ನವದೆಹಲಿ: ಕಾಂಗ್ರೆಸ್ ಸಂಸದ, ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮ ವೈಯಕ್ತಿಕ ಬದುಕಿನ ಅಪರೂಪದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಆತ್ಮಕಥನ ಬಿಯಾಂಡ್ ದಿ ಜರ್ನಿ ಆಫ್ ಲವ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ತಾವು ಆಗ ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಕೇಂಬ್ರಿಡ್ಜ್‌ನಲ್ಲಿರುವ ಹೊಟೇಲ್ ಗೆ ಭೇಟಿ ನೀಡಿದ್ದ ಘಟನೆಯನ್ನು ನೆನಪಿಸಿಕೊಂಡರು. “ಆಕೆ ಈಗ ನನ್ನ ಸ್ನೇಹಿತೆ” ಎಂದು ಹೇಳುವ ಮೂಲಕ ಗಮನ ಸೆಳೆದರು.
ತಮ್ಮ ತಂದೆ ರಾಜೀವ್ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ವಿದ್ಯಾರ್ಥಿಗಳಾಗಿದ್ದಾಗ ಮೊದಲ ಬಾರಿಗೆ ಭೇಟಿಯಾಗಿದ್ದ ಕೇಂಬ್ರಿಡ್ಜ್‌ನ ವಾರ್ಸಿಟಿ ರೆಸ್ಟೋರೆಂಟ್‌ಗೆ ತಾನು ಮತ್ತು ಗರ್ಲ್ ಫ್ರೆಂಡ್ ಹೋಗಿದ್ದೆವು ಎಂದರು.
ವಿಶ್ವವಿದ್ಯಾಲಯದ ನಗರದಲ್ಲಿದ್ದಾಗ ಈ ಭೇಟಿ ಹೇಗೆ ನಡೆಯಿತು ಎಂಬುದನ್ನು ವಿವರಿಸಿದ ರಾಹುಲ್ ಗಾಂಧಿ, ರೆಸ್ಟೋರೆಂಟ್‌ನ ಸಿಬ್ಬಂದಿಯೊಬ್ಬರ ಬಳಿ ತಮ್ಮ ತಂದೆ-ತಾಯಿಯ ಬಗ್ಗೆ ಪ್ರಸ್ತಾಪಿಸಿದಾಗ, ಹಲವು ದಶಕಗಳ ಹಿಂದೆ ಆ ದಂಪತಿ ಆಗಾಗ್ಗೆ ಭೇಟಿ ನೀಡುತ್ತಿದ್ದ ಸ್ಥಳ ಅಲ್ಲಿನ ಸಿಬ್ಬಂದಿ ತಕ್ಷಣ ನನಗೆ ಅವರ ಗುರುತು ಇದೆ ಎಂದು ಹೇಳಿದರು ಎಂದು ನೆನಪಿಸಿಕೊಂಡಿದ್ದಾರೆ.
ನನ್ನ ತಂದೆ-ತಾಯಿ ಬಗ್ಗೆ ಸಾಕಷ್ಟು ಕಥೆಗಳಿದ್ದವು. ಅವರಿಬ್ಬರು ವಾರ್ಸಿಟಿ ರೆಸ್ಟೋರೆಂಟ್‌ನಲ್ಲಿ ಭೇಟಿಯಾಗಿದ್ದು ಅಂತಹ ಪ್ರಮುಖ ಕಥೆಗಳಲ್ಲಿ ಒಂದಾಗಿತ್ತು. ಹಲವು ವರ್ಷಗಳ ಬಳಿಕ ನಾನು ಕೇಂಬ್ರಿಡ್ಜ್‌ಗೆ ಹೋಗಿದ್ದಾಗ, ನನ್ನ ಗೆಳತಿಗೆ ‘ನಾವು ವಾರ್ಸಿಟಿ ರೆಸ್ಟೋರೆಂಟ್‌ಗೆ ಹೋಗೋಣ’ ಎಂದು ಹೇಳಿದೆ. ನನ್ನ ತಂದೆ-ತಾಯಿ ಭೇಟಿಯಾಗಿದ್ದ ಸ್ಥಳವನ್ನು ನೋಡಬೇಕೆಂಬ ಆಸೆ ನನಗಿತ್ತು” ಎಂದು ಸೋನಿಯಾ ಗಾಂಧಿ ಅವರ ಆತ್ಮಕಥನ Belonging: A Journey of Love ಬಿಡುಗಡೆ ಸಮಾರಂಭದಲ್ಲಿ ರಾಹುಲ್ ಗಾಂಧಿ ಹೇಳಿದರು.
ನಾನು ಅಲ್ಲಿ ಕುಳಿತೆ. ಅವರು ಮೆನು ತಂದರು. ಆಗ ನಾನು, ‘ನನ್ನ ತಂದೆ-ತಾಯಿ ಇದೇ ರೆಸ್ಟೋರೆಂಟ್‌ನಲ್ಲಿ ಭೇಟಿಯಾಗಿದ್ದರು’ ಎಂದು ಹೇಳಿದೆ. ಅದನ್ನು ಕೇಳಿದ ಸಿಬ್ಬಂದಿ ನನ್ನನ್ನು ನೋಡಿ, ‘ಓಹ್, ಅವರಾ? ನನಗೆ ಅವರ ಪರಿಚಯವಿದೆ’ ಎಂದರು. ಆಗ ನಾನು, ‘ಅವರ ಬಗ್ಗೆ ನಿಮಗೆ ಏನು ಗೊತ್ತು?’ ಎಂದು ಕೇಳಿದೆ. ಅದಕ್ಕೆ ಅವರು, ‘ಆ ಇಬ್ಬರಾ? ನೀವು ಯಾರ ಬಗ್ಗೆ ಮಾತನಾಡುತ್ತಿದ್ದೀರಿ ಎಂಬುದು ನನಗೆ ಚೆನ್ನಾಗಿ ಗೊತ್ತು’ ಎಂದರು” ಎಂದು ರಾಹುಲ್ ಗಾಂಧಿ ಘಟನೆಯನ್ನು ವಿವರಿಸಿದರು.
ಆಕೆ ಈಗ ಗೆಳತಿ
ಸೋನಿಯಾ ಗಾಂಧಿಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಂತರ ಅವರು ಪ್ರಸ್ತಾಪಿಸಿದ್ದ ಗೆಳತಿಯ ಬಗ್ಗೆ ಪತ್ರಕರ್ತರು ಕೇಳಿದಾಗ, “ಆಕೆ ಈಗ ನನ್ನ ಸ್ನೇಹಿತೆ” ಎಂದು ರಾಹುಲ್ ಗಾಂಧಿ ಉತ್ತರಿಸಿದರು.
ರಾಹುಲ್ ಗಾಂಧಿಯವರು ಕಾರ್ಯಕ್ರಮದಲ್ಲಿ ಆಡಿದ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.