ಛತ್ತೀಸ್ಗಢ: ರಾಜ್ಯದಲ್ಲಿ ಫಲವತ್ತತೆ ದರ ಕುಸಿಯುತ್ತಿರುವ ಕುರಿತು ಆರೋಗ್ಯ ಸಚಿವ ಶ್ಯಾಮ್ ಬಿಹಾರಿ ಜೈಸ್ವಾಲ್ ನೀಡಿರುವ ಹೇಳಿಕೆಯು ದೊಡ್ಡ ರಾಜಕೀಯ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ರಾಜ್ಯದ 'ಒಟ್ಟು ಫಲವತ್ತತೆ ದರ' 1.80 ರಷ್ಟಿದೆ ಎಂದು ಉಲ್ಲೇಖಿಸಿರುವ ಸಚಿವ ಜೈಸ್ವಾಲ್, ಇದು ರಾಷ್ಟ್ರೀಯ ಸರಾಸರಿ 2.2 ಕ್ಕಿಂತ ಕಡಿಮೆಯಿದೆ. ಈ ಹಿನ್ನೆಲೆಯಲ್ಲಿ, ಕುಟುಂಬ ಯೋಜನೆಯನ್ನು ಉತ್ತೇಜಿಸುವ ಅಭಿಯಾನಗಳನ್ನು ರಾಜ್ಯ ಸರ್ಕಾರವು ಸ್ಥಗಿತಗೊಳಿಸಿದೆ ಎಂದು ಅವರು ಘೋಷಿಸಿದರು.
ಛತ್ತೀಸ್ಗಢದ ಜನಸಾಂದ್ರತೆಯು ಕನಿಷ್ಠ ಪಕ್ಷ ರಾಷ್ಟ್ರೀಯ ಸರಾಸರಿಯಷ್ಟಾದರೂ ಇರಬೇಕೆಂದು ತಾವು ಬಯಸುವುದಾಗಿ ಅವರು ಹೇಳಿದರು. ರಾಜ್ಯದಲ್ಲಿ ಬಲವಂತದ ಸಂತಾನಶಕ್ತಿ ನಿರೋಧಕ ಶಸ್ತ್ರಚಿಕಿತ್ಸೆ ನಡೆಸುವ ಅಗತ್ಯವಿಲ್ಲದಿದ್ದರೂ, ಯಾರಾದರೂ ಸ್ವಯಂಪ್ರೇರಿತರಾಗಿ ಈ ಪ್ರಕ್ರಿಯೆಗೆ ಒಳಗಾಗಲು ಬಯಸಿದರೆ, ಅವರಿಗೆ ಆ ಸೌಲಭ್ಯ ಲಭ್ಯವಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಪ್ರಸ್ತುತ ಜನಸಂಖ್ಯಾ ಪರಿಸ್ಥಿತಿಯಲ್ಲಿ, ಇಬ್ಬರಿಗಿಂತ ಹೆಚ್ಚು ಅಥವಾ ಮೂರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವುದು ಈಗ ಸಮಸ್ಯೆಯಲ್ಲ ಎಂದು ಅವರು ತಿಳಿಸಿದ್ದಾರೆ.
ಆದರೆ, 'ಸ್ಯಾಂಪಲ್ ರಿಜಿಸ್ಟ್ರೇಷನ್ ಸಿಸ್ಟಮ್' ದತ್ತಾಂಶವು ಸಚಿವರ ಹೇಳಿಕೆಗೆ ವಿರುದ್ಧವಾಗಿದೆ. ಸಚಿವರ ಪ್ರಕಾರ TFR 2.2 ಇದ್ದರೆ, SRS ದತ್ತಾಂಶದ ಪ್ರಕಾರ ಭಾರತದ TFR 1.9 ರಷ್ಟಿದೆ. 2000 ರ ದಶಕದಲ್ಲಿ ಭಾರತದಲ್ಲಿ ಪ್ರತಿ ಮಹಿಳೆಗೆ ಸುಮಾರು 3.3 ಮಕ್ಕಳಿದ್ದ ಫಲವತ್ತತೆ ದರವು ಈಗ ಕುಸಿದಿದೆ.
ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಆರೋಗ್ಯ ಸಚಿವರ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ನೀಡಿದ್ದು, ಕುಸಿಯುತ್ತಿರುವ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯಗಳನ್ನು ನಿರ್ಲಕ್ಷಿಸುತ್ತಿರುವ ಸರ್ಕಾರದ ಕ್ರಮವನ್ನು ಟೀಕಿಸಿದ್ದಾರೆ.
ಜನಸಂಖ್ಯೆಯನ್ನು ಹೆಚ್ಚಿಸುವ ಹುಚ್ಚು ನಿಮಗೇಕೆ? ಜನಸಂಖ್ಯೆ ಹೆಚ್ಚಾಗುತ್ತಿದ್ದರೂ, ನಿಮ್ಮ ಮತದಾರರ ಸಂಖ್ಯೆ ಕಡಿಮೆಯಾಗುತ್ತಿದೆ. ಈಗ ಬದುಕಿರುವ ಜನರಿಗೇ ನೀವು ಔಷಧಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ, ನಿಮ್ಮಿಂದ ವೈದ್ಯರನ್ನು ಒದಗಿಸಲು ಸಾಧ್ಯವಿಲ್ಲ, ಔಷಧಗಳನ್ನು ನೀಡಲು ಸಾಧ್ಯವಿಲ್ಲ, ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾಧ್ಯಾಪಕರೂ ಇಲ್ಲ. ಮೊದಲು ನಿಮ್ಮ ಆಡಳಿತದ ಬಗ್ಗೆ ಚಿಂತಿಸಿ ಎಂದು ತಪರಾಕಿ ಹಾಕಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಫಲವತ್ತತೆ ದರವು ಇಳಿಮುಖವಾಗುತ್ತಲೇ ಇದ್ದರೂ, ವಿವಿಧ ರಾಜ್ಯಗಳ ನಡುವೆ ಗಮನಾರ್ಹ ಪ್ರಾದೇಶಿಕ ವ್ಯತ್ಯಾಸಗಳು ಇನ್ನೂ ಇವೆ. ಇತ್ತೀಚಿನ SRS ವರದಿಯ ಪ್ರಕಾರ, ಬಿಹಾರವು ದೇಶದಲ್ಲೇ ಅತಿ ಹೆಚ್ಚು ಫಲವತ್ತತೆ ದರವನ್ನು (ಪ್ರತಿ ಮಹಿಳೆಗೆ 2.9 ಮಕ್ಕಳು) ದಾಖಲಿಸಿದೆ. ನಂತರದ ಸ್ಥಾನದಲ್ಲಿ ಉತ್ತರ ಪ್ರದೇಶವಿದ್ದು, ಅಲ್ಲಿನ ಫಲವತ್ತತೆ ದರ 2.6 ರಷ್ಟಿದೆ.