೋಜನೆಯನ್ನು ಪೂರ್ಣಗೊಳಿಸುವ ಭರವಸೆಯನ್ನೂ ನೀಡಿದ್ದಾರೆ.
ಕಾವೇರಿ ಜಲಯುದ್ಧಕ್ಕೆ ತೆರೆ?
ಸುಮಾರು 147 ರಿಂದ 300 ಟಿಎಂಸಿ ಅಡಿ ಹೆಚ್ಚುವರಿ ನೀರನ್ನು ತಿರುಗಿಸುವ ಗುರಿ ಹೊಂದಲಾಗಿದ್ದು, ಇದರಿಂದ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡಿನ ಬರಪೀಡಿತ ಪ್ರದೇಶಗಳಿಗೆ ಕುಡಿಯುವ ನೀರು, ನೀರಾವರಿ ಹಾಗೂ ಜಲವಿದ್ಯುತ್ ಉತ್ಪಾದನೆಗೆ ನೆರವಾಗಲಿದೆ. ಅದರಲ್ಲೂ, ಈ ನದಿ ಜೋಡಣೆ ಯೋಜನೆಯಿಂದ ತಮಿಳುನಾಡಿಗೆ ಹೆಚ್ಚುವರಿ ನೀರು ಸಿಗುವುದರಿಂದ ಕಾವೇರಿ ವಿವಾದದ ಒತ್ತಡ ಕರ್ನಾಟಕದ ಮೇಲೆ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಿದೆ.
ತೆಲಂಗಾಣ ಮತ್ತು ಛತ್ತೀಸ್ಗಢದ ಆಕ್ಷೇಪ!
ಈ ಯೋಜನೆಯ ಮೂಲ ಮಾರ್ಗದ ಬಗ್ಗೆ ತೆಲಂಗಾಣ ಸರ್ಕಾರ ಮತ್ತು ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ತಮಗೆ 74 ಟಿಎಂಸಿ ನೀರಿನ ಪಾಲು ನೀಡಬೇಕೆಂದು ಬೇಡಿಕೆ ಇಟ್ಟಿವೆ. ಮತ್ತೊಂದೆಡೆ ಛತ್ತೀಸ್ಗಢ ತನ್ನ ಪಾಲಿನ ನೀರನ್ನು ತಾನೇ ಬಳಸಿಕೊಳ್ಳುವುದಾಗಿ ತಿಳಿಸಿರುವುದರಿಂದ, ಆಂಧ್ರಪ್ರದೇಶವು ಬನಕಾಚರ್ಲಾ ಮೂಲಕ ಪರ್ಯಾಯ ಮಾರ್ಗವನ್ನು ಪ್ರಸ್ತಾಪಿಸಿದೆ.
ಏತನ್ಮಧ್ಯೆ, ಇದಕ್ಕೂ ಮುನ್ನ ಚಂದ್ರಬಾಬು ನಾಯ್ಡು ಅವರು, ಇತ್ತೀಚೆಗೆ ನಡೆದ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿ, ಗೋಮದಾವರಿಯಿಂದ (ಪೋಲಾವರಂ) ಕೃಷ್ಣಾಗೆ, ಕೃಷ್ಣಾದಿಂದ ಬಣಕಚರ್ಲಕ್ಕೆ ಮತ್ತು ಅಲ್ಲಿಂದ ಕಾವೇರಿಗೆ ನೀರು ಹರಿಸುವ ಪರಿಕಲ್ಪನೆ ಸಾಕಾರಗೊಂಡರೆ ನಾಲ್ಕು ರಾಜ್ಯಗಳಿಗೂ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದರು. ಜೊತೆಗೆ, ಈ ಯೋಜನೆಗೆ ತಮಿಳುನಾಡು (ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್) ಬೆಂಬಲ ಸೂಚಿಸಿದರು. ಆದರೆ, ನೀರಿನ ಹಂಚಿಕೆಯ ಪ್ರಮಾಣ ಮತ್ತು ಯೋಜನೆ ಆರಂಭವಾಗುವ ಸ್ಥಳದ (ಪೋಲಾವರಂ ಅಥವಾ ಇಂಚಂಪಲ್ಲಿ) ವಿಚಾರವಾಗಿ ತೆಲಂಗಾಣ ಆಕ್ಷೇಪ ವ್ಯಕ್ತಪಡಿಸಿದೆ. ಇತ್ತ ಕರ್ನಾಟಕಕ್ಕೆ ಈ ಯೋಜನೆಯಲ್ಲಿ ಕೇವಲ 15.9 ಟಿಎಂಸಿ ನೀರು ಹಂಚಿಕೆ ಮಾಡಿರುವುದಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ಯಕ್ಕೆ ಹೆಚ್ಚಿನ ಪಾಲು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.